
ಚಿಗುರು ಹೂವಿನ ಬಣ್ಣದಾರತಿ ಯಾವುದೋ ಈ ಆನಂದಕೆ
Team Udayavani, Mar 22, 2023, 7:02 AM IST

ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹೊಸ ಹರುಷವ ಹೊಸದು ಹೊಸದು ತರುತಿದೆ…
“ವರಕವಿ ಬೇಂದ್ರೆಯವರ ಈ ಹಾಡಿನಿಂದಲೇ ಯುಗಾದಿ ಆರಂಭವಾಗುತ್ತಿದೆ. ಚೈತ್ರ ಮಾಸವೂ ಆಗಮನವಾಗುತ್ತಿದೆ. ಶಿಶಿರ ಋತುವಿನ ಚಳಿಗೆ ಮಾಗಿದ್ದ ಗಿಡ ಮರಗಳು ಚಿಗುರೊ ಡೆಯಲು ಪ್ರಾರಂಭಿಸಿದೆ!! ಎಲ್ಲೆಲ್ಲೂ ಹಸುರಿನ ಕಂಪನ್ನು ನೀಡಲು ಪ್ರಕೃತಿ ಸಜ್ಜಾಗಿದೆ.
ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ “ಯುಗಾದಿಯ ಹಾಡು’ ಪದ್ಯದ ಭಾಗ ಇಲ್ಲಿ ಹೆಚ್ಚು ಸೂಕ್ತವಾಗಿದೆ.
ಬಂದ ಚೈತ್ರದ ಹಾದಿ ತೆರೆದಿದೆ,
ಬಣ್ಣ ಬೆರಗಿನ ಮೋಡಿಗೆ
ಹೊಸತು ವರ್ಷದ ಹೊಸದು ಹರ್ಷದ,
ಬೇವು ಬೆಲ್ಲದ ಬೀಡಿಗೆ.
ಕೊಂಬೆ ಕೊಂಬೆಯ ತುಂಬ ಪುಟಿದಿದೆ
ಅಂತರಂಗದ ನಂಬಿಕೆ.
ಚಿಗುರು ಹೂವಿನ ಬಣ್ಣದಾರತಿ
ಯಾವುದೋ ಈ ಆನಂದಕೆ.
ಹಿಂದೂ ಪಂಚಾಗದ ಮೊದಲ ಹಬ್ಬವೇ ಈ ಯುಗಾದಿ.
ಇನ್ನು ಆಚರಣೆಗೆ ಬಂದರೆ, ಹೆಂಗೆಳೆಯರು ಮುಂಜಾವಿನಲಿ ಎದ್ದು ಬಾಗಿಲಿಗೆ ನೀರು ಹಾಕಿ ಮನೆಯ ಮುಂದಿನ ರಂಗೋಲಿ ನೋಡುವುದೇ ಅಂದ. ಜತೆಗೆ ಮನೆಯ ಮುಖ್ಯದ್ವಾರ ಮತ್ತು ದೇವರಮನೆಗೆ ಕಟ್ಟುವ ಮಾವಿನ ಎಲೆಗಳ ತೋರಣ ಹಬ್ಬವನ್ನು ಖುಷಿಯಿಂದ ಬರಮಾಡಿಕೊಳ್ಳುತ್ತದೆ. ಎಲ್ಲ ಹಿಂದೂ ಹಬ್ಬಗಳಲ್ಲಿ ಕಾಣುವ ಸಾಮಾನ್ಯ ಸಂಗತಿ ಮಾವಿನ ತೋರಣ. ಶುಭದ ಸಂಕೇತವಾದ ಈ ಎಲೆಗಳನ್ನು ಬಳಸುವ ಹಿಂದೆ ವೈಜ್ಞಾನಿಕ ಕಾರಣವೂ ಅಡಕವಾಗಿದೆ. ಈ ಹಸುರು ಎಲೆಗಳು ನಮಗೆ ಶುದ್ಧ ಆಮ್ಲಜನಕ ನೀಡುತ್ತವೆ. ಮಾವಿನ ಎಲೆಯನ್ನೇ ಪ್ರತ್ಯೇಕವಾಗಿ ಬಳಸುವುದಕ್ಕೂ ನಿರ್ದಿಷ್ಟ ಕಾರಣವುಂಟು. ಇದು ಬೇರೆಲ್ಲ ಎಲೆಗಳಿಗೆ ಹೋಲಿಸಿದರೆ ಒಣಗುವುದು ನಿಧಾನ, ತಾಜಾತನವನ್ನು ಬಹುದಿನ ಕಾಪಾಡಿಕೊಳ್ಳುತ್ತದೆ. ಇನ್ನು ತೋರಣದ ತುದಿಯಲ್ಲಿ ಸಿಗಿಸುವ ಬೇವು, ರೋಗ ನಿರೋಧಕವಾಗಿದೆ. ಮನೆಗೆ ಪ್ರವೇಶಿಸುವ ಗಾಳಿಯೊಡನೆ ಒಳಹೊಕ್ಕಿ ಸ್ವತ್ಛ ಗಾಳಿಯಾಗಿ ಪರಿವರ್ತಿಸುತ್ತದೆ.
ರಾಷ್ಟ್ರಕವಿ ಕುವೆಂಪು “ಯುಗಾದಿ’ ಕವಿತೆಯಲ್ಲಿ ಹೀಗೆ ಹೇಳುತ್ತಾರೆ.
ಮಾವಿನ ಬೇವಿನ ತೋರಣ ಕಟ್ಟು,
ಬೇವುಬೆಲ್ಲನೊಟ್ಟಿಗೆ ಕುಟ್ಟು!
ಜೀವನವೆಲ್ಲಾ ಬೇವುಬೆಲ್ಲ;.
ಎರಡೂ ಸವಿವನೆ ಕಲಿ ಮಲ್ಲ !!
ಮುಂದುವರಿದು, ಅತೀ ಸಾಮಾನ್ಯವಾದದ್ದು ಅಭ್ಯಂಜನ. ತಾಯಿ ಮಕ್ಕಳಿಗೆ ಪ್ರೀತಿಯಿಂದ ಹರಳೆಣ್ಣೆ/ಎಳ್ಳೆಣ್ಣೆ ತಲೆಗೆ, ಮೈಕೈಗೆ ಹಚ್ಚಿ, ಚಿರಂಜೀವಿಯಾಗು ಎಂದು ಹರೆಸುತ್ತಾ ಎಣ್ಣೆಯನ್ನು ಹಚ್ಚುತ್ತಾಳೆ. ಬೇವು ಬೆಲ್ಲ ತಿನ್ನುವುದು ಈ ಹಬ್ಬದ ಮತ್ತೂಂದು ವಿಶೇಷ. ಬೇವು ಆರೋಗ್ಯದ ವಿಷಯದಲ್ಲಿ ಎತ್ತಿದ ಕೈ. ಬೇವು ತಿನ್ನಲು ಕಹಿಯಾದ ಕಾರಣ ಜೀವನದಲ್ಲಿ ಬರುವ ಕಷ್ಟವನ್ನು ಪ್ರತಿನಿಧಿಸಿದರೆ, ಸಿಹಿಯಾದ ಬೆಲ್ಲವು ಸುಖದ ಸಂಕೇತ. ಇವೆರಡರ ಸಮ್ಮಿಶ್ರಣವೇ ನಮ್ಮ ಬದುಕು. ಆಹಾ ಎಷ್ಟೊಂದು ನೀತಿಯನ್ನು ಕಲಿಸುತ್ತಿದೆ ಈ ಮಿಶ್ರಣ. ಕಷ್ಟ ಸುಖದ ಈ ಬಾಳಿನಲ್ಲಿ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಭಾವವನ್ನು ಹೊಂದಿದೆ. ತಿಥಿ, ವಾರ, ನಕ್ಷತ್ರ, ಯೋಗ, ಕರ್ಣಗಳನ್ನು ತಿಳಿಸುವ ಪಂಚಾಂಗ ಪೂಜೆಗೆ ಆದ್ಯತೆ.
ಹಿಂದೆ ಸಾಮೂಹಿಕವಾಗಿ ದೇವಾಲಯಗಳಲ್ಲಿ ಪಂಚಾಂಗ ಶ್ರವಣವನ್ನು ತಪ್ಪದೇ ಬಂದು ಕೇಳುವ ಪರಿಪಾಠವೂ ಇತ್ತು. ಮಳೆ ಬೆಳೆ, ಯಾವ ಮಳೆ ನಕ್ಷತ್ರ ಎಷ್ಟು ಮಳೆ ತರಿಸುತ್ತದೆ, ಸಂಕ್ಷಿಪ್ತ ಹವಾಮಾನ, ರಾಶಿ ಭವಿಷ್ಯ, ಹೀಗೆ ಹತ್ತು ಹಲವಾರು ವಿಷಯಗಳು ಕೆಟ್ಟದಕ್ಕೂ – ಒಳ್ಳೆಯದಕ್ಕೂ ಅವರನ್ನು ಮಾನಸಿಕವಾಗಿ ಸಿದ್ಧಗೊಳಿಸುತ್ತಿತ್ತು. ಇನ್ನು ಬಾಯಲ್ಲಿ ನೀರೂರಿಸುವ ಹಬ್ಬದ ವಿಶೇಷ ಭೋಜನದ ಸವಿಯದಿದ್ದರೆ ಹೇಗೆ?
ಯುಗಾದಿಯೆಂದರೆ ಭಾರತದಾದ್ಯಂತ ಒಬ್ಬಟ್ಟಿಗೆ ಮೇಲುಗೈ!! ಮಾವಿನಕಾಯಿ ಚಿತ್ರಾನ್ನ, ಒಬ್ಬಟ್ಟು, ಕೋಸಂಬರಿ, ಒಬ್ಬಟ್ಟಿನ ಸಾರು, ಪಲ್ಯ, ಆಹಾ..! ರುಚಿ ತಿಂದವನೇ ಬಲ್ಲ. ಸಂಜೆಯ ಸಮಯ ಯುಗಾದಿಯ ಉಗುಳು ಎನ್ನುತ್ತಾರೆ. ಸಣ್ಣ ಮಳೆ ಬಂದೇ ಬರುವುದು!! ಹಬ್ಬದ ಸಂಭ್ರಮ ಇಲ್ಲಿಗೇ ಮುಗಿಯದೇ ಮಾರನೇ ದಿನದಕ್ಕೂ ಮುಂದುವರೆಯುತ್ತದೆ.
ವರ್ಷದ ತೊಡಕು. ಈ ದಿನ ಮಾಡಿದ ಕಾರ್ಯವನ್ನು ಪ್ರತಿದಿನ ಅಂದರೆ ವರ್ಷ ಪೂರ್ತಿ ಮಾಡುವೆವೆಂದು ಹೇಳಿ ಒಳ್ಳೆಯ ಕೆಲಸ ಮಾಡಿಸುವ ಇನ್ನೊಂದು ಕಾಳಜಿ. ಮಾಂಸಾಹಾರಿಗಳ ಮನೆಯಲ್ಲಿ ಮಾಂಸಾಹಾರ ಈ ದಿನದ ವಿಶೇಷ. ” ಚೌತಿ ಚಂದ್ರನ ನೋಡ್ಬೇಡ, ಬಿದಿಗೆ ಚಂದ್ರನ ಬಿಡಬೇಡ’ ಎಂಬ ನಾಣ್ಣುಣಿಯಂತೆ ಬಿದಿಗೆ ಚಂದ್ರನ ದರ್ಶನ ಶುಭ. ಆದರೆ ಸಾಮಾನ್ಯವಾಗಿ ಮೋಡ ಕವಿದು ಮಳೆಯ ಆಗಮನದಿಂದ ಪ್ರತಿವರ್ಷವೂ ಚಂದ್ರನ ದರ್ಶನವು ಕಷ್ಟ ಸಾಧ್ಯವೇ ಸರಿ. ಮಾರನೆಯ ದಿನದ ತದಿಗೆ ತಾಯಿ ಗೌರಮ್ಮನಿಗೆ ವಿಶೇಷ. ಈ ದಿನದಂದು ಮಾಡಿದ ಪೂಜೆ, ಧಾನ, ಒಳಿತನ್ನು ಮಾಡುವುದೆಂಬ ನಂಬಿಕೆ. ರಾಷ್ಟ್ರಕವಿ ಜಿ.ಎಸ್.ಎಸ್‌ರವರ “ಯುಗಾದಿಯ ಹಾಡು’ ಎಂಬ ಕವನದ ಕೆಲವು ಸಾಲುಗಳು ಹೀಗಿವೆ:
ಹಳೆ ನೆನಪುಗಳುದುರಲಿ ಬಿಡು ಬೀಸುವ ಛಳಿ ಗಾಳಿಗೆ
ತರಗೆಲೆಗಳ ಚಿತೆಯುರಿಯಲಿ ಚೈತ್ರೋದಯ ಜ್ವಾಲೆಗೆ
ಹೊಸ ಭರವಸೆಗಳು ಚಿಗುರುತಲಿವೆ ಎಲೆಉದುರಿದ ಕೊಂಬೆಗೆ!!
ಶುಭಕೃತ್ ಸಂವತ್ಸರವು ನಮ್ಮ ಜೀವನದಲ್ಲಿ ಯಶಸ್ಸನ್ನು ತರಲಿ.
ನಿಮೆಲ್ಲರಿಗೂ ಯುಗಾದಿಯ ಶುಭಾಶಯಗಳು!!
– ಸುಪ್ರೀತಾ ಶಾಸ್ತ್ರೀ, ವಾಷಿಂಗ್ಟನ್
ಟಾಪ್ ನ್ಯೂಸ್
