ಮಾಯಾಪೆಟ್ಟಿಗೆಯೊಳಗೆ ಹಳ್ಳಿ ಹಾಡು

Team Udayavani, Jul 27, 2018, 6:00 AM IST

ದುಬೈನಿಂದ ದೊಡ್ಡ ಸಾಹೇಬರು ಊರಿಗೆ ಬಂದರಂತೆ’- ಈ ಮಾತು ಪೇಟೆಯಿಂದ ಮರಳಿ ಬಂದ ಹಳ್ಳಿಯ ಯಾರೊಬ್ಬರ ಬಾಯಲ್ಲಿ ಬಂದರೂ ಸಾಕು, ಇಡಿಯ ಹಳ್ಳಿಯೇ “ಹೌದಾ?’ ಎಂದು ಹುಬ್ಬೇರಿಸುತ್ತಿತ್ತು. ಆ ಹಳ್ಳಿಗೂ, ದುಬೈವಾಸಿಗಳಾದ ಸಾಹೇಬರಿಗೂ ಎಂದಿನಿಂದಲೂ ಬಿಡಿಸಲಾರದ ನಂಟು. ದುಬೈನಿಂದ ಮನೆಗೆ ಬಂದ ಒಂದು ವಾರದೊಳಗೆ ದೊಡ್ಡ ಸಾಹೇಬರು ತನ್ನ ಒಂದೆರಡು ದೋಸ್ತಿಗಳೊಂದಿಗೆ ಹಳ್ಳಿಗೆ ಭೇಟಿ ನೀಡುವುದು ವಾಡಿಕೆೆ. ಭೇಟಿಯೆಂದರೆ ಅದು ಒಂದೆರಡು ಗಂಟೆಯ ಅವಧಿಯದ್ದಲ್ಲ. ನಾಲ್ಕಾರು ದಿನಗಳು ಅಥವಾ ಕೆಲವೊಮ್ಮೆ ವಾರವೇ ಆಗುವುದೂ ಉಂಟು. ಸಾಹೇಬರು ಬರುವರೆಂದರೆ ಊರ ಹೈಕಳಿಗೆಲ್ಲ ಶಿಕಾರಿಗೆ ಹೊರಡುವ ಉಮೇದು. ಊರಿನಲ್ಲಿ ಪರವಾನಗಿಯಿರುವ ಒಂದೆರಡು ಕೋವಿಗಳಿವೆಯಾದರೂ ರಾತ್ರಿಯಿಡೀ ಕಾಡನ್ನು ಸುತ್ತಬಲ್ಲಷ್ಟು ಬೆಳಕು ತೋರುವ ಟಾರ್ಚ್‌ ಇರಲಿಲ್ಲ. ಸಾಹೇಬರು ತರುವ ವಿದ್ಯುತ್‌ ಚಾಲಿತ ಟಾರ್ಚ್‌ಗಳು ಅವರ ಶಿಕಾರಿಯ ಸಮಯವನ್ನು ಸುದೀರ್ಘ‌ ಅವಧಿಯವರೆಗೆ ವಿಸ್ತರಿಸಿ, ಬೇಟೆಯ ಮೋಜಿಗೆ ರಂಗೇರಿಸುತ್ತಿದ್ದವು. ಜೊತೆಯಲ್ಲಿ ಸಾಹೇಬರ ಟಾರ್ಚ್‌ಗಳಿಗೆ ಇರುವ ಬೆಲ್ಟ್‌ಗಳ ಸಹಾಯದಿಂದ ಅದನ್ನು ತಲೆಗೆ ಕಟ್ಟಿಕೊಳ್ಳುವ ಅನುಕೂಲವಿರುವುದರಿಂದ ಎರಡೂ ಕೈಗಳನ್ನು ಬಂದೂಕಿನ ಬಳಕೆಗೆ ಉಪಯೋಗಿಸಬಹುದಿತ್ತು. ಶಿಕಾರಿಯಾದ ಪ್ರಾಣಿಯ ಬಾಡೂಟವನ್ನು ಮರುದಿನ ಊರಿಗೆ ಊರೇ ಸಾಮೂಹಿಕವಾಗಿ ಮಾಡಿ, ಸಾಹೇಬರು ತರುವ ಪೇಟೆಯ ಪೇಯದೊಂದಿಗೆ ಅದನ್ನು ಸೇವಿಸುವ ವೇಳೆಗೆ ಸ್ವರ್ಗ ಗಂಡಸರ ತೆಕ್ಕೆಯೊಳಗೆ ಜಾರಿದಂತಿರುತ್ತಿತ್ತು. ಇಡೀ ವರ್ಷದ ದುಡಿಮೆಯ ದಣಿವನ್ನೆಲ್ಲ ಕಳಕೊಳ್ಳುವ ನಿರಾಳತೆಯ ಕ್ಷಣಗಳವು.

ಊರ ಹೆಂಗಸರಿಗೆ ಸಾಹೇಬರ ಬರವು ಇಷ್ಟವಾಗುವುದು ಬೇರೆಯೇ ಕಾರಣಗಳಿಗಾಗಿ. ಅವರನ್ನು ಸಮ್ಮೊàಹಗೊಳಿಸುತ್ತಿದ್ದುದ್ದು ಅವರು ತರುತ್ತಿದ್ದ ತರಹೇವಾರಿ ಉಡುಗೊರೆಯ ಕಟ್ಟುಗಳು. ಹೊಸದಾಗಿ ಮದುವೆಯಾದ ಮದುವಣಗಿತ್ತಿಗೆ ರವಿಕೆಯ ಬಟ್ಟೆ, ಈಗಷ್ಟೇ ಪ್ರಾಯಕ್ಕೆ ಬರುತ್ತಿದ್ದ ಮುಗುದೆಯರಿಗೆ ಬಗೆಬಗೆಯ ಪರಿಮಳ ದ್ರವ್ಯಗಳು, ಶೋಕಿಯ ಹೆಂಗಸರಿಗೆಂದೇ ಕೋಳಿಮೊಟ್ಟೆಯ ಆಕಾರದ ಪರಿಮಳದ ಸೋಪು, ಕೊಂಚ ವಯಸ್ಸಾದವರಿಗೆ ತಲೆಗೆ ಕಟ್ಟುವ ಮಪ್ಲರ್‌, ಘಂ… ಎಂದು ಪರಿಮಳ ಬೀರುವ ಚಹಾ ಮತ್ತು ಕಾಫಿ ಪುಡಿಗಳು, ಪುಟ್ಟ ಮಕ್ಕಳಿಗೆ ಬಗೆಬಗೆಯ ಚಾಕಲೇಟ್‌ ಮತ್ತು ಬಿಸ್ಕಿಟ್‌ ಪೊಟ್ಟಣಗಳು- ಹೀಗೆ ಇಡಿಯ ಊರೇ ಒಂಥರಾ ಪರವಶತೆಯಲ್ಲಿ ಅವರ ಬರವನ್ನು ಕಾಯುತ್ತಿತ್ತು. ಹೆಂಗಸರು ಆ ಸೋಪುಗಳು ಸ್ನಾನ ಮಾಡಿದರೆ ಸವೆದೀತೆಂದು ತಮ್ಮ ಪೆಟ್ಟಿಗೆಗಳಲ್ಲಿ ಚಿನ್ನದ ಗಟ್ಟಿಯೇನೋ ಎಂಬಂತೆ ಜೋಪಾನವಾಗಿಟ್ಟು, ಆಗಾಗ ತೆಗೆದು ಪರಿಮಳವನ್ನು ಆಘ್ರಾಣಿಸುತ್ತಿದ್ದರು.

ಹೀಗೆ ಸಾಹೇಬರು ಬಂದ ಸಂಜೆ, ಊರ ನಡುವಿನ ವಿಶಾಲ ಅಂಗಳದಲ್ಲಿ ಅವರು ತಂದಿರುವ ದುಬಾರಿ ಬೆಲೆಯ ಆಟಿಕೆಗಳ ಪ್ರದರ್ಶನವೂ ನಡೆಯುತ್ತಿತ್ತು. ಅವುಗಳೆಲ್ಲ ಕೇವಲ ಪ್ರದರ್ಶನಕ್ಕಾಗಿ ಮಾತ್ರ ಇರುತ್ತಿತ್ತಾಗಿ ಅವುಗಳನ್ನು ನೋಡಲು ಜನರೆಲ್ಲ ಅಲ್ಲಿ ಸೇರುತ್ತಿದ್ದರು. ಬಾಯಲ್ಲಿರುವ ನಿಪ್ಪಲ್‌ನ್ನು ತೆಗೆದ ಕೂಡಲೇ ಅಳುವ ಪುಟ್ಟ ಮಗು ಗೊಂಬೆ, ಕೀ ಕೊಟ್ಟರೆ ಸಾಕು ಡೋಲು ಬಡಿಯುವ ಮಂಗಣ್ಣ, ಅಡೆತಡೆ ಸಿಕ್ಕಿದರೆ ತನ್ನಷ್ಟಕ್ಕೇ ದಿಕ್ಕು ಬದಲಾಯಿಸಿ ಚಲಿಸುವ ಬಣ್ಣದ ಕಾರು, ಒಂದೊಂದು ಗುಂಡಿ ಒತ್ತಿದಾಗಲೂ ಬೇರೆಬೇರೆ ಹಾಡು ಹೇಳುವ ಗೊಂಬೆ, ಕಿಂಡಿಯೊಳಗಿಂದ ನೋಡಿದರೆ ದುಬೈನ ಚಂದದ ಸ್ಥಳಗಳನ್ನೆಲ್ಲ ತೋರಿಸುವ ಗರ್ಜಿ ಪೆಟ್ಟಿಗೆ- ಹೀಗೆ ಅವರು ತರುವ ಬಗೆಬಗೆಯ ಆಟಿಕೆಗಳನ್ನು ಇಡಿಯ ಊರಿಗೆ ಊರೇ ಬಾಯಿಬಿಟ್ಟುಕೊಂಡು ನೋಡಿ ಖುಶಿಪಡುತ್ತಿತ್ತು.

ರೇಡಿಯೋ ಎಂಬ ಮಾತನಾಡುವ ಪೆಟ್ಟಿಗೆಯೊಂದನ್ನು ಆ ಊರಿಗೆ ಪರಿಚಯಿಸಿದವರೇ ಅವರು. ಊರಿನ ಅನೇಕ ಮನೆಗಳಲ್ಲಿ ದೇವರ ಗೂಡಿನ ಮೇಲೆಯೇ ಅದು ಪ್ರತಿಷ್ಠಾಪನೆಗೊಂಡು ಸುತ್ತಮುತ್ತಲಿನ ಎಲ್ಲ ಮನೆಗಳಿಗೆ ಕೇಳುವಂತೆ ದೊಡ್ಡ ಧ್ವನಿಯಲ್ಲಿ ಬೆಳಗಿನ ವಂದನವನ್ನೂ, ಸಂಜೆಯ ಕೃಷಿರಂಗವನ್ನೂ, ರಾತ್ರೆಯ ಚಿತ್ರಗೀತೆಗಳನ್ನೂ ಎಡೆಬಿಡದೇ ಪಸರಿಸುತ್ತಿತ್ತು. ಅಪರೂಪಕ್ಕೆಲ್ಲಿಯಾದರೂ ಯಕ್ಷಗಾನ ಪ್ರಸಾರವಾದರಂತೂ ಸರಿಯೆ, ಎಲ್ಲ ಯಕ್ಷಪ್ರೇಮಿಗಳೂ ಆ ಪೆಟ್ಟಿಗೆಯ ಸುತ್ತಲೂ ಅಪರಿಮಿತ ಭಕ್ತಿಯಿಂದ ಕುಳಿತು ಕೇಳುತ್ತಿದ್ದರು. “ಅಲ್ಲಾ, ಎಲ್ಲೋ ಮಾತಾಡಿದ್ದನ್ನ ಇಲ್ಲಿಯವರೆಗೆ ಬರೋಹಾಗೆ ಮಾಡ್ತಾನಲ್ಲ ಈ ಮನುಷ್ಯ. ಇವನ ಬುದ್ದಿಗೆ ಏನು ಹೇಳ್ಳೋದು?’ ಅಂತ ನಿಬ್ಬೆರಗಾಗುತ್ತಿದ್ದುದೂ ಉಂಟು.

ಈ ಸಲ ಸಾಹೇಬರು ಬರುವಾಗ ಹೊಸದೊಂದು ಮಾಯಾಪೆಟ್ಟಿಗೆಯನ್ನು ತಂದಿದ್ದರು. ಅದರ ಗುಂಡಿಯನ್ನು ಒತ್ತಿ ಒಂದಿಬ್ಬರ ಹತ್ತಿರ ಮಾತನಾಡಲು ಹೇಳಿದರು. ಮರುಕ್ಷಣದಲ್ಲಿ ಅವರು ಮಾತನಾಡಿದ್ದೆಲ್ಲವನ್ನೂ ಆ ಪೆಟ್ಟಿಗೆ ಪುನಃ ಹೇಳುತ್ತಿತ್ತು. ತಮ್ಮದೇ ಮಾತನ್ನು ಪೆಟ್ಟಿಗೆಯೊಳಗಿಂದ ಕೇಳಿ ಜನರು ನಿಬ್ಬೆರಗಾದರು! “ಬರೀ ಮಾತಾಡಿದ್ರೆ ಏನು ಚೆಂದ? ನೀವೆಲ್ಲ ಈಗ ಇದರಲ್ಲಿ ನಿಮಗೆ ಗೊತ್ತಿರೋ ಹಾಡುಗಳನ್ನು ಹೇಳಿ. ಅದನ್ನ ರೆಕಾರ್ಡ್‌ ಮಾಡಿ ದುಬೈಗೆ ತೆಕೊಂಡು ಹೋಗ್ತೀವೆ. ನಿಮ್ಮ ನೆನಪಾದಾಗ ಕೇಳಬಹುದು’ ಎಂದು ದೊಡ್ಡ ಸಾಹೇಬರು ನುಡಿದಾಗ ಎಲ್ಲರೂ “ಹೌದು, ಹೌದು’ ಎಂದು ತಲೆಯಲ್ಲಾಡಿಸಿದರು. ಹಾಡುವಾಗ ಯಾರೂ ಮಾತನಾಡಬಾರದು ಎಂಬ ಎಚ್ಚರಿಕೆಯನ್ನೂ ನೀಡಿದರು. ಎಲ್ಲರೂ ಎಲ್ಲಿ ಜೋರಾಗಿ ಉಸಿರಾಡಿದರೆ ಶಬ್ದವಾಗಬಹುದೇನೋ ಎಂಬಂತೆ ಉಸಿರನ್ನೂ ನಿಧಾನವಾಗಿ ಬಿಡುತ್ತ ನಿಂತರು. ಪೆಟ್ಟಿಗೆಯೆದುರು ಕುಳಿತು ಹಾಡಲು ದೊಡ್ಡವರೆಲ್ಲ ಮೊದಮೊದಲು ಭಯಗೊಂಡರು. ಪುಟ್ಟ ಹುಡುಗಿ ಗೌರಿ ತಾನು ಶಾಲೆಯಲ್ಲಿ ಕಲಿತ “ಗಜಮುಖನೆ ಗಣಪತಿಯೇ’ ಹಾಡನ್ನು ಕೈಮುಗಿದುಕೊಂಡು ಹಾಡಿಯೇಬಿಟ್ಟಳು. ಅವಳ ಅಕ್ಕ ಗಂಗೆ ತಾನೇನೂ ಕಡಿಮೆಯಿಲ್ಲ ಎಂಬಂತೆ “ಕನಕನಿಗೊಲಿದ ಗೋವಿಂದಾ, ನಮ್ಮನು ಕಾಯೋ ಮುಕುಂದಾ’ ಎಂದು ದಾಸರ ಪದವೊಂದನ್ನು ಹಾಡಿದಳು. ಇದನ್ನೆಲ್ಲ ನೋಡಿದ ಮಂಜನಿಗೆ ಹುಕಿಬಂದು, “ವಿN°àಶಾಯ ಗಣಪತ್ಯೆ„ ಪಾರವತ್ಯೆ„ ಗುರುವೇ ನಮಃ’ ಎಂದು ಯಕ್ಷಗಾನದ ಗಣಪತಿ ಪೂಜೆಯನ್ನು ಮಾಡಿಬಿಟ್ಟ. ಇಷ್ಟೆಲ್ಲ ನಡೆಯುವಾಗ ಇತ್ತ ನಾಗಮ್ಮನ ತಂಡ ತಮ್ಮ ಸಂಕೋಚಗಳನ್ನೆಲ್ಲ ಮೀರಿ ಸೋಬಾನೆ ಪದಗಳನ್ನು ಹಾಡಲು ಸಜಾjಗಿಬಿಟ್ಟಿತ್ತು. ನಾಗಮ್ಮ ಸೋಬಾನೆ ಹಾಡಲು ಪ್ರಾರಂಭಿಸಿದಳೆಂದರೆ ಇಡಿಯ ಊರೇ ತಲೆದೂಗಿ ಕೇಳುತ್ತಿತ್ತು. ಜೊತೆಗಾತಿಯರ “ಸೋ’ ಎಂಬ ಶೃತಿಗೆ ತನ್ನ ಸೊಲ್ಲುಗಳನ್ನು ಸೇರಿಸುತ್ತಾ ಹಾಡಲಾರಂಭಿಸಿದ ನಾಗಮ್ಮ ಪೆಟ್ಟಿಗೆಯ ರೀಲು ಮುಗಿಯುವವರೆಗೂ ಹಾಡುತ್ತಲೇ ಇದ್ದಳು. ಸಾಹೇಬರು, ಮತ್ತವರ ಸಂಗಡಿಗರು ಪರವಶಗೊಂಡು ಕೇಳುತ್ತಿದ್ದರು. ಅವರೆಲ್ಲರ ಹಾಡನ್ನು ಪೆಟ್ಟಿಗೆಯೊಳಗಿಂದ ಎಲ್ಲರಿಗೂ ಕೇಳಿಸಿದ ಸಾಹೇಬರು ಹಾಡುಗಳ ಧ್ವನಿಮುದ್ರಿಕೆಯನ್ನು ಜೋಪಾನವಾಗಿ ತೆಗೆದಿಟ್ಟುಕೊಂಡರು. ಸಾಹೇಬರ ಪೆಟ್ಟಿಗೆಯೊಳಗೆ ಬಂಧಿಯಾಗಿ ದೇಶ, ಪರದೇಶಗಳಿಗೆ ಸಂಚಾರ ಹೊರಟ ಹಳ್ಳಿಹಾಡುಗಳನ್ನು ಊರಿನ ಹೊಳೆಯು ಗುಳು ಗುಳು  ನಗೆಯೊಂದಿಗೆ ಬೀಳ್ಕೊಟ್ಟಿತು.

ಸುಧಾ ಆಡುಕಳ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಪ್ಲೀಸ್, ಶಾಪಿಂಗ್‌ಗೆ ಹೋಗ್ಬೇಕು. ಒಮ್ಮೆ ಕರೆದುಕೊಂಡು ಹೋಗಿ, ಲೇಟಾಯ್ತು, ಬಸ್‌ಸ್ಟಾಪ್‌ ತನಕ ಬಿಟ್ಟು ಬನ್ನಿ ಮಗಳನ್ನು , ಡ್ಯಾನ್ಸ್ ಕ್ಲಾಸಿಗೆ ಬಿಟ್ಟು ಬನ್ನಿ...''...

  • ಸಿಹಿ ಜೋಳವೆಂದರೆ ಮಕ್ಕಳಿಂದ ಹಿಡಿದು ದೊಡ್ಡವರ ತನಕವೂ ಇಷ್ಟವಾಗುವ ವಸ್ತು. ಇದರಿಂದ ದೋಸೆ, ರೊಟ್ಟಿ , ಪಾಯಸ, ಹಲ್ವಾ ಮುಂತಾದ ಅನೇಕ ಅಡುಗೆಗಳನ್ನು ಮಾಡಿ ಸವಿಯಬಹುದು. ಸಿಹಿ...

  • ನಾನು ಇಂಥಾದ್ದೊಂದು ಕ್ಷಣ ನನ್ನ ಜೀವನದಲ್ಲಿ ಬರಬೇಕು ಎಂದು ಕನಸು ಕಂಡಿದ್ದೆ. ಅದೀಗ ಈಡೇರಿದೆ. ಜೀವಮಾನದ ದೊಡ್ಡ ಕನಸು ಈಡೇರಿದ ಈ ಹೊತ್ತಿನಲ್ಲಿ ಅದಕ್ಕೆ ಕಾರಣರಾದ...

  • ಬಾಲಿವುಡ್‌ ಸಿನಿಪ್ರಿಯರಿಗೆ ಹಮ್‌ ಆಪ್ಕೆ ಹೈ ಕೌನ್‌ ಚಿತ್ರ ನೆನಪಿರಬಹುದು. 1994ರ ಆಗಸ್ಟ್‌ 5 ರಂದು ಬಿಡುಗಡೆಯಾದ ಹಮ್‌ ಆಪ್ಕೆ ಹೈ ಕೌನ್‌ ಚಿತ್ರ ಬರೋಬ್ಬರಿ ನೂರು...

  • ಭಾರತದ ಪ್ರತಿಯೊಂದು ರಾಜ್ಯದಲ್ಲಿರುವ ಪ್ರಾದೇಶಿಕ ವೈವಿಧ್ಯತೆ ಮತ್ತು ಸಾಂಸ್ಕೃತಿಕ ವಿಶೇಷತೆಗೆ ಇನ್ನೊಂದು ಉದಾಹರಣೆ ಎಂದರೆ ಪಶ್ಚಿಮಬಂಗಾಲ. ಪಶ್ಚಿಮ ಬಂಗಾಲದ...

ಹೊಸ ಸೇರ್ಪಡೆ