ವಿಷಯ ಸಣ್ಣದು ಭಾವ ದೊಡ್ಡದು

Team Udayavani, Nov 1, 2019, 4:39 AM IST

ಆ ಕಿರಣ್‌ ಮತ್ತು ಶ್ರೇಯಸ್‌ ಎಷ್ಟೊಂದು ಮಾತಾಡ್ತಾರೆ ಅಲ್ವಾ’ ನಾನು ನನ್ನ ಸಹೋದ್ಯೋಗಿಯಲ್ಲಿ ಹೇಳಿದೆ. “ಹೌದೌದು… ಅವರ ಮಾತು ಸ್ವಲ್ಪ ಜಾಸ್ತಿಯೇ…’ ಎಂದು ಹೇಳಿದ ಅವರು ನಕ್ಕರು. ನಾನೂ ನಕ್ಕೆ. ನಾವು ನಗಲು ಕಾರಣವಿತ್ತು. ಕಿರಣ್‌ ಕಿವುಡ-ಮೂಗ ವಿದ್ಯಾರ್ಥಿ. ಆ ವರ್ಷ ನಮ್ಮ ಹತ್ತನೆಯ ತರಗತಿಯಲ್ಲಿ ಇಬ್ಬರು ಇಂತಹ ವಿದ್ಯಾರ್ಥಿಗಳಿದ್ದರು. ಅವರಿಬ್ಬರು ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದುದು ತೀರಾ ಸಹಜ. ಆದರೆ, ಮಾತು ಬರುವ ಶ್ರೇಯಸ್‌ ಹಾಗೂ ಮಾತು ಬಾರದ ಕಿರಣ್‌ರ ಮಾತು ನಮಗೆ ತಲೆನೋವಾಗಿತ್ತು. ಪಾಠ ಮಾಡುವ ಮಧ್ಯದಲ್ಲೂ ಶ್ರೇಯಸ್‌- ಕಿರಣ್‌ನೊಂದಿಗೆ ಏನೋ ಒಂದು ಮಾತನಾಡುತ್ತಿದ್ದ. ಈ ಶ್ರೇಯಸ್‌ ಸ್ವಲ್ಪ ವಿಚಿತ್ರ ಹುಡುಗ ಎನ್ನಬಹುದು. ಅವನಿಗೆ ಯಾವ ನ್ಯೂನತೆಯೂ ಇರಲಿಲ್ಲ. ಆದರೆ, ಹೈಪರ್‌ ಆ್ಯಕ್ಟಿವ್‌ ಆಗಿದ್ದ. ಒಂದು ಕ್ಷಣವೂ ಸುಮ್ಮನೆ ಕುಳಿತುಕೊಳ್ಳಲು ಅವನಿಂದಾಗುತ್ತಿರಲಿಲ್ಲ.

ಮಹಾ ಗಡಿಬಿಡಿ ಬೇರೆ. ಸಿಟ್ಟು ಬೇಗ ಬರುವ ಸ್ವಭಾವವಾದರೂ ಏನೋ ಒಂದು ಮುಗ್ಧತೆಯೂ ಇತ್ತು. ಸಾಮಾನ್ಯ ಮಕ್ಕಳೊಂದಿಗೆ ಇವನು ಕುಳಿತರೆ ಪಾಠ ಮಾಡುವಾಗ ನಮಗೆ ತೊಂದರೆಯಾದೀತೆಂದು ಕಿರಣ್‌ ಬಳಿ ಕುಳ್ಳಿರಿಸಿದ್ದೆವು. ಆದರೆ, ಇದು ಇನ್ನೊಂದು ರೀತಿಯಲ್ಲಿ ಒಳ್ಳೆಯದೇ ಆಯಿತು. ಸಣ್ಣ ತರಗತಿಯಿಂದಲೂ ಸಹಪಾಠಿಯಾಗಿದ್ದರಿಂದ ಕಿರಣ್‌ ಬಗ್ಗೆ ಅವನಿಗೆ ಚೆನ್ನಾಗಿ ತಿಳಿದಿತ್ತು. ಎಷ್ಟು ಚೆನ್ನಾಗಿ ಎಂದರೆ ಮಾತು ಬಾರದ ಕಿರಣ್‌ ಜೊತೆ ಅವನು ನಿರರ್ಗಳವಾಗಿ ವ್ಯವಹರಿಸುವಷ್ಟು! ಕೈ ಸನ್ನೆ, ಹಾವಭಾವಗಳ ಮೂಲಕ ಯಾವುದೇ ಅಡೆತಡೆಯಿಲ್ಲದೇ ಇವರ ಮಾತುಕತೆ ಸಾಗುತ್ತಿತ್ತು. ನಾವು ನೋಟ್ಸ್‌ ಬರೆಸುವಾಗ ಕಿರಣ್‌ ಗೆ ಶ್ರೇಯಸ್ಸೇ ಆಸರೆ. ಇವನ ಪುಸ್ತಕ ನೋಡಿ ಅವನು ಬರೆಯುತ್ತಿದ್ದ. ಯಾವುದಾದರೂ ಒಂದು ಮಾಹಿತಿ ಅವನಿಗೆ ತಿಳಿಸಲು ನಾವು ಪರದಾಡಿದರೆ ಇವನು ಕ್ಷಣಮಾತ್ರದಲ್ಲಿ ಆ ಮಾಹಿತಿಯನ್ನು ಅವನಿಗೆ ಅರ್ಥವಾಗುವಂತೆ ದಾಟಿಸುತ್ತಿದ್ದ. ಕೊನೆಗೆ ನಮ್ಮ ಹಾಗೂ ಕಿರಣ್‌ ನಡುವಿನ ಸಂಪರ್ಕ ಕೊಂಡಿಯಾಗಿ ಶ್ರೇಯಸ್ಸನ್ನೇ ಆಶ್ರಯಿಸತೊಡಗಿದೆವು. ಇವನು ಹೇಳಿದ್ದು ಅವನಿಗೆ ಎಷ್ಟು ಅರ್ಥವಾಗಿದೆಯೆಂದು ನಾವು ಪರೀಕ್ಷಿಸಿದರೆ ಕಿರಣ್‌ ಆ ಮಾಹಿತಿಯನ್ನು ಬರೆದು ತೋರಿಸಿ ತನಗೆ ಅರ್ಥವಾಗಿದೆ ಎಂಬುದನ್ನು ಸಾಬೀತುಪಡಿಸುತ್ತಿದ್ದ. ತುಂಟನಾದ ಶ್ರೇಯಸ್‌ನ ಈ ಪ್ರತಿಭೆಯನ್ನು ನಾವು ಮೆಚ್ಚಲೇಬೇಕಾಯ್ತು. ಅವನಲ್ಲಿರುವ ಒಳ್ಳೆಯತನ ಕಿರಣ್‌ಗೆ ಮಾಡುವ ಸಹಾಯದ ರೂಪದಲ್ಲಿ ನಮಗೆ ತಿಳಿಯಿತು. ತರಗತಿಯಲ್ಲಿ ತಂಟೆ ಮಾಡಿದ್ದರ ಕುರಿತಾಗಿ ಆಗಾಗ ದೂರು ಬರುತ್ತಿದ್ದುದನ್ನು ಹೊರತುಪಡಿಸಿದರೆ, ಅವನು ನಾವು ಹೇಳಿದ ಎಲ್ಲಾ ಕೆಲಸಗಳನ್ನೂ , ಸಮಯಕ್ಕೆ ಸರಿಯಾಗಿ, ಅಚ್ಚುಕಟ್ಟಾಗಿ ಮಾಡುತ್ತಿದ್ದ. ಕಲಿಕೆಯಲ್ಲೂ ಮಧ್ಯಮ ಹಂತದಲ್ಲಿದ್ದ. ತರಗತಿಯಲ್ಲಿ ಶಿಕ್ಷಕರು ಒಂದೆರಡು ಬಾರಿಯಾದರೂ ಹೆಸರು ಹಿಡಿದು ಕರೆದು ಅವನನ್ನು ಸುಮ್ಮನಿರಿಸಬೇಕಾಗುತ್ತಿತ್ತು ಅಷ್ಟೇ. ಒರಟು ಸ್ವಭಾವದ ಅವನಲ್ಲಿನ ಒಳ್ಳೆಯತನದ ಅರಿವಾದ ಕಾರಣ ನನಗವನು ಪ್ರಿಯ ವಿದ್ಯಾರ್ಥಿಯೂ ಆಗಿದ್ದ.

ಆ ದಿನ ಶಾಲೆಯಲ್ಲಿ ಮಧ್ಯಾಹ್ನದ ಊಟವಾಗಿ ಹೀಗೆ ವರಾಂಡದ ಕಡೆ ದೃಷ್ಟಿ ಹಾಯಿಸಿ ಕುಳಿತಿದ್ದೆ. ಆಗ ನಮ್ಮ ಶಾಲಾ ಉದ್ಯಾನದ ಹುಲ್ಲುಹಾಸಿನ ನಿರ್ಮಾಣಕ್ಕೆಂದು ಲಾರಿಯಲ್ಲಿ ಮಣ್ಣು ತಂದು ಹಾಕಿದ್ದರು. ಒಂದಷ್ಟು ಮಣ್ಣು ಜಗಲಿಯಲ್ಲಿ ಬಿದ್ದಿತ್ತು. ನಾವು ಹೇಳಿದಾಗ ಕೆಲವು ಮಕ್ಕಳು ಬಂದು ಆ ಮಣ್ಣನ್ನು ಗುಡಿಸಿ ಆಚೆ ಹಾಕಿದರು. ಈಗ ಹತ್ತನೆಯ ತರಗತಿಯಲ್ಲಿ ಕಲಿಕೆಯಲ್ಲಿ ಅತ್ಯಂತ ಹಿಂದುಳಿದಿದ್ದ, ನಪಾಸಾಗುವುದು ಖಚಿತ ಎಂದು ಎಲ್ಲರೂ ನಂಬಿದ್ದ ಹುಡುಗನೊಬ್ಬ ಬಂದ. ಜಗಲಿಯುದ್ದಕ್ಕೂ ದೃಷ್ಟಿ ಹರಿಸಿದ ಅವನಿಗೆ ಜಗಲಿಯ ಕಂಬ ಹಾಗೂ ನೆಲ ಸೇರುವ ಕಡೆಯಲ್ಲಿ ಸ್ವಲ್ಪ ಮಣ್ಣು ಗಟ್ಟಿಯಾಗಿ ಅಂಟಿಕೊಂಡದ್ದು ಕಂಡಿತು. ಒಂದು ಕೋಲು ಎತ್ತಿಕೊಂಡು ಅದನ್ನು ಉಜ್ಜಿ ಕಿತ್ತು ತೆಗೆದ ಆ ಧೂಳನ್ನು ಬಾಯಿಂದ “ಉಫ್’ ಎಂದು ಊದುತ್ತಾ ಸಂಪೂರ್ಣ ಸ್ವತ್ಛಗೊಳಿಸಿದ. ಸ್ವತ್ಛವಾಗಿದೆಯೋ ಎಂದು ಪುನಃ ಪರಿಶೀಲಿಸಿ ಖಚಿತಪಡಿಸಿಕೊಂಡಾಗ ತೃಪ್ತಿಯ ನಗುವೊಂದು ಅವನ ಮುಖದಲ್ಲಿ ಸುಳಿದಾಡಿತು. ನಂತರ ಅವನು ಆ ಕಡೆ ಹೋದ. ಶಾಲೆಯ ಕುರಿತಾದ ಅವನ ಪ್ರೀತಿ ಕಂಡು ನನ್ನ ಕಣ್ಣು ಹನಿಗೂಡಿತು. ಇದೇ ಹುಡುಗ ಶಿಕ್ಷಕರಿಗೆ ನಮಸ್ಕರಿಸುವ ರೀತಿಯೂ ಅಷ್ಟೇ ಆಪ್ತವಾಗಿತ್ತು. ಅವನ ಒಂದು ನಮಸ್ಕಾರ ನಮ್ಮ ಮನಸ್ಸನ್ನು ತಂಪುಗೊಳಿಸುತ್ತಿತ್ತು. ಆ ಮುಗ್ಧ ಹುಡುಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಪಾಸಾದ. ಆದರೆ, ಪ್ರಾಮಾಣಿಕತೆಯೇ ಮೂರ್ತಿವೆತ್ತ, ಸದ್ಗುಣವಂತನಾದ ಆ ಬಡ ಹುಡುಗ ಖಂಡಿತ ಜೀವನದ ಪರೀಕ್ಷೆಯಲ್ಲಿ ಫೇಲಾಗಲಾರ. ಒಂದೊಂದು ಕೆಲಸ ಮಾಡುವಾಗಲೂ ಅವನು ತೋರುತ್ತಿದ್ದ ಬದ್ಧತೆ ನೋಡುವಾಗ ದೇವರೇ, ಈ ಮಗುವಿಗೆ ಒಂದಷ್ಟು ಹೆಚ್ಚು ನೆನಪು ಶಕ್ತಿ, ಇನ್ನೂ ಸ್ವಲ್ಪ ಬುದ್ಧಿ ಶಕ್ತಿ ಕೊಡಬಾರದಿತ್ತೇ ಅಂತ ನಾನು ದೇವರಲ್ಲಿ ಕೇಳಿದ್ದಿದೆ. ಆ ಹುಡುಗನನ್ನು ನಾನು ಮರೆಯುವುದು ಸಾಧ್ಯವಿಲ್ಲ.

ಕೆಯ್ಯೂರಿನ ನಮಸ್ಕಾರ ಎಂಬ ವಿಶಿಷ್ಟ ಶೈಲಿಯ ನಮಸ್ಕಾರ ಎಂಥವರನ್ನೂ ಆಕರ್ಷಿಸದಿರದು. ಆ ಹುಡುಗಿಯ ನೆನಪಾದಾಗಲೆಲ್ಲ ಈ ನಮಸ್ಕಾರ ನನಗೆ ನೆನಪಾಗುತ್ತದೆ ಅಥವಾ ಯಾರಾದರೂ ನಮಸ್ಕರಿಸುವಾಗ ಮೂನಾ ನೆನಪಾಗುತ್ತಾಳೆ ಎಂಬುದೇ ಹೆಚ್ಚು ಸೂಕ್ತ. ಹೃದಯದ ನೇರದಲ್ಲಿ ಕೈ ಜೋಡಿ ಸಿ, ನಗುಮುಖದಿಂದ ಕೊಂಚ ಮುಂದಕ್ಕೆ ಬಾಗಿ ತುಂಬು ಪ್ರೀತಿಯಿಂದ ಅವಳು ಮಾಡುತ್ತಿದ್ದ ನಮಸ್ಕಾರಕ್ಕೆ ಅಂತಹ ಆಕರ್ಷಣೀಯತೆಯಿತ್ತು. ಅವಳ ಮನಸ್ಸಿನಲ್ಲಿ ಶಿಕ್ಷಕರ ಕುರಿತು ಇರುವ ಗೌರವಕ್ಕೆ ಬೇರೆ ಸಾಕ್ಷಿ ಬೇಕಿರಲಿಲ್ಲ. ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಅವಳು ಈಗ ಬಿಎಎಂಎಸ್‌ ಕಲಿಯುತ್ತಿದ್ದಾಳೆ. ನಮ್ಮ ಕೆಯ್ಯೂರಿನ ಹೆಚ್ಚಿನ ಎಲ್ಲಾ ಮಕ್ಕಳ ನಮಸ್ಕಾರದ ಶೈಲಿ ಇದೇ ಆಗಿದ್ದರೂ ಇವಳ ನಮಸ್ಕಾರದಷ್ಟು ವಿಶೇಷವಾಗಿ ನಮಸ್ಕರಿಸಲು ನಾನು ಮೊದಲು ಹೇಳಿದ ಮಸೂದ್‌ ಹಾಗೂ ಇನ್ನು ಕೆಲವು ಮಕ್ಕಳಿಂದಷ್ಟೇ ಸಾಧ್ಯ.

ಜೆಸ್ಸಿ ಪಿ. ವಿ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕವಿಗಳು, ಸುಂದರ ದಂತಪಂಕ್ತಿಯನ್ನು ದಾಳಿಂಬೆ ಕಾಳುಗಳಿಗೆ ಹೋಲಿಸಿ, ಕಾವ್ಯದ ಸೊಗಸನ್ನು ಹೆಚ್ಚಿಸುತ್ತಾರೆ. ಹಾಗೆಯೇ ದಾಳಿಂಬೆ ಹಣ್ಣು , ನಮ್ಮ ಆರೋಗ್ಯವನ್ನು, ಸೌಂದರ್ಯವನ್ನು...

  • ಪ್ರಕೃತಿಯಲ್ಲಿ ಪಕ್ಷಿಗಳು ಗೂಡುಕಟ್ಟಿ ಮೊಟ್ಟೆ ಇಟ್ಟು ಮರಿಗಳು ಹೊರಬರುತ್ತವೆ. ಆ ಮರಿಗಳ ಆರೈಕೆಯ ಸಂಪೂರ್ಣ ಹೊಣೆ ಪಕ್ಷಿಗಳದ್ದು. ರೆಕ್ಕೆಬಲಿತ ಮರಿಗಳು ಸ್ವತಂತ್ರವಾಗಿ...

  • ಮಕ್ಕಳ ವಿದ್ಯಾಭ್ಯಾಸ, ಅವರಿಗೆ ಕೆಲಸ, ಮದುವೆ ಮುಂತಾದ ಜವಾಬ್ದಾರಿಗಳೆಲ್ಲಾ ಮುಗಿದು, "ರಾಮಾ ಕೃಷ್ಣ' ಅಂತ ನಮ್ಮ ಪಾಡಿಗೆ ಇದ್ದ ನಮಗೆ ಇದ್ದಕ್ಕಿದ್ದಂತೆ ಒಂದು ಭಡ್ತಿ...

  • ಈಗ ಕಾರ್ತಿಕ ಮಾಸ. ಕಾರ್ತಿಕದ ಚಳಿಗೆ ಎಣ್ಣೆ , ತುಪ್ಪದ ಖಾದ್ಯದಿಂದ ಚರ್ಮಕ್ಕೆ ಕಾಂತಿ ಬರುವುದು. ಇಲ್ಲಿವೆ ಅಂತಹ ಕೆಲವು ರಿಸಿಪಿಗಳು. ಉಬ್ಬು ನೆವರಿ ಬೇಕಾಗುವ ಸಾಮಗ್ರಿ:...

  • ಮೊಳಕಾಲ್ಮೂರು ಎಂಬ ಚಿತ್ರದುರ್ಗದ ಚಿಕ್ಕ ಪ್ರದೇಶದಲ್ಲಿ ತಯಾರಾಗುವ ಈ ರೇಶಿಮೆ ಸೀರೆ, ತನ್ನ ವಿಶಿಷ್ಟ ವಿನ್ಯಾಸಗಳಿಂದಾಗಿ ಕರ್ನಾಟಕದಲ್ಲಿ ಮಾತ್ರವಲ್ಲ ಭಾರತದೆಲ್ಲೆಡೆ...

ಹೊಸ ಸೇರ್ಪಡೆ