
ಪ್ರವಾಹ ಮುನ್ಸೂಚನೆ ನೀಡುವ ಗೂಗಲ್‌ನ ಫ್ಲಡ್ ಹಬ್
Team Udayavani, Jun 2, 2023, 9:00 AM IST

ಕೃತಕ ಬುದ್ಧಿಮತ್ತೆ (ಎಐ)ಯಿಂದ ಹೊಸ ಹೊಸ ತಂತ್ರಜ್ಞಾನಗಳು ಹಾಗೂ ಸೌಲಭ್ಯಗಳನ್ನು ಬಳಕೆದಾರರಿಗೆ ನೀಡುತ್ತಿರುವ ಗೂಗಲ್ ಇದೀಗ ಪ್ರವಾಹ ಮುನ್ಸೂಚನೆಯನ್ನು ನೀಡಬಲ್ಲ “ಫ್ಲಡ್ ಹಬ್’ ಸೇವೆಯನ್ನು 80 ದೇಶಗಳಿಗೆ ವಿಸ್ತರಿಸುತ್ತಿದೆ. ಏನಿದು ಫ್ಲಡ್ ಹಬ್? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಮೊದಲು
ಗೂಗಲ್ ಕೃತಕ ಬುದ್ಧಿಮತ್ತೆ (ಅಐ) ಆಧಾರಿತ ಪ್ರವಾಹ ಮುನ್ಸೂಚನೆಯನ್ನು ನೀಡಬಲ್ಲ ತನ್ನ “ಫ್ಲಡ್ ಹಬ್’ ಸೇವೆಯನ್ನು 2018ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಪರಿಚಯಿಸಿತು. ಅನಂತರದಲ್ಲಿ ಬಾಂಗ್ಲಾದೇಶದಲ್ಲಿ ಪರಿಚಯಿಸಿದರೆ 2022 ರಲ್ಲಿ ಇತರ 18 ರಾಷ್ಟ್ರಗಳಿಗೆ ಈ ಸೇವೆಯನ್ನು ವಿಸ್ತರಿಸಿತು. ಇದೀಗ ವಿಶ್ವದ ಇನ್ನಿತರ 60 ರಾಷ್ಟ್ರ ಗಳಲ್ಲಿ ಫ್ಲಡ್ ಹಬ್ ಅನ್ನು ಪರಿಚಯಿಸಲಾಗುವುದು ಎಂದು ಗೂಗಲ್ ತಿಳಿಸಿದ್ದು, ಈ ಮೂಲಕ ಒಟ್ಟಾರೆ 80 ದೇಶಗಳಲ್ಲಿ ಫ್ಲಡ್ ಹಬ್ ಕಾರ್ಯ ನಿರ್ವಹಿಸಲಿದೆ.
ಎಲ್ಲೆಲ್ಲಿ?
ಆಫ್ರಿಕಾ, ದಕ್ಷಿಣ ಪೆಸಿಫಿಕ್ ಪ್ರದೇಶ, ಯುರೋಪ್, ದಕ್ಷಿಣ ಮತ್ತು ಮಧ್ಯ ಅಮೆರಿಕ ದೇಶಗಳ ಜತೆಗೆ ಪ್ರವಾಹಕ್ಕೆ ತುತ್ತಾಗಿರುವ ಅತೀ ಹೆಚ್ಚು ಶೇಕಡಾವಾರು ಜನಸಂಖ್ಯೆಯನ್ನು ಹೊಂದಿರುವ ಪ್ರದೇಶಗಳಲ್ಲಿಯೂ ಕಾರ್ಯನಿರ್ವಹಿಸ ಲಿದೆ. ಜಾಗತಿಕವಾಗಿ 460 ಮಿಲಿಯನ್ ಜನಸಂಖ್ಯೆಯನ್ನು ಇದು ಒಳಗೊಳ್ಳಲಿದೆ ಎಂದು ಗೂಗಲ್ ತಿಳಿಸಿದೆ.
ಏನಿದು ಫ್ಲಡ್ ಹಬ್?
ಕೃತಕ ಬುದ್ಧಿಮತ್ತೆ ಹಾಗೂ ಕಂಪ್ಯುಟೇಶನಲ್ ಪವರ್ ಸಹಾಯದಿಂದ ಫ್ಲಡ್ ಹಬ್, ಎಲ್ಲಿ, ಯಾವಾಗ ಪ್ರವಾಹ ತಲೆದೋರಲಿದೆ ಎಂದು ಮುನ್ಸೂ ಚನೆ ನೀಡುತ್ತದೆ. ಗೂಗಲ್‌ನ ಪ್ರಕಾರ 7 ದಿನಗಳಿಗೂ ಮುನ್ನವೇ ಇದು ಪ್ರವಾಹ ಮುನ್ಸೂಚನೆ ನೀಡಲಿದೆ.
ಹೇಗೆ ಕಾರ್ಯನಿರ್ವಹಿಸುತ್ತದೆ ?
ಹವಾಮಾನ ಸಂಸ್ಥೆಗಳು ನೀಡುವ ಹವಾಮಾನ ಮುನ್ಸೂಚನೆ ವರದಿ, ಸ್ಯಾಟಲೈಟ್ ಚಿತ್ರಗಳನ್ನು ಆಧರಿಸಿ ಫ್ಲಡ್ ಹಬ್ ಕಾರ್ಯನಿರ್ವಹಿಸುತ್ತದೆ. ಈ ತಂತ್ರಜ್ಞಾನವು ಎರಡು ರೀತಿಯ ಮಾಡೆಲ್‌ಗಳನ್ನು ಹೊಂದಿದೆ. ಹೈಡ್ರೋಲಾಜಿಕ್ (Hydrologic ) ಮಾಡೆಲ್ ನದಿಯಲ್ಲಿ ಹರಿಯುತ್ತಿರುವ ನೀರಿನ ಮಟ್ಟವನ್ನು ಅಂದಾಜಿಸಿದರೆ, ಇನಂಡೇಶನ್ (Inundation) ಮಾಡೆಲ್ ಯಾವೆಲ್ಲ ಪ್ರದೇಶಗಳು ಪ್ರವಾಹಕ್ಕೆ ತುತ್ತಾಗಲಿವೆ ಹಾಗೂ ಮುಳುಗಡೆಯ ಪ್ರಮಾಣ ಎಷ್ಟಿರಲಿದೆ ಎಂಬ ಬಗ್ಗೆ ಮಾಹಿತಿ ನೀಡುತ್ತದೆ.
ವಿವಿಧ ಸಂಸ್ಥೆಗಳ ಸಹಯೋಗ
ಪ್ರವಾಹಗಳಿಗೆ ಹೆಚ್ಚು ಒಳಪಡುವ ಹಾಗೂ ಇಂಟರ್ನೆಟ್, ಸ್ಮಾರ್ಟ್‌ಪೋನ್ ನಂತಹ ಸೌಲಭ್ಯಗಳನ್ನು ಹೊಂದದೇ ಇರುವ ಪ್ರದೇಶ ಹಾಗೂ ಸಮುದಾಯಗಳಿಗೂ ಈ ತಂತ್ರಜ್ಞಾನದ ನೆರವು ನೀಡಲು ಗೂಗಲ್, ಫೆಡರೇಶನ್ ಆಫ್ ರೆಡ್‌ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿಸ್, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಹಾಗೂ ಯೇಲ್ ವಿಶ್ವವಿದ್ಯಾನಿಲಯದ ಇನ್‌ಕ್ಲುಶನ್ ಎಕನಾಮಿಕ್ಸ್ ಟೀಮ್ ಸ್ವಯಂಸೇವಕರಿಗೆ ತರಬೇತಿ ನೀಡಿ ಅಂತಹ ಪ್ರದೇಶಗಳಿಗೆ ಮಾಹಿತಿ ದೊರಕುವಂತೆ ಮಾಡಲಿದೆ.
– ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನ
– ವಾರಕ್ಕೂ ಮುನ್ನವೇ ನೆರೆಯ ಬಗ್ಗೆ ಮಾಹಿತಿ
– ಭಾರತದಲ್ಲಿನ ಪ್ರಯೋಗ ಯಶಸ್ವಿ
– ವಿಶ್ವದ 80 ದೇಶಗಳಿಗೆ ಸೇವೆ ವಿಸ್ತರಣೆ
ಟಾಪ್ ನ್ಯೂಸ್
