ಕಿವೀಸ್‌-ವಿಂಡೀಸ್‌ ಪಂದ್ಯ ನೋಡಲು ವಿಮಾನವನ್ನೇ ತಡೆದು ನಿಲ್ಲಿಸಿದರು!

Team Udayavani, Jun 25, 2019, 5:30 AM IST

ವೆಲ್ಲಿಂಗ್ಟನ್‌: ಶನಿವಾರ ನಡೆದ ವೆಸ್ಟ್‌ ಇಂಡೀಸ್‌-ನ್ಯೂಜಿಲ್ಯಾಂಡ್‌ ನಡುವಿನ ಪಂದ್ಯ ಎಲ್ಲರನ್ನೂ ತುದಿಗಾಲಲ್ಲಿ ನಿಲ್ಲಿಸಿತ್ತು. ಈ ಪಂದ್ಯ ಪೂರ್ತಿಯಾಗಿ ನೋಡುವ ಸಲುವಾಗಿ ಪ್ರಯಾಣಿಕರು ವಿಮಾನವನ್ನೇ ತಡೆದು ನಿಲ್ಲಿಸಿದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

‘ಏರ್‌ ನ್ಯೂಜಿಲ್ಯಾಂಡ್‌’ ವಿಮಾನದ ಪ್ರಯಾಣಿಕರೆಲ್ಲ ತಮ್ಮ ಆಸನದಲ್ಲಿ ಕುಳಿತಿದ್ದರು. ವಿಮಾನದಲ್ಲಿದ್ದ ಟೀವಿಯಲ್ಲಿ ಕಡೆಯ 2 ಓವರ್‌ಗಳ ಪಂದ್ಯ ವೀಕ್ಷಿಸುತ್ತಿದ್ದರು. 12 ಎಸೆತಗಳಿದ್ದರೂ ವಿಂಡೀಸ್‌ ಬಳಿಯಿದ್ದದ್ದು ಒಂದೇ ವಿಕೆಟ್. ಯಾರೂ ಗೆಲ್ಲಬಹುದಾದ ಕ್ಷಣವದು. ಈ ಸಮಯಕ್ಕೆ ಸರಿಯಾಗಿ ಪೈಲಟ್ ಬಂದು ವಿಮಾನ ಹಾರಿಸಲು ಮುಂದಾದರು. ವಿಮಾನ ಹೊರಟರೆ ಟೆಲಿವಿಷನ್‌ ಸಂಪರ್ಕ ಕಡಿದು ಹೋಗುತ್ತದೆ. ಪಂದ್ಯದ ರೋಮಾಂಚಕ ಕ್ಷಣಗಳು ತಪ್ಪಿ ಹೋಗುವ ಆತಂಕದಲ್ಲಿದ್ದ ಪ್ರಯಾಣಿಕರೆಲ್ಲ ಒಕ್ಕೊರಲಿನಿಂದ ಪಂದ್ಯ ಮುಗಿಯುವ ತನಕ ಕಾಯಿರಿ ಎಂದು ಒತ್ತಾಯಿಸಿದರು.

ಪ್ರಯಾಣಿಕರ ಒತ್ತಾಯಕ್ಕೆ ಮಣಿದು ಪೈಲಟ್ ಪಂದ್ಯ ಮುಗಿಯುವ ತಕನ ವಿಮಾನ ಸ್ಟಾರ್ಟ್‌ ಮಾಡಲಿಲ್ಲ. ಕಿವೀಸ್‌ ಪಂದ್ಯ ಗೆದ್ದ ಮೇಲಷ್ಟೇ ವಿಮಾನ ಹೊರಟಿತು. ನ್ಯೂಜಿಲ್ಯಾಂಡ್‌ನ‌ ಓರ್ವ ಸಂಸದರೂ ಈ ವಿಮಾನದಲ್ಲಿದ್ದರು. ಅವರು ಈ ಸನ್ನಿವೇಶವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ