ಗೂಗಲ್ ಗೆ ಪರ್ಯಾಯ ಸರ್ಚ್ ಇಂಜಿನ್ ಗಳು ಯಾವುದೆಲ್ಲಾ ನಿಮಗೆ ಗೊತ್ತಾ..?
ಗೂಗಲ್ ಹೊರತುಪಡಿಸಿ, ಬಳಕೆಯಲ್ಲಿರುವ ಟಾಪ್ 5 ಸರ್ಚ್ ಇಂಜಿನ್ ಗಳ ಕುರಿತು ಸಂಕ್ಷಿಪ್ತ ವಿವರ ಇಲ್ಲಿದೆ
ಶ್ರೀರಾಜ್ ವಕ್ವಾಡಿ, May 24, 2021, 5:22 PM IST
ಇಂಟರ್ ನೆಟ್ ಜಗತ್ತು ಎಷ್ಟು ವಿಸ್ತಾರ ಎಂಬುವುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಅದರಷ್ಟು ವ್ಯಾಪ್ತಿ ಇನ್ಯಾವ ವಿಷಯಕ್ಕೂ ಇರದು. ಅಂತಹ ಜಗತ್ತನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿರುವ ಒಂದು ಕಂಪನಿಯೆಂದರೆ ಅದು ಗೂಗಲ್.
ಇಂಟರ್ ನೆಟ್ ಜಗತ್ತಿನ ಬಹುತೇಕ ಎಲ್ಲಾ ಕ್ಷೇತ್ರದ ಒಳಗೂ ಗೂಗಲ್ ಕಾಲಿಟ್ಟಿದೆ. ಕೆಲವು ವೈಫಲ್ಯ ಕಂಡರೂ, ಇಂದು ಗೂಗಲ್ ಎಂಬ ನಾಮಪದ, ಕ್ರಿಯಾಪದವಾಗಿ ರೂಪುಗೊಂಡಿದೆ. ಗೂಗಲ್ ನಲ್ಲಿ ಹುಡುಕಿ ಎನ್ನುವ ಬದಲಿಗೆ, ಗೂಗಲ್ ಮಾಡಿ ಎಂಬುವಷ್ಟರ ಮಟ್ಟಿಗೆ ನಾವೆಲ್ಲರೂ ಬಂದು ತಲುಪಿದ್ದೇವೆ ಎಂದರೇ ಅದು ಗೂಗಲ್ ಗೆ ನಾವೆಷ್ಟು ಅವಲಂಭಿಸಿ ಇದ್ದೇವೆ ಎನ್ನುವುದನ್ನು ಸೂಚಿಸುತ್ತದೆ.
ಇದನ್ನೂ ಓದಿ : ‘ರೌಡಿ ಬೇಬಿ’ಯಲ್ಲಿ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡ ದಿವ್ಯಾ ಸುರೇಶ್
ಆಂಡ್ರಾಯ್ಡ್ ನಲ್ಲಿ ಇನ್-ಬಿಲ್ಟ್ ಆಗಿಯೇ ಗೂಗಲ್ ನ ಒಂದಷ್ಟು ಅಪ್ಲಿಕೇಷನ್ ಗಳು ಸಿಗುತ್ತವೆ. ಪ್ಲೇಸ್ಟೋರ್, ಸರ್ಚ್ ಇಂಜಿನ್, ಕ್ರೋಮ್, ಇತ್ಯಾದಿ. ಹೀಗಿರುವಾಗ ಬೇರೆ ಆ್ಯಪ್ ಗಳನ್ನು ಇನ್ಸ್ಟಾಲ್ ಮಾಡುವ ಗೋಜಿಗೂ ನಾವು ಹೋಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವಿಭಾಜ್ಯ ಅಂಗವಾಗಿರುವುದು ಗೂಗಲ್ ಸರ್ಚ್ ಇಂಜಿನ್. ಉದಾಹರಣೆಗೆ ರೆಡ್ಮಿ, ಸ್ಯಾಮ್ಸಂಗ್ ಫೋನ್ ಗಳಲ್ಲಿ ಗೂಗಲ್ ಜತೆ ಆ ಮೊಬೈಲ್ ಸಂಸ್ಥೆಯ ಸರ್ಚ್ ಇಂಜಿನ್ ಆ್ಯಪ್ ಗಳು ಇದ್ದರೂ, ಬಹುತೇಕರು ಬಳಸುವುದು ಗೂಗಲ್ ನನ್ನೇ ಅಂದರೂ ತಪ್ಪಿಲ್ಲ. ಹಾಗಾದರೆ ಗೂಗಲ್ ಸರ್ಚ್ ಇಂಜಿನ್ ಗೆ ಪರ್ಯಾಯ ಅಪ್ಲಿಕೇಶನ್ ಗಳು ಯಾವುದೆಲ್ಲಾ ಇದೆ? ಯಾವುದನ್ನು, ಎಷ್ಟು ಮಂದಿ ಬಳಸುತ್ತಾರೆ? ಗೂಗಲ್ ಹೊರತುಪಡಿಸಿ, ಬಳಕೆಯಲ್ಲಿರುವ ಟಾಪ್ 5 ಸರ್ಚ್ ಇಂಜಿನ್ ಗಳ ಕುರಿತು ಸಂಕ್ಷಿಪ್ತ ವಿವರ ಇಲ್ಲಿದೆ:
ಬಿಂಗ್
ಮೈಕ್ರೋಸಾಫ್ಟ್ ಕಂಪನಿಯ ಬಿಂಗ್ ವಿಶ್ವದ ಎರಡನೇ ಅತ್ಯಂತ ಪ್ರಸಿದ್ಧ ಸರ್ಚ್ ಇಂಜಿನ್ ಆಗಿದೆ. ಇದರ ವ್ಯಾಪ್ತಿ ಮತ್ತು ಮಾರುಕಟ್ಟೆ ವಿಷಯದಲ್ಲಿ ಗೂಗಲ್ ಗಿಂತಲೂ ಬಹಳ ಕಡಿಮೆಯಿದ್ದರೂ, ಬಳಕೆದಾರರನ್ನು ಆಕರ್ಷಿಸುವ ಕೆಲವು ವಿಶಿಷ್ಟ ವೈಶಿಷ್ಟ್ಯಗಳನ್ನು ಹೊಂದಿದೆ. ಸಾಮಾನ್ಯವಾಗಿ, ಇದು ಎಲ್ಲಾ ಡಿವೈಸ್ ಗಳಲ್ಲೂ ದೋಷರಹಿತವಾಗಿ ಕಾರ್ಯನಿರ್ವಹಿಸುತ್ತದೆ. ಕೆಲವು ಮರೆಯಾಗಿರುವ ವಿಷಯಗಳನ್ನು ಹುಡುಕಾಟದಲ್ಲಿ ತೋರಿಸುತ್ತದೆ ಮತ್ತು ಕೆಲವು ಉತ್ತಮ ವೀಡಿಯೋ ಫಲಿತಾಂಶಗಳನ್ನು ಪ್ರಕಟಿಸುತ್ತದೆ. ಆದರೆ, ಗೂಗಲ್ ಗೆ ಹೋಲಿಸಿದರೆ, ಹುಡುಕಾಟ ನಿಧಾನವಾಗಿದೆ.
ಯಾಹೂ
ಒಂದು ಕಾಲದ ಜನಪ್ರಿಯ ಸರ್ಚ್ ಇಂಜಿನ್ ಯಾಹೂ. ಆರಂಭಿಕ ದಿನಗಳಲ್ಲಿ ಗೂಗಲ್ ಗೆ ಭಾರಿ ಪೈಪೋಟಿ ನೀಡುತ್ತಿದ್ದರೂ, ಜಗತ್ತಿನಲ್ಲಿ ಪ್ರಸ್ತುತ ಮೂರನೇ ಜನಪ್ರಿಯ ಸರ್ಚ್ ಇಂಜಿನ್ ಆಗಿದೆ. ಅದಲ್ಲದೆ, ಅಲೆಕ್ಸಾ ರ‍್ಯಾಂಕಿಂಗ್ ಪ್ರಕಾರ, ಯಾಹೂ ವೆಬ್ ಪೋರ್ಟಲ್ ವಿಶ್ವದಲ್ಲಿ 11ನೇ ಅತೀ ಹೆಚ್ಚು ಭೇಟಿ ನೀಡಿರುವ ಜಾಲತಾಣವಾಗಿದೆ. ಬಹುತೇಕ ಪ್ರಾದೇಶಿಕ ಹಾಗೂ ಹತ್ತಿರದ ಫಲಿತಾಂಶಗಳನ್ನು ಯಾಹೂ ನೀಡಿದರೂ, ಹಲವು ಬಾರಿ ಹಳೇಯ ಮಾಹಿತಿಗಳೇ ಸಿಗುತ್ತವೆ. ಸರ್ಚ್ ಇಂಜಿನ್ ನಲ್ಲಿ ಮಾಹಿತಿಗಳು ಶೀಘ್ರದಲ್ಲಿ ಅಪ್ಡೇಟ್ ಆಗುವುದಿಲ್ಲ.
ಬೈದು
2000 ರಲ್ಲಿ ಸ್ಥಾಪನೆಯಾದ ಬೈದು, ಚೀನಾ ದೇಶದ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಹೊಂದಿರುವ (ಶೇ.71) ಜಗತ್ತಿನ 4ನೇ ಪ್ರಸಿದ್ಧ ಸರ್ಚ್ ಎಂಜಿನ್ ಆಗಿದೆ. ವರ್ಷದಿಂದ ವರ್ಷಕ್ಕೆ ಬೈದು ಬಳಕೆದಾರರ ಸಂಖ್ಯೆ ಏರುತ್ತಲೇ ಇದೆ. ಇದು ಮುಖ್ಯವಾಗಿ ಚೀನಾದಲ್ಲಿ ಬಳಕೆಯಲ್ಲಿದ್ದರೂ, ಉತ್ತಮ ಇಂಟರ್ಫೇಸ್, ಸಾಕಷ್ಟು ಹುಡುಕಾಟ ಆಯ್ಕೆಗಳು ಮತ್ತು ಪ್ರೀಮಿಯಂ ಗುಣಮಟ್ಟದ ಹುಡುಕಾಟ ಫಲಿತಾಂಶಗಳನ್ನು ಹೊಂದಿದೆ. ಬೈದು ವಿಶ್ವದ ಅತಿ ದೊಡ್ಡ ಕೃತಕ ಬುದ್ಧಿಮತ್ತೆ ಹಾಗೂ ಇಂಟರ್ ನೆಟ್ ಸೇವೆ ಒದಗಿಸುವ ಕಂಪನಿಗಳಲ್ಲಿ ಒಂದಾಗಿದೆ. ಒಂದು ಬಹುಮುಖ್ಯ ಹಿನ್ನಡೆಯೆಂದರೆ, ಬೈದು ಸರ್ಚ್ ಇಂಜಿನ್ ನನ್ನು ಚೀನಾ ಸರ್ಕಾರ ಆಗಾಗ ಸೆನ್ಸಾರ್ ಗೆ ಒಳಪಡಿಸುತ್ತದೆ.
ಯಾಂಡೆಕ್ಸ್
ಯಾಂಡೆಕ್ಸ್ ನನ್ನು 1997 ರಲ್ಲಿ ಸ್ಥಾಪಿಸಲಾಯಿತು, ಮತ್ತು ಇದು ರಷ್ಯಾದಲ್ಲಿ ಹೆಚ್ಚು ಬಳಕೆಯಲ್ಲಿರುವ ಸರ್ಚ್ ಎಂಜಿನ್ ಆಗಿದೆ. ಯಾಂಡೆಕ್ಸ್ ಮೂಲತಃ ಒಂದು ಗುಪ್ತಚರ ಉತ್ಪನ್ನ ತಯಾರಿಸುವ ತಂತ್ರಜ್ಞಾನ ಕಂಪೆನಿಯಾಗಿದ್ದರೂ, ರಷ್ಯಾದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಸರ್ಚ್ ಇಂಜಿನ್ ಎಂಬ ಖ್ಯಾತಿ ಗಳಿಸಿದೆ. ರಷ್ಯಾದಲ್ಲಿ ಶೇ.65ಕ್ಕಿಂತ ಅಧಿಕ ಜನರು ಯಾಂಡೆಕ್ಸ್ ನನ್ನೇ ತಮ್ಮ ಮೊದಲ ಆದ್ಯತೆಯ ಸರ್ಚ್ ಇಂಜಿನ್ ಆಗಿ ಬಳಸುತ್ತಿದ್ದಾರೆ.
ಇದರಲ್ಲಿ ಹುಡುಕಾಟ ನಡೆಸುವಾಗ ಸ್ಥಳೀಯ ಫಲಿತಾಂಶಗಳು ಮೊದಲ ಸಾಲಿನಲ್ಲಿ ಬರುತ್ತದೆ. ತಮ್ಮ ತಮ್ಮ ದೇಶಕ್ಕನುಗುಣವಾಗಿ ಕಸ್ಟಮೈಸ್ ಮಾಡುವ ಆಯ್ಕೆ ಬಳಕೆದಾರರಿಗಿ ಸಿಗುತ್ತದೆ. ಆದರೆ, ಸ್ಥಳೀಯ ಹಾಗೂ ನಿಖರ ಫಲಿತಾಂಶ ಒದಗಿಸಲು ಇತರ ಸರ್ಚ್ ಇಂಜಿನ್ ಗಳಂತೆ, ಯಾಂಡೆಕ್ಸ್ ಸಹ ನಮ್ಮ ಡೆಟಾ ಹಾಗೂ ಇತರ ಮಾಹಿತಿಗಳನ್ನು ಸ್ಟೋರ್ ಮಾಡಿಡುತ್ತದೆ.
ಡಕ್ ಡಕ್ ಗೋ
ಮತ್ತೊಂದು ಅತ್ಯುತ್ತಮ ಸರ್ಚ್ ಎಂಜಿನ್ ಡಕ್‌ಡಕ್‌ಗೋ. ಇದು ಬಳಕೆದಾರರ ಗೌಪ್ಯತೆಯನ್ನು ರಕ್ಷಿಸುತ್ತದೆ. ಹುಡುಕಾಟದ ಮಾಹಿತಿಗಳನ್ನು ತನ್ನ ಸರ್ವರ್ ನಲ್ಲಿ ಸ್ಟೋರ್ ಮಾಡಿಡುವುದಿಲ್ಲ ಮತ್ತು ತ್ವರಿತವಾಗಿ ಫಲಿತಾಂಶ ಒದಗಿಸುತ್ತದೆ ಎಂಬುವುದು ಇದರ ಪ್ಲಸ್ ಪಾಯಿಂಟ್! ಆದರೆ, ಋಣಾತ್ಮಕ ಅಂಶವೆಂದರೆ, ಇದರಲ್ಲಿ ಹುಡುಕಾಟದ ಫಲಿತಾಂಶಗಳು, ನಮ್ಮ ವೈಯುಕ್ತಿಕ ಅಭಿರುಚಿಗೆ ತಕ್ಕಂತೆ ಇರುವುದಿಲ್ಲ. ಸರ್ಚ್ ಡೇಟಾಗಳನ್ನು ಸ್ಟೋರ್ ಮಾಡದ ಕಾರಣ, ಬಳಕೆದಾರರ ಅಭಿರುಚಿ ಗೊತ್ತಾಗುವುದಿಲ್ಲ. ಹಾಗಾಗಿ, ಎಲ್ಲರಿಗೂ ಒಂದೇ ರೀತಿಯ ಫಲಿತಾಂಶವನ್ನು ಒದಗಿಸುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಗೂಗಲ್‌ನ ಏಕಸ್ವಾಮ್ಯತೆಯನ್ನು ಸದ್ಯಕ್ಕೆ ಯಾವುದೇ ಕಂಪನಿಗೂ ಹಿಂದಿಕ್ಕಲು ಆಗದಿದ್ದರೂ, ಒಂದೊAದು ಪ್ರದೇಶ- ದೇಶಗಳಿಂದ ಒಂದೊಂದೇ ಹೆಜ್ಜೆ ಇಡುತ್ತಾ ಬಳಕೆದಾರರ ವಿಶ್ವಾಸಗಳಿಸಿ ಮುಂದುವರೆದರೆ, ಗೂಗಲ್ ನಂತಹ ದೈತ್ಯ ಸಂಸ್ಥೆಗೂ ಪೈಪೋಟಿ ನೀಡಬಹುದು.
ಇಂದುಧರ ಹಳೆಯಂಗಡಿ
ಇದನ್ನೂ ಓದಿ : 2019ರ ನವೆಂಬರ್ ನಲ್ಲಿಯೇ ಚೀನಾದ WIV ನ ಸಂಶೋಧಕರು ಹಾಸ್ಪಿಟಲ್ ಕೇರ್ ಕೋರಿದ್ದರು.! : WSJ