ಕಬಡ್ಡಿ ಕ್ಯಾಪ್ಟನ್‌

Team Udayavani, Nov 8, 2019, 4:26 AM IST

ಸಾಂದರ್ಭಿಕ ಚಿತ್ರ

ಇಂಜಿನಿಯರಿಂಗ್‌ ಕಾಲೇಜ್‌ ಅಂದ್ರೆ ಹಾಗೇ. ಎಡೆಬಿಡದೆ ನಡೆಯುವ ಕ್ಲಾಸುಗಳು. ಹೇಗೋ ಆಗುತ್ತಿವೆ ಎನ್ನುವ ಲ್ಯಾಬ್‌ಗಳು, ವರ್ಕ್‌ಶಾಪ್‌, ಲೆಕ್ಚರರ್, ಅಟೆಂಡೆನ್ಸ್‌- ಇತ್ಯಾದಿ ಇತ್ಯಾದಿಗಳಿಂದ ಸದಾ ರೆಸ್ಟ್‌ಲೆಸ್‌ ಆಗಿರುವ ಜೀವನ. ಇಂತಹ ಸಮಯದಲ್ಲಿ ನಮಗೆಲ್ಲಾ ಒಂಚೂರು ರೆಸ್ಟ್‌ ಸಿಗುವುದೇ ಕಾಲೇಜ್‌ ಡೇ ಹತ್ತಿರ ಬಂದಾಗ.

ಕಾಲೇಜ್‌ ಡೇ ಅಂದ ಮೇಲೆ ಸಾಂಸ್ಕೃತಿಕ ಚಟುವಟಿಕೆಗಳು, ಕ್ರೀಡಾ ಸ್ಪರ್ಧೆಗಳು, ಪ್ರೋತ್ಸಾಹ- ಇವೆಲ್ಲಾ ಸಾಮಾನ್ಯ. ಇತ್ತೀಚೆಗೆ ಒಂದು ದಿನ ಕಾಲೇಜ್‌ ಡೇಗಾಗಿ ಕಬಡ್ಡಿ ಸ್ಪರ್ಧೆ ನಡೆಯುತ್ತಿತ್ತು. ಅದನ್ನು ವೀಕ್ಷಿಸುತ್ತ ಒಂದು ಸಲ ನನ್ನ ಫ್ಲ್ಯಾಶ್‌ಬ್ಯಾಕ್‌ ಕಡೆಗೆ ಸಾಗಿದೆ.

ಹೌದು, ತೀರಾ ಸಣ್ಣಗಿರುವ ನನ್ನನ್ನು ನೋಡಿದರೆ ನಾನು ಕಬಡ್ಡಿ ಆಡಿದ್ದೆ ಅನ್ನುವುದನ್ನು ಯಾರೂ ನಂಬುವುದಿಲ್ಲ. ಆದರೆ, ಆಡಿದ್ದಂತೂ ಸತ್ಯ, ಅದೂ ಕ್ಯಾಪ್ಟನ್‌ ಆಗಿ! ಇವೆಲ್ಲದರ ಹಿಂದೆ ಒಂದು ದೊಡ್ಡ ಕಥೆಯೇ ಇದೆ.

ಆರನೆಯ ತರಗತಿಯಲ್ಲಿ ಎಕ್ಸ್‌ಟ್ರಾ ಪ್ಲೇಯರ್‌ ಆಗಿದ್ದ ನನಗೆ ಮುಂದಿನ ವರ್ಷ ಮತ್ತೆ ನನ್ನನ್ನು ಆಡಿಸಬಹುದೆಂಬ ನಂಬಿಕೆ ಇರಲಿಲ್ಲ. ಆದರೆ ನಡೆದಿದ್ದೇ ಬೇರೆ. ಚೌತಿಗಾಗಿ ನಡೆದ ಕಬಡ್ಡಿ ಸ್ಪರ್ಧೆಯಲ್ಲಿ ಪ್ರಖರ ದಾಳಿಗಾರ ಸಂತೋಷ್‌ ಎದುರಾಳಿ ತಂಡದ ನಾಯಕ. ನಮ್ಮದು ಅವರೆದುರು ಏನೂ ಅಲ್ಲದ ದುರ್ಬಲ ತಂಡ. ನಮ್ಮ ಸೋಲು ಖಚಿತವೆಂದೇ ಎಲ್ಲರೂ ಭಾವಿಸಿದ್ದರು. ಆದರೆ, ಆಗಿದ್ದಾಗಲಿ ಎಂದು ಮುನ್ನುಗ್ಗಿದ್ದ ನಾನು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಅಭೂತಪೂರ್ವ ಗೆಲುವೊಂದನ್ನು ದೊರಕಿಸಿಕೊಟ್ಟಿದ್ದೆ! ಯಾರೂ ನಿರೀಕ್ಷಿಸದಿದ್ದ ಆ ಸಾಧನೆ ನನ್ನ “ನಾಯಕತ್ವ’ಕ್ಕೆ ಮುನ್ನುಡಿ ಬರೆದಿತ್ತು.

ಮುಂದಿನ ವಲಯ ಮಟ್ಟದ ಕಬಡ್ಡಿಗೆ ಅಭ್ಯಾಸ ಆರಂಭವಾಯಿತು. ದಿನವಿಡೀ ಕಬಡ್ಡಿ, ಅದನ್ನು ಬಿಟ್ಟರೆ ಬೇರೇನಿಲ್ಲ. ಕೊನೆಗೂ ನಾನು, ಸಂತೋಷ್‌, ಮುಖೇಶ್‌, ಸುಮಂತ್‌ ಅವರನ್ನೊಳಗೊಂಡ ಸುಸಜ್ಜಿತ ತಂಡ ವೊಂದನ್ನು ಟೀಚರ್‌ ಸಿದ್ಧಪಡಿಸಿದರು. ನಿರೀಕ್ಷೆಯಂತೆಯೇ ನಾನು ಕ್ಯಾಪ್ಟನ್‌ ಆಗಿ ತಂಡವನ್ನು ಮುನ್ನಡೆಸಲು ತಯಾರಾಗಿದ್ದೆ.

ಉಜಿರೆಯಲ್ಲಿ ನಡೆದ ವಿಭಾಗ ಮಟ್ಟದ ಪಂದ್ಯಾಟದಲ್ಲಿ ಮೊದಲ ಪಂದ್ಯ ನಮ್ಮದೇ. ಹತ್ಯಡ್ಕದಂತಹ ಸಾಮಾನ್ಯ ಹಳ್ಳಿಯ ಶಾಲೆಯಿಂದ ಬಂದಿದ್ದ ನಮಗೆ ಆತಿಥೇಯ ತಂಡದೆದುರು ಆಡುವುದೇ ಒಂದು ಹೆಮ್ಮೆ ಅನಿಸಿತ್ತು.

ಅಂತೂ ಮೊದಲ ಪಂದ್ಯ ಆರಂಭವಾಯಿತು. ಅತ್ಯುತ್ಸಾಹದಿಂದ ಆಡಲು ಇಳಿದ ನಮ್ಮ ತಂಡ ಒಗ್ಗಟ್ಟಾಗಿ ಆಡಿ ಎರಡೇ ನಿಮಿಷದಲ್ಲಿ ಎದುರಾಳಿ ತಂಡವನ್ನು ಆಲೌಟ್‌ ಮಾಡಿತ್ತು! ಈ ಸಾಧನೆ ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದ್ದಲ್ಲದೆ ಗೆಲುವು ಸುಲಭವಾಗಿಯೇ ದೊರಕಬಹುದೆಂದು ಭಾವಿಸಿದ್ದೆವು. ಆದರೆ, ಕೆಲವೇ ಕ್ಷಣಗಳಲ್ಲಿ ಪಂದ್ಯದ ದಿಕ್ಕೇ ಬದಲಾಯಿತು.

ರೈಡಿಂಗ್‌ ಸಂದರ್ಭದಲ್ಲಿ ನಾನು ಮತ್ತು ಸಂತೋಷ್‌ ಗಾಯಗೊಂಡು ಹೊರನಡೆದಿದ್ದರಿಂದ ತಂಡದ ಭಾರ ಸುಮಂತ್‌ನ ಮೇಲೆ ಬಿತ್ತು. ಎದುರಾಳಿ ತಂಡವೂ ಅವಕಾಶವನ್ನು ಉಪಯೋಗಿಸಿ ಮುನ್ನುಗ್ಗತೊಡಗಿತು. ತಂಡ ಸೋಲಿನತ್ತ ಮುಖ ಮಾಡಿದಾಗ ಮತ್ತೆ ನಾನು ತಂಡವನ್ನು ಸೇರಿಕೊಂಡರೂ ಒತ್ತಡ ನಿಭಾಯಿಸಲಾಗದೆ ಸೋಲನುಭವಿಸಬೇಕಾಯಿತು. ಸೋಲು ಸಣ್ಣ ಅಂತರದ್ದಾದರೂ ಅವಸರದಿಂದ ತೆಗೆದುಕೊಂಡ ನಿರ್ಧಾರಗಳೇ ಅದಕ್ಕೆ ಕಾರಣ ಎಂಬುದು ಸ್ಪಷ್ಟವಾಗಿತ್ತು. ವೈಯಕ್ತಿಕವಾಗಿ ನಾಯಕತ್ವ ವಿಚಾರದಲ್ಲಿ ನನಗೆದುರಾದ ಮೊದಲ ಸೋಲು ಅದಾಗಿತ್ತು.

ದಿನವಿಡೀ ಮಾಡಿದ ಅಭ್ಯಾಸಗಳು, ಕೈ-ಕಾಲುಗಳಲ್ಲಿ ತರಚಿದ ಗಾಯ, ಮನೆಯಲ್ಲಿ ಅಜ್ಜಿಯ ದಿನನಿತ್ಯದ ಬೈಗುಳ, ಅಪ್ಪನ ಎಚ್ಚರಿಕೆ, ಮಳೆಯಲ್ಲೂ ಕೆಸರಲ್ಲೂ ಆಡಿದ ನೆನಪು- ಎಲ್ಲವೂ ಅಂದೇ ಕೊನೆಯಾಗಿತ್ತು. ಮುಂದಿನ ವರ್ಷ ಹೈಸ್ಕೂಲ್‌ಗೆ ತೆರಳಲಿದ್ದ ನಮಗೆ ಅದು ಕೊನೆಯ ಅವಕಾಶವಾಗಿತ್ತು.

ಅದೇನೇ ಇರಲಿ, ಕಾಲೇಜ್‌ಡೇ ಕಬಡ್ಡಿ ನೋಡುತ್ತ ನೋಡುತ್ತ ಹಳೆಯ ನೆನಪು ಸ್ಮತಿಪಟಲದಲ್ಲಿ ಹಾದುಹೋಗಿ ಮತ್ತೆ ಕಬಡ್ಡಿ ಆಡಬೇಕು ಎಂಬ ಆಸೆ ಚಿಗುರಿದ್ದಂತೂ ನಿಜ.

ತುಳಸೀಧರ ಎಂ.
ನಿಕಟಪೂರ್ವ ವಿದ್ಯಾರ್ಥಿ ಎಸ್‌ಡಿಎಂಐಟಿ, ಉಜಿರೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಪುಟಾಣಿ ಮಕ್ಕಳಿಗೆ ಬಣ್ಣ ಬಣ್ಣದ ಬಟ್ಟೆಗಳನ್ನ ಹಾಕಿಕೊಂಡು ಶಾಲೆಗೆ ಹೋಗುವುದೆಂದರೆ ತುಂಬಾ ಇಷ್ಟ. ಅದರಲ್ಲೂ ಚಂದದ ಬಟ್ಟೆ ಹಾಕಿಕೊಂಡು ಎಲ್ಲರಿಗೂ ಕಾಣಿಸುವಂತೆ...

  • ಇನ್ನೇನು ಸೆಮೆಸ್ಟರ್‌ ಪರೀಕ್ಷೆಗಳು ಮುಗಿದು ರಜೆ ಸಿಗುವ ಸಮಯ. ಒಮ್ಮೆ ಈ ಎಕ್ಸಾಮ್‌ ಕಾಟ ಮುಗಿದರೆ ಸಾಕು ಎಂದು ಮನಸ್ಸಲ್ಲೇ ಮಂಡಿಗೆ ಮೆಲ್ಲುವ ವಿದಾರ್ಥಿಗಳೇ ಬಹುಪಾಲು....

  • ಸುಮಾರು 6-7 ವರ್ಷದ ಮೊದಲು ನನ್ನ ಮನೆಯ ಹತ್ತಿರ ಒಂದು ಬಯಲಾಟ ಆಗಿತ್ತು. ನಾನು ಬಯಲಾಟಕ್ಕೆ ಹೋಗಿ ಇಡೀ ರಾತ್ರಿ ಅಲ್ಲಿ ರಂಗಸ್ಥಳದಲ್ಲಿ ಬರುವಂಥ ಎಲ್ಲ ವೇಷಗಳನ್ನು ನೋಡಿ...

  • ಜೀವನದಲ್ಲಿ ಕೆಲವೊಮ್ಮೆ ರೋಚಕ ಅನುಭವಗಳು ಮುಂದಿನ ಹೆಜ್ಜೆಗೆ ದಾರಿದೀಪವಾಗುತ್ತದೆ ಎಂಬ ಮಾತುಗಳನ್ನು ಕೇಳಿದ್ದೆ. ಆದರೆ, ಅಂತಹ ಅನುಭವ ನಮಗೂ ಒಮ್ಮೊಮ್ಮೆ ಮೈನವಿರೇಳುವಂತೆ...

  • ಮೊನ್ನೆ ಪೇಟೆಯಲ್ಲಿ ಪರಿಚಯದವರೊಬ್ಬರು ಸಿಕ್ಕಿದಾಗ, ಮಾತಿನ ಮಧ್ಯೆ "ಮುಗಿಯಿತೇ ಬಿ.ಎಡ್‌ ಕೋರ್ಸ್‌?' ಎಂದು ಕೇಳಿದರು. "ಇಲ್ಲಾ, ಇನ್ನು ಒಂದು ಸೆಮಿಸ್ಟರ್‌ ಇದೆ' ಎಂದಾಗ,...

ಹೊಸ ಸೇರ್ಪಡೆ