ಕೊಡೆಯ ಯಾರಿಗೂ ಕೊಡೆ !
Team Udayavani, Aug 16, 2019, 5:00 AM IST
ಮಳೆಗಾಲ ಆರಂಭವಾದಗಿನಿಂದ ಮಳೆ ಸುರಿಯುತ್ತಲೇ ಇದೆ. ಹೊಳೆ- ತೊರೆ ಗಳು ತುಂಬಿ ಹರಿಯ ಲಾರಂಭಿಸಿದೆ. ಕೊಡೆ ಇಲ್ಲದೆ ಹೊರಗೆ ಹೋಗಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಬಂದಿದೆ. ಎಲ್ಲಿ ನೋಡಿದರೂ ಎಲ್ಲರ ಕೈಯಲ್ಲಿ ಕೊಡೆಯೇ ಕಾಣಸಿಗುತ್ತದೆ. ಆದರೆ ಈಗ ಮುಂಚೆ ಇದ್ದ 4 ಪೋಲ್ಡ್, 6 ಫೋಲ್ಡ್ ಚಿಕ್ಕಚಿಕ್ಕ ಕೊಡೆಗಳ ಕಾಲ ಮಾಸಿ ಹೋಗಿದೆ.
ಹಿಂದಿನ ಕಾಲದಲ್ಲಿ ಅಜ್ಜಂದಿರ ಹತ್ತಿರ ಇದ್ದಂತಹ ಉದ್ದನೆಯ ಕಪ್ಪು ಬಣ್ಣದ ಕೊಡೆ ಈಗ ಮಾಡರ್ನ್ ಲುಕ್ ಪಡೆದು, ಎಲ್ಲರ ಕೈಯಲ್ಲಿಯೂ ರಾರಾಜಿಸಲು ಶುರು ಮಾಡಿದೆ. ಕಾಲೇಜಿಗೆ ಹೋಗುತ್ತಿರುವ ವಿದ್ಯಾರ್ಥಿಗಳ ಕೈಯಲ್ಲಂತೂ ವಿಭಿನ್ನ ಬಣ್ಣಗಳ ಕೊಡೆಗಳು ಟ್ರೆಂಡಿಯಾಗಿವೆ. ವಿವಿಧ ಸಂಸ್ಕೃತಿಯನ್ನು ಬಿಂಬಿಸುವ ಕೊಡೆಗಳು, ಕಾಮನಬಿಲ್ಲಿನ ಬಣ್ಣ ವನ್ನು ಹೋಲುವ ಕೊಡೆಗಳು, ಯಾವುದೋ ಭಾಷೆಯ ಲಿಪಿಯನ್ನು ಹೋಲುವ ಕೊಡೆಗಳು, ನ್ಯೂಸ್ ಪೇಪರ್‌ನ್ನು ಹೋಲುವ ಕೊಡೆಗಳು- ವೈವಿಧ್ಯಮ ಯವಾಗಿ ಮಾರುಕಟ್ಟೆಯಲ್ಲಿ ಝಗಮಗಿಸುತ್ತಿವೆ. ಅದರಲ್ಲೂ ಈಗ ಹೆಚ್ಚು ಟ್ರೆಂಡ್‌ನಲ್ಲಿ ಇರುವುದೆಂದರೆ ನ್ಯೂಸ್ ಪೇಪರ್ ಅನ್ನು ಹೋಲುವ ಕೊಡೆಗಳು. ಕಪ್ಪು ಬಣ್ಣಕ್ಕೆ ಬಿಳುಪಿನ ಅಕ್ಷರದಲ್ಲಿ, ಬಿಳುಪಿನ ಬಣ್ಣಕ್ಕೆ ಕಪ್ಪಿನ ಲಿಪಿಯಲ್ಲಿ, ಪಿಂಕ್ ಬಣ್ಣಕ್ಕೆ ಕಪ್ಪು ಬಿಳುಪಿನ ಅಕ್ಷರದಲ್ಲಿ .. ಹೀಗೆ ಕಾಂಟ್ರಾಸ್ಟ್ ಬಣ್ಣಗಳಿಂದ ಕೂಡಿದ ಇವುಗಳ ಬೆಲೆ 100 ರೂಪಾಯಿಗಳಿಂದ ಆರಂಭವಾಗುತ್ತದೆ. ಅಗ್ಗದ ದರದಲ್ಲಿ ಎಲ್ಲರ ಕೈಗೆಟಕುವುದರಿಂದ ದೊಡ್ಡದೊಡ್ಡ ಮಾಲ್‌ಗಳಿಂದ ಹಿಡಿದು ರೋಡ್‌ಸೈಡ್‌ನಲ್ಲೂ ಮಾರಾಟಕ್ಕಿವೆ.
ಈಗ ಮಳೆ ಬಿಸಿಲಿನಿಂದ ದೇಹವನ್ನು ರಕ್ಷಣೆ ಮಾಡುವ ಕೊಡೆಯ ಕಾರ್ಯವೈಖರಿ ಬದಲಾಗಿ ಸ್ಟೈಲ್‌ನತ್ತ ಮುಖ ಮಾಡಿದೆ. ಮಳೆಗಾಲದಲ್ಲಿ ಜೋರಾಗಿ ಮಳೆ ಬಂದು ನೂರು ಕೊಡೆ ಅರಳಿದರೂ ಕೂಡ ನಾನೇ ರಾಜನೆನ್ನುವಂತೆ ಎದ್ದು ಕಾಣುತ್ತದೆ ಈ ಕೊಡೆ.
ಹವ್ಯಶ್ರೀ ಪುರ
ಪತ್ರಿಕೋದ್ಯಮ ವಿಭಾಗ, ಆಳ್ವಾಸ್ ಕಾಲೇಜು, ಮೂಡಬಿದಿರೆ