ಅಮ್ಮಾ ನನ್ನ ಕ್ಷಮಿಸಿ ಬಿಡಮ್ಮಾ..!

Team Udayavani, Nov 19, 2019, 5:04 PM IST

ಅಮ್ಮಾ. ಏನದು ಅಲ್ಲಿ ಶಬ್ದ? ಆತ ಸಿಟ್ಟಿನ ಧ್ವನಿಯಲ್ಲಿ ಕೇಳಿದ. ‘’ನನ್ನ ಕೈ ತಾಗಿ ನಿನ್ನ ಮೊಬೈಲ್ ಫೋನ್ ಕೆಳಕ್ಕೆ ಬಿದ್ದದ್ದು ಪುಟ್ಟಾ’’. ಯಾವ ಫೋನ್ ಅಮ್ಮಾ ಅಂತ ಕೇಳುತ್ತಾ ಆತ ಒಳಗಡೆ ಹೋಗಿ ನೋಡಿದ ಆತನ ಸಿಟ್ಟು ನೆತ್ತಿಗೇರಿತು. “ಏನಮ್ಮಾ ನಿಮ್ಮ ಕಣ್ಣು ಕುರುಡಾಗಿದೆಯಾ? ಈ ಮೊಬೈಲ್ ಫೋನಿನ ಬೆಲೆ ಎಷ್ಟು ಅಂತ ಗೊತ್ತಾ ನಿಮಗೆ? ಇಪ್ಪತ್ತನಾಲ್ಕು ಸಾವಿರ ರೂಪಾಯಿಗಳನ್ನು ಕೊಟ್ಟು ಖರೀದಿಸಿ ಒಂದು ತಿಂಗಳು ಕೂಡಾ ಆಗಿಲ್ಲ.  ನಿಜವಾಗಿಯೂ ಅಮ್ಮಾ, ಇತ್ತೀಚಿನ ದಿನಗಳಿಂದ ನಿಮ್ಮಿಂದ ತುಂಬಾ ನಷ್ಟ ಅನುಭವಿಸುತ್ತಿದ್ದೇನೆ”.

ಆತನ ಮಾತುಗಳನ್ನೆಲ್ಲಾ ಕೇಳುತ್ತಾ ಭಯ ಮತ್ತು ಬೇಸರಗೊಂಡ ತಾಯಿ, “ನಾನು ಮಾತ್ರೆಗಳನ್ನು ತೆಗೆಯುವಾಗ ಕೈ ತಾಗಿ ಕೆಳಕ್ಕೆ ಬಿದ್ದದ್ದು. ಬೇಕೂಂತ ಕೆಳಕ್ಕೆ ಹಾಕಿದ್ದಲ್ಲ ಪುಟ್ಟಾ.  ಬಯ್ಯಬೇಡ ಮಗ ಎಂದು ಮೆಲ್ಲನೆ ಹೇಳಿದಳು ಆಕೆ.  ಆಕೆಯ ಕಣ್ಣುಗಳಿಂದ ಆದಾಗಲೇ ಕಣ್ಣೀರು ಸುರಿಯತೊಡಗಿತ್ತು.

“ಇನ್ನು ಅಳುತ್ತಾ ಇರಿ. ನನ್ನ ಬೆಲೆಬಾಳುವ ಮೊಬೈಲ್ ಒಡೆದು ಹಾಕಿದ್ದೀರಲ್ಲಾ” ಆತನ ರಂಪಾಟ ಕೇಳುತ್ತಾ ಅಡುಗೆ ಮನೆಯಲ್ಲಿದ್ದ ಆತನ ಪತ್ನಿ ಶಾಲಿನಿ ಅಲ್ಲಿಗೆ ಬಂದಳು. ಯಾಕೆ ರೀ? ಅಮ್ಮನಿಂದ ಗೊತ್ತಿಲ್ಲದೇ ಆದ ತಪ್ಪಲ್ಲವೇ? ಅದಕ್ಕೆ ಯಾಕೆ ಇಷ್ಟೊಂದು ರೇಗಾಡುತ್ತಿದ್ದೀರಾ ಎಂದಳು

ಓಹ್..  ಇನ್ನು ನೀನು ಕೂಡಾ ಏನನ್ನಾದರೂ ತೆಗೆದು ಎಸೆದು ಒಡೆದಾಕು.  ನೀವೆಲ್ಲಾ ಸೇರಿ ನನಗೆ ಹುಚ್ಚು ಹಿಡಿಸುತ್ತೀರಿ ಎನ್ನುತ್ತಾ ಆತ ಕೋಪದಲ್ಲಿ ಮನೆಯಿಂದ ಹೊರ ನಡೆದ.

ತಾಯಿ ಕೋಣೆಯ ಮೂಲೆಯಲ್ಲಿ ಕುಳಿತು ಬಿಕ್ಕಿ ಬಿಕ್ಕಿ ಅತ್ತಳು. ಸೊಸೆ ಶಾಲಿನಿ ಆಕೆಯ ಹತ್ತಿರ ಬಂದು ಆಕೆಯನ್ನು ಹಿಡಿದು ಎಬ್ಬಿಸುತ್ತಾ  ” ಅಳಬೇಡಿ ಅಮ್ಮಾ. ನಿಮ್ಮ ಮಗನಿಗೋ ಹುಚ್ಚು, ಏನೋ ಟೆನ್ಷನ್ ನಲ್ಲಿ ಹೇಳಿದ್ದಾರೇಂತ ಬೇಜಾರು ಮಾಡ್ಕೋಬೇಡಿ ” ಅಂತ ಸಾಂತ್ವನ ಹೇಳಿದಳು.

“ಮಗಳೇ ನಾನು ಈಗ ಬರುತ್ತೇನೆ” ಎಂದು ಕಣ್ಣೀರನ್ನು ಒರೆಸುತ್ತಾ ತಾಯಿ ಮನೆಯಿಂದ ಹೊರಗಡೆ ಹೆಜ್ಜೆ ಹಾಕುವಷ್ಟರಲ್ಲಿ ” ಈಗ ಎಲ್ಲಿಗೆ ಹೋಗುತ್ತೀದ್ದೀರಾ ಅಮ್ಮಾ’ ಎಂದು ಸೊಸೆ ಶಾಲಿನಿ ಕೇಳಿದಳು. ಆದರೆ ಬೇಗನೇ ಬರುತ್ತೇನೆ ಎಂದು ಅಮ್ಮ ಹೊರಟು ಹೋದರು.

ಮಧ್ಯಾಹ್ನ ಊಟಕ್ಕೆ ಬಂದ ಮಗ ಪತ್ನಿ ಶಾಲಿನಿಯ ಬಳಿ ಅಮ್ಮನನ್ನು ವಿಚಾರಿಸಿದ.  “ನಂಗೊತ್ತಿಲ್ಲ. ಅತ್ತು ಅತ್ತು ಸುಸ್ತಾದ ಅಮ್ಮ ಬೇಗ ಬರುತ್ತೇನೆ ಅಂತ ಹೇಳುತ್ತಾ ಎಲ್ಲೋ ಹೋದರು ಎಂದಳು ಶಾಲಿನಿ ಊಟ ಬಡಿಸುತ್ತಾ.  ಕತ್ತಲಾಗುವಾಗ ಬರಬಹುದು ಎಂದು ಆತನೂ ಜಾಸ್ತಿ ತಲೆಗೆಡಿಸುವ ಗೋಜಿಗೆ ಆತನೂ ಹೋಗಲಿಲ್ಲ.

ಆದರೆ ಶಾಲಿನಿ ಆತಂಕಕ್ಕೆ ಒಳಗಾಗಿದ್ದಳು.  ರೀ ಅಮ್ಮ ಎಲ್ಲಿಗೆ ಹೋಗಿದ್ದು ಅಂತ ಗೊತ್ತಿಲ್ಲ. ನಿಮ್ಮ ತಂಗಿಯ ಮನೆಗೇನಾದರೂ ಹೋಗಿರಬಹುದಾ, ಒಮ್ಮೆ ಹೋಗಿ ವಿಚಾರಿಸಿ ಬನ್ನಿ‌‌‌‌ ಎಂದು ಗಂಡನ ಕೇಳಿದಳು. ಆದರೆ ಆತನ ಸಿಟ್ಟು ಇನ್ನೂ ಕಡಿಮೆಯಾಗಿರಲಿಲ್ಲ .ಹುಡುಕೋದಕ್ಕೆ ನನಗೆ ಸಮಯವಿಲ್ಲ ಬೇಕಿದ್ದರೆ ನೀನೇ ಹೋಗಿ ಹುಡುಕು ಎಂದು ಹೋದವ ಮತ್ತೆ ಬಂದಿದ್ದು ರಾತ್ರಿಯೇ.

ಮನೆಗೆ ಬಂದು ಬಾಗಿಲು ತೆರೆಯುವಂತೆ ಬಾಗಿಲು ಬಡಿದಾಗ ಆಕೆ ಹೊರಬಂದು ಆತನನ್ನು ದುರುಗುಟ್ಟಿ ನೋಡಿದಳು. ಯಾಕೋ ನಿನ್ನ ಮುಖ ಊದಿಕೊಂಡಿದೆ. ಊಟ ಬಡಿಸು ಎಂದ ನಿರ್ಭಾವುಕನಾಗಿ. ಆದರೆ ಬೇಕಿದ್ದರೆ ಬಡಿಸಿ ತಿನ್ನಿ ಎಂದಳು ಶಾಲಿನಿ ತುಸು ಕೋಪದಿಂದ. ಏನಾಯಿತೋ ನಿನಗೆ.  ನಾನೆ ಬಡಿಸುವುದಾದರೆ ಮತ್ತೆ ನೀನಿರೋದು ಯಾಕೆ ಹೇಳು? ಅದಿರಲಿ ಅಮ್ಮ ಬಂದ್ರಾ.? ಎಷ್ಟೊತ್ತಿಗೆ ಬಂದದ್ದು ಎಂದು ಅಸಹನೆಯಿಂದಲೇ. ‘’ಸಂಜೆ ಬಂದರು. ಪಾಪ ಮಲಗಿದ್ದಾರೆ ಎಂದ ಶಾಲಿನಿ ಗಂಡನ ಕೈಗೆ ಅಮ್ಮ ಮಲಗುವ ಮೊದಲು ಕೊಟ್ಟ ಕವರ್ ಒಂದನ್ನು ಕೊಟ್ಟಳು.

ಆತ ಆಶ್ಚರ್ಯದಿಂದಲೇ ಕವರ್ ಓಪನ್ ಮಾಡಿ ನೋಡಿದ. ನೋಟುಗಳು ಕಟ್ಟು!  ಇದೆಲ್ಲಿಂದ ಅಮ್ಮನಿಗೆ ಸಿಕ್ಕಿದ್ದು? ಇದನ್ನು ನನಗೆ ಯಾಕೆ ಕೊಟ್ಟಿದ್ದಾಳೆ? ಏನೂ ಅರ್ಥವಾಗದ ಪರಿಸ್ಥಿತಿ.

ನಿಮ್ಮ ಫೋನ್ ಒಡೆದಿದ್ದಕ್ಕೆ ಅಮ್ಮ ಕೊಟ್ಟದ್ದು. ಬೆಳಿಗ್ಗೆ ಹೋಗಿ ಹೊಸತು ಖರೀದಿಸಿಕೊಳ್ಳಿ. ಈಗ ನಿಮಗೆ ಸಂತೋಷ ಆಯಿತಲ್ಲಾ. ” ಆಕೆ ಸ್ವಲ್ಪ ಕೋಪದಿಂದಲೇ ಹೇಳಿದಳು ಶಾಲಿನಿ.

ಎಲ್ಲಿಂದ ಅಮ್ಮನಿಗೆ ಇಷ್ಟೊಂದು ದುಡ್ಡು ಆಶ್ಚರ್ಯದಿಂದ ಕೇಳಿದ. ನಿಮ್ಮ ಅಪ್ಪಾಜಿ ಸಾಯುವ ಮೊದಲು ಕೊಟ್ಟಿದ್ದು ಅಂತ ಹೇಳುತ್ತಾ ಕಿವಿಯೋಲೆಯೊಂದನ್ನು ತುಂಬಾ ಜಾಗರೂಕತೆಯಿಂದ ಜೋಪಾನವಾಗಿ ಧರಿಸುತ್ತಿದ್ದರಲ್ಲಾ?  ಅಂದು ನೀವು ಬೈಕ್ ಖರೀದಿಸಲು ಆ ಕಿವಿಯೋಲೆಯನ್ನು ಅಡವಿಡಲು ಕೇಳಿದಾಗ , ಇದು ನಿನ್ನ ಅಪ್ಪಾಜಿಯ ಕೊನೆಯ ಗಿಫ್ಟ್. ಇದನ್ನು ನಾನು ಸತ್ತ ನಂತರವೇ ಕಿವಿಯಿಂದ ತೆಗೆದರೆ ಸಾಕು ಅಂತ ಹೇಳಿರಲಿಲ್ಲವೇ! ಅದನ್ನೇ ಅಮ್ಮ ಮಾರಿದ್ದಾರೆ ಪಾಪ ಎಂದಳು ಶಾಲಿನಿ ವಿಷಾದದಿಂದ.  ಆತ ತಲೆತಗ್ಗಿಸಿ ನಿಂತ. ಶಾಲಿನಿ ಮುಂದುವರಿಸಿದಳು.  ನಿಮ್ಮ ಫೋನ್ ಒಡೆದಾಗ ನೀವು ಅಮ್ಮನಿಗೆ ಕೋಪದಲ್ಲಿ ಏನೆಲ್ಲಾ ಹೇಳಿದಿರಿ. ಬರೀ ಒಂದು ಮೊಬೈಲಿಗೋಸ್ಕರ ಲೆಕ್ಕ ಹೇಳಿದ್ದೀರಲ್ಲಾ! ಹಾಗೆಲ್ಲಾ ಅಮ್ಮನತ್ರ ಮಾತಾಡಬಾರದಿತ್ತು ರೀ. ಆ ಅಮ್ಮ ಮಾಡಿದ ತ್ಯಾಗ , ಸಹನೆಗೆ ಬೆಲೆ ಕಟ್ಟಲು ನಿಮ್ಮಿಂದ ಸಾಧ್ಯವೇ? ನಿಮಗೋಸ್ಕರ ವ್ಯಯಿಸಿದ ನಿದ್ದೆಯಿಲ್ಲದ ರಾತ್ರಿಗಳಿಗೆ ನಿಮ್ಮಿಂದ ಬೆಲೆ ಕಟ್ಟಲು ಸಾಧ್ಯವೇ?

ಈ ಜನ್ಮವಿಡೀ ನೀವು ಸಂಪಾದಿಸಿದ ಸಂಪತ್ತನ್ನೆಲ್ಲಾ ಅಮ್ಮನ ಹೆಸರಿಗೆ ಬರೆದು ಕೊಟ್ಟರೂ ನಿಮಗಾಗಿ ಆ ಅಮ್ಮ ಅನುಭವಿಸಿದ ತ್ಯಾಗ ಸಹನೆಗಳಿಗೆ ಬೆಲೆಕಟ್ಟಲು ಸಾಧ್ಯವೇ ಇಲ್ಲಾರಿ. ಶಾಲಿನಿ ಹೇಳುತ್ತಲೇ ಇದ್ದಳು.  ತನ್ನ ತಪ್ಪಿನ ಅರಿವಾಗಿ ಆತನ ಕಣ್ಣುಗಳು ತುಂಬಿದವು.

ಶಾಲೂ ಇಂತಹ ಅಮ್ಮನ ಸೊಸೆಯಾಗಲು ನಿನಗಿಂತಲೂ ಯೋಗ್ಯಳಾದ ಹೆಣ್ಣೊಬ್ಬಳು ಬೇರೆ ಯಾರೂ ಇರಲಾರಳು ಎನ್ನುತ್ತಾ ಅಯ್ಯೋ ದೇವರೇ, ನಾನು ಬೆಳಗ್ಗೆ ಅಮ್ಮನತ್ರ ಏನೆಲ್ಲಾ ಮಾತು ಅಂದಿದ್ದೇನೆ ಎಂದಾಗ ಆತನ ಕಣ್ಣಾಲಿಗಳು ತೇವವಾಗಿದ್ದವು.

ಗಂಡನನ್ನು ಸಮಾಧಾನ ಪಡಿಸಿದ ಶಾಲಿನಿ ನಾಳೆ ಬೆಳಿಗ್ಗೆ ಎದ್ದು ಅಮ್ಮನ ಬಳಿ ಕ್ಷಮೆ ಕೇಳಿ ಎಲ್ಲವೂ ಸರಿಯಾಗುತ್ತದೆ ಎಂದಳು. ಬೆಳಿಗ್ಗೆ ಅಮ್ಮ ಏಳೋದಕ್ಕೆ ಮುಂಚೆನೇ ಆತ ಬೈಕ್ ನಲ್ಲಿ ಹೊರಟ. ಅಮ್ಮ ಕಿವಿಯೋಲೆ ಮಾರಿದ್ದ ಬಿಲ್ ಆತನ ಕಿಸೆಯಲ್ಲಿತ್ತು. ಅಮ್ಮನ ಪರ್ಸ್ ನಿಂದ ಅದನ್ನಾತ ತೆಗೆದಿದ್ದ.

ಅಂಗಡಿಯಾತನ ಬಳಿ, ಸರ್ ಈ ಬಿಲ್ಲಿನಲ್ಲಿರುವ ಚಿನ್ನವನ್ನು ನಿನ್ನೆ ನನ್ನ ಅಮ್ಮ ಇದೇ ಅಂಗಡಿಯಲ್ಲಿ ಮಾರಿದ್ದಾರೆ. ಅದು ನನಗೆ ವಾಪಾಸ್ ಬೇಕು ಎಂದಾತನ ಕಣ್ಣುಗಳಲ್ಲಿ ಅದೇನೋ ಆತಂಕ!

ಸರ್, ಚಿನ್ನ ಇಲ್ಲೇ ಇದೆ. ಹಣ ಕೊಟ್ಟು ಚಿನ್ನವನ್ನು ತೆಗೊಂಡು ಹೋಗಿ ಎಂದಾಗ ಆತನಿಗಾದ ಖುಷಿ ಅಷ್ಟಿಷ್ಟಲ್ಲ.  ಬೇಗಬೇಗನೆ ಕೊಡಬೇಕಾದ ದುಡ್ಡುಕೊಟ್ಟು ಚಿನ್ನವನ್ನು ತೆಗೊಂಡು ಮನೆಗೆ ಕಡೆಗೆ ಬೈಕ್ ತಿರುಗಿಸಿದ. ಈ ಚಿನ್ನದ ಕಿವಿಯೋಲೆಯನ್ನು ಅಮ್ಮನ ಕೈಗೆ ನೀಡಿ ಕ್ಷಮೆ ಕೇಳಿ ಅಮ್ಮನನ್ನು ತಬ್ಬಿಕೊಳ್ಳಬೇಕೆಂದು ಮನಸ್ಸು ಹಪಹಪಿಸುತ್ತಿತ್ತು.

ಆದರೆ ಮನೆಯ ಹತ್ತಿರ ಬಂದಾಗ ಮನೆಯ ಮುಂದೆ ಜನ ಸೇರಿದ್ದರು, ಏನೂ ಅರ್ಥವಾಗಲಿಲ್ಲ.  ಆತ ಬೈಕ್ ನಿಲ್ಲಿಸಿ ಮನೆಯೊಳಗೆ ಓಡಿದ. ಗೊಂದಲದ ಗೂಡಾಗಿದ್ದ. ಒಳಗೆ  ಬಂದ ಆತನನ್ನು ಪಕ್ಕದ ಮನೆಯ ಮಧ್ಯ ವಯಸ್ಕರೊಬ್ಬರು ಹಿಡಿದು ನಿಲ್ಲಿಸಿದರು.

“ನಿನ್ನ ಅಮ್ಮ ರಾತ್ರಿಯೇ ನಿಮ್ಮೆಲ್ಲರನ್ನು ಅಗಲಿದ್ದಾರೆ” ಮಾತು ಕೇಳಿ ಸಿಡಿಲು ಬಡಿದ ಅನುಭವ. ನಿಂತ ನೆಲವೇ ಕುಸಿಯಿತೇನು ಎಂಬಂತಾಗಿತ್ತು ಆತನಿಗೆ.  ಅಮ್ಮ ಮಲಗಿದ್ದ ಕೋಣೆಯೊಳಗೆ ಓಡಿ ಹೋಗಿ ಅಮ್ಮನ ಪಾದದ ಮೇಲೆ ತಲೆಯಿಟ್ಟು ಅಳಲಾರಂಭಿಸಿದ. ಅತ್ತು ಅತ್ತು ಸುಸ್ತಾದ ಆತ ಒಮ್ಮೆಲೆ ಏನೋ ನೆನಪಾದಂತೆ ಆಗಷ್ಟೇ ತಂದಿದ್ದ ಕಿವಿಯೋಲೆಯನ್ನು ಅಮ್ಮನ ಕಿವಿಯಲ್ಲಿ  ಹಾಕುತ್ತಾ ಮುಖದಲ್ಲೆಲ್ಲಾ ಮುದ್ದಾಡಿದ!

ಆಗಲೂ ಆತನ ಕಿವಿಯಲ್ಲಿ ಅಮ್ಮನ ಆ ಮಾತುಗಳು ಮೊಳಗುತ್ತಿತ್ತು ” ಇದು ನಿನ್ನ ಅಪ್ಪಾಜಿ ಖರೀದಿಸಿಕೊಟ್ಟ ಕೊನೆಯ ಗಿಫ್ಟ್ ಮಗಾ!  ಇದನ್ನು ನಾನು ಸತ್ತ ನಂತರವೇ ನನ್ನ ಕಿವಿಯಿಂದ ತೆಗೆದರೆ ಸಾಕು.”

ಒಂದು ಮಾತಿನಿಂದ ಕೂಡಾ ಹೆತ್ತವರನ್ನು ನೋಯಿಸದಿರಿ ಸ್ನೇಹಿತರೆ. ಕ್ಷಮೆ ಕೇಳಲು ಕೂಡಾ ಸಮಯ ಕೊಡದೆ ನಮ್ಮನ್ನು ಅಗಲಿ ದೂರವಾಗಬಹುದು. ಮನುಷ್ಯರನ್ನು ಪ್ರೀತಿಸಿ; ವಸ್ತುಗಳನ್ನು ಉಪಯೋಗಿಸಿ.


ಸಾನಿಯಾ ಆರ್

ಎಸ್ ಡಿ ಯಂ, ಕಾಲೇಜ್, ಉಜಿರೆ


ಈ ವಿಭಾಗದಿಂದ ಇನ್ನಷ್ಟು

  • ಏನ್ರೀ ನೀವು! ಮತ ಕೇಳ್ಳೋಕೆ ಬರುವಾಗ ಇದ್ದ ನಿಮ್ಮ ನಿಯತ್ತು ಈಗಿಲ್ಲ . ಚುನಾವಣಾ ಮುನ್ನ ನಿಮ್ಮ ಪ್ರಣಾಳಿಕೆಗಳಲ್ಲಿ ನೀವು ಘೋಷಿಸಿ ಕೊಂಡ ಯಾವ ಕೆಲಸಗಳೂ ಒಂದೂ ಸರಿಯಾಗಿ...

  • ನಮ್ಮ ಮನೆಯ ಅಂಗಳಕ್ಕೆ ಒಂದು ಬಿಳಿ ಪಾರಿವಾಳ ಬಂದಿತ್ತು. ಅದರ ರೆಕ್ಕೆಗೆ ಸ್ವಲ್ಪ ಪೆಟ್ಟು ಆಗಿ ಹೆಚ್ಚು ಹಾರಾಟ ಮಾಡಲು ಆಗುತ್ತಿರಲಿಲ್ಲ. ಅದನ್ನು ನಾನು ನೋಡಿ ಮೆಲ್ಲನೆ...

  • ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ಬಾಲ್ಯ, ಪ್ರೌಢ, ಯೌವ್ವನ, ಮತ್ತು ಮುಪ್ಪು ಎಂಬ ನಾಲ್ಕಂತಸ್ತಿನ ಮಹಡಿಯನ್ನು ಹತ್ತಿಳಿಯಲೇ ಬೇಕು. ಆದರೆ, ಬಾಲ್ಯದ ನೆನಪು...

  • ನಮ್ಮ ಜೀವನದಲ್ಲಿ ಸಂಬಂಧಗಳಿಗೆ ಬಹಳ ಪ್ರಾಮುಖ್ಯ ಇದೆ. ಸಂಬಂಧಗಳಿಲ್ಲದಿದ್ದರೆ ಬಹುಶಃ ನಮಗೆ ಪ್ರೀತಿ ಎಂದರೆ ಏನು, ಭಾವನೆಗಳೆಂದರೇನು, ನಂಬಿಕೆ ಎಂದರೆ ಏನು ಎನ್ನುವುದು...

  • ಕಾಲೇಜ್‌ ಎಂಬ ಸಾಮ್ರಾಜ್ಯದ ಗೋಡೆಯ ಮೇಲೆ ಅಲ್ಲಲ್ಲಿ ಹೃದಯದ ಗುರುತಿನ ಕೆತ್ತನೆಗಳು, ಡೆಸ್ಕ್ಗಳ ಮೇಲೆ ಪ್ರೀತಿಯ ಕವನಗಳು, ಪ್ರತಿ ಕ್ಲಾಸ್‌ನಿಂದ ಒಂದಾದರೂ ಲವ್‌...

ಹೊಸ ಸೇರ್ಪಡೆ