ಹುಡುಗಿಯರೇಕೆ ಮದುವೆಯಾಗಿ ಅಮ್ಮನ ಮನೆ ಬಿಟ್ಟು ಬೇರೆ ಮನೆಗೆ ಹೋಗಬೇಕಾಗುತ್ತದೆ?

Team Udayavani, Jun 28, 2019, 5:00 AM IST

ಪತಿಯ ಮನೆಯಲ್ಲಿ ಜವಾಬ್ದಾರಿಗಳನ್ನು ಹೊತ್ತು ಸಾಗುವ ಹೆಣ್ಣು ತವರು ಮನೆಗೆ ತೆರಳುತ್ತಿದ್ದಂತೆಯೇ ಸ್ವಾತಂತ್ರ್ಯ ಸಿಕ್ಕಂತೆ ಖುಷಿಪಡುತ್ತಾಳೆ. ಏಕೆಂದರೆ, ತವರೆಂದರೆ ಅದೆಂತಹುದೋ ಸ್ವಾತಂತ್ರ್ಯಅವಳಿಗೆ. ಗಂಡನ ಮನೆಯಲ್ಲಿ ಹೆಗಲ ಮೇಲೆ ಹೊತ್ತುಕೊಂಡು ಸಾಗುವ ತನ್ನೆಲ್ಲ ಜವಾಬ್ದಾರಿಗಳನ್ನು, ಹೊಣೆಗಾರಿಕೆಯನ್ನು ಇಳಿಸಿ ನೆಮ್ಮದಿಯಿಂದ ಉಸಿರಾಡಲು ಸಾಧ್ಯವಾಗುವುದು ಅವಳಿಗೆ ತವರು ಮನೆಯಲ್ಲೇ. ತನ್ನ ಬಾಲ್ಯವನ್ನು ನೆನಪಿಸಿಕೊಳ್ಳುವ ಅವಕಾಶ ಸಿಗುವುದು ಅವಳಿಗೆ ತವರಿನಲ್ಲಿಯೇ. ತನ್ನ ಸಂಕೋಚವನ್ನೆಲ್ಲ ಬಿಟ್ಟು ಎಲ್ಲವನ್ನೂ ಹೇಳಿಕೊಂಡು ಹಗುರಾಗುವುದಕ್ಕೆ ಅಮ್ಮನ ಮಡಿಲಿರುವುದು ತವರಿನಲ್ಲಿಯೇ. ಕೇಳಿದ್ದನ್ನೆಲ್ಲ ಮಾಡಿ ತಟ್ಟೆಯಲ್ಲಿ ಬಡಿಸಿ ಕೈಗಿಡುವ ಅಮ್ಮನ ಪ್ರೀತಿಯಲ್ಲಿ, ಅಪ್ಪನ ಒಲವಿನಲ್ಲಿ,ಅಣ್ಣ-ತಮ್ಮಂದಿರ ತಂಗಿಯರ ಆತ್ಮೀಯತೆಯ ಮಧುರತೆಯಲ್ಲಿ ತೊಡಗಿಸಿಕೊಳ್ಳಲು ಹೆಣ್ಣಿಗೆ ಉತ್ತಮವಾದ ಸ್ಥಳವೇ ತವರುಮನೆ. ಹೆಣ್ಣು ತವರು ಮನೆಯಲ್ಲಿ ಇರುವಷ್ಟು ದಿನ ಸ್ವರ್ಗವೇ ಧರೆಗುರುಳಿ ಅವಳನ್ನು ಅದರಲ್ಲಿ ಜೀಕಿಸಿದಂತೆ ಖುಷಿ ಪಡುತ್ತಾಳೆ. ತವರು ಮನೆಯಲ್ಲಿ ಅವಳು ಅವಳಾಗಿಯೇ ಸಂಭ್ರಮಿಸುತ್ತಾಳೆ,

ಉತ್ತರಕನ್ನಡ ಜಿಲ್ಲೆಯ ಕಡಲ ತೀರದ ಗೋಕರ್ಣ ನನ್ನ ತವರೂರು. ಪ್ರಾಕೃತಿಕ ಸೌಂದರ್ಯ, ಹಸಿರ ಸೊಬಗು, ನೀಲ ಕಡಲು ಇವೆಲ್ಲದರ ಒಡಲು ನನ್ನ ತವರೂರು. ಹಸಿರು ಗದ್ದೆಗಳ, ಮಾವು, ತೆಂಗು ಮರಗಳ ಸೊಬಗು ಪ್ರಕೃತಿ ಮಾತೆಯ ಸೆರಗು. ಅರಬ್ಬೀ ಸಮುದ್ರದ ದಡದಲ್ಲಿರುವ ನನ್ನ ತವರುಮನೆಯ ಸುತ್ತ ಕಡಲ ಅಲೆಗಳ ನಿನಾದ, ತಂಪು ಗಾಳಿಯ ಓಲಾಟ. ನನ್ನ ತವರೂರು ಶಿವನ ಪಂಚ ಕ್ಷೇತ್ರಗಳಲ್ಲಿ ಒಂದಾಗಿದ್ದು ಸುಂದರ ಕಡಲತೀರಗಳಿಂದಾಗಿ ಮಾತ್ರವಲ್ಲದೆ ಧಾರ್ಮಿಕವಾಗಿಯೂ ಸಾಕಷ್ಟು ಮಹತ್ವ ಪಡೆದಿದೆ. ಕಳೆದ 20 ವರ್ಷಗಳಿಂದ ಮುಂಬಯಿಯಲ್ಲಿ ವಾಸವಾಗಿರುವ ನನಗೆ ತವರೂರು, ತವರುಮನೆಯ ನೆನಪು ಸದಾ ಹಸಿರು. ಬಿಳಿ ವರ್ಣದ ಮರಳಿನ ರಾಶಿ, ದಟ್ಟ ಹಸಿರಿನ ತೆಂಗಿನ ಮರಗಳ ಸಾಲು, ಹಸಿರು ಗದ್ದೆಗಳ ಪ್ರಾಕೃತಿಕ ಸೌಂದರ್ಯದಡಿಯಲ್ಲಿ ರಮಣೀಯ ಕಡಲ ಅಲೆಗಳ ನಿನಾದದಲ್ಲಿ ಸುಂದರ ನಿಸರ್ಗಧಾಮದ ಸಂಭ್ರಮದ ಸಿರಿಯಲ್ಲಿ ಜನಿಸಿದ ನಾನು, ನನ್ನ ತವರೂರು ಮತ್ತು ತವರುಮನೆ ಮರೆಯುವುದುಂಟೆ?

ಹೌದು ! ನನಗೆ ಇನ್ನೂ ನೆನಪಿದೆ. ಬಾಲ್ಯದಲ್ಲಿ ನಾನು ಅಮ್ಮನನ್ನು ಕೇಳಿದ್ದೆ, “”ಆಯಿ… ಹುಡುಗಿಯರಿಗೇಕೆ ಮದುವೆಯಾಗಿ ಅಮ್ಮನ ಮನೆಬಿಟ್ಟು ಬೇರೆ ಮನೆಗೆ ಹೋಗಬೇಕಾಗುತ್ತದೆ?”

ಪ್ರತಿ ಮಗಳು ಈ ಪ್ರಶ್ನೆಯನ್ನು ತನ್ನ ತಾಯಿಗೆ ಕೇಳಿರಬಹುದಲ್ಲವೆ? ಅದಕ್ಕೆ ಅಮ್ಮನ ಉತ್ತರ, “”ಮಗಳು ಮದುವೆಯಾಗಿ ಗಂಡನಮನೆಗೆ ಹೋಗದಿದ್ದರೆ ನಾಳೆ ಆಕೆಯ ಮಗಳಿಗೆ ತವರು ಮನೆ ಹೇಗೆ ಸಿಕ್ಕೀತು” ಅಂದು ನನಗೆ ಆ ಮಾತುಗಳು ಅರ್ಥವಾಗಲಿಲ್ಲ. ತವರುಮನೆ ಎಂಬ ಪದದಲ್ಲಿಯೇ ರಕ್ಷಣೆ, ಪ್ರೀತಿ, ವಾತ್ಸಲ್ಯ, ಕರುಣೆ, ದಯೆ, ತ್ಯಾಗ, ಹೊಂದಾಣಿಕೆ ಇವೆಲ್ಲ ಕಂಡು ಬರುವಾಗ ಪ್ರತ್ಯಕ್ಷ ತವರುಮನೆಯಲ್ಲಿ ಅವುಗಳ ಮೀರಿ ಸುಮಧುರ ಬಾಂಧವ್ಯವನ್ನು ಬೆಸೆಯುವ ಪ್ರೀತಿ ಪೂರ್ವಕ ಗೌರವಗಳು ಇರುತ್ತವೆ. ಮದುವೆಯಾಗಿ ಗಂಡನಮನೆ ಸೇರಿದೊಡನೆ ಹೆಣ್ಣಿಗೆ ಈ ಪದದ ಆಳ, ತವರುಮನೆಯ ಸೌಭಾಗ್ಯ ಅರ್ಥವಾಗುತ್ತದೆ ಅನ್ನುವುದು ಅಷ್ಟೇ ಸತ್ಯ.

ಗಂಡನಮನೆಯಲ್ಲಿ ಎಷ್ಟೇ ಸುಖ- ಸಮೃದ್ಧಿ ಇದ್ದರೂ ಬದುಕಿಗೆ ಜೀವಂತಿಕೆ ಕಟ್ಟಿ ಕೊಟ್ಟ, ಜೀವನಕ್ಕೆ ಅಪೂರ್ವ ಸೌಂದರ್ಯ ಕಟ್ಟಿ ಕೊಟ್ಟ, ಖುಷಿಯಲ್ಲಿ ನಕ್ಕು ನಗಿಸಿದ, ಭವಿಷ್ಯಕ್ಕೆ ಬೆಳಕಿನ ಮುನ್ನುಡಿ ಬರೆದ ಪ್ರೀತಿ, ಮಮತೆ, ತ್ಯಾಗ, ವಾತ್ಸಲ್ಯದ ಪಾಠ ಬೋಧಿಸಿದ ತವರುಮನೆ ಕಾಣಲು ಹಂಬಲ ಹೆಣ್ಣಿಗೆ. ಏಕೆಂದರೆ, ತವರು ಮತ್ತು ಹೆಣ್ಣಿನ ನಡುವೆ ತೀವ್ರವಾದ ಅವಿನಾಭಾವ ಸಂಬಂಧವಿದೆ. ಮದುವೆಯಾದ ಹೆಣ್ಣಿಗೆ ತನ್ನ ಆಂತರಿಕ ಸಂವೇದನೆಗಳನ್ನು, ತನ್ನ ಜೀವನದ ಕಷ್ಟ-ಸುಖಗಳನ್ನು ಹಂಚಿಕೊಳ್ಳಲು, ತನ್ನ ಭಾವನೆಗಳಿಗೆ ಸ್ಪಂದಿಸಿ ಮಿಡಿಯಲು ಇರುವ ಏಕೈಕ ಆಸರೆ ಎಂದರೆ ಅದು ‌ ತವರುಮನೆ.

ಇತ್ತೀಚೆಗೆ ನನಗೆ ಅಮ್ಮನ ನೆನಪು ಬಹಳ ಕಾಡುತ್ತಿದೆ. ಪ್ರಪಂಚದಲ್ಲಿರೋ ಅಮ್ಮಂದಿರಲ್ಲಿ ನನ್ನಮ್ಮ ಬೆಸ್ಟ್‌ ! ನನ್ನಮ್ಮ ಎಲ್ಲರಿಗಿಂತ ತುಸು ಭಿನ್ನ . ಅಮ್ಮನ ಬಗ್ಗೆ ಯೋಚನೆ ಮಾಡುವಾಗಲೆಲ್ಲ ಅಮ್ಮ ಬೇರೆಯವರಿಗಿಂತ ತುಂಬ ಡಿಫ‌ರೆಂಟ್‌ ಅಂತ ಅನ್ನಿಸದೇ ಇರದು. ನನ್ನ ಜೀವನದಲ್ಲಿ ಅಪ್ಪ-ಅಮ್ಮ ಮಾಡಿದ ಎಲ್ಲವೂ ತುಂಬಾ ವಿಶೇಷವಾಗಿ ಕಾಣುತ್ತಿದೆ. ನನ್ನ ಉಸಿರಿನ ಪ್ರತಿಯೊಂದು ಏರಿಳಿತವನ್ನೂ ಚೆನ್ನಾಗಿ ತಿಳಿದಿರುವವಳು ನನ್ನಮ್ಮ ಮಾತ್ರ.ಅಮ್ಮನಲ್ಲಿ ನಮಗೆ ಸಲುಗೆ ಹೆಚ್ಚು. ಅಂತೆಯೇ ಎಂದಿಗೂ ನನಗೆ ಇಂಥಾ¨ªೊಂದು ವಿಷಯ ಅಮ್ಮನಲ್ಲಿ ಹೇಳ್ಕೊಬಾರದು ಅಂತ ಅನಿಸಲೇ ಇಲ್ಲ. ನನ್ನ ಅಮ್ಮ ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಾರೆ. ನನ್ನಮ್ಮನಿಗೆ ಯಾವಾಗಲೂ ಹಬ್ಬದ ಅಡುಗೆ ತಯಾರಿಸುವುದೆಂದರೆ ತುಂಬಾ ಖುಷಿ. ಅವರು ಮಾಡುವ ಫಿಶ್‌ ಕರ್ರಿ ಸೂಪರ್‌ ಆಗಿರುತ್ತದೆ!

ಊರಲ್ಲಿ ಚಿಕ್ಕಂದಿನಿಂದಲೂ ಅಮ್ಮನ ಪ್ರೀತಿಯಲ್ಲೇ ಮುಳುಗಿಹೋದ ನಾನು ಮದುವೆಯಾಗಿ ಊರು ಬಿಟ್ಟು ಮುಂಬಯಿಗೆ ಬಂದ ಮೇಲೆ ಅವಳನ್ನು ಇನ್ನಷ್ಟು ಪ್ರೀತಿಸಬೇಕಿತ್ತು ಅಂತ ಅನ್ನಿಸುತ್ತದೆ. ಚಿಕ್ಕಂದಿನಲ್ಲಿ ಅತ್ತಾಗ ಮುದ್ದಾಡಿ, ಹಾಲುಣಿಸಿ, ತುತ್ತು ತಿನ್ನಲು ಹಠತೊಟ್ಟರೆ ಮುತ್ತು ನೀಡುವ ಅಮ್ಮ. ತಿಳಿನೀಲಿ ಆಕಾಶದಲ್ಲಿ ಕಾಣುತ್ತಿದ್ದ ಚಂದಮಾಮನ ತೋರಿಸಿ, ಬಣ್ಣ ಬಣ್ಣದ ಕಥೆ ಹೇಳಿ ನನ್ನ ಕಿಲ ಕಿಲ ನಗಿಸುತ್ತ ತುತ್ತು ತಿನ್ನಿಸಿ ಸಂತಸವ ಕಾಣುತ್ತಿದ್ದ ನನ್ನಮ್ಮ ತುಂಬಾ ಗ್ರೇಟ್‌.ಅವಳ ಕೈತುತ್ತು ಹೊಟ್ಟೆಗೆ ತಂಪು. ಅವಳ ಮಾತು ಕಿವಿಗಳಿಗೆ ತುಂಬಾ ಇಂಪು. ಆ ಸುಂದರ ಕ್ಷಣಗಳನ್ನು ನೆನೆದಾಗ ಅಮ್ಮನ ಅಪ್ಪುಗೆಯಲ್ಲಿ ಬೆಚ್ಚನೆ ಮಲಗುವಾಸೆ. ನನಗಾಗಿ ಎಲ್ಲವನ್ನು ಮಾಡಿದ ನನ್ನಮ್ಮ ತ್ಯಾಗಿ, ಸಹನಶೀಲೆ, ತಾಳ್ಮೆಯ ಪ್ರತಿರೂಪ. ಅವಳೊಂದು ಅದ್ಭುತ ಶಕ್ತಿ , ಮಾತೃತ್ವದ ಅಭಿವ್ಯಕ್ತಿ.

ಸೌಮ್ಯಾ ಪ್ರಕಾಶ ತದಡಿಕರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮಳೆಗಾಲದಲ್ಲಿ ಕೂದಲಿನ ಸಂರಕ್ಷಣೆ ಸ್ವಲ್ಪ ತ್ರಾಸದಾಯಕ. ಒದ್ದೆ ಕೂದಲು ಬೇಗ ಒಣಗದೆ, ಯಾವ ಹೇರ್‌ಸ್ಟೈಲ್‌ ಮಾಡುವುದಪ್ಪಾ ಅಂತ ಹುಡುಗಿಯರು ತಲೆಕೆಡಿಸಿಕೊಳ್ಳುವ...

  • ಜಾರ್ಖಂಡ್‌ನ‌ ಮಹಿಳೆಯರ ಸಾಂಪ್ರದಾಯಕ ಉಡುಗೆ ಪಂಚಿ ಮತ್ತು ಪರಹನ್‌. ಇದನ್ನು ಹೆಚ್ಚಾಗಿ ಬುಡಕಟ್ಟು ಜನಾಂಗದ ಮಹಿಳೆಯರು ವಿಶಿಷ್ಟ ರೀತಿಯಲ್ಲಿ ಧರಿಸುತ್ತಾರೆ. ಪಂಚಿ...

  • "ಏನು ಕೆಲಸದಲ್ಲಿದ್ದೀರಿ?' "ಗೃಹಿಣಿ' "ಹಾಗಾದರೆ, ಎಲ್ಲಿಯೂ ಕೆಲಸ ಮಾಡುತ್ತಿಲ್ಲ' "ಗೃಹಿಣಿಯಾಗಿಯೇ ಇದ್ದುಕೊಂಡು ಉದ್ಯೋಗಸ್ಥೆಯಾಗಿರ ಬಾರದೆಂದು ಯಾರು ಹೇಳಿದವರು? ' ನಾವು...

  • ಬಾಲಿವುಡ್‌ನ‌ ಎವರ್‌ಗ್ರೀನ್‌ ಚೆಲುವೆ ಶ್ರೀದೇವಿ ಕಳೆದ 2018ರ ಫೆ. 24ರಂದು ತಮ್ಮ ಸಂಬಂಧಿಕರ ಮದುವೆಗೆ ಹೋದಾಗ ದುಬೈನ ಪ್ರತಿಷ್ಠಿತ ಹೊಟೇಲ್‌ನಲ್ಲಿ ಅಕಾಲಿಕ ನಿಧನರಾಗಿದ್ದರು....

  • ಬಾಳೆಎಲೆ, ಹಲಸಿನ ಎಲೆ, ಅರಸಿನ ಎಲೆ, ತೆಗದ ಎಲೆ ಇತ್ಯಾದಿ ಎಲೆಗಳಲ್ಲಿ ವಿವಿಧ ಕಡುಬುಗಳನ್ನು ಮಾಡಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ....

ಹೊಸ ಸೇರ್ಪಡೆ