ಇಂದಿನ ಮಕ್ಕಳು ನಾಳಿನ ಮುದುಕರು !

Team Udayavani, Aug 10, 2018, 6:00 AM IST

ಪುಟ್ಟಿ ಎಂದಿನಂತೆ ಬೆಳಗ್ಗೆ ಆರು ಗಂಟೆಗೆ ಎದ್ದಿದ್ದಳು. ಆದರೂ ಅವಳಲ್ಲಿ ಏನೋ ಒಂದು ರೀತಿಯ ಲವಲವಿಕೆ ಹಾಗೂ ವ್ಯಾಕುಲತೆಯ ಭಾವ ಎದ್ದು ಕಾಣುತ್ತಿತ್ತು. ಏಕೆಂದರೆ, ಎರಡು ತಿಂಗಳ ರಜೆಯ ಬಳಿಕ ಶಾಲೆಯು ಮತ್ತೆ ಪ್ರಾರಂಭವಾಗಿತ್ತು. ಅಂದು 5ನೇ ತರಗತಿಯ ಮೊದಲ ಮುಂಜಾವು. ಅಪ್ಪನೂ ಅಷ್ಟೇ ತನ್ನ ಮಗಳ ಯೂನಿಫಾರಂಗೆ ಇಸ್ತ್ರಿ ಹೊಡೆಯುವಲ್ಲಿ ನಿರತರಾಗಿದ್ದರು. ತಾಯಿಯಂತೂ ಬಹಳ ಲವಲವಿಕೆಯಿಂದ ಅಡುಗೆ ಮಾಡುತ್ತಾ, ಮಗಳ ಚೀಲಕ್ಕೆ ಪುಸ್ತಕ ತುಂಬಿಸುವಲ್ಲಿ ನಿರತರಾಗಿದ್ದರು. 

ಅಂತೂ ಇಂತೂ ಪುಟ್ಟಿಯ ಮೊದಲ ದಿನದ ತರಗತಿಗಳು ಮುಗಿದವು. ಪುಟ್ಟಿ ಮನೆಗೆ ಬಂದವಳೇ ತಾಯಿಯ ಬಳಿಗೆ ಬಂದು ಒಂದು ಉದ್ದ ಕಾಗದದ ಪಟ್ಟಿಯನ್ನೇ ಅವರ ಕೈಗಿಟ್ಟಳು. ಇದರಲ್ಲಿ ಎಲ್ಲಾ ವಿಷಯಗಳ, ಒಟ್ಟು ಪುಸ್ತಕಗಳ ಬಗ್ಗೆ ತಿಳಿಸಲಾಗಿತ್ತು. ಇದರಲ್ಲಿದ್ದ ಕೆಲವು ಪುಸ್ತಕಗಳನ್ನು ನಾಳೆಯೇ ತೆಗೆದುಕೊಂಡು ಹೋಗಬೇಕೆಂದೆಂದೂ, ಉಳಿದ ಪುಸ್ತಕಗಳನ್ನು ವೇಳಾಪಟ್ಟಿ ನಿರ್ಧರಿಸಿದ ಬಳಿಕ ತರಬೇಕೆಂದೂ ತಿಳಿಸಲಾಗಿತ್ತು.

ಇನ್ನು, ಪುಸ್ತಕಗಳಿಗೆ ಬೈಂಡು ಹಾಕುವ ಕಾರ್ಯ ಭರದಿಂದ ಸಾಗಿತು. ಮರುದಿನ ಹೇಳಿದ ಪುಸ್ತಕಗಳನ್ನು ಶಾಲೆಗೆ ತೆಗೆದೊಯ್ಯಲಾಯಿತು. ಆದರೆ ಮಣಭಾರ ಚೀಲವನ್ನು ಹೊತ್ತುಕೊಂಡು ಮನೆಗೆ ಮರಳಿದ ಪುಟ್ಟಿಗೆ ಬೆನ್ನಿಗೇಕೋ ಮೊದಲ ದಿನವೇ ನೋವು ಕಾಣಿಸಿಕೊಂಡಿತ್ತು. ಹಾಗೆಂದು ಹೇಳಿ ವೇಳಾಪಟ್ಟಿ ಪ್ರಕಟವಾದ ಬಳಿಕವೇನೂ ಈ ಚೀಲದ ಭಾರ ಕಡಿಮೆಯಾಗಿರಲಿಲ್ಲ. ಬದಲಿಗೆ ಈ ಪುಸ್ತಕಗಳೊಂದಿಗೆ ಪಠ್ಯಪುಸ್ತಕಗಳೂ ಸೇರಿಕೊಂಡಿದ್ದವು. ಇಂದು ಪುಟ್ಟಿ 10ನೇ ತರಗತಿಯ ವಿದ್ಯಾರ್ಥಿ. ಸುಮಾರು 45 ಕೆಜಿ ಭಾರವಿದ್ದಾಳ್ಳೋ ಏನೊ. ಆದರೆ, ಆಕೆಯ ಚೀಲದ ಭಾರ ಸುಮಾರು 50 ಕೆ.ಜಿ.!

ಇದರಲ್ಲೇನೂ ಆಶ್ಚರ್ಯವಿಲ್ಲ ಬಿಡಿ. ನಾವು ಶಾಲೆಗೆ ಹೋಗುತ್ತಿದ್ದಾಗಲೂ ಇದೇ ಪರಿಸ್ಥಿತಿಯನ್ನು ಅನುಭವಿಸಿದ್ದೆವು ಎನ್ನುವಿರಾ? ಹಾಗಾದರೆ, ಪರಿವರ್ತನೆಯು ಜಗದ ನಿಯಮವಲ್ಲವೆ? ಇಂದಿನ ಶಿಕ್ಷಣ ಪದ್ಧತಿಗೆ ಹೋಲಿಸಿದರೆ ಹಿಂದಿನ ಶಿಕ್ಷಣ ಪದ್ಧತಿಯೇ ಕೊಂಚ ಮಟ್ಟಿಗೆ ಸುಖದಾಯಕವಾಗಿತ್ತು.

ನಾವೆಲ್ಲ 10ನೇ ತರಗತಿಯಲ್ಲಿ ಮೊದಲನೇ ಬಾರಿಗೆ ಕಲಿತಿದ್ದ ವಿಜ್ಞಾನ ಗಣಿತದ ಪಾಠಗಳನ್ನು ಇಂದು ನಾವು 7ನೇ, 8ನೇ ತರಗತಿಯವರ ಪುಸ್ತಕದಲ್ಲಿ ನೋಡಬಹುದಾಗಿದೆ. ಕೇಳಿದರೆ “ಇದು ಕಾಂಪಿಟೇಶನ್‌ನ ಯುಗ. ಇಂತಹ ಸ್ಪರ್ಧಾತ್ಮಕ ಪರಿಸರಕ್ಕೆ ಹೊಂದಿಕೊಳ್ಳುವಂತೆ ಪಾಠಗಳನ್ನು ಅಳವಡಿಸಲಾಗಿದೆ’ ಎಂಬ ಉತ್ತರವೂ ಶಿಕ್ಷಣ ಇಲಾಖೆಯಿಂದ ಒದಗಿಬರುತ್ತದೆ. ಇದು ಸ್ಪರ್ಧಾತ್ಮಕ ವ್ಯವಸ್ಥೆಗೆ ತಯಾರಿಯೋ ಅಥವಾ ವಿದ್ಯಾರ್ಥಿಗಳ ಬೆನ್ನು ಮುರಿಯಲು ಮಾಡಿರೋ ತಯಾರಿಯೋ ಒಂದೂ ಅರ್ಥವಾಗುವುದಿಲ್ಲ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬೆಳೆಯಲು ವ್ಯಾವಹಾರಿಕ ಅಂದರೆ ಪ್ರಾಕ್ಟಿಕಲ್‌ ಜ್ಞಾನ ಬೇಕೇ ವಿನಃ ಬರಿಯ ತಾತ್ವಿಕ ಜ್ಞಾನವಲ್ಲ. ಯಾಕೆಂದರೆ, ಇಂದಿನ ಜಗತ್ತು ಬಯಸುವುದು ಇದೇ ಆಗಿದೆ.

ಆದರೆ, ನಮ್ಮ ಶಿಕ್ಷಣ ಪದ್ಧತಿಯಲ್ಲಿ 10ನೇ ತರಗತಿಯವರೆಗೆ ಕೇವಲ ತಾತ್ವಿಕ ಜ್ಞಾನಕ್ಕೇ ಒತ್ತು ನೀಡಿ ಒಂದೇ ಸಮನೆ ಕಾಲೇಜುಗಳಲ್ಲಿ ವ್ಯಾವಹಾರಿಕ ಜ್ಞಾನವನ್ನು ತುರುಕಿಸುವ ಕೆಲಸ ನಡೆಯುತ್ತಿದೆ. ಇದರಿಂದಾಗಿ ಮಕ್ಕಳ ಚೀಲಗಳ ತೂಕ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿದೇಶಗಳಲ್ಲಿ ವರ್ಚುವಲ್‌ ಪಾಠದ ಕೊಠಡಿಗಳ ಪರಿಚಯವಾಗಿರುವ ಈ ಕಾಲದಲ್ಲೂ ನಾವು ಮಾತ್ರ ನಮ್ಮ ಮಕ್ಕಳ ಚೀಲದ ತೂಕವನ್ನು ಹೆಚ್ಚಿಸಿಕೊಳ್ಳುವುದರಲ್ಲೇ ನಿರತರಾಗಿದ್ದೇವೆ.

ಹಾಗೆಂದ ಮಾತ್ರಕ್ಕೆ ನಾನೇನು ವರ್ಚುವಲ್‌ ಶಾಲೆಗಳನ್ನು ಹೊಗಳುತ್ತಿಲ್ಲ. ಅವುಗಳು ನಮ್ಮ ಜೀವನಶೈಲಿಗೆ ಹೊಂದುವುದೂ ಇಲ್ಲ. ಆದರೆ ನಾನು ಹೇಳುವುದು ಇಷ್ಟೇ, ಮಕ್ಕಳ ತಾತ್ವಿಕ ಜ್ಞಾನಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಅವರ ವ್ಯಾವಹಾರಿಕ ಜ್ಞಾನಕ್ಕೂ ಕೊಡಬೇಕು. ಮಕ್ಕಳಿಗೆ ಎಳೆ ವಯಸ್ಸಿನಲ್ಲೇ ಪ್ರಯೋಗಾಲಯವನ್ನು ಒಂದು ಪ್ರಮುಖ ವಿಷಯವನ್ನಾಗಿ ಅಳವಡಿಸಿ ಪಾಠಗಳ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಅವರ ವ್ಯಾವಹಾರಿಕ ಬುದ್ಧಿಮತ್ತೆಯನ್ನು ಹೆಚ್ಚಿಸುವಲ್ಲಿ ಶಿಕ್ಷಣ ವ್ಯವಸ್ಥೆಯು ಕಾರ್ಯಪ್ರವೃತ್ತವಾಗಬೇಕು. ಇದರಿಂದ ಮಕ್ಕಳ ಜ್ಞಾನವೂ ಹೆಚ್ಚಿದಂತೆ, ಚೀಲದ ಭಾರವೂ ಇಳಿದಂತಾಗುತ್ತದೆ. ಅದನ್ನು ಬಿಟ್ಟು ಬ್ಯಾಗುರಹಿತ ದಿನವನ್ನು ಆಚರಿಸುವುದರಿಂದ ಮಕ್ಕಳಿಗೆ ಯಾವುದೇ ಪ್ರಯೋಜನವಿಲ್ಲ. ಸಾಧ್ಯವಿದ್ದಲ್ಲಿ ಇಲಾಖೆ ಮಕ್ಕಳ ದಿನನಿತ್ಯದ ಚೀಲದ ಭಾರವನ್ನು ಅರ್ಧಕ್ಕೆ ಇಳಿಸುವಂತಹ ಕಾರ್ಯಗಳನ್ನು ಕೈಗೊಳ್ಳಲಿ. ವಿದೇಶಗಳಲ್ಲಿ ಎಷ್ಟೋ ಕಡೆಗಳಲ್ಲಿ ಇಂದು ಮಕ್ಕಳು ಪುಸ್ತಕಗಳನ್ನು ಶಾಲೆಗೆ ತೆಗೆದುಕೊಂಡು ಹೋಗುವುದಿಲ್ಲ. ಆದರೂ ಅವರ ಶಿಕ್ಷಣದ ಗುಣಮಟ್ಟ ಸ್ಪರ್ಧಾತ್ಮಕ ಜಗತ್ತಿಗೆ ಒಗ್ಗಿಕೊಂಡಿಲ್ಲವೇ?

ಆದ್ದರಿಂದ ಶಿಕ್ಷಣ ಇಲಾಖೆಗಳು ಈ ಬಗ್ಗೆ ಸಂಶೋಧನೆಗಳನ್ನು ಕೈಗೊಂಡು ಹೊಸ ವಿದ್ಯಾರ್ಥಿಪ್ರಿಯ ಶಿಕ್ಷಣ ಪದ್ಧತಿಯನ್ನು ಅಳವಡಿಸಬೇಕಾಗಿದೆ. ಇಲ್ಲವಾದಲ್ಲಿ ಪುಟ್ಟಿಯಂತೆ ಹಲವಾರು ಮಕ್ಕಳು ಕಾಲೇಜಿಗೆ ಹೋಗುವಾಗಲೇ ಬಾಗಿದ ಮುದುಕರಂತೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

ನಿಶಾಂತ್‌ ಪ್ರಭು
ದ್ವಿತೀಯ ಇಂಜಿನಿಯರಿಂಗ್‌ ಶ್ರೀಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ, ಬಂಟಕಲ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮನುಷ್ಯ ಜೀವನ ನೀರಿನ ಮೇಲಿರುವ ಗುಳ್ಳೆಯಂತೆ ಎಂಬ ಮಾತನ್ನು ಹಿರಿಯರಿಂದ ಕೇಳಿದ್ದೇವೆ. ಪ್ರತಿದಿನ ದಿನಪತ್ರಿಕೆ ಓದಿದಾಗ ಈಜಲು ಹೋದ ಯುವಕರು ನೀರುಪಾಲು ಅನ್ನುವ...

  • ಮನೆಯವರ ಹೊರತಾಗಿ ದೂರದ ಊರಿಗೆ ಹೊರಟು ನಿಂತದ್ದು ಅದೇ ಮೊದಲು. ಮಂಗಳೂರಿನ ಸುಳ್ಯ ಸಮೀಪ ನಮ್ಮ ಊರು. ಸುಳ್ಯದಿಂದ ರಾತ್ರಿ ಹೊರಡುವ ಸ್ಲೀಪರ್‌ಕೋಚ್‌ ಬಸ್‌ ಒಂದರಲ್ಲಿ...

  • ಬಾಲ್ಯದ ನೆನಪುಗಳು ಎಷ್ಟು ಚಂದವಲ್ಲವೇ, ಎಲ್ಲರಿಗೂ ತಮ್ಮ ಶಾಲಾಜೀವನದಲ್ಲಿ ಸಾಕಷ್ಟು ಸವಿನೆನಪುಗಳು ಬಂದುಹೋಗುತ್ತವೆ. ಒಮ್ಮೆಯಾದರೂ ಟೀಚರ್‌ ಆಗಬೇಕೆಂಬ ಯೋಚನೆ...

  • ಯಾವುದೋ ಒಂದು ಕಾರ್ಯಕ್ರಮದಲ್ಲಿ ಹಿರಿಯರೊಬ್ಬರು ಈಗಿನ ಯುವಸಮೂಹ ಪ್ರೇಮದ ಬಗ್ಗೆ ಬರೆಯುವುದೇ ಇಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದರು. ನನಗೆ ಬರೆಯುವ ಹುಚ್ಚಿದೆಯೆಂದು...

  • ಮಲೆನಾಡು, ಹೆಸರಿಗೆ ತಕ್ಕಂತೆ ಮಲೆಗಳ ನಾಡು, ಯಾರಿಗೂ ಬೇಡವೆಂದೆನಿಸದ ಭೂಲೋಕದ ಸುಂದರ ತಾಣ ನಮ್ಮ ಮಲೆನಾಡು. ಮಲೆನಾಡು ಅರ್ಥಾತ್‌ ಮಳೆಯ ನಾಡು. ಕೇವಲ ಮಳೆಗೆಂದು ಹೆಸರುವಾಸಿಯಾಗಿಲ್ಲ,...

ಹೊಸ ಸೇರ್ಪಡೆ