ಆಕಾಶ ದೀಪವು ನೀನು, ನಿನ್ನ ಕಂಡಾಗ ಸಂತೋಷವೇನು!

Team Udayavani, May 17, 2019, 6:00 AM IST

ನೀವು ಯೋಚಿಸುತ್ತ ಇರಬಹುದು, “ಯಾರು ಈ ಆಕಾಶ ದೀಪ? ಯಾರನ್ನು ಕಂಡಾಗ ಸಂತೋಷವಾಗುತ್ತೆ’ ಎಂದು. ಬರೀ ನನಗೆ ಮಾತ್ರವಲ್ಲ, ನಿಮಗೂ ಆಕೆ ಆಕಾಶದೀಪವೇ. ಇಡೀ ಜಗತ್ತಿನಲ್ಲೇ ಆಕೆಯನ್ನು ಕಂಡು ಸಂತೋಷ ಪಡದ ಜೀವಿ ಇರಲಾರ. ಪ್ರತಿ ಸೋಲಿನಲ್ಲೂ ಎದೆಗುಂದದೆ, “ಮುನ್ನಡೆ’ ಎಂದು ತಿಳಿಹೇಳಿದ ಗುರು.


ಅವಳು ಅತ್ತಾಗ ಕಂಬನಿಯಳಿಸಿ ಮೊಗದಲ್ಲಿ ನಗು ಅರಳಿಸುವ ಹೊಂಬೆಳಕು ಅವಳು. ಅಸ್ವಸ್ಥರಾದಾಗ ತನ್ನ ಮಡಿಲಲ್ಲಿ ಮಲಗಿಸಿ ಸಲಹಿದ ವೈದ್ಯೆ ಅವಳು. ಬಳಪ ಹಿಡಿದು ಜೀವನದ ವರ್ಣಮಾಲೆ ಕಲಿಸಿದ ಶಿಕ್ಷಕಿಯವಳು. ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು… ಎಂದು ಜೋಗುಳ ಹಾಡಿ ನಮ್ಮನ್ನು ನಿದಿರಾ ಲೋಕಕ್ಕೆ ಒಯ್ಯುತ್ತಿದ್ದ ಗಾಯಕಿ ಅವಳು. ನವಜಾತರಾಗಿದ್ದ ನಮ್ಮ ಹಸಿವಿನ ಕೂಗು ಕೇಳಿ, ತನ್ನ ಮೊಲೆ ಹಾಲುಣಿಸಿ ನಮ್ಮ ಹಸಿವು ನೀಗಿದ ಅನ್ನದಾತೆ ಅವಳು, ನಮ್ಮನ್ನು ಈ ಜಗತ್ತಿಗೆ ಪರಿಚಯಿಸಿದ ಜನ್ಮದಾತೆ ಅವಳು.

ಅವಳೇ, ನಮ್ಮವಳೇ, ಅಮ್ಮ!
ಸ್ಮತಿಪಟಲದ ಪುಟಗಳನ್ನು ಒಮ್ಮೆ ಹಿಂದಿರುಗಿಸಿ ನೋಡಿದಾಗ ಆ ಸುಂದರ ಬಾಲ್ಯದ ದೃಶ್ಯಾವಳಿ ಕಣ್ಮುಂದೆ ಹರಿದಾಡುತ್ತವೆ. ತೊದಲುತ್ತ ಮಗುವೊಂದು ಮೊದಲ ಬಾರಿಗೆ “ಅಮ್ಮಾ!’ ಎಂದು ಕೂಗಿದಾಗ ತಾಯಿಯ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಕಂದನ ಮೊದಲ ನುಡಿ, ಮೊದಲ ನಗು, ಮೊದಲ ಪಾಠ, ಮೊದಮೊದಲ ತುಂಟತನ ಇವೆಲ್ಲ ತಾಯಿಯಾದವಳಿಗೆ ಮುತ್ತುರತ್ನಗಳಿಗಿಂತಲೂ ಅಮೂಲ್ಯವಾದವು. ಇನ್ನು ನನ್ನ ಅಮ್ಮನಿಗಂತೂ ನನ್ನನ್ನು ಮೊದಲ ಬಾರಿ ಶಾಲೆಗೆ ಕಳಿಸುವ ಹುಮ್ಮಸ್ಸು ತಾರಕಕ್ಕೇರಿತ್ತು.

ಬ್ಯಾಗನ್ನು ಹೆಗಲಿಗೇರಿಸಿ, ಕುತ್ತಿಗೆಗೆ ನೀರಿನ ಬಾಟಲ್‌ ಜೋತುಹಾಕಿ, ಅಮ್ಮ ಕಟ್ಟಿದ ಎರಡು ಜುಟ್ಟನ್ನು 20 ಸಾರಿ ಕನ್ನಡಿಯಲ್ಲಿ ನೋಡಿದ ನಂತರ ಶಾಲೆಗೆ ಹೊರಡುತ್ತಿದ್ದೆ. ಹೊರಡುವಾಗ ನಗುನಗುತ್ತ ಹೊರಟರೂ, ಹಲವಾರು ಬಾರಿ ಶಾಲೆಯ ಗೇಟ್‌ ನೋಡಿಯೇ ಓಡಿ ಬರುತ್ತಿದ್ದ ನನ್ನ ಈ ಪ್ರಸಂಗವನ್ನು ಅಂದೊಮ್ಮೆ, ಇಂದೊಮ್ಮೆ ವಾಚಿಸುವ ಪರಂಪರೆಯನ್ನು ಅಮ್ಮ ಬೆಳೆಸಿಕೊಂಡಿದ್ದಾಳೆ !

ಜನನಾವಧಿಯಿಂದ ಇಂದಿನವರೆಗೂ ನಮ್ಮನ್ನು ನಿಷ್ಕಲ್ಮಷವಾಗಿ ಪ್ರೀತಿಸುವ ಜೀವಿ ಎಂದರೆ “ಅಮ್ಮ’. ಒಮ್ಮೆ ಯೋಚಿಸಿ ನೋಡಿ ನಮಗೆ ಸಾಟಿಯಿಲ್ಲದ ಪ್ರೀತಿ ಧಾರೆಯೆರೆದ ಈ ವನಿತೆಗೆ ನಾವು ಪ್ರತಿಯಾಗಿ ನೀಡಿದ್ದೇನು ಎಂದು. ಹುಟ್ಟಿನ ಪ್ರಸವ ಬೇನೆಯಿಂದ ಹಿಡಿದು ಇಂದಿನವರೆಗೂ ಅನೇಕ ರೀತಿಯಲ್ಲಿ ಅಮ್ಮನ ತಾಳ್ಮೆ ಪರೀಕ್ಷಿಸಲು ಮುಂದಾಗುತ್ತೇವೆ. ಆದರೂ ಗೆಲುವು ಎಂದಿಗೂ ಅವಳದೇ. ದಿನ ಬೆಳಗಾದರೆ “ಅಮ್ಮ… ಬುಕ್ಸ್‌ ಎಲ್ಲಿ?’, “ಅಮ್ಮ ಸಾಕ್ಸ್‌ ಎಲ್ಲಿ?’, “ಅಮ್ಮ ಯೂನಿಫಾರ್ಮ್ ಎಲ್ಲಿ?’ ಎಂದೆಲ್ಲಾ ಕೂಗಾಡುತ್ತೇವೆ. ಅದೇ ಅಪ್ಪನಲ್ಲಿ ನಾವು ಕೇಳುವುದು ಒಂದೇ ಪ್ರಶ್ನೆ, “ಅಪ್ಪಾ… ಅಮ್ಮ ಎಲ್ಲಿ?’ ಎಂದು.

ಅಮ್ಮನಿಲ್ಲದ ಜೀವನ ಊಹಿಸಲೂ ಸಾಧ್ಯವಿಲ್ಲ. ಎಲ್ಲರಿಗೂ ಈ ಅಮ್ಮನೆಂಬ ವರದಾನ ಲಭಿಸಿರುವುದಿಲ್ಲ. ಅವಳು ನಮ್ಮ ಬಳಿ ಇದ್ದಾಳೆಯೆಂದರೆ ನಾವು ಅತ್ಯಂತ ಭಾಗ್ಯವಂತರು. ತಾನು ಎಲ್ಲ ಕಡೆಯಲ್ಲೂ ಇರಲು ಸಾಧ್ಯವಿಲ್ಲ ಎಂದು ದೇವರು ತಾಯಿಯನ್ನು ಸೃಷ್ಟಿಸಿದನಂತೆ. ಆದರೆ, ನಾವು ದೇಗುಲದಲ್ಲಿ ದೇವರನ್ನು ಹುಡುಕುವ ಭರದಲ್ಲಿ, ಪ್ರತ್ಯಕ್ಷ ದೇವತೆಯನ್ನೇ ಮರೆಯುತ್ತೇವೆ. ಪ್ರತಿದಿನ, ಪ್ರತಿ ಕ್ಷಣ ನಮ್ಮನ್ನು ಕೊಂಚ ಹೆಚ್ಚು ಪ್ರೀತಿಸುವ ಅಮ್ಮನಿಗೆ ಶುಭ್ರವಾಗಿ ಮುಗುಳ್ನಕ್ಕು ಧನ್ಯವಾದ ಹೇಳಲು “ಮದರ್ ಡೇ’ಗೆ ಕಾಯಬೇಕಿತ್ತೆ? ನನ್ನ ಪಾಲಿಗೆ ಪ್ರತಿದಿನವೂ ಮದರ್ಸ್‌ ಡೇ !

ಇಂದೇ ಹೇಳಿ, ಉಹೂಂ ಈಗಲೇ ಹೇಳಿ. ಅಮ್ಮಾ ಥ್ಯಾಂಕ್ಯೂ!

-ಶಿವರಂಜನಿ
ದ್ವಿತೀಯ ಪಿಯುಸಿ
ಗೋವಿಂದದಾಸ ಪ. ಪೂ. ಕಾಲೇಜು, ಸುರತ್ಕಲ್‌


ಈ ವಿಭಾಗದಿಂದ ಇನ್ನಷ್ಟು

  • ಬರೋಬ್ಬರಿ ಒಂದು ತಿಂಗಳಿನಿಂದ ನೆಗಡಿಯ ಕಾಟ. ಅದೆಷ್ಟೋ ವೈದ್ಯ ಮಹಾಶಯರನ್ನೂ ಕಂಡರೂ, ಬಗೆ ಬಗೆಯ ಗುಳಿಗೆ ನುಂಗಿದರೂ ನನಗೆ ನೆಗಡಿಯಿಂದ ಮುಕ್ತಿ ದೊರಕಲಿಲ್ಲ. ಹೀಗಿರಲು...

  • ಜೀವನದಲ್ಲಿ ಮೊದಲ ಬಾರಿಗೆ ಮೊಬೈಲನ್ನು ಬಿಟ್ಟು ಒಂದು ವಾರ ಕಳೆದ ಅನುಭವ ಈ ರಜೆಯಲ್ಲಿ ನನ್ನದಾಗಿತ್ತು. ಇಂದು ಒಂದು ಸಣ್ಣ ಕಲ್ಲನ್ನು ಈ ಕಡೆಯಿಂದ ಆಕಡೆ ಇಟ್ಟರೂ ಫೋಟೋ...

  • ನಾನು ನೋಡಿದ ಮೊದಲ ವೀರ ಅಂತಾರಲ್ಲ, ಹಾಗೆಯೇ ನನ್ನ ಜೀವನದಲ್ಲಿ ನಾನು ಕಂಡ ಮೊದಲನೆಯ ಧೀರ ನನ್ನ ಅಪ್ಪ. ಎಲ್ಲರ ಜೀವನದಲ್ಲಿ ಒಬ್ಬೊಬ್ಬರು ಆದರ್ಶ ವ್ಯಕ್ತಿಗಳಿರುತ್ತಾರೆ....

  • ಮಳೆ ಒಂದೇ ಸಮನೆ ಸುರಿಯುತ್ತಿತ್ತು. ನಾನು ನನ್ನ ಗೆಳತಿಯರೊಂದಿಗೆ ಬ್ಯಾಗ್‌ ಅನ್ನು ಎದೆಗವಚಿಕೊಂಡು ಒಂದು ಕೊಡೆಯಲ್ಲಿ ಇಬ್ಬರು ಎಂಬಂತೆ ನಾಲ್ಕು ಜನ ಬರುತ್ತಿದ್ದೆವು....

  • ಸ್ಪಿಸ್‌ (SPYSS-Shri Pathanjali Yoga Shikshana Samithi) ಎಂದ ಮೇಲೆ ಎಲ್ಲರಿಗೂ ನೆನಪಾಗುವುದು ಪತಂಜಲಿ ಯೋಗ ಸೇವಾ ಸಮಿತಿ. ನನಗೆ ಕೂಡ ಯೋಗ ಕಲಿಯಬೇಕೆಂಬ ಆಸೆ ಇತ್ತು. ಈ ಆಸೆಯ ಈಡೇರಿಕೆ ಆದದ್ದು...

ಹೊಸ ಸೇರ್ಪಡೆ