ಟೆಸ್ಲಾ ‘ಎಲೆಕ್ಟ್ರಿಕ್ ಕಾರು’ ಉತ್ಪಾದನೆಗೆ ಪಾಲುದಾರಿಕೆಯಿಲ್ಲ..ಟಾಟಾ ಮೋಟಾರ್ಸ್ ಸ್ಪಷ್ಟನೆ
Team Udayavani, Mar 5, 2021, 2:19 PM IST
ಭಾರತದಲ್ಲಿ ಟೆಸ್ಲಾ ಹಾಗೂ ಟಾಟಾ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್ ಕಾರುಗಳು ಉತ್ಪಾದನೆಯಾಗಲಿವೆ. ಅಮೆರಿಕ ಮೂಲದ ಟೆಸ್ಲಾ, ಟಾಟಾ ಮೋಟಾರ್ಸ್ ಸಂಸ್ಥೆ ಜತೆ ಕೈ ಜೋಡಿಸಲಿದೆ ಎನ್ನಲಾಗುತ್ತಿತ್ತು. ಆದರೆ, ಇದೀಗ ಈ ಅಂತೆ-ಕಂತೆಗಳಿಗೆ ತೆರೆ ಬಿದ್ದಿದೆ. ಟೆಸ್ಲಾ ಜತೆ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಟಾಟಾ ಸ್ಪಷ್ಟಪಡಿಸಿದೆ.
ಭಾರತದಲ್ಲಿ ಟೆಸ್ಲಾ ವಿದ್ಯುತ್ ಚಾಲಿತ ಕಾರುಗಳ ತಯಾರಿಕೆ ಘಟಕ ಪ್ರಾರಂಭವಾಗುತ್ತಿದೆ. ಬಹು ಆಕಾಂಕ್ಷೆಯ ಈ ಯೋಜನೆಗೆ ಟಾಟಾ ಸಮೂಹ ಸಂಸ್ಥೆ ಕೈ ಜೋಡಿಸಲಿದೆ. ಆಟೋಮೊಬೈಲ್ ಕ್ಷೇತ್ರದ ಈ ದೈತ್ಯ ಕಂಪನಿಗಳ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್ ಕಾರುಗಳು ಹೊರಬರಲಿವೆ ಎನ್ನುವ ಮಾತುಗಳನ್ನು ಟಾಟಾ ಸಮೂಹದ ಮುಖ್ಯಸ್ಥ ಚಂದ್ರಶೇಖರ್ ತಳ್ಳಿಹಾಕಿದ್ದಾರೆ. ಟಾಟಾ ಯಾವ ಕಂಪನಿಯ ಜತೆಗೂ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಟಾಟಾ ಮೋಟಾರ್ಸ್ ಮತ್ತು ಜೆಎಲ್ಆರ್ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಸಮಯದಲ್ಲಿ ಕಂಪನಿಗೆ ಬಾಹ್ಯ ಪಾಲುದಾರರ ಅಗತ್ಯವಿಲ್ಲ ಎಂದು ಚಂದ್ರಶೇಖರನ್ ಹೇಳಿದ್ದಾರೆ.
ಇನ್ನು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರುಗಳು ಲಗ್ಗೆ ಇಟ್ಟಿವೆ. ಈ ಕಾರಿನ ಬೆಲೆ 13.99 ಲಕ್ಷ ರೂಪಾಯಿಯಿಂದ ಆರಂಭವಾಗಿವೆ. ಈ ಮೂಲಕ ಭಾರತದ ಕಡಿಮೆ ಬೆಲೆ ಎಸ್‍ಯುವಿ ಎಲೆಕ್ಟ್ರಿಕ್ ಕಾರು ಎನ್ನುವ ಹಿರಿಮೆಗೆ ಪಾತ್ರವಾಗಿದೆ.