ಅಡುಗೆ ಮನೆಯಲ್ಲಿ ಯೋಗ

Team Udayavani, Jun 28, 2019, 5:00 AM IST

ಸಾಂದರ್ಭಿಕ ಚಿತ್ರ

ಮಾರ್ಕೆಟಿನಲ್ಲಿ ತರಕಾರಿ ತೆಗೆದುಕೊಳ್ಳುತ್ತಿರುವಾಗ ಗಡಿಬಿಡಿಯಲ್ಲಿ ನಡೆದುಕೊಂಡು ಬರುತ್ತಿದ್ದ ರಮಾ ಎದುರಾದಳು.
“”ಏನು ಇಷ್ಟೊಂದು ಅವಸರದಲ್ಲಿದ್ದೀಯಾ?” ಎಂದೆ.
“”ನಾನು ಯೋಗ ಕ್ಲಾಸಿಗೆ ಹೊರಟಿದ್ದು” ಎಂದಾಗ ನಾನು ಆಶ್ಚರ್ಯದಿಂದ ಅವಳನ್ನು ಪರೀಕ್ಷಿಸುವ ನೋಟ ಬೀರಿ, “”ಎಷ್ಟು ಸಮಯವಾಯ್ತು ಕ್ಲಾಸಿಗೆ ಸೇರಿ!” ಎಂದು ಕೇಳಿದೆ. ಆಗ ಆಕೆ “”ಒಂದು ವರ್ಷವಾಗುತ್ತ ಬಂತು. ನಾನು ಕ್ಲಾಸಿನಲ್ಲಿ ಮಾತ್ರ ಯೋಗ ಮಾಡುವುದು. ಮನೆಯಲ್ಲಿ ಮಾಡಲು ಉದಾಸೀನ. ಇಷ್ಟದ ತಿಂಡಿಗಳನ್ನು ಬಿಡುವುದು ನನ್ನಿಂದಾಗುವುದಿಲ್ಲ. ಹಾಗಾಗಿ ಸ್ಲಿಮ್‌ ಆಗುತ್ತಿಲ್ಲ” ಎಂದಾಗ ನಗು ಬಂತು. ಮನೆಯಲ್ಲಿ ಕೆಲಸ ಮಾಡಲು ಉದಾಸೀನ ಆಗುವವರಿಗೆ ಆ ಕ್ಲಾಸು ಈ ಕ್ಲಾಸಿನ ಜೊತೆಗೆ ಯೋಗ ಕ್ಲಾಸೂ ಒಂದು. ಅಂದರೆ ಯಾವ ಉದ್ದೇಶವೂ ಇಲ್ಲದೆ ಒಂದಷ್ಟು ಕ್ಲಾಸುಗಳಿಗೆ ಹೋಗುವುದು ಬರುವುದು ಮಾಡುತ್ತ ತಾನು ಬ್ಯುಸಿ ಆಗಿದ್ದೇನೆ ಎಂದು ಬಿಂಬಿಸಿಕೊಳ್ಳುವುದು ಕೆಲವರಿಗೆ ಇತ್ತೀಚೆಗೆ ಖಯಾಲಿಯಾಗಿದೆಯೊ ಎನಿಸುತ್ತದೆ.

ಮತ್ತೂಮ್ಮೆ ನಾನು ಹೊರಗೆ ಹೋಗಿದ್ದಾಗ ರಮಾಳ ಅತ್ತೆ ಸಿಕ್ಕಿದ್ದರು. ಹೀಗೇ ಮಾತನಾಡುತ್ತ, “”ರಮಾ ಮನೆಯಲ್ಲಿದ್ದಾಳಾ?” ಎಂದು ಕೇಳಿದೆ. “”ಅವಳೆಲ್ಲಿ ಮನೆಯಲ್ಲಿರ್ತಾಳೆ. ಯೋಗ ಕ್ಲಾಸು, ಆರ್ಟ್‌ ಕ್ಲಾಸು, ಸಂಗೀತ ಕ್ಲಾಸು ಅಂತ ದಿನವಿಡೀ ಹೊರಗೆ ತಿರುಗುವುದೇ ಆಯ್ತು. ನನಗೆ ಸ್ವಲ್ಪ ಬೆನ್ನುನೋವು. ಅದಕ್ಕೆ ಔಷಧ ತೊಗೊಂಡು ಹೋಗೋಣ ಅಂತ. ನಾನಿನ್ನು ಬರ್ತೇನೆ” ಎನ್ನುತ್ತ ನಡೆದುಬಿಟ್ಟರು. ವಯಸ್ಸಾದರೂ ಅವರ ನಡಿಗೆಯಲ್ಲಿ ಸಮತೋಲನವಿತ್ತು.

ರಮಾ ಹಾಗೂ ಅವರ ಅತ್ತೆ ಎಂಬ ಎರಡು ತಲೆಮಾರಿನ ಗೃಹಿಣಿಯರ ಪಾತ್ರ ನನ್ನ ಅಂತರ್‌ದೃಷ್ಟಿಯ ಮೇಲೆ ಜೋಡಾಟವಾಡುತ್ತ ತಮ್ಮದೇ ಶೈಲಿಯಲ್ಲಿ ಧಿಗಿಣ ಹಾಕಿದವು.
ರಮಾಳ ಕ್ಲಾಸು ಸುತ್ತಾಟಕ್ಕೆ ಒಂದು ಕಾರಣ ಆಕೆಯ ಅಡುಗೆಕೋಣೆ ಇರಬಹುದು ಎನಿಸಿತು. ಈ ಆಧುನಿಕ ಸೌಲಭ್ಯಗಳನ್ನೊಳಗೊಂಡ ಅಡುಗೆ ಕೋಣೆಯಲ್ಲಿ ಗೃಹಿಣಿಯ ಕೆಲಸ ಶೀಘ್ರವಾಗಿ ಮುಗಿದು ಸಮಯ ಉಳಿತಾಯವಾಗುತ್ತದೆ.

ನನ್ನ ಅತ್ತೆ, ರಮಾಳ ಅತ್ತೆಯ ಕಾಲದ ಅಡುಗೆ ಕೋಣೆ ಹೇಗಿತ್ತು ಎಂಬ ಅವರ ಅನುಭವದ ಮಾತುಗಳು ಆಗಾಗ ನನ್ನ ಕಿವಿಯಲ್ಲಿ ತೆರೆದುಕೊಂಡು ಮನಸ್ಸಿನಲ್ಲಿ ಮೊರೆಯುತ್ತಿರುವುದುಂಟು.

ಅತ್ತೆಯ ಕಾಲದಲ್ಲಿ ದೋಸೆಯ ಹಿಟ್ಟು , ಇಡ್ಲಿ ಹಿಟ್ಟು , ಮೇಲೋಗರದ ಮಸಾಲೆಯನ್ನೆಲ್ಲ ಅಡುಗೆ ಕೋಣೆಯ ದೊಡ್ಡ ಕಡೆಯುವ ಕಲ್ಲಿನಲ್ಲೇ ಕಡೆಯಬೇಕಿತ್ತು. ಇದು ಕಷ್ಟದ ಕೆಲಸ ಎಂದು ಈಗ ನಮಗನಿಸಬಹುದು. ಆದರೆ, ಒಂದು ಕೈಯ್ಯಲ್ಲಿ ಕಲ್ಲನ್ನು ತಿರುಗಿಸುತ್ತಾ ಇನ್ನೊಂದು ಕೈಯಲ್ಲಿ ಮುಂದೂಡುತ್ತಿರುವಾಗ ಸೊಂಟ-ಕಟಿ ಚಕ್ರಾಸನ ಮಾಡುತ್ತಾ, ಎರಡೂ ಕೈಗೆ ಸೊಂಟ, ಬೆನ್ನಿನ ಭಾಗಕ್ಕೆಲ್ಲ ಯಾವ ಹಣವನ್ನೂ ತೆರದೆ ಪುಕ್ಕಟೆ ವ್ಯಾಯಾಮವಾಗುತ್ತಿತ್ತು. ಕಡೆಗೋಲನ್ನು ಮಜ್ಜಿಗೆಯ ಪಾತ್ರೆಯಲ್ಲಿ ಮುಳುಗಿಸಿ, ಅದಕ್ಕೆ ಸುತ್ತಿದ ಹಗ್ಗವನ್ನು ಎರಡೂ ಕೈಯಿಂ ಎಳೆದೂ ಎಳೆದೂ “ಜರ್‌ಬುರ್‌’ ಮೊಸರು ಕಡೆಯುವಾಗ ಎರಡೂ ತೋಳಿಗೂ, ಕತ್ತಿಗೂ ರಕ್ತಸಂಚಾರ ಸುಲಲಿತವಾಗಿ ಕೈ ನೋವೆಂಬುದೇ ಇರಲಿಲ್ಲ. ಇನ್ನು ಒನಕೆಯಿಂದ ಭತ್ತ ಕುಟ್ಟುವ ಕೆಲಸವೂ ಹೀಗೇ.

ಶುದ್ಧ ಸಂಪ್ರದಾಯದ ಹೆಸರಲ್ಲಿ ಮನೆಯನ್ನೆಲ್ಲ ಸೆಗಣಿ ಸಾರಿಸುವುದು, ಗುಡಿಸುವುದು, ನೆಲ ಒರೆಸುವುದು, ಬಟ್ಟೆ ಒಗೆಯುವುದು ಇವೆಲ್ಲ ಸೊಂಟ, ಹೊಟ್ಟೆ , ಬೆನ್ನು , ಕಾಲು, ಕೈಗಳನ್ನೆಲ್ಲ ಬಲಿಷ್ಟಗೊಳಿಸುವ ಉತ್ತಮ ವ್ಯಾಯಾಮವಾಗಿತ್ತು. ಅವರೆಂದೂ ಇದನ್ನು ವ್ಯಾಯಾಮವೆಂದುಕೊಂಡಿರಲಿಲ್ಲ. ಮಾಡಲೇಬೇಕಾದ ಮನೆಗೆಲಸ ಅಂದುಕೊಂಡಿದ್ದರಷ್ಟೇ.

ಅವಿಭಕ್ತ ಕುಟುಂಬದ ಗೃಹಿಣಿಯರ ಆ ಕಾಲದ ಅಡುಗೆಕೋಣೆ ಎಲ್ಲ ತರದ ಯೋಗಾಸನಗಳನ್ನು ಗೃಹಿಣಿಯರಿಂದ ಅವರಿಗರಿವಿಲ್ಲದಂತೆ ಮಾಡಿಸುತ್ತಿತ್ತು. ಮೈಬಗ್ಗಿ ಗುಡಿಸುವುದಿರಲಿ, ಕೆಳಗೆ ಕುಳಿತು ಊಟ ಮಾಡುವುದಿರಲಿ, ಪ್ರತಿ ಕೆಲಸದಲ್ಲಿ ದೇಹದ ಅಂಗಾಂಗಗಳಿಗೆ ವ್ಯಾಯಾಮವಾಗುತ್ತಿತ್ತು. ಈಗ ವಯೋಭೇದವಿಲ್ಲದೆ ನೆಲದಲ್ಲಿ ಕುಳಿತು ಊಟ ಮಾಡಲು ಯಾರೂ ತಯಾರಿಲ್ಲ. ಊಟದ ಮೇಜಿನ ಮಹಿಮೆಯದು. ಕಾಲು ಮಡಚುವ ಕೆಲಸ ಇಲ್ಲ. ಮತ್ತೆ ಯೋಗ ಕ್ಲಾಸು, ಜಿಮ್ಮಿಗೆ ಮೊರೆ ಹೋಗುವುದು.

ಇವುಗಳಲ್ಲೆಲ್ಲ ಒಲೆ ಉರಿಸುವುದು ಎನ್ನುವುದು ಮಾತ್ರ ಅಂದಿನ ಗೃಹಿಣಿಯ ಬಹಳ ಮುಖ್ಯವಾದ ಬವಣೆಯ ಲೋಕವಾಗಿತ್ತು. ಸೌದೆ ಒಲೆಯಲ್ಲಿಟ್ಟು ಬೆಂಕಿ ಉರಿಸುವಾಗ ಬುಸುಗುಡುವ ಹೊಗೆಯಲ್ಲಿ ಪರಿತಪಿಸುವ ಕಣ್ಣು ಆ ಕಣ್ಣ ದೃಷ್ಟಿಯನ್ನೇ ಕಳೆದುಕೊಂಡು ಬಿಡುತ್ತದೊ ಎಂಬಷ್ಟು ಕಣ್ಣಿನಲ್ಲಿ ನೀರು. ಜೊತೆಗೆ ಮೂಗಿನಲ್ಲೂ. ಸೌದೆ ಸ್ವಲ್ಪ ಹಸಿಯಾಗಿದ್ದರಂತೂ ಕೇಳುವುದೇ ಬೇಡ. ಊದುವ ಕೊಳವೆಯಿಂದಲೇ ವಾಪಸ್‌ ಬಾಯೊಳಗೆ ಮೂಗಿನೊಳಗೆ ಎಲ್ಲ ಬಂದು ಸೇರುವ ಹೊಗೆಯೆಂಬ ಧೂಮ. ಮೇಲೆ ಏರಿ ಕಾರ್ಮುಗಿಲಾಗಿ ಎಲ್ಲಾದರೂ ಸಂಗ್ರಹವಾದರೆ ಮಳೆಯನ್ನೇ ಸುರಿಸಿ ಬಿಡುತ್ತದೊ ಎನಿಸುತ್ತಿತ್ತು. ಒಲೆ ಊದಿ ಊದಿ ಹೊಗೆಯ ಧಗೆಯಲ್ಲಿ ಬೆಂಕಿ ಹೊತ್ತುವ ಹೊತ್ತಿಗೆ ಹೊತ್ತಿಸಿದವಳ ಕಣ್ಣಲ್ಲಿ ಮೂಗಲ್ಲಿ ನೀರು ಇಳಿದು ಬೆವರಿನೊಂದಿಗೆ ಮಿಶ್ರವಾಗಿ ಮೈಯೆಲ್ಲ ತೊಯ್ದು ತೊಪ್ಪೆ. ಇದು ನಮ್ಮ ಬಾಲ್ಯದಲ್ಲಿ ನಮ್ಮ ಅಮ್ಮಂದಿರ, ಅಜ್ಜಿಯಂದಿರ ಅಡುಗೆ ಮನೆಯ ನಿತ್ಯದೃಶ್ಯ. ಆದರೆ, ಈ ಒಲೆ ಊದುವಿಕೆಯಲ್ಲಿ ಪ್ರಾಯಾಣಾಮದ ಒಂದು ಅಭ್ಯಾಸವೂ ಅವಳಿಗರಿವಿಲ್ಲದಂತೆ ಆಗಿ ಹೋಗುತ್ತಿತ್ತು. ಇನ್ನು ಇಂಥ ಒಲೆಯ ಮೇಲಿದ್ದ ಕಂಠಮಟ್ಟ ಮಸಿ ಹಿಡಿದ ದೊಡ್ಡ ದೊಡ್ಡ ಪಾತ್ರೆಗಳನ್ನು ತೊಳೆಯುವುದೂ ಅಷ್ಟೇ ಜಟಿಲ ಕೆಲಸವಾಗಿತ್ತು. ಆದರೆ ಇಂತಹ ಅವಿಭಕ್ತ ಕುಟುಂಬದಲ್ಲಿ ಕೂಡ ಬಾಯಿ ಮುಚ್ಚಿ ಕೆಲಸ ಮಾಡುವವರಿಗೆ ಇನ್ನೊಂದಿಷ್ಟು ಹೊರೆ. ಇದರಲ್ಲಿ ಮೈ ಬಗ್ಗಿಸದೆ ಸುಖ ಪಡುವವರೂ ಇದ್ದರು. ಅಂತಹ ಸಂದರ್ಭದಲ್ಲಿ “”ದುಡಿಯುವವಳು ದುಡಿವಲ್ಲೇ ಬಾಕಿ. ಒಡೆತನ ಮಂಚದ ಮೇಲಿನವಳಿಗೆ” ಎಂಬ ಅಜ್ಜಿಯ ಮಾತು ನೆನಪಾಗುತ್ತದೆ.

ಇನ್ನು ಹಾಲು ಕಾಯಿಸುವುದು, ಅನ್ನ ಅಗುಳಾಗುವ ತನಕ ಗಂಜಿನೀರು ಉಕ್ಕದಂತೆ, ಆರದಂತೆ ಎಚ್ಚರದಿಂದ ಗಮನಹರಿಸುವ ಗೃಹಿಣಿಯ ಏಕಾಗ್ರತೆ ಎನ್ನುವುದು ಅವಳ ಧ್ಯಾನ ಸಮಯವಾಗಿತ್ತು. ಕೊಡಪಾನ ಬಾವಿಗೆ ಇಳಿಸಿ ಹಗ್ಗದ ಹಿಡಿತದಲ್ಲಿ ನೀರನ್ನು ಕೊಡಪಾನದೊಳಗೆ ತುಂಬಿಸುವುದರಲ್ಲಿ ಗೃಹಿಣಿಗೆ ಧ್ಯಾನಯೋಗದ ಸಾಕ್ಷಾತ್ಕಾರವಾಗುತ್ತಿತ್ತು. ಇವತ್ತು ಈ ನಲ್ಲಿಯ ನೀರು ದಿಢೀರ್‌ ತುಂಬುವ ಅವಸರ ಯೋಗವನ್ನು ದಯಪಾಲಿಸಿದೆ.

ಅವಿಭಕ್ತ ಕುಟುಂಬದಲ್ಲಿ ಆಧುನಿಕ ಸೌಲಭ್ಯಗಳಿಲ್ಲದ ಮನೆಯಲ್ಲಿ ಹೊಸತಾಗಿ ಮದುವೆಯಾಗಿ ಬಂದ ಗೃಹಿಣಿಗೆ “ಅಡುಗೆ ಕೋಣೆ’ ಎನ್ನುವುದು ದಡ್ಡ ತಲೆಗೆ ಅರ್ಥವಾಗದ ಜಟಿಲ ಹಳಗನ್ನಡ ಕಾವ್ಯ. ಆದರೆ ಅದೇ ಅಡುಗೆ ಕೋಣೆ ಧ್ಯಾನ, ಆಸನ, ಪ್ರಾಣಾಯಾಮದಿಂದ ಆಕೆಯ ಆರೋಗ್ಯ ವೃದ್ಧಿಸುವ ಯೋಗ ಶಿಬಿರವೂ ಆಗಿತ್ತು ಎನ್ನುವುದು ಆಕೆಯ ಅರ್ಥಗ್ರಹಿಕೆಗೆ ಮೀರಿದ ವಿಷಯವಾಗಿತ್ತು.

ವಿಜಯಲಕ್ಷ್ಮಿ ಶ್ಯಾನ್‌ಭೋಗ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ