ಗ್ರಂಥಾಲಯಕ್ಕೆ ಬನ್ನಿರಿ

Team Udayavani, Sep 28, 2018, 6:00 AM IST

ಆಗ ತಾನೆ ಸರಕಾರಿ ನೌಕರಿ ಸಿಕ್ಕಿ ಗ್ರಾಮಾಂತರ ಪ್ರದೇಶದ ಒಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಾಲಯ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಆರಂಭದ ದಿನಗಳು. ನಗರವಾಸಿಯಾಗಿದ್ದ ನಾನು ಪ್ರಾರಂಭದಲ್ಲಿ ಸಾಕಷ್ಟು ಯಾತನೆಯನ್ನು ಅನುಭವಿಸಿದರೂ, ವಿದ್ಯಾರ್ಥಿಗಳ ಒಡನಾಟ ಎಲ್ಲ ನೋವನ್ನು ಮರೆಸಿತ್ತು. ಗ್ರಂಥಾಲಯದಲ್ಲಿ ಇದ್ದುಕೊಂಡು ಬಹಳಷ್ಟು  ಗ್ರಂಥಗಳನ್ನು ಅಭ್ಯಸಿಸಿ ವಿದ್ಯಾರ್ಥಿಗಳಿಗೂ ಪುಸ್ತಕದ ಮಹತ್ವ , ಸಾಹಿತ್ಯದ ಬಗ್ಗೆ ಒಲವು ಬೆಳೆಸುವ ಮಹತ್ತರ ಜವಾಬ್ದಾರಿ ನನ್ನ ಮೇಲೆ ಇತ್ತು. ವಿದ್ಯಾರ್ಥಿಗಳು ಪಾಠ-ಪ್ರವಚನಗಳಿಗೆ ಪೂರಕವಾದ ಪುಸ್ತಕವನ್ನು ಎರವಲು ಪಡೆಯುವುದರ ಜೊತೆಗೆ, ವಾಚನಾಲಯದಲ್ಲಿ ಲಭ್ಯವಿರುವ ದಿನಪತ್ರಿಕೆ, ವಾರಪತ್ರಿಕೆ, ಇನ್ನಿತರ ಉಪಯುಕ್ತ ಜರ್ನಲ್‌, ನಿಯತಕಾಲಿಕಗಳು ಮುಂತಾದುವುಗಳನ್ನು ಓದಿಕೊಂಡು, ತಮ್ಮ ಬಿಡುವಿನ ವೇಳೆಯನ್ನು ಸದುಪಯೋಗ ಮಾಡಿಕೊಳ್ಳುತ್ತಿದ್ದರು. ಆ ದಿನಗಳಲ್ಲಿ ತಂತ್ರಜ್ಞಾನವು ಇಷ್ಟೊಂದು ಪ್ರಮಾಣದಲ್ಲಿ ಮುಂದುವರಿಯದ ಕಾರಣ, ವಿದ್ಯಾರ್ಥಿಗಳು ತರಹೇವಾರಿ ಪುಸ್ತಕ, ಪತ್ರಿಕೆ ಓದುವುದರಲ್ಲಿ ಅತೀವ  ಆನಂದ ಅನುಭವಿಸುತ್ತಿದ್ದರು. ವಿದ್ಯಾರ್ಥಿಗಳೊಂದಿಗೆ ಬೆರೆಯುತ್ತ¤, ಅವರ ಸಂತೋಷದಲ್ಲಿ ತೃಪ್ತಿಯನ್ನು ಅನುಭವಿಸುತ್ತಿದ್ದ ಆ ಖುಷಿ ಇಂದಿಗೂ ಜೀವಂತವಾಗಿದೆ. 

ಆದರೆ, ದಿನಗಳು ಉರುಳಿದಂತೆ, ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟಾದ ಕ್ರಾಂತಿಯ ಪರಿಣಾಮದಿಂದ ಆಧುನಿಕ ಜಗತ್ತಿನ ಕೊಡುಗೆಗಳಾದ ಮೊಬೈಲ್‌ ಫೋನ್‌, ವಿಭಿನ್ನ ಟಿ.ವಿ. ಚಾನೆಲ್‌ಗ‌ಳು, ಹೈಟೆಕ್‌ ಕಂಪ್ಯೂಟರ್‌ಗಳು ಹಾಗೂ ಇನ್ನಿತರ ಗ್ಯಾಜೆಟ್‌ಗಳು ಜನರ ಖಾಸಗಿ ಬದುಕಿಗೆ ಲಗ್ಗೆ ಇಟ್ಟಿದ್ದವು. ಜಾಗತೀಕರಣ ಹಾಗೂ ಖಾಸಗೀಕರಣದ ನೆಪವೊಡ್ಡಿ ಮೊಬೈಲ್‌ ಫೋನುಗಳು ಮತ್ತು ಅಂತರ್ಜಾಲ ಸಂಪರ್ಕಗಳು ಅಗ್ಗದ ದರದಲ್ಲಿ ಜನಸಾಮಾನ್ಯರಿಗೆ ಎಟಕುವಂತಾಗಿತ್ತು. ಪರಿಣಾಮವಾಗಿ, ತಮ್ಮ ಅಮೂಲ್ಯ ಸಮಯವನ್ನು ಉತ್ತಮ ಹವ್ಯಾಸದೊಂದಿಗೆ ವಿನಿಮಯಗೊಳಿಸುತ್ತಿದ್ದ ಯುವಜನತೆ ಮೊಬೈಲ್‌ ದಾಸರಾಗಿ ಬಿಟ್ಟಿದ್ದರು. ಎತ್ತನೋಡಿದರೂ ಈ ಪೀಳಿಗೆಯ ಯುವಕ-ಯುವತಿಯರು, ಮಕ್ಕಳು ಮೊಬೈಲ್‌ ಹಾವಳಿಗೆ ಬಲಿಯಾಗಿರುವ ದೃಶ್ಯ ಸರ್ವೇಸಾಮಾನ್ಯವಾಗಿತ್ತು. ಎಲ್ಲಾ ರೀತಿಯ ಮಾಹಿತಿಗಳು, ಜ್ಞಾನಕೋಶದ ಭಂಡಾರಗಳು ಅಂಗೈಯಲ್ಲಿ ಲಭ್ಯವಾಗಿರುವಾಗ ಗ್ರಂಥಾಲಯಗಳ ಆವಶ್ಯಕತೆಯಾದರೂ ಎಲ್ಲಿದೆ? ಮಕ್ಕಳಲ್ಲಿ ಓದಿನ ಹವ್ಯಾಸದ ಬಗ್ಗೆ ನಿರಾಸಕ್ತಿ, ನಿರುತ್ಸಾಹ ಕಂಡು ನನ್ನ ಮನವು ಮರುಕಗೊಂಡಿದೆ. 

ಆದ್ದರಿಂದ ಪ್ರೀತಿಯ ಮಕ್ಕಳೆ, ನಿಮ್ಮಲ್ಲೊಂದು ನನ್ನ ಕಳಕಳಿಯ ಮನವಿ. ದಯವಿಟ್ಟು ಗ್ರಂಥಾಲಯಕ್ಕೆ ಬನ್ನಿ. ಅದು ನಿಮ್ಮ ಶೈಕ್ಷಣಿಕ ಗ್ರಂಥಾಲಯವಾಗಿರಬಹುದು ಅಥವಾ ಸಾರ್ವಜನಿಕ ಗ್ರಂಥಾಲಯವಾಗಿರಬಹುದು,  ಓದಿನ ಹವ್ಯಾಸವನ್ನು ಮುಂದುವರಿಸಿ. ಪುಸ್ತಕಗಳು ಎಂದೆಂದಿಗೂ ನಮ್ಮ ಬದುಕಿನ ದಾರಿದೀಪಗಳು. ಅದು ನಮ್ಮನ್ನು ಉಜ್ವಲ ಭವಿಷ್ಯದೆಡೆಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸುವುದು ಎಂಬ ಸತ್ಯವನ್ನು ಮರೆಯಬಾರದು.

ಪ್ರಸ್ತುತ ಕಾಲಘಟ್ಟದಲ್ಲಿ  ಗ್ರಂಥಾಲಯಗಳು ಹೊಸ ರೂಪ ಪಡೆದುಕೊಂಡಿವೆ. ಅನೇಕ ಶೈಕ್ಷಣಿಕ ಗ್ರಂಥಾಲಯಗಳು ಕಂಪ್ಯೂಟರೀಕೃತಗೊಂಡಿದ್ದು, ವಿಶಿಷ್ಟ ರೀತಿಯಲ್ಲಿ ಸೇವೆಯನ್ನು ನೀಡುತ್ತಿವೆ. ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ತಮ್ಮ ಕಾಲೇಜಿನ ವೆಬ್‌ಸೈಟ್‌ ಮೂಲಕ ಎಲ್ಲಿ ಬೇಕಾದಲ್ಲಿ ಮಾಹಿತಿ ಪಡೆಯಬಹುದಾದ ವ್ಯವಸ್ಥೆ ಇದೆ. ನಗರ ಕೇಂದ್ರ ಗ್ರಂಥಾಲಯಗಳೂ ಡಿಜಿಟಲೀಕರಣಗೊಂಡಿದ್ದು ಓದುಗರನ್ನು, ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳು ಓದುಗರ ಅಭಿರುಚಿಯನ್ನು ಕುಂಠಿತಗೊಳಿಸಿದರೂ, ಗ್ರಂಥಾಲಯಗಳು ತಮ್ಮ ಸ್ವರೂಪವನ್ನು ಬದಲಾಯಿಸಿಕೊಂಡು ಓದುಗರನ್ನು ತನ್ನತ್ತ ಸೆಳೆಯುವುದರಲ್ಲಿ ಯಶಸ್ವಿಯಾಗಿದೆ. ಆದರೆ, ಗತಕಾಲದ ಗ್ರಂಥಾಲಯದ ವೈಭವ, ಪುಸ್ತಕಗಳೇ ಸರ್ವಸ್ವ ಎಂಬಂತಿದ್ದ ಆ ದಿನಗಳನ್ನು ನೆನೆಯುವಾಗ ಮನಸ್ಸು ಮುದಗೊಳ್ಳುತ್ತದೆ. ಹಿಂದಿನ ನೆನಪುಗಳು ಪುಸ್ತಕವನ್ನು ತೆರೆಯುವಾಗ ಘಮ್ಮನೆ ಬರುವ ಪರಿಮಳ ಸದಾ ನನ್ನ ಹೃದಯದಲ್ಲಿ ಜೀವಂತವಾಗಿದೆ.

 ನಿಜಕ್ಕೂ ಪುಸ್ತಕಗಿಂತ ಮಿಗಿಲಾದ ಸ್ನೇಹಿತ ಬೇರೊಬ್ಬನಿಲ್ಲ. 

ಶೈಲಾರಾಣಿ ಬೋಳಾರ್‌
 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮನುಷ್ಯ ಜೀವನ ನೀರಿನ ಮೇಲಿರುವ ಗುಳ್ಳೆಯಂತೆ ಎಂಬ ಮಾತನ್ನು ಹಿರಿಯರಿಂದ ಕೇಳಿದ್ದೇವೆ. ಪ್ರತಿದಿನ ದಿನಪತ್ರಿಕೆ ಓದಿದಾಗ ಈಜಲು ಹೋದ ಯುವಕರು ನೀರುಪಾಲು ಅನ್ನುವ...

  • ಮನೆಯವರ ಹೊರತಾಗಿ ದೂರದ ಊರಿಗೆ ಹೊರಟು ನಿಂತದ್ದು ಅದೇ ಮೊದಲು. ಮಂಗಳೂರಿನ ಸುಳ್ಯ ಸಮೀಪ ನಮ್ಮ ಊರು. ಸುಳ್ಯದಿಂದ ರಾತ್ರಿ ಹೊರಡುವ ಸ್ಲೀಪರ್‌ಕೋಚ್‌ ಬಸ್‌ ಒಂದರಲ್ಲಿ...

  • ಬಾಲ್ಯದ ನೆನಪುಗಳು ಎಷ್ಟು ಚಂದವಲ್ಲವೇ, ಎಲ್ಲರಿಗೂ ತಮ್ಮ ಶಾಲಾಜೀವನದಲ್ಲಿ ಸಾಕಷ್ಟು ಸವಿನೆನಪುಗಳು ಬಂದುಹೋಗುತ್ತವೆ. ಒಮ್ಮೆಯಾದರೂ ಟೀಚರ್‌ ಆಗಬೇಕೆಂಬ ಯೋಚನೆ...

  • ಯಾವುದೋ ಒಂದು ಕಾರ್ಯಕ್ರಮದಲ್ಲಿ ಹಿರಿಯರೊಬ್ಬರು ಈಗಿನ ಯುವಸಮೂಹ ಪ್ರೇಮದ ಬಗ್ಗೆ ಬರೆಯುವುದೇ ಇಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದರು. ನನಗೆ ಬರೆಯುವ ಹುಚ್ಚಿದೆಯೆಂದು...

  • ಮಲೆನಾಡು, ಹೆಸರಿಗೆ ತಕ್ಕಂತೆ ಮಲೆಗಳ ನಾಡು, ಯಾರಿಗೂ ಬೇಡವೆಂದೆನಿಸದ ಭೂಲೋಕದ ಸುಂದರ ತಾಣ ನಮ್ಮ ಮಲೆನಾಡು. ಮಲೆನಾಡು ಅರ್ಥಾತ್‌ ಮಳೆಯ ನಾಡು. ಕೇವಲ ಮಳೆಗೆಂದು ಹೆಸರುವಾಸಿಯಾಗಿಲ್ಲ,...

ಹೊಸ ಸೇರ್ಪಡೆ