ಟೀಚರ್‌ ಉದ್ಯೋಗವಲ್ಲ ; ಉಪಾಧಿ

Team Udayavani, Nov 8, 2019, 5:15 AM IST

ಸಾಂದರ್ಭಿಕ ಚಿತ್ರ

ಮೊನ್ನೆ ಪೇಟೆಯಲ್ಲಿ ಪರಿಚಯದವರೊಬ್ಬರು ಸಿಕ್ಕಿದಾಗ, ಮಾತಿನ ಮಧ್ಯೆ “ಮುಗಿಯಿತೇ ಬಿ.ಎಡ್‌ ಕೋರ್ಸ್‌?’ ಎಂದು ಕೇಳಿದರು. “ಇಲ್ಲಾ, ಇನ್ನು ಒಂದು ಸೆಮಿಸ್ಟರ್‌ ಇದೆ’ ಎಂದಾಗ, “ಹೋ! ಮತ್ತೆ ಟೀಚರ್‌ ಆಗ್ತಿ’ ಎಂದಾಗ ಹೌದೆಂದು ಉತ್ತರಿಸಿದೆನು. “ನಿಮಗೆ ಇವತ್ತು ರಜೆಯಾ?’ ಎಂದು ನಾನು ಕೇಳಿದ್ದೇ ತಪ್ಪಾಯಿತೇನೋ?’. “ಇಲ್ಲಪ್ಪಾ, ನಿಮ್ಮ ಹಾಗೆಯಾ ನಮಗೆ? ಟೀಚರ್‌ನವರಿಗಾದ್ರೆ ಎಪ್ರಿಲ್‌-ಮೇ ರಜೆ, ಮಳೆ ಬಂದ್ರೂ ರಜೆ, ಬಿಸಿಲು ಬಂದ್ರೂ ರಜೆ, ನನಗೆ ಸ್ವಲ್ಪ ಬೇರೆ ಕೆಲಸ ಇರುವುದರಿಂದ ಅರ್ಧ ದಿನ ರಜೆ ಹಾಕಿದ್ದೇನೆ’ ಎಂದರು.

ಈ ಮಾತು ನನ್ನ ಮನಸ್ಸನ್ನು ಕೊರೆಯುತ್ತಿರುವುದರಿಂದಾಗಿ ನನ್ನ ಅನಿಸಿಕೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ. ಕೆಲವರಿಗೆ, ಶಿಕ್ಷಕ ವೃತ್ತಿ ಎಂದರೆ ಕೇವಲ ರಜೆ ಎಂದು ಮಾತ್ರ ಅನಿಸುತ್ತಿದೆಯೇ? ಅದರೊಂದಿಗೆ, ಒಬ್ಬ ಶಿಕ್ಷಕ ತನ್ನ ವಿದ್ಯಾರ್ಥಿಗಳ ಒಳಿತಿಗಾಗಿ, ಶ್ರೇಯಸ್ಸಿಗಾಗಿ ಶ್ರಮಿಸುತ್ತಿರುವ ಚಿತ್ರಣವೇಕೆ ಕಾಣಿಸುತ್ತಿಲ್ಲ? ಜೋರಾಗಿ ಮಳೆ ಸುರಿದರೆ ಮುಂಜಾಗ್ರತಾ ಕ್ರಮವಾಗಿ, ಮಕ್ಕಳಿಗೆ ರಜೆ ನೀಡಿದರೆ, ಅದು ಹಾಸ್ಯದ ವಿಷಯವಾಗಿ ಕಾಣಿಸುತ್ತಿರುವುದು ವಿಷಾದನೀಯ.

ಒಬ್ಬ ಅಧ್ಯಾಪಕ/ಕಿ ತನ್ನ ಸ್ವಂತ ಮಕ್ಕಳಿಗೆ ನೀಡುವ ಸಮಯಕ್ಕಿಂತಲೂ ಹೆಚ್ಚಿನ ಸಮಯವನ್ನು ತನ್ನ ಶಾಲಾ ವಿದ್ಯಾರ್ಥಿಗಳೊಂದಿಗೆ ಕಳೆಯುತ್ತಾರೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಪೋಷಿಸಿ, ಪ್ರೋತ್ಸಾಹಿಸಿ ಮುನ್ನಡೆಸುವವರು ಶಿಕ್ಷಕರು. ತರಗತಿಯಲ್ಲಿ ಪಾಠ ಮಾಡುತ್ತ, ಪುಟಾಣಿಗಳ ಮನಸ್ಸಿನಲ್ಲಿರುವ ಕುತೂಹಲ ಭರಿತ ನಾನಾ ಪ್ರಶ್ನೆಗಳಿಗೆ ಉತ್ತರಿಸುತ್ತ, ವಿದ್ಯಾರ್ಥಿಗಳ ಜ್ಞಾನದಾಹವನ್ನು ತಣಿಸುತ್ತ, ಸರಿ-ತಪ್ಪುಗಳ ಬಗ್ಗೆ ತಿಳಿಸಿ, ಸರಿಯಾದ ಮಾರ್ಗದರ್ಶನವನ್ನಿತ್ತು, ಓರ್ವ ಆದರ್ಶ ವ್ಯಕ್ತಿಯನ್ನಾಗಿ ರೂಪಿಸುವವರು ಶಿಕ್ಷಕರು.

ಜನಗಣತಿ, ಮಕ್ಕಳ ಗಣತಿ, ಜಾನುವಾರು ಗಣತಿ ಎಂದು ಮನೆಮನೆಗೆ ತೆರಳಿ, ಮಾಹಿತಿಗಳನ್ನು ಕಲೆಹಾಕಿ, ನಗುಮೊಗದೊಂದಿಗೆ ತಮ್ಮ ಕರ್ತವ್ಯವನ್ನು ನಿರ್ವಹಿಸುವವರು ನಮ್ಮ ಶಿಕ್ಷಕರು. ಮಧ್ಯಾಹ್ನ ಮಕ್ಕಳಿಗೆ ಬಿಸಿಯೂಟವನ್ನು ಬಡಿಸಿ, ವಿದ್ಯಾರ್ಥಿಗಳು ಸಂತೃಪ್ತಿಯಿಂದ ಊಟ ಮಾಡುವುದನ್ನು ನೋಡಿ ಖುಷಿಪಡುವವರು ಅಧ್ಯಾಪಕರು. ವಿದ್ಯಾರ್ಥಿಗಳನ್ನು ಪ್ರತಿಭಾ ಕಾರಂಜಿ, ಕ್ರೀಡೋತ್ಸವ, ಶಾಲಾ ವಾರ್ಷಿಕೋತ್ಸವ ಮುಂತಾದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿ, ಇನ್ನೊಂದೆಡೆ ಪರೀಕ್ಷೆಗೆ ಅಣಿಗೊಳಿಸುತ್ತಾ, ಮತ್ತೂಂದೆಡೆ ಬದುಕಿನಲ್ಲಿನ ಏಳು-ಬೀಳುಗಳನ್ನು ಧೈರ್ಯವಾಗಿ ಎದುರಿಸಿ, ಆತ್ಮವಿಶ್ವಾಸದಿಂದ ಮುನ್ನಡೆಯುವದನ್ನು ತಿಳಿಸಿಕೊಡುವ ಜವಾಬ್ದಾರಿಯೂ ಶಿಕ್ಷಕರದ್ದು. ಅಲ್ಲದೇ ಶಾಲೆಯಲ್ಲಿ ಹಾಜರಿ ಪುಸ್ತಕದಿಂದ ಹಿಡಿದು, ವಿದ್ಯಾರ್ಥಿವೇತನ ವಿತರಣೆ, ಮಕ್ಕಳ ಆರೋಗ್ಯ ತಪಾಸಣೆ, ಕಬ್ಬಿಣದಂಶದ ಮಾತ್ರೆಗಳ ವಿತರಣೆ, ಶಿಕ್ಷಕ-ರಕ್ಷಕರ ಸಭೆ… ಹೀಗೆ ನೂರೆಂಟು ಕೆಲಸಗಳನ್ನು ನಿರ್ವಹಿಸಿ, ಅದರ ದಾಖಲೆಗಳನ್ನು ತಯಾರಿಸಿ ಜೋಪಾನವಾಗಿಡಬೇಕಾದ ಹೊಣೆ ಶಿಕ್ಷಕರದ್ದು.

ಆದಿತ್ಯವಾರ ಶಾಲೆಗೆ ರಜೆ ಇರುವುದರಿಂದಾಗಿ ತಮ್ಮ ಮಕ್ಕಳ ಕೀಟಲೆ, ತುಂಟಾಟಗಳನ್ನು ನೋಡಿ ಬೇಸತ್ತು, ಭಾನುವಾರವೂ ಶಾಲೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತೆಂದು ಯೋಚಿಸುವ ಪೋಷಕರೂ ಇದ್ದಾರೆ. ಮನೆಯಲ್ಲಿ ಒಂದೆರಡು ಮಕ್ಕಳನ್ನು ಸಂಭಾಳಿಸುವಲ್ಲಿ ಹೈರಾಣಾಗಿರುವ ಪೋಷಕರ ನಡುವೆ, ತರಗತಿಯಲ್ಲಿ 50-60 ವಿದ್ಯಾರ್ಥಿಗಳನ್ನು ಸಂಭಾಳಿಸಿ, ಸರಿಯಾದ ಮಾರ್ಗದರ್ಶನವನ್ನು ನೀಡುವ ಅಧ್ಯಾಪಕರ ತಾಳ್ಮೆಗೆ ಸರಿಸಾಟಿ ಯಾವುದಿದೆ? ಅಂದು ವಿದ್ಯಾಭ್ಯಾಸಕ್ಕಾಗಿ ಗುರುಗಳನ್ನು ಹುಡುಕಿಕೊಂಡು ವಿದ್ಯಾರ್ಥಿಗಳು ಹೋಗುತ್ತಿದ್ದರು. ಆದರೆ, ಇಂದು ಅರ್ಧದಲ್ಲಿ ಶಾಲೆಬಿಟ್ಟ ಮಕ್ಕಳನ್ನು, ಬಹುದಿನಗಳ ಕಾಲ ಗೈರುಹಾಜರಾಗಿರುವ ಮಕ್ಕಳನ್ನು ಹುಡುಕಿಕೊಂಡು, ಮನೆಮನೆಗೆ ಅಧ್ಯಾಪಕರು ಹೋಗಬೇಕಾಗಿದೆ, ಹಾಗೂ “ಮರಳಿ ಬಾ ಶಾಲೆಗೆ’ ಎಂದು ಕರೆತರುವ ಜವಾಬ್ದಾರಿ ಶಿಕ್ಷಕರದ್ದು.

ಒಂದನೇ ತರಗತಿಗೆ ಸೇರಿದ ಮೊದಲ ದಿನ, ಪೋಷಕರು ತಮ್ಮ ಮಕ್ಕಳನ್ನು ತರಗತಿಯಲ್ಲಿ ಬಿಟ್ಟು ಹೊರಡುವಾಗ, ಇಡೀ ಶಾಲೆಯೇ ಒಂದಾಗುವಂತೆ ಅಳುವ ಮಕ್ಕಳು ಒಂದೆಡೆಯಾದರೆ, ಕುಳಿತಲ್ಲಿ ಕೂರದೆ, ಇಡೀ ತರಗತಿಯಲ್ಲಿರುವ ಇತರರಿಗೆ ತಂಟೆ ಮಾಡುವ ಮಕ್ಕಳು ಇನ್ನೊಂದೆಡೆ. ಈ ಎರಡರ ಪೈಕಿ, ನಾವೂ ಒಂದು ವರ್ಗಕ್ಕೆ ಸೇರಿದವರಾಗಿದ್ದೆವು. ಆದರೆ, ನಮ್ಮನ್ನು ಸಮಾಧಾನ ಮಾಡಿ, ಶಾಲೆಗೆ ದಿನಾಲೂ ಬರುವಂತೆ ತಿಳಿಹೇಳಿ, ಚಾಕಲೇಟು ಕೊಟ್ಟು ರಮಿಸಿ, ತಿದ್ದಿತೀಡಿ, ಬುದ್ಧಿ ಹೇಳಿ ಅಕ್ಷರಾಭ್ಯಾಸವನ್ನು ಆರಂಭ ಮಾಡಿದ ನಮ್ಮ ಒಂದನೇ ತರಗತಿಯ ಟೀಚರನ್ನು ಮರೆಯಲು ಸಾಧ್ಯವೆ? ಅವರ ಆ ತಾಳ್ಮೆ ನಮಗಿದೆಯೇ?

ದಾರಿಯಲ್ಲಿ ಎದುರು ಸಿಕ್ಕಿದಾಗ “ನಮಸ್ತೆ ಟೀಚರ್‌’ ಅಥವಾ “ನಮಸ್ತೆ ಸಾರ್‌’ ಎಂದಾಗ, ಸಂತಸ ಪಡುವವರು ಶಿಕ್ಷಕರು. ಯಾವುದೇ ಫ‌ಲಾಪೇಕ್ಷೆಗಳಿಲ್ಲದೇ ಎಷ್ಟೋ ವರ್ಷಗಳಿಂದ ಶಿಕ್ಷಕನಾಗಿ, ಇದ್ದಷ್ಟೇ ಸಂಬಳದಲ್ಲಿ ದುಡಿಯುತ್ತಾ, ತಾನು ಕಲಿಸಿದ ವಿದ್ಯಾರ್ಥಿಗಳು ಉನ್ನತ, ಅತ್ಯುನ್ನತ ಸ್ಥಾನಕ್ಕೇರಿದಾಗ “ನನ್ನ ವಿದ್ಯಾರ್ಥಿನಿ’ ಎಂದು ಹಿರಿಹಿರಿ ಹಿಗ್ಗುವ ಜೀವ, ಅದು ಶಿಕ್ಷಕರದ್ದು.

ತಮ್ಮ ವಿದ್ಯಾರ್ಥಿಗಳ ಏಳಿಗೆ, ಶ್ರೇಯೋಭಿವೃದ್ಧಿ ಹಾಗೂ ಉತ್ತಮ ಭವಿಷ್ಯದ ನಿರ್ಮಾಣದಲ್ಲಿ ತಮ್ಮ ಖುಷಿಯನ್ನು ಕಂಡುಕೊಂಡು ಸತ್ಪ್ರಜೆಯನ್ನಾಗಿ ರೂಪಿಸುವ ಮಹಾನ್‌ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಶಿಕ್ಷಕ ವೃಂದದವರಿಗೆಲ್ಲರಿಗೂ ಸಲಾಂ!

ಅನುಷಾ ಎಸ್‌. ಶೆಟ್ಟಿ
ಬಿಎಡ್‌ (4ನೇ ಸೆಮಿಸ್ಟರ್‌), ಡಾ. ಟಿ. ಎಂ.ಎ. ಪೈ ಶಿಕ್ಷಣ ಮಹಾವಿದ್ಯಾಲಯ, ಉಡುಪಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಸಾಮಾನ್ಯವಾಗಿ "ಹಾಸ್ಟೆಲ್‌'ಎಂದೊಡನೆ ಮೂಗುಮುರಿಯುವ ಜನರೆಡೆಯಲ್ಲಿ ನಾನೊಬ್ಬಳು ವಿಚಿತ್ರ ಹಾಸ್ಟೆಲ್‌ ಪ್ರೇಮಿ! ನನಗಂತೂ ಬಹಳ ವರ್ಷಗಳಿಂದ ಹಾಸ್ಟೆಲ್‌ನಲ್ಲಿದ್ದುಕೊಂಡು...

  • ಇಂಜಿನಿಯರಿಂಗ್‌ ಕಾಲೇಜ್‌ ಅಂದ್ರೆ ಹಾಗೇ. ಎಡೆಬಿಡದೆ ನಡೆಯುವ ಕ್ಲಾಸುಗಳು. ಹೇಗೋ ಆಗುತ್ತಿವೆ ಎನ್ನುವ ಲ್ಯಾಬ್‌ಗಳು, ವರ್ಕ್‌ಶಾಪ್‌, ಲೆಕ್ಚರರ್, ಅಟೆಂಡೆನ್ಸ್‌-...

  • ಈಗಿನ ಮಕ್ಕಳು ಇಂಥ ಆಟಗಳನ್ನು ಆಡುವು ದು ತುಂ ಬ ಕಡಿಮೆ. ಆಡಿದರೆ ಅದು ಹಳ್ಳಿ ಹುಡುಗರೇ ಇರಬೇಕು. ತಂತ್ರಜ್ಞಾನ ಬಂದ ಮೇಲಂತೂ ಮೊಬೈಲ್‌ಗ‌ಳು, ಲ್ಯಾಪ್‌ಟಾ ಪ್‌, ಕಂಪ್ಯೂಟರ್‌ಗಳ ...

  • ಇದು ನಮ್ಮೂರಿನ ಸರಕಾರಿ ಬಾವಿಕಟ್ಟೆ. ಮುಂಜಾನೆಯಿಂದ ಮಂಕಾಗಿರುವ ಈ ಬಾವಿಕಟ್ಟೆಗೆ ಕಳೆ ಬರುವುದೇ ಮುಸ್ಸಂಜೆ ಆರರ ಹೊತ್ತು. ಮುಂಜಾನೆಯಿಂದ ಹಿಡಿದು ಮಟಮಟ ಮಧ್ಯಾಹ್ನದವರೆಗೂ...

  • ನಮ್ಮ ಬಾಲ್ಯದ ಶಾಲಾ ದಿನಗಳಲ್ಲಿ ರಜೆಯೆಂದರೆ ತುಂಬಾ ಸಂತೋಷ. ಅದರಲ್ಲಿ ಶನಿವಾರ ಬಂತೆಂದರೆ ನಮಗೆ ಖುಶಿಯೋ ಖುಶಿ. ಏಕೆಂದರೆ, ಭಾನುವಾರ ಆಟ ಆಡಬಹುದಲ್ಲ ! ಆಗ ನಾವು ಐದು...

ಹೊಸ ಸೇರ್ಪಡೆ