ಕನ್ನಡಿಯೊಳಗೆ ಬ್ಲೂವೇಲ್‌ : ಕರಾವಳಿ ಹುಡುಗ ಥ್ರಿಲ್ಲರ್‌ ಚಿತ್ರ

Blue whale game related news Kannada film is ready to release

Team Udayavani, Apr 25, 2019, 8:26 PM IST

ನಿಮಗೆ ಬ್ಲೂವೇಲ್‌ ಗೇಮ್‌ ಬಗ್ಗೆ ಗೊತ್ತಲ್ಲ. ಇಂಟರ್‌ನೆಟ್‌ ಮೂಲಕವೇ ವಿಶ್ವದಾದ್ಯಂತ ನೂರಾರು ಜನರ ಸಾವಿಗೆ ಕಾರಣವಾಗಿರುವ ಈ ಆನ್‌ಲೈನ್‌ ಗೇಮ್‌ಗೆ, ಭಾರತದಲ್ಲೂ ಅನೇಕರು ಬಲಿಯಾಗಿದ್ದಾರೆ. ಸದ್ಯ ಬ್ಲೂವೇಲ್‌ ತಡೆಗೆ ಸರ್ಕಾರಗಳು ತಲೆಕೆಡಿಸಿಕೊಂಡಿದ್ದು, ಇಂಥ ಅಪಾಯಕಾರಿ ಆನ್‌ಲೈನ್‌ ಗೇಮ್‌ಗಳ ವಿರುದ್ಧ, ಸರ್ಕಾರ, ಸಂಘ-ಸಂಸ್ಥೆಗಳು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಈಗ ಇದೇ ಬ್ಲೂವೇಲ್‌ ವಿಷಯವನ್ನು ಇಟ್ಟುಕೊಂಡು ಕನ್ನಡದಲ್ಲಿ ಚಿತ್ರವೊಂದು ತೆರೆಗೆ ಬರುತ್ತಿದೆ.
ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ “ಮಾಯಾ ಕನ್ನಡಿ’ ಎಂದು ಹೆಸರಿಡಲಾಗಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಅಂತಿಮ ಹಂತದಲ್ಲಿರುವ ಚಿತ್ರತಂಡ ಇತ್ತೀಚೆಗೆ ತನ್ನ ಮೊದಲ ಟೀಸರ್‌ ಬಿಡುಗಡೆ ಮಾಡಿದೆ. ಪ್ರಸ್ತುತ ಯುಎಇ ನಲ್ಲಿ ಏವಿಯೇಷನ್‌ ವೃತ್ತಿಯಲ್ಲಿರುವ, ದಕ್ಷಿಣ ಕನ್ನಡ ಮೂಲದ ಅನಿವಾಸಿ ಕನ್ನಡಿಗ, ವಿನೋದ್‌ ಪೂಜಾರಿ ಮಾಯಾ ಕನ್ನಡಿ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ವಿನೋದ್‌ ಪೂಜಾರಿ, “ಇದೊಂದು ಸಸ್ಪೆನ್ಸ್‌-ಥ್ರಿಲ್ಲರ್‌ ಮತ್ತು ಕ್ರೈಂ ಕಥಾಹಂದರ ಹೊಂದಿರುವ ಚಿತ್ರ. ನಿಗೂಢವಾಗಿ ನಡೆಯುವ ಕೊಲೆಯ ಹಿಂದಿನ ಕಾರಣವೇನು, ಉದ್ದೇಶವೇನು ಎನ್ನುವುದು ಚಿತ್ರದ ಕಥೆಯ ಒಂದು ಎಳೆ. ಕೆಲವು ನೈಜ ಘಟನೆಗಳು ಈ ಚಿತ್ರಕ್ಕೆ ಸ್ಫೂರ್ತಿಯಾಗಿವೆ. ಬ್ಲೂವೇಲ್‌ ಗೇಮ್‌, ಕಾಲೇಜ್‌ ಕ್ಯಾಂಪಸ್‌, ಸ್ಟೂಡೆಂಟ್ಸ್‌ ಲೈಫ್, ಲವ್‌ ಹೀಗೆ ಹತ್ತರು ವಿಷಯಗಳು ಈ ಚಿತ್ರದಲ್ಲಿವೆ. ಸುಮಾರು ಒಂದೂವರೆ ವರ್ಷದ ಹಿಂದೆ ಪ್ರಾರಂಭವಾದ ಈ ಚಿತ್ರ ಈಗ ಅಂತಿಮ ಹಂತದಲ್ಲಿದ್ದೆ. ಆದಷ್ಟು ಬೇಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲಿದ್ದೇವೆ’ ಎಂದರು.
“ಮಾಯಾ ಕನ್ನಡಿ’ ಚಿತ್ರದಲ್ಲಿ ಪ್ರಭು ಮುಂದಕೂರ್‌ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಕಾಜಲ್‌ ಕುಂದರ್‌ ಮತ್ತು ಅನ್ವಿಕಾ ಸಾಗರ್‌ ಇಬ್ಬರು ನಾಯಕಿಯರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಿರಿಯ ನಟ ಕೆ.ಎಸ್‌ ಶ್ರೀಧರ್‌ ಕಾಲೇಜ್‌ ಟ್ರಸ್ಟಿಯ ಪಾತ್ರದಲ್ಲಿ, ಅನೂಪ್‌ ಸಾಗರ್‌ ಖಳನಾಯಕನಾಗಿ, ಉಳಿದಂತೆ ಕಾರ್ತಿಕ್‌ ರಾವ್‌, ಅಶ್ವಿ‌ನ್‌ ರಾವ್‌, ಶ್ರೀ ಶ್ರೇಯಾ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಸಪನಾ ಪಾಟೀಲ್‌, ರಂಜಿತ್‌ ಬಜ್ಪೆ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಮಣಿ ಕೋಕಲ್‌ ನಾಯರ್‌ ಛಾಯಾಗ್ರಹಣ, ಸುಜಿತ್‌ ನಾಯಕ್‌ ಸಂಕಲನ ಕಾರ್ಯವಿದೆ. ಚಿತ್ರದ ಹಾಡುಗಳಿಗೆ ಅಭಿಷೇಕ್‌ ಎಸ್‌.ಎನ್‌ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ದೃಶ್ಯಗಳಿಗೆ ಮ್ಯಾಂಡಿ ಮಂಜು ಸಂಭಾಷಣೆ ಬರೆದಿದ್ದಾರೆ.
ಸದ್ಯ ಟೀಸರ್‌ ಬಿಡುಗಡೆಯ ಮೂಲಕ ಚಿತ್ರದ ಪ್ರಮೋಷನ್‌ ಕೆಲಸಗಳಿಗೆ ಚಾಲನೆ ನೀಡಿರುವ “ಮಾಯಾ ಕನ್ನಡಿ’ ಚಿತ್ರತಂಡ, ಇದೇ ಮೇ ವೇಳೆಗೆ ಚಿತ್ರದ ಆಡಿಯೋವನ್ನು ಹೊರತರಲಿದೆ. ಚಿತ್ರತಂಡದ ಪ್ಲಾನ್‌ ಪ್ರಕಾರ ಎಲ್ಲವೂ ನಡೆದರೆ, ಇದೇ ಜೂನ್‌ ವೇಳೆಗೆ “ಮಾಯಾ ಕನ್ನಡಿ’ ಪ್ರೇಕ್ಷಕರ ಮುಂದೆ ಬರಲಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ