ಪ್ರೇಮಾಲಾಪ

ಕಾಲೇಜು ಕಾಲಮ್‌ ಫ್ರೀ ಟೈಮ್‌

Team Udayavani, Aug 30, 2019, 5:00 AM IST

ಸಾಂದರ್ಭಿಕ ಚಿತ್ರ

ನಾನು ಪಿಯುಸಿಗೆ ಬಂದಾಗ ಪ್ರೇಮ ಅಪ್‌ಡೇಟ್‌ ಆಗಿತ್ತು. ಚೇತನ್‌ ಭಗತ್‌, ರವೀಂದರ್‌ ಸಿಂಗ್‌ ಮುಂತಾದವರು ಪುಸ್ತಕ ಬರೆದು, ಪ್ರೇಮ ಅದರಿಂದ ಪ್ರಭಾವಿತವಾಗಿ ಪ್ರವಹಿಸಲು ಫೇಸ್‌ಬುಕ್‌ನ್ನು ಆರಿಸಿತ್ತು! ಇಂಗ್ಲಿಷ್‌ ಭಾಷೆಯಲ್ಲಿ ಬರೀ ಪ್ರೇಮ ಕಾದಂಬರಿಯನ್ನಷ್ಟೇ ಬರೆಯುತ್ತಾರೇನೋ ಅನ್ನುವಷ್ಟು ಪುಸ್ತಕಗಳು ಆಗ ಬರುತ್ತಿದ್ದವು. ಕೈಯಿಂದ ಕೈಗೆ ವರ್ಗಾವಣೆಯಾಗುತ್ತಿತ್ತು. ಅಲ್ಲದೆ ಪಿಯುಸಿಗೆ ಬಂದ ಮೇಲೆ ಫೇಸ್‌ಬುಕ್‌ ಸೇರಲು

ಅಧಿಕೃತ ಅಧಿಕಾರ ಬಂದಂತಿತ್ತು. ಫೇಸ್‌ಬುಕ್‌ ಬಂದ ಮೇಲೆ ಪ್ರೇಮಿಗಳ ಸಂಖ್ಯೆ ದಿಢೀರ್‌ ಏರಿಕೆಯಾದದ್ದು ಸುಳ್ಳಲ್ಲ! ಫೇಸ್‌ಬುಕ್‌ನ ಮೂಲಕ ಹೊಸ ಹೊಸ ಮುಖ ಗಳ ಪರಿಚಯವಾಗುತ್ತಿತ್ತು. ಪುಸ್ತಕಗಳಿಂದ ಪ್ರೇರಣೆ ಪಡೆದ ಪ್ರೇಮ ಪ್ರವಹಿಸಲು ಫೇಸ್‌ಬುಕ್‌ ಆರಿಸಿಕೊಂಡಿತ್ತು. ಆಗೆಲ್ಲ ಫೇಸ್‌ಬುಕ್‌ನಲ್ಲಿ ಅಪರಿಚಿತರೊಂದಿಗೆ ಮಾತಾಡಿದವರೇ ದೊಡ್ಡ ಸಾಹಸಿಗಳು. ವಿಜ್ಞಾನ ವಿದ್ಯಾರ್ಥಿಯಾಗಿ ನನಗೆ ವಿಜ್ಞಾನ ಓದುವುದೇ ದೊಡ್ಡ ಸಾಹಸ ಆದ್ದರಿಂದ ಕಾಮರ್ಸ್‌ ವಿದ್ಯಾರ್ಥಿಗಳಿಂದ ಅವರ ಸಾಹಸದ ರಂಗು ರಂಗಿನ ಕಥೆಗಳನ್ನ ಕೇಳಿ ನೆಮ್ಮದಿಪಡುತ್ತಿದ್ದೆನಷ್ಟೆ ! ನನ್ನ ಗೆಳತಿಯೊಬ್ಬಳು ದಿನವೂ ಅವಳ ಪ್ರೇಮದ ಅಪ್‌ಡೇಟ್‌ ಕೊಡುತ್ತಿದ್ದಳು. ನಾನು ಮತ್ತು ಇತರ ಮಿತ್ರರು ಸೇರಿ

ಅವಳಿಗಾಗಿ ಪ್ರೇಮಿಗಳ ದಿನದಂದು ನಮ್ಮ ಕ್ರಿಯೇಟಿವಿಟಿ ಯನ್ನೇ ಧಾರೆ ಎರೆದು, ಕವನ ಬರೆದು ಗ್ರೀಟಿಂಗ್‌ಕಾರ್ಡ್‌ ಮಾಡಿಕೊಡುತ್ತಿದ್ದೆವು. ಅವರ ನಡುವೆ ಜಗಳ ಆದಾಗ ಯಾವ ಕೌನ್ಸಿಲರ್‌ಗೂ ಕಡಿಮೆ ಇಲ್ಲದಂತೆ ಸೂಕ್ತ ಸಲಹೆ ಕೊಡುತ್ತಿದ್ದೆವು.

ಡಿಗ್ರಿಗೆ ಬಂದಾಗ ಪ್ರೇಮ ವಿಶಾಲ ಆಯಾಮ
ಪಡೆದುಕೊಳ್ಳುತ್ತದೆ. ಕೈಯಲ್ಲಿ ಒಂದು ಮೊಬೈಲ್‌. ಪ್ರಪೋಸ್‌ ಮಾಡುವುದು ಹೇಗೆ ಅಂತ ರವೀಂದರ್‌ ಸಿಂಗ್‌ ಬರೆದ ಪುಸ್ತಕ ಪೂರ್ತಿ ಓದಬೇಕಾಗಿಲ್ಲ- ಮೂವತ್ತು ಸೆಕೆಂಡ್‌ಗಳ ವಾಟ್ಸಾಪ್‌ ವಿಡಿಯೋ ಸಾಕು! ಯಾವ ಕಾಲೇಜಿನ ಯಾವ ಮೂಲೆ ನೋಡಿದರೂ ಪ್ರೇಮಿಗಳು ಕುಳಿತು ಪ್ರೇಮಲೋಕದಲ್ಲಿ ವಿಹರಿಸುತ್ತಾ ಇರುತ್ತಾರೆ. ಸಿಟಿಸೆಂಟರ್‌, ಫೋರಮ್‌ ಮಾಲ್‌ಗ‌ಳು ಅದೆಷ್ಟೋ ಪ್ರೇಮಿಗಳನ್ನ ಸಾಕಿ ಸಲಹಿವೆ. ನಾನಂತೂ ಕದ್ರಿ ದೇವಸ್ಥಾನಕ್ಕೆ ಹೋದಾಗೆಲ್ಲ, ಕದ್ರಿ ಗುಡ್ಡದ ಮೆಟ್ಟಲುಗಳಲ್ಲಿ ಒಬ್ಬರ ಕೈ ಮತ್ತೂಬ್ಬರು ಹಿಡಿದುಕೊಂಡು, ಬೆರಳಲ್ಲಿ ಚಿತ್ತಾರ ಬರೆಯುತ್ತ ಕೂತ ಪ್ರೇಮಿಗಳ ಪ್ರೇಮ ಅಮರ ವಾಗಿರಲಿ- ಎಂದು ಕೈ ಮುಗಿಯುತ್ತಿರುತ್ತೇನೆ. ಡಿಗ್ರಿಯ ಒಂದೊಂದು ಪ್ರೇಮ ಕಥೆಯೂ ಒಂದೊಂದು ಮಹಾ ಕಾವ್ಯ. ಫಿಸಿಕ್ಸ್‌ ಲೆಕ್ಚರರ್‌ರ ಸಿಟ್ಟಿಗೂ ಹೆದರದೆ ಲ್ಯಾಬ್‌ ತಪ್ಪಿಸಿ ಬೀಚ್‌ ಸುತ್ತಲು ಹೋಗುವುದರಿಂದ ಹಿಡಿದು, ಟ್ರೆಡಿಷನಲ್‌ ಡೇಗೆ “ಅವರಿಗಿಷ್ಟ’ ಅಂತ ಸೀತಾ ಸ್ವಯಂವರದ ಸೀತೆಯ ಹಾಗೆ ಶೃಂಗಾರವಾಗಿ ಬರುವ ತನಕ. ಬರಿ ಹೃದಯಗಳೇ ತುಂಬಿರುವ ವಾಟ್ಸಾಪ್‌ ಮಾತುಕತೆಗಳು, ರಾತ್ರಿ ಅಪ್ಪಿಕೊಂಡು ಮಲಗಲು “ಅವರು’ ಕೊಟ್ಟ ಟೆಡ್ಡಿಬೇರ್‌, ತರಗತಿಯಲ್ಲಿ ದಿನವಿಡಿ ಮುಖ ಬಾಡಿಸಿ ಕುಳಿತರೆ ಸಂಜೆಯ ವೇಳೆಗೆ ಕಾಲೇಜು ಗೇಟ್‌ನ ಬಳಿ ಬೈಕ್‌ನಲ್ಲಿ ಕಾಣಸಿಗುವ “ಅವರು’. ಪ್ರೇಮ ಹುಟ್ಟಿದ ಕೂಡಲೇ ಸಮವಯಸ್ಕರಾದರೂ “ಅವನು’ ಹೋಗಿ “ಅವರು’ ಆಗುವ ಎಷ್ಟೋ ಅದ್ಭುತಗಳಿಗೆ ಸಾಕ್ಷಿಯಾಗಿದ್ದೇನೆ!

ಹೆಣ್ಣು-ಗಂಡು ಮಾತ್ರ ಪ್ರೇಮಿಸಬಹುದು ಅಂತ ಅದುವರೆಗೆ ಅಂದುಕೊಂಡಿದ್ದರೆ, ಅದು ಸುಳ್ಳು ಅಂತ ಡಿಗ್ರಿಗೆ ಬಂದ ಮೇಲೆ ಗೊತ್ತಾಗುತ್ತದೆ. ನೆಚ್ಚಿನ ಇಂಗ್ಲಿಷ್‌ ನಟನೊಬ್ಬ ತನ್ನಂತೆಯೇ ಇರುವ ಇನ್ನೊಬ್ಬ ಗಂಡನ್ನು ಮದುವೆಯಾಗುವಾಗ, ಬದಲಾವಣೆಯನ್ನು ಒಪ್ಪಿಕೊಳ್ಳಲಾಗದ ತಳಮಳ ಹುಟ್ಟುತ್ತದೆ. ಎಷ್ಟೊಂದು ಸಂಕೀರ್ಣ ಈ ಪ್ರೇಮ, ಅದಕ್ಕೆಷ್ಟೊಂದು ಅರ್ಥ ವಾಗದ ಆಯಾಮಗಳು! ಅಮರ ಪ್ರೇಮದ ಭ್ರಮೆಯಲ್ಲಿ ಮದುವೆಯಾಗುತ್ತಾರೆ. ಎಷ್ಟೋ ಸಲ ಡೈವೋರ್ಸ್‌ನ ಸುತ್ತ ಹಲವು ಕೌಟುಂಬಿಕ- ಧಾರ್ಮಿಕ-ಸಾಮಾಜಿಕ ಪರಿಣಾಮಗಳು ಹೆಣೆದುಕೊಂಡಿರುವುದರಿಂದಲೇ ಸಂಬಂಧಗಳು ಉಳಿಯುತ್ತವೆ (ಪ್ರೇಮದ ದೆಸೆಯಿಂದಲ್ಲ!) ಓಡಿ ಹೋಗಿ ಹೆಣ್ಣಾಗಿ ಪರಿವರ್ತನೆಗೊಂಡು ಮದುವೆಯಾದ ಮಗನನ್ನು ಒಪ್ಪಿಕೊಳ್ಳಲು ಬಹಳ ಕಷ್ಟ ಪಡುವ ತಂದೆಯ ಕಥೆಯನ್ನು ಆಲೋರುಕ್ಕಮ್‌ ಎಂಬ ಮಲಯಾಳಂ ಚಿತ್ರ ಬಹಳ ಸೊಗಸಾಗಿ ಹೇಳುತ್ತದೆ. ಪ್ರೇಮಿಗಳು ಮಾತ್ರ ಕಷ್ಟ ಪಡುತ್ತಾರೆ ಅನ್ನುವುದು ಸುಳ್ಳು- ಅವರನ್ನು ಆವರಿಸಿಕೊಂಡಿರುವ ಬಂಧು-ಮಿತ್ರ ವರ್ಗದವರೂ ಹಲವು ಸಲ ನರಳಬೇಕಾಗುತ್ತದೆ. ಪ್ರೇಮಿಸಿದವರನ್ನೇ ಮದುವೆಯಾದರೂ ಎಲ್ಲವೂ ಸುಖಾಂತ್ಯವಾಗಬೇಕಾಗಿಲ್ಲ. ಅಪ್ಪ-ಅಮ್ಮ ಸೋದರರೊಡನೆ ಮುನಿದು ಮಾತು ಬಿಟ್ಟರೆ ಆ ಸಂಬಂಧ ನಶಿಸಿ ಹೋಗುವುದಿಲ್ಲ. ಆದರೆ, ಪ್ರೇಮ ಹಾಗಲ್ಲ- ಕೆಲವು ಸಲ ಅಂದುಕೊಂಡದ್ದಕ್ಕಿಂತಲೂ ಹೆಚ್ಚು ಗಟ್ಟಿಯಾಗಿರುತ್ತದೆ, ಕೆಲವು ಸಲ ನಿರೀಕ್ಷಿ ಸಿಯೇ ಇರದಿದ್ದ ವೇಳೆಯಲ್ಲಿ ಮುರಿದು ಬೀಳುತ್ತದೆ. ಕಥೆಯನ್ನೇ ಯಾಮಾರಿಸಬಲ್ಲ ಶಕ್ತಿ ಪ್ರೇಮಕ್ಕಿದೆ. ಅದಕ್ಕೇ ಪ್ರೇಮಕಥೆ ಬರೆಯೋದು ಕಷ್ಟ-“ಎಂಡಿಂಗ್‌ ಹೀಗಿರಲಿ’ ಅಂತ ಮುಗಿಸೋದು ಇನ್ನೂ ಕಷ್ಟ!

ಡಿಗ್ರಿ ಮುಗಿದ ಮೇಲೆ ಎಲ್ಲಿಗೆ ಹೋಗುತ್ತದೆ ಈ ಪ್ರೇಮ! ಗಾಳಿಗಿಟ್ಟ ಪಾದರಸದಂತೆ “ಅಲ್ಲಿತ್ತು’ ಅನ್ನುವ ಸುಳಿವೇ ಸಿಗದಂತೆ ಹೇಗೆ ಆವಿಯಾಗಿ ಬಿಡುತ್ತದೆ! ಅದನ್ನು ಕ್ಷಣಕ್ಷಣಕ್ಕೂ ಜತನವಾಗಿರಿಸಿಕೊಳ್ಳಬೇಕು- ಬೆಳಕಾಗಿ ರಂಗು ತುಂಬಿದ್ದು, ಥರ್ಮೊಮೀಟರ್‌ನಿಂದ ಹೊರ ಬಿದ್ದು ಗಾಳಿ ಸೇರಿ ವಿಷವಾಗಿ ಕತ್ತು ಕುಯ್ಯಲೂಬಹುದು. ಎಮ್‌ಎಸ್‌ಸಿ ಸೇರಿದ ಮೇಲೆ ಮಸಾಲೆಭರಿತ ಪ್ರೇಮಕಥೆಗಳು ಸಿಗುತ್ತವೆಯೋ ಎಂದು ಕ್ಯಾಂಪಸ್‌ನ ಸುತ್ತ ಅಡ್ಡಾಡುವಾಗ ಹುಡುಕಿ ದ್ದೇನೆ. ನನಗೆ ಸಿಕ್ಕಿದ ಪ್ರೇಮಕಥೆಗಳ್ಳೋ, 350 ಎಕರೆಯ ಅಗಾಧ ಕ್ಯಾಂಪಸ್ಸಿನ ಎದುರು ಏನೇನೂ ಅಲ್ಲ. ವಯಸ್ಸಾದಂತೆ ಆಕರ್ಷಣೆ ಕಡಿಮೆಯಾಗಿ, ಸಮುದ್ರದಂತಹ ಸಿಲೆಬಸ್‌ನಲ್ಲಿ ಈಜುವುದೇ ಮುಖ್ಯವಾಗಿ ಬಿಡುತ್ತ ದೇನೋ! ಪ್ರೇಮಂ ಚಲನಚಿತ್ರದಲ್ಲಿ ಮಲರ್‌ಗೆ ಅಪಘಾತವಾದಾಗ, ನಾವಿಂದು ನೋಡುತ್ತಿರುವ ವಾಟ್ಸಾಪ್‌ ಸ್ಟೇಟಸ್‌ಗಳಂತೆ ಅವಳ ಬಳಿಯೇ ಕುಳಿತಿ ರುತ್ತ, ತಾನೇ ಅರಿಜಿತ್‌ ಸಿಂಗ್‌ ಎಂಬಂತೆ ಹಾಡು ಹಾಡುತ್ತ, ಹೂವು ಚೆಲ್ಲುತ್ತ, ಕೂದಲು ಕಟ್ಟುತ್ತ, ಅವಳನ್ನು ಹೊತ್ತುಕೊಂಡು ಬರುತ್ತೇನೆಂದು ಬೆಟ್ಟದ ಮೇಲಿರುವ ದೇವರಿಗೆ ಹರಕೆ ಹೊರುವ, ಸರ್ಕಸ್ಸು ಮಾಡದೆ-ಬಿ.ಎಸ್ಸಿ ಓದುತ್ತಿರುವ ನಾಯಕ ಅಳುತ್ತ ಹಿಂದೆ ಬರುತ್ತಾನಲ್ವ- ಅದೇ ಜೀವನ-ಬಹುಶಃ ನಾನು, ನೀವಾಗಿದ್ದರೂ ಅಷ್ಟೇ ಮಾಡಿಯೇವು! ಕೆಲವು ನೆನಪುಗಳನ್ನು ಆವಿಯಾಗುವಂತೆ ಗಾಳಿಗೊಡ್ಡುವುದೇ ಒಳ್ಳೆಯದು!

ಹೈಸ್ಕೂಲ್‌ನಲ್ಲಿ ಗಂಭೀರವಾಗಿ ಪರಿಗಣಿಸಿದ್ದ ಪ್ರೇಮ ವನ್ನು, “ಸ್ಟ್ರೆಟ್ನಿಂಗ್‌ ಮಾಡಿದವಳಿಗೋಸ್ಕರ ನನ್ನನ್ನು ಬಿಟ್ಟ” ಎಂಬ ದುಃಖವನ್ನು ಈಗ, ಅದೊಂದು ಜೋಕ್‌ ಎಂಬ ಹಾಗೆ ನೆನಪು ಮಾಡಿಕೊಳ್ಳುತ್ತಾರೆ. ಎಷ್ಟೋ ಜನ ತಮ್ಮ ಹಳೆಯ ಪ್ರೇಮವನ್ನು ಮಸಾಲೆ ಹಚ್ಚಿ ಹೇಳುತ್ತ ನಗುವುದನ್ನು, ನಗಿಸುವುದನ್ನು ಕಂಡಿದ್ದೇನೆ. ಒಂದು ಕಾಲದ ಪ್ರೇಮ ಮುಂದೊಂದು ಕಾಲಕ್ಕೆ ತಮಾಷೆ ಆಗುವುದೂ ಆಶ್ಚರ್ಯವೆ! ಪ್ರೇಮ ಪಾದರಸದಂತೆ-ಕಾಲದ ಗಾಳಿ ಅದಕ್ಕೆ ವರವೂ ಹೌದು, ಶಾಪವೂ ಹೌದು!

ಯಶಸ್ವಿನಿ ಕದ್ರಿ


ಈ ವಿಭಾಗದಿಂದ ಇನ್ನಷ್ಟು

  • ಏನ್ರೀ ನೀವು! ಮತ ಕೇಳ್ಳೋಕೆ ಬರುವಾಗ ಇದ್ದ ನಿಮ್ಮ ನಿಯತ್ತು ಈಗಿಲ್ಲ . ಚುನಾವಣಾ ಮುನ್ನ ನಿಮ್ಮ ಪ್ರಣಾಳಿಕೆಗಳಲ್ಲಿ ನೀವು ಘೋಷಿಸಿ ಕೊಂಡ ಯಾವ ಕೆಲಸಗಳೂ ಒಂದೂ ಸರಿಯಾಗಿ...

  • ನಮ್ಮ ಮನೆಯ ಅಂಗಳಕ್ಕೆ ಒಂದು ಬಿಳಿ ಪಾರಿವಾಳ ಬಂದಿತ್ತು. ಅದರ ರೆಕ್ಕೆಗೆ ಸ್ವಲ್ಪ ಪೆಟ್ಟು ಆಗಿ ಹೆಚ್ಚು ಹಾರಾಟ ಮಾಡಲು ಆಗುತ್ತಿರಲಿಲ್ಲ. ಅದನ್ನು ನಾನು ನೋಡಿ ಮೆಲ್ಲನೆ...

  • ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ಬಾಲ್ಯ, ಪ್ರೌಢ, ಯೌವ್ವನ, ಮತ್ತು ಮುಪ್ಪು ಎಂಬ ನಾಲ್ಕಂತಸ್ತಿನ ಮಹಡಿಯನ್ನು ಹತ್ತಿಳಿಯಲೇ ಬೇಕು. ಆದರೆ, ಬಾಲ್ಯದ ನೆನಪು...

  • ನಮ್ಮ ಜೀವನದಲ್ಲಿ ಸಂಬಂಧಗಳಿಗೆ ಬಹಳ ಪ್ರಾಮುಖ್ಯ ಇದೆ. ಸಂಬಂಧಗಳಿಲ್ಲದಿದ್ದರೆ ಬಹುಶಃ ನಮಗೆ ಪ್ರೀತಿ ಎಂದರೆ ಏನು, ಭಾವನೆಗಳೆಂದರೇನು, ನಂಬಿಕೆ ಎಂದರೆ ಏನು ಎನ್ನುವುದು...

  • ಕಾಲೇಜ್‌ ಎಂಬ ಸಾಮ್ರಾಜ್ಯದ ಗೋಡೆಯ ಮೇಲೆ ಅಲ್ಲಲ್ಲಿ ಹೃದಯದ ಗುರುತಿನ ಕೆತ್ತನೆಗಳು, ಡೆಸ್ಕ್ಗಳ ಮೇಲೆ ಪ್ರೀತಿಯ ಕವನಗಳು, ಪ್ರತಿ ಕ್ಲಾಸ್‌ನಿಂದ ಒಂದಾದರೂ ಲವ್‌...

ಹೊಸ ಸೇರ್ಪಡೆ