ಗುಡ್‌ ಬೈ ಎಂದ ದಂಗಲ್‌ ಸುಂದರಿ ಝೈರಾ ವಾಸಿಂ

Team Udayavani, Jul 5, 2019, 5:00 AM IST

ಬಾಲಿವುಡ್‌ನ‌ ಮಿಸ್ಟರ್‌ ಪರ್ಫೆಕ್ಟ್ ಖ್ಯಾತಿಯ ಅಮೀರ್‌ ಖಾನ್‌ ಅಭಿನಯದ ಸೂಪರ್‌ ಹಿಟ್‌ ದಂಗಲ್ ಚಿತ್ರದ ಮೂಲಕ ಬಾಲಿವುಡ್‌ಗೆ ಪರಿಚಯವಾದ ಚೆಲುವೆ ನಟಿ ಝೈರಾ ವಾಸಿಂ.

ಕಾಶ್ಮೀರಿ ಮೂಲಕದ ಝೈರಾ ತೀರಾ ಆಕಸ್ಮಿಕವೆಂಬಂತೆ ಚಿತ್ರರಂಗಕ್ಕೆ ಕಾಲಿಟ್ಟ ಹುಡುಗಿ. ದಂಗಲ್ ಚಿತ್ರದಲ್ಲಿ ಗೀತಾ ಪೋಗತ್‌ ಪಾತ್ರದಲ್ಲಿ ಮಿಂಚಿದ್ದರು ಝೈರಾ, ತನ್ನ ಸೌಂದರ್ಯ, ಅಭಿನಯ ಎರಡರಿಂದಲೂ ಪ್ರೇಕ್ಷಕರಿಗೆ ಹತ್ತಿರವಾದ ಹುಡುಗಿ. ಜೊತೆಗೆ ಅದೃಷ್ಟ ಕೂಡ ಕೈ ಹಿಡಿದಿದ್ದರಿಂದ, ಚೊಚ್ಚಲ ಚಿತ್ರವೇ ಈಕೆಗೆ ಸಾಕಷ್ಟು ಹೆಸರು, ಜನಪ್ರಿಯತೆ ತಂದುಕೊಟ್ಟಿತು. ನಟಿಸಿದ ಒಂದೇ ಚಿತ್ರ ಚಿಕ್ಕ ವಯಸ್ಸಿನಲ್ಲೆ ಝೈರಾಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನ ಕೊಟ್ಟಿತು. ನಟಿಸಿದ ಮೊದಲ ಚಿತ್ರ ದಂಗಲ… ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡ ಝೈರಾ ವಾಸಿಂಗೆ ನಂತರ ಬಾಲಿವುಡ್‌ನ‌ಲ್ಲಿ ಅವಕಾಶಗಳ ಹೆಬ್ಟಾಗಿಲೇ ತೆರೆಯಿತು.

ಬಾಲಿವುಡ್‌ನ‌ಲ್ಲಿ ಹತ್ತಾರು ಚಿತ್ರಗಳ ಆಫ‌ರ್ ಬಂದರೂ, ಝೈರಾ ವಾಸಿಂ ಆರಿಸಿಕೊಂಡಿದ್ದು ಕೇವಲ ಬೆರಳೆಣಿಕೆಯಷ್ಟು ಚಿತ್ರಗಳನ್ನ ಮಾತ್ರ. ಸಾಕಷ್ಟು ಅಳೆದು ತೂಗಿ ಚಿತ್ರಗಳ ಆಯ್ಕೆ ಮಾಡಿಕೊಳ್ಳುತ್ತಿದ್ದ ಝೈರಾ ಕಳೆದ ಐದು ವರ್ಷಗಳಿಂದ ಅಭಿನಯಿಸಿದ್ದು ಸೀಕ್ರೆಟ್‌ ಸೂಪರ್‌ ಸ್ಟಾರ್‌, ದಿ ಸೆ ಸ್ಕೈ ಈಸ್‌ ಪಿಂಕ್‌ ಸೇರಿದಂತೆ ಕೇವಲ ಎರಡು-ಮೂರು ಚಿತ್ರಗಳಲ್ಲಿ ಮಾತ್ರ. ಆದರೂ ಝೈರಾ ಮುಂದೆ ಹತ್ತಾರು ಚಿತ್ರಗಳ ಆಫ‌ರ್ ಬರುತ್ತಲೇ ಇದೆ.

ಆದರೆ, ಈಗ ಝೈರಾ ತನ್ನ ಅಭಿಮಾನಿಗಳಿಗೆ ಶಾಕಿಂಗ್‌ ಸುದ್ದಿಯೊಂದನ್ನು ನೀಡಿದ್ದಾರೆ. ಸುಮಾರು ಐದು ವರ್ಷಗಳಿಂದ ಬಾಲಿವುಡ್‌ನ‌ಲ್ಲಿ ಸಕ್ರಿಯವಾಗಿರುವ ಝೈರಾ ಇದೀಗ ಇದ್ದಕ್ಕಿದ್ದಂತೆ, ಚಿತ್ರರಂಗಕ್ಕೆ ಗುಡ್‌ ಬೈ ಹೇಳಲು ನಿರ್ಧರಿಸಿದ್ದಾರೆ. ಈ ಬಗ್ಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಝೈರಾ, “ಐದು ವರ್ಷದ ಹಿಂದೆ ನಾನು ಕೈಗೊಂಡ ನಿರ್ಧಾರ ನನ್ನ ಇಡೀ ಬದುಕನ್ನೆ ಬದಲಾಯಿಸಿತು. ನಾನು ಬಾಲಿವುಡ್‌ನ‌ಲ್ಲಿ ಹೆಜ್ಜೆ ಇಟ್ಟಾಗ ಅಪಾರ ಜನಪ್ರಿಯತೆ ಸಿಕ್ಕಿತು. ಸಾರ್ವಜನಿಕರನ್ನು ಗಮನ ಸೆಳೆಯುವ ಪ್ರಧಾನ ಆಕರ್ಷಣೆ ಆಗಿದ್ದೆ. ಇದರಿಂದ ಯುವಜನತೆಗೆ ಮಾದರಿಯಾಗಿ ಗುರುತಿಸಲಾಯಿತು. ಆದರೆ, ಈ ಚಿತ್ರ ಜಗತ್ತು ನನಗೆ ಸಂತಸ ತಂದಿಲ್ಲ. ನಂಬಿಕೆ ಹಾಗೂ ಧರ್ಮದ ಮೇಲೆ ಹಸ್ತಕ್ಷೇಪ ಮಾಡುತ್ತದೆ. ಈ ಕಾರಣದಿಂದ ನಾನು ಚಿತ್ರರಂಗ ತೊರೆಯುವ ನಿರ್ಧಾರ ಮಾಡಿದ್ದೇನೆ. ನಾನು ಇಲ್ಲಿಗೆ ಪರಿಪೂರ್ಣವಾಗಿ ಹೊಂದಿಕೆಯಾಗದಿದ್ದರಿಂದ, ಇಲ್ಲಿ ಉಳಿಯಲಾರೆ’ ಎಂದು ಚಿತ್ರರಂಗ ಬಿಡುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

ಹಾಗಾದ್ರೆ ಚಿತ್ರರಂಗ ಬಿಟ್ಟ ನಂತರ ಝೈರಾ ವಾಸಿಂ ಏನು ಮಾಡುತ್ತಾರೆ ಅನ್ನೋ ಅಭಿಮಾನಿಗಳ ಪ್ರಶ್ನೆಗೆ, “ಅದನ್ನು ಶೀಘ್ರದಲ್ಲೇ ಬಹಿರಂಗಪಡಿಸುತ್ತೇನೆ’ ಎಂದಿದ್ದಾರೆ. ಒಟ್ಟಾರೆ ಝೈರಾ ಅವರ ಇಂಥದ್ದೊಂದು ದಿಢೀರ್‌ ನಿರ್ಧಾರ ಅವರ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಂತೂ ಸುಳ್ಳಲ್ಲ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ