ಮುಂದೇನು ಎಂಬ ಯಕ್ಷಪ್ರಶ್ನೆ !

Team Udayavani, Sep 6, 2019, 5:32 AM IST

ಅಂದು ಡಿಗ್ರಿಯ ಕೊನೆಯ ಸೆಮಿಸ್ಟರ್‌ನ ಕೊನೆಯ ಎಕ್ಸಾಮ್‌. ಅದಾಗಿ, ಡಿಗ್ರಿ ಮುಗೀತು ಮುಂದೇನು, ಅಂತ ಮಾತಾಡಿಕೊಂಡು ಇದ್ದೆ ವು. ಇನ್ನೇನು, ಮನೆಗೆಲಸ ಮಾಡಿಕೊಂಡು ಒಂದು ವರುಷ ಕಳೆಯುವುದು, ಆಮೇಲೆ ಹೇಗಿದ್ದರೂ ಮನೆಯವರು ಮದುವೆ ಮಾಡ್ತಾರಲ್ಲ ಎಂಬ ಹಾಸ್ಯದ ಮಾತು ಗೆಳತಿಯ ಬಾಯಿಯಿಂದ ಬಂತು. ಸ್ವಲ್ಪ ದಿನ ಕಳೆದಂತೆ ಮುಂದೆ ಇರುವ ಪ್ರಶ್ನಾರ್ಥಕ ಚಿಹ್ನೆಗೆ ಉತ್ತರ ಹುಡುಕಬೇಕಲ್ಲ ಎಂಬ ಗಂಭೀರಭಾವ ಮನದಲ್ಲಿ ಮನೆ ಮಾಡಿತ್ತು.

ಒಂದು ದಿನ ನಾವು ಮೂವರೂ ಗೆಳತಿಯರು ಕಾಲೇಜು ಲೈಬ್ರೆರಿಗೆ ಬಂದು ಇದರ ಬಗ್ಗೆ ಚರ್ಚಿಸಿದೆವು. ಆಗ ಡಿಗ್ರಿಯ ರಿಸಲ್ಟ್ ಕೂಡ ನಮ್ಮ ಕೈ ಸೇರಿತ್ತು. ಮೂವರೂ ಡಿಸ್ಟಿಂಕ್ಷನ್‌ ಪಡೆದುಕೊಂಡಿದ್ದೆವು. ಎಲ್ಲ ಚರ್ಚೆ ಮುಗಿದ ಮೇಲೆ ಅಂತಿಮ ತೀರ್ಮಾನಕ್ಕೆ ಬಂದದ್ದು ಪತ್ರಿಕೋದ್ಯಮದಲ್ಲಿ ಎಂ. ಎ. ಮಾಡೋಣ ಅಂತ. ಅದಕ್ಕೆ ಮೈಸೂರಿನ ಮಾನಸಗಂಗೋತ್ರಿ ವಿಶ್ವದ್ಯಾನಿಲಯವೇ ಸೂಕ್ತ ಎಂದು ಆರಿಸಿಕೊಂಡೆವು. ಅದಕ್ಕೆ ಬೇಕಾದ ಎಲ್ಲ ಪ್ರಕ್ರಿಯೆಗಳನ್ನು ನಾವಾಗಿಯೇ ಮುಗಿಸಿಕೊಂಡೆವು. ಒಂದು ದಿನ ಮೈಸೂರು ಯುನಿವರ್ಸಿಟಿಯಿಂದ ದಿಢೀರನೆ ಕರೆ ಬಂತು. ಪ್ರವೇಶ ಪರೀಕ್ಷೆಗೆ ಬರಬೇಕು ಎಂದು. ಸರಿ ಮೂವರೂ ಬಸ್ಸಿನಲ್ಲಿ ಹೊರಟೆವು. ಉಳಿದುಕೊಳ್ಳಲು ಎಲ್ಲಾ ವ್ಯವಸ್ಥೆ ಮಾಡಿಕೊಂಡು ಕ್ಯಾಂಪಸ್‌ ಸುತ್ತೋಣವೆಂದು ಹೊರಟಾಗ ವಿಸ್ತಾರವಾದ ಕಟ್ಟಡಗಳನ್ನು ನೋಡಿಯೇ ನಾವು ಬೆರಗಾದೆವು. ರಾತ್ರಿ ಪರೀಕ್ಷೆಗೆ ತಯಾರು ಮಾಡಿಕೊಂಡೆ ವು.

ಮುಂಜಾನೆ ಎದ್ದು ತಯಾರಾಗಿ ಕಾಲೇಜು ಹತ್ತಿರ ಬಂದಾಗ ಎಲ್ಲರೂ ಎದ್ದು ಬಿದ್ದು ಓದುವು ದನ್ನು ಕಂಡು ಭಯವಾಗಿದ್ದು ಮಾತ್ರ ನಿಜ. ಅದು

ಹೇಗೋ ಎಕ್ಸಾಮ್‌ ಬರೆದು ಕ್ಯಾಂಪಸ್‌ನ ಪಕ್ಕದಲ್ಲೇ ಇದ್ದ ಜಯಲಕ್ಷ್ಮೀ ವಸ್ತುಸಂಗ್ರಹಾಲಯಕ್ಕೆ ಹೋದೆವು.

ಕಲಾತ್ಮಕವಾದ ಪಾರಂಪರಿಕ ವಸ್ತುಗಳು ಆ ಸಂಗ್ರ ಹಾಲಯಕ್ಕೆ ಶೋಭೆ ತರುತ್ತಿದ್ದದ್ದು ಮಾತ್ರ ಸುಳ್ಳಲ್ಲ.

ಮೈಸೂರಿನ ಜನರ ಮನಸ್ಸು ಒಳ್ಳೆಯದಿದ್ದರೂ ಸ್ವಲ್ಪ ಖಡಕ್‌ ಮಾತಾಡುವ ವರು ಎಂಬು ದು ಆ ಎರಡು ದಿನದಲ್ಲೇ ಗೊತ್ತಾಗಿಬಿಟ್ಟಿತ್ತು. ಸುಮಾರು ಏಳುನೂರು ಎಕರೆಗಿಂತ ಹೆಚ್ಚು ವಿಸ್ತಾರವಾದ ಕ್ಯಾಂಪಸ್‌ ಒಳಗಡೆಯೇ ನಾವು ತುಂಬ ತಿಳಿದುಕೊಂಡಿದ್ದೆವು. ಪತ್ರಿಕೋದ್ಯಮ ಪ್ರಸಿದ್ಧ ವ್ಯಕ್ತಿ ಹರ್ಮನ್‌ ಮೊಗ್ಲಿಂಗ್‌ರವರ ಹೆಸರಲ್ಲಿ ಇದ್ದ ಜರ್ನಲಿಸಂ ಪ್ರಯೋಗಾಲಯ, ಸ್ಟುಡಿಯೋ ಎಮ್‌ಸಿಜೆ ಕಲಿಯುವ ಆಸೆಯನ್ನು ಇಮ್ಮಡಿಗೊಳಿಸಿತ್ತು.

ಆ ದೊಡ್ಡ ಕಟ್ಟಡದ ಒಳಗೆ ಸ್ವಲ್ಪ ಹತ್ತಿರದಲ್ಲೇ ಇರುವ ಕುಕ್ಕರಹಳ್ಳಿ ಕೆರೆಗೂ ಹೋದೆವು. ಅಲ್ಲಿ ನೂರಾರು ಜನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅದನ್ನು ವಾಕಿಂಗ್‌ ಎನ್ನಬೇಕೋ, ಧಾವಂತದ ಓಟ ಎನ್ನಬೇಕೋ ತಿಳಿಯುತ್ತಿಲ್ಲ. ಅದೇನೇ ಆದರೂ ಸಂಜೆಯ ಹೊತ್ತಿನಲ್ಲಿ ಆ ಬೆಳ್ಳಕ್ಕಿಯ ಸಾಲು ನೋಡಲು ತುಂಬ ಚೆನ್ನಾಗಿತ್ತು. ರಾತ್ರಿ ಮೈಸೂರು ಅರಮನೆಗೆ ಭೇಟಿಕೊಟ್ಟು ದೀಪಾಲಂಕಾರದಲ್ಲಿ ಹೊಳೆಯುತ್ತಿದ್ದ ಅರಮನೆಯನ್ನು ನೋಡಿ ಕಣ್ತುಂಬಿಸಿಕೊಂಡೆವು. ಅಲ್ಲಿ ಎಲ್ಲರೂ ಅನ್ನದಲ್ಲೇ ಹತ್ತಿಪ್ಪತ್ತು ಬಗೆಯ ತಿನಿಸು ಮಾಡೋರು. ನೀರಸ ಭಾವದಿಂದ ರಾತ್ರಿಯ ಭೋಜನವನ್ನು ಮುಗಿಸಿಕೊಂಡೆವು. ಪ್ರೀತಿಯಿಂದ ಮಾತಾಡಿದರೂ ಗದರಿಸಿದಂತೆ ಕೇಳುವ ಆ ಜನರ ಸ್ವರದ ಎದುರು ನಾವೇ ಮೂಕರಾಗುತ್ತಿದ್ದೆವು. ಹೋದದ್ದು ಮೈಸೂರಿಗಾದರೂ ದೇಶ ಸುತ್ತಿ ಬಂದ ಅನುಭವ.

ಇಷ್ಟೆಲ್ಲ ಆಗಿ ಬಂದಾಗ ಮನೆಯವರ ಇರಿಸುಮುರಿಸು ಪ್ರಾರಂಭವಾಯಿತು. ಅಷ್ಟು ದೂರಕ್ಕೆ ಹೋಗಿ ಯಾಕೆ ಕಲಿಯಬೇಕು ಎಂದು. ಈ ಎಲ್ಲ ಅವಾಂತರಗಳ ನಡುವೆ ನನ್ನ ಪತ್ರಿಕೋದ್ಯಮ ಶಿಕ್ಷಣಕ್ಕೆ ಮುನ್ನುಡಿ ಬರೆದದ್ದು ಪುತ್ತೂರಿನ ವಿವೇಕಾನಂದ ಕಾಲೇಜು.
ಬದುಕೆಂದರೆ ಹೀಗೆ. ಏನೇ ಅಡ್ಡ ಬಂದರೂ ಎಲ್ಲವನ್ನು ದಾಟಿಕೊಂಡು ಮುಂದೆ ಸಾಗುವ ನದಿಯಂತೆ. ಎಲ್ಲಿ ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎನ್ನುವುದನ್ನು ಹೇಳತೀರದು. ಆದರೂ ವಾಸ್ತವವನ್ನು ಒಪ್ಪಿಕೊಂಡು ಬದುಕಬೇಕೆಂಬುದು ಕಟುಸತ್ಯ.

ಅರ್ಪಿತಾ ಕುಂದರ್‌
ಪ್ರಥಮ ಎಂ. ಎ., ಪತ್ರಿಕೋದ್ಯಮ ವಿಭಾಗ,
ವಿವೇಕಾನಂದ ಕಾಲೇಜು, ಪುತ್ತೂರು


ಈ ವಿಭಾಗದಿಂದ ಇನ್ನಷ್ಟು

  • ಏನ್ರೀ ನೀವು! ಮತ ಕೇಳ್ಳೋಕೆ ಬರುವಾಗ ಇದ್ದ ನಿಮ್ಮ ನಿಯತ್ತು ಈಗಿಲ್ಲ . ಚುನಾವಣಾ ಮುನ್ನ ನಿಮ್ಮ ಪ್ರಣಾಳಿಕೆಗಳಲ್ಲಿ ನೀವು ಘೋಷಿಸಿ ಕೊಂಡ ಯಾವ ಕೆಲಸಗಳೂ ಒಂದೂ ಸರಿಯಾಗಿ...

  • ನಮ್ಮ ಮನೆಯ ಅಂಗಳಕ್ಕೆ ಒಂದು ಬಿಳಿ ಪಾರಿವಾಳ ಬಂದಿತ್ತು. ಅದರ ರೆಕ್ಕೆಗೆ ಸ್ವಲ್ಪ ಪೆಟ್ಟು ಆಗಿ ಹೆಚ್ಚು ಹಾರಾಟ ಮಾಡಲು ಆಗುತ್ತಿರಲಿಲ್ಲ. ಅದನ್ನು ನಾನು ನೋಡಿ ಮೆಲ್ಲನೆ...

  • ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ಬಾಲ್ಯ, ಪ್ರೌಢ, ಯೌವ್ವನ, ಮತ್ತು ಮುಪ್ಪು ಎಂಬ ನಾಲ್ಕಂತಸ್ತಿನ ಮಹಡಿಯನ್ನು ಹತ್ತಿಳಿಯಲೇ ಬೇಕು. ಆದರೆ, ಬಾಲ್ಯದ ನೆನಪು...

  • ನಮ್ಮ ಜೀವನದಲ್ಲಿ ಸಂಬಂಧಗಳಿಗೆ ಬಹಳ ಪ್ರಾಮುಖ್ಯ ಇದೆ. ಸಂಬಂಧಗಳಿಲ್ಲದಿದ್ದರೆ ಬಹುಶಃ ನಮಗೆ ಪ್ರೀತಿ ಎಂದರೆ ಏನು, ಭಾವನೆಗಳೆಂದರೇನು, ನಂಬಿಕೆ ಎಂದರೆ ಏನು ಎನ್ನುವುದು...

  • ಕಾಲೇಜ್‌ ಎಂಬ ಸಾಮ್ರಾಜ್ಯದ ಗೋಡೆಯ ಮೇಲೆ ಅಲ್ಲಲ್ಲಿ ಹೃದಯದ ಗುರುತಿನ ಕೆತ್ತನೆಗಳು, ಡೆಸ್ಕ್ಗಳ ಮೇಲೆ ಪ್ರೀತಿಯ ಕವನಗಳು, ಪ್ರತಿ ಕ್ಲಾಸ್‌ನಿಂದ ಒಂದಾದರೂ ಲವ್‌...

ಹೊಸ ಸೇರ್ಪಡೆ