ಮಧುರ ನೆನಪುಗಳೊಂದಿಗೆ

Team Udayavani, Oct 4, 2019, 5:24 AM IST

ಮೂರು ವರುಷಗಳ ನೂರಾರು ನೆನಪುಗಳನ್ನು ಮೆಲುಕು ಹಾಕುವ ವಿದಾಯದ ದಿನ ಬಂದೇ ಬಿಟ್ಟಿತು. ಚಾಕೊಲೇಟ್‌ನಿಂದ ಹಿಡಿದು ಕಣ್ಣೀರ ತನಕ ಹಂಚಿಕೊಂಡ ಮಿತ್ರರನ್ನು ಬಿಟ್ಟುಹೋಗುವ ನೋವು. ಮಾತು ಯಾರಿ ಗೂ ಬೇಡವಾಗಿತ್ತು. ಸೆಲ್ಫಿಯಲ್ಲಿ ಬಾರದಿದ್ದ ನಗು ತರಿಸಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡೂ ಆಗಿತ್ತು. ಇದು ನಮ್ಮ ಪದವಿ ಕಾಲೇಜಿನಲ್ಲಿ ಕಳೆದ, ಮನದಲ್ಲಿ ಅವಿತು ಕುಳಿತ ಮಧುರವಾದ ನೆನಪುಗಳ, ಅನುಭವಗಳ ಅಕ್ಷರಮಾಲೆ.

ಹಾಯಾಗಿ ಓಡಾಡಿಕೊಂಡಿರುವ ಬಿ.ಎ., ಬಿ.ಕಾಂ. ವಿದ್ಯಾರ್ಥಿಗಳನ್ನು ಕಂಡರೆ ಸ್ವಲ್ಪ ಬೇಜಾರಾಗುವ, ಅಸೈನುಮೆಂಟು, ಪ್ರಾಜೆಕ್ಟ್ , ಸೆಮಿನಾರ್‌ ಎಂದು ವಯೋಸಹಜ ಉಲ್ಲಾಸಗಳನ್ನೆಲ್ಲ ಕಳೆದುಕೊಂಡು ಅಲ್ಪಸ್ವಲ್ಪ ಅದರ ಲ್ಲೇ ಹುಡುಕಾಡುವ ಬಿ.ಎಸ್ಸಿ. ವಿದ್ಯಾರ್ಥಿಗಳು ನಾವು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಒಂದೇ ಕುಟುಂಬದ ಸದಸ್ಯರಂತಿರುವ ನಾವುಗಳು ಪ್ರತಿಯೊಬ್ಬರ ನೋವು-ನಲಿವಿಗೂ ಸ್ಪಂದಿಸುವ ನಮ್ಮ ನಡುವೆ ಒಂದು ರೀತಿಯ ಬಾಂಧವ್ಯವೇ ಏರ್ಪಟ್ಟಿತ್ತು. ಒಂದೊಮ್ಮೆ ನಮ್ಮ ನಡುವೆ ಮೌನ ಸಮರವಾದರೂ, ಯಾವುದೋ ಒಂದು ನೋಟ, ಮುಗುಳ್ನಗೆ, ಬಾಯಿತಪ್ಪಿ ಬಂದ ಮಾತು, ಇಷ್ಟು ಸಾಕಿತ್ತು ನಮ್ಮ ಸ್ನೇಹ ಮರುಜೀವ ಪಡೆಯಲು!

ಡ್ರಾಯಿಂಗ್‌ ಎಂದರೆ ಎಲ್ಲಿಲ್ಲದ ನಂಟಾದ ನಮಗೆ, ಕ್ಲಾಸಿನಲ್ಲಿ ಬಿಡಿಸುವ ಗೆಳತಿಯರ ಮುಖ, ಯಾವ ಪ್ರಿಂಟ್‌ ಕೈಗೂ ಸಿಗದ ವಿವಿಧ ತರಹದ ಡಿಸೈನ್ಸ್‌ , ನಮ್ಮ ಕ್ರಿಯಾಶೀಲತೆಯ ಹಂತದ ಬಗ್ಗೆ ನಮ್ಮ ನೋಟ್ಸ್‌ ನ ಹಿಂಬದಿ ಪುಟಗಳು ಹೇಳಬಹುದು. ಗುರುಗಳು ನೀಡುವ ರೆಕಾರ್ಡ್ಸ್‌, ಅಸೈನುಮೆಂಟುಗಳನ್ನು ಹೇಗಾದರೂ ಮಾಡಿ ಕೊನೆಯಗಳಿಗೆಗೆ ಅಂತೂ ಇಂತೂ ಪೂರ್ಣಮಾಡಿ ಒಪ್ಪಿಸುತ್ತಿದ್ದೆವು. ಅದರಲ್ಲೂ ಹುಡುಗರು ತಮ್ಮ ರೆಕಾರ್ಡ್ಸ್‌ಗಳನ್ನು ತಮ್ಮ ಗೆಳತಿಯರಿಗೆ ಬರೆಯಲು ಒಪ್ಪಿಸಿ, ಚಾಕಲೇಟ್‌, ಟ್ರೀಟ್‌ ಎಂದು ಆಮಿಷವೊಡ್ಡಿ ಸಲೀಸಾಗಿ ಬರೆಸಿಕೊಳ್ಳುತ್ತಿದ್ದರು.

ಇಲ್ಲಿಯವರೆಗೆ ಪುಸ್ತಕ ಪ್ರತಿಗಳ ಎಣಿಸಲು ಆಗದ, ಓದಿ ಮುಗಿಯದ ಜೆರಾಕ್ಸ್‌ ಪುಟಗಳಿಗೆ ಬೆಲೆ ಕಟ್ಟಲಾದೀತೆ? ನಾವು ತೆಗೆಯುವ ಜೆರಾಕ್ಸ್‌ ಪ್ರತಿಗಳನ್ನು ನೋಡುವಾಗ, ಪದವಿ ಸೇರುವ ಮೊದಲೇ ಒಂದು ಜೆರಾಕ್ಸ್‌ ಮಿಷನ್‌ ಖರೀದಿ ಮಾಡಿದ್ದರೆ, ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಜೆರಾಕ್ಸ್‌ ಅಂಗಡಿಗೆ ಮುಗಿಬೀಳುವುದು ಕಡಿಮೆಯಾಗುತ್ತಿತ್ತೇನೋ ಅನಿಸುತ್ತದೆ.

ಇನ್ನು ಈ ಕೈಗೆ ಸಿಗದ ಇಂಗ್ಲಿಷ್‌ ಬಗ್ಗೆ ಒಂದೆರಡು ಮಾತು ಹೇಳಲೇ ಬೇಕು. ಕಲಿಕೆಗೆ ಈ ಇಂಗ್ಲಿಷ್‌ ಅಡ್ಡ ಬಾರದಿದ್ದರೂ ಮಾತನಾಡುವಾಗ ಮಾತ್ರ ಕೈಕೊಡುತ್ತದೆ. ವೈವಾ ಎನ್ನುವ ಸಣ್ಣಪುಟ್ಟ ಪ್ರಶ್ನೆಗಳಿಗೂ ಉತ್ತರ ಕೊಡುವಾಗ ಎದೆ ಢವಢವ ಎನ್ನುತ್ತದೆ. ಲಾಸ್ಟ್‌ ಬೆಂಚ್‌ ಕಮ್‌ ಫ್ರಂಟ್‌, ಹೇ ನೀನೇ ಯಾಕೆ ನಗುವುದು? ನಗುವ ವಿಷಯವಿದ್ದರೆ ನಮಗೂ ತಿಳಿಸು, ಎಲ್ಲರೂ ಒಟ್ಟಾಗಿ ನಗುವ ಎನ್ನುವ, ಸ್ಪೆಷಲ್‌ ಕ್ಲಾಸ್‌, ಅಟೆಂಡೆನ್ಸ್‌ ಶಾಟೇìಜ್‌, ಕ್ಲಾಸ್‌ ಬಂಕ್‌, ಇಂಟರ್‌ನಲ್ಸ್‌, ಈ ಟೆಸ್ಟ್‌ ಟ್ಯೂಬ್‌ ಯಾರು ಒಡೆದು ಹಾಕಿದ್ದು? ಮಿಡ್‌ಡೇ ಮೀಲ್‌ನವರು ಹೋಗಿ- ಎನ್ನುವ ಪುನರಾವರ್ತಿತ ನುಡಿಗಳನ್ನು ಮರೆಯಲಿಕ್ಕುಂಟೇ!

ಮುಖ್ಯವಾಗಿ ಗೇಟಿನಿಂದಲೇ ಸ್ವಾಗತಿಸುವ ನಮ್ಮ ಬೃಹದಾಕಾರದ ಗ್ರಂಥಾಲಯವನ್ನು ಮಿಸ್‌ ಮಾಡಿಕೊಳ್ಳುವುದಂತೂ ಸತ್ಯ. ಎಷ್ಟೊಂದು ಜೀವನಪಾಠಗಳನ್ನು ಕಲಿಸುವ ಅತ್ಯದ್ಭುತ ಪುಸ್ತಕಗಳು! ಆಹಾ! ಅಕ್ಷರಗಳ ಕಲ್ಪನಾಲೋಕದಲ್ಲಿ ವಿಹರಿಸುವವರಿಗೆ ಒಂದು ವರವೇ ನಮ್ಮ ಈ ಗ್ರಂಥಾಲ ಯ. ಗುರುಗಳ ಅನನ್ಯ ಪ್ರೀತಿಯ ನಡುವೆ ಅವರಿಂದ ಬೈಸಿಕೊಳ್ಳುತ್ತಲೇ ನ‌ಮ್ಮ ತರಲೆಗಳನ್ನು ಅದೇ ರೀತಿ ಮುಂದುವರೆಸಿಕೊಂಡು ಬರುತ್ತೇವೆ. ನಿಜ ಹೇಳಬೇಕೆಂದರೆ ಈ ಕಾಲೇಜು ಕಾರಿಡಾರ್‌ಗಳನ್ನು , ನಲ್ಮೆಯ ಗುರುಗಳನ್ನು, ಕಪ್ಪು ಹಲಗೆಯನ್ನು, ವಿಶಾಲವಾದ ತರಗತಿ ಕೋಣೆಗಳನ್ನು ಬಹಳ ಮಿಸ್‌ ಮಾಡಿಕೊಳ್ಳುತ್ತೇವೆ. ಮನದಲ್ಲಿನ ಎಷ್ಟೇ ನೋವಿದ್ದರೂ ಒಮ್ಮೆ ಕಾಲೇಜಿಗೆ ಬಂದೆವೆಂದರೆ ಎಲ್ಲಾ ಸಮಸ್ಯೆಗಳು ಮಾಯವಾಗಿ ಬಿಡುವುವು. ಪ್ರವಾಸಕ್ಕೆ ಹೋಗಿದ್ದು, ತರಗತಿಯಲ್ಲಿ ಸಿದ್ದೆ ಮಾಡಿ ನಗೆಪಾಟಲಿಗೆ ಈಡಾಗಿದ್ದು, ಸ್ಪೆಷಲ್‌ ಕ್ಲಾಸ್‌ ಬಂದಾಗ ಟ್ರೈನು-ಬಸ್ಸು ಮಿಸ್ಸು ಎಂದು ರೈಲು ಬಿಟ್ಟದ್ದು… ಹೀಗೆ ನೆನಪುಗಳು ಒಂದೇ ಎರಡೇ!

ಗೌತಮಿ ಶೇಣವ
ನಿಕಟಪೂರ್ವ ವಿದ್ಯಾರ್ಥಿನಿ
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮಳೆಗಾಲವೆಂದರೆ ಮೈಮನಕೆ ಏನೋ ಸಂತೋಷ. ತುಂತುರು ಮಳೆಯಲಿ ನೆನೆಯುವಾಗಿನ ಖುಷಿ, ಬೇಸಿಗೆಯ ಬೆವರನ್ನು ತೊಯ್ದು ಹೊಸ ಹುರುಪನ್ನು ನೀಡುತ್ತದೆ. ಮೊದಲ ಮಳೆಗೆ ಗಿಡಮರಗಳೆಲ್ಲಾ...

  • ಯಾರ ಬಳಿಯಲ್ಲಿ ನೋಡಿದರೂ ಮೊಬೈಲ್‌. ಮೊಬೈಲ್‌ ಇಲ್ಲದ ವ್ಯಕ್ತಿಯನ್ನು ಇಂದು ಹುಡುಕಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನಾವಿಂದು ತಲುಪಿದ್ದೇವೆ. ಒಂದು ಕ್ಷಣ...

  • ರಕ್ತ ಸಂಬಂಧಗಳೂ ಮೀರಿದಾ ಬಂಧವಿದು. ಯಾವ ಬಿಂದುವಿನಲ್ಲಿ ಸಂಧಿಸುವುದೋ!- ಅದು ಯಾವ ಅಮೃತಗಳಿಗೆಯಲ್ಲಿ ಈ ಹಾಡು ಜನ್ಮ ತಾಳಿತೋ ಏನೋ, ಸ್ನೇಹಿತರ ಪಾಲಿನ ರಾಷ್ಟ್ರಗೀತೆಯಾಗಿ...

  • "ಯಶಸ್ಸು" ಎಲ್ಲರೂ ಇಷ್ಟಪಡುವ ಪದ. ಈ ಭೂಮಿಯ ಮೇಲಿನ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಯಶಸ್ವಿ ಆಗಬೇಕು ಎಂದೇ ಆಶಿಸುತ್ತಾನೆ. ಆದರೆ, ಯಶಸ್ಸು ಎನ್ನುವುದು ಎಲ್ಲರಿಗೂ ಸಿಗುವುದಿಲ್ಲ....

  • ಅದೊಂದು ದಿನ. ಪೂರ್ಣಪ್ರಮಾಣದ ಶಿಕ್ಷಕರಾಗುವ ಮುನ್ನ ಪ್ರಾಯೋಗಿಕವಾಗಿ ಶಿಕ್ಷಕ ವೃತ್ತಿಯ ಅನುಭವಗಳನ್ನು ಪಡೆಯಲು ಇಂಟರ್ಶಿಪ್ ಗಾಗಿ ಶಾಲೆಗೆ ಹೋಗುತ್ತಿದ್ದ ಸಮಯವದು....

ಹೊಸ ಸೇರ್ಪಡೆ