ಸರ್ಕಾರ ಏನೂ ಮಾಡುತ್ತಿಲ್ಲ ಎಂದು ಒಪ್ಪಲಾಗದು – ಹೈ ಕೋರ್ಟ್
Team Udayavani, Dec 5, 2021, 10:51 AM IST
ಬೆಂಗಳೂರು: ಹೊಸ ವೈರಸ್ ಪತ್ತೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಆಡಳಿಯ ಯಂತ್ರ ಎಚ್ಚೆತ್ತು ಕೊಂಡಿದೆ. ಸರಣಿ ಸಭೆಗಳು ನಡೆ ಯುತ್ತಿವೆ. ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಹೀಗಿರುವಾಗ ಸರ್ಕಾರ ಏನೂ ಮಾಡಿಲ್ಲ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಕೊರೊನಾ ನಿರ್ವಹಣೆ ಸಂಬಂಧ 20 ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾ. ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಶನಿವಾರ ವಿಚಾರಣೆ ನಡೆಸಿತು. ಕೋರ್ಟ್ ನಿರ್ದೇಶನವಿದ್ದರೂ, ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂ ಸುವ ಗಣ್ಯರ ವಿರುದ್ಧ ಸರ್ಕಾರ ಪರಿಣಾಮಕಾರಿ ಕ್ರಮ ಗಳನ್ನು ಕೈಗೊಂಡಿಲ್ಲ ಎಂದು ಅರ್ಜಿದಾರರೊಬ್ಬರ ಪರ ವಕೀಲರು ನ್ಯಾಯಪೀಠಕ್ಕೆ ದೂರಿದರು.
ಇದನ್ನೂ ಓದಿ:- ನಾಗಾಲ್ಯಾಂಡ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ; ಆರು ಮಂದಿ ಸಾವು, ಪರಿಸ್ಥಿತಿ ಉದ್ವಿಗ್ನ
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸರ್ಕಾರ ಏನೂ ಮಾಡಿಲ್ಲ ಎನ್ನುವ ನಮ್ಮ ನ್ಯಾಯಾಲಯ ಒಪ್ಪುವುದಿಲ್ಲ. ಹೊಸ ವೈರಸ್‌ನ 2 ಪ್ರಕರಣ ಗಳು ಪತ್ತೆಯಾದ ಬಳಿಕ ಸರ್ಕಾರ ಎಚ್ಚೆತ್ತುಕೊಂಡಿದೆ. ಹೀಗಿರುವಾಗ ಹೈಕೋರ್ಟ್ ಮಧ್ಯಪ್ರವೇಶಿಸುವ ಅವಶ್ಯಕತೆ ಕಂಡು ಬರುತ್ತಿಲ್ಲ. ಕೈಗೊಂಡಿರುವ ಕ್ರಮಗಳನ್ನು ಇನ್ನಷ್ಟು ಚುರುಕುಗೊಳಿಸಿ ಎಂದು ನಿರ್ದೇಶನ ನೀಡಬಹುದಷ್ಟೇ ಎಂದು ಹೇಳಿತು.
ವರದಿ ಸಲ್ಲಿಸಲು ಸೂಚನೆ: ಈ ವೇಳೆ ಬಿಬಿಎಂಪಿ ಪರ ವಕೀಲರು ವಾದ ಮಂಡಿಸಿ, ದುಬಾರಿ ಶುಲ್ಕ ಪಡೆದ ಆಸ್ಪತ್ರೆಗಳ ವಿರುದ್ಧ ನೀಡುವ ಬಗ್ಗೆ ಪಾಲಿಕೆ ವೆಬ್‌ಸೈಟ್‌ನಲ್ಲಿ ಸೂಚನೆ ಪ್ರಕಟಿಸಲಾಗಿತ್ತು. ಅದರಂತೆ ಒಟ್ಟು 13 ದೂರುಗಳು ಬಂದಿದ್ದವು. ಅದರಲ್ಲಿ 8 ದೂರುಗಳನ್ನು ಇತ್ಯರ್ಥಪಡಿಸಲಾಗಿದ್ದು, ಉಳಿದ ದೂರುಗಳು ಪರಿಶೀಲನೆಯಲ್ಲಿವೆ ಎಂದು ಮಾಹಿತಿ ನೀಡಿದರು. ಅದಕ್ಕೆ ದುಬಾರಿ ಶುಲ್ಕ ಪಡೆದ ಆಸ್ಪತ್ರೆಗಳ ವಿರುದ್ಧ ಕೈಗೊಂಡ ಕ್ರಮ ಗಳ ಅನುಪಾಲನಾ ವರದಿ ಸಲ್ಲಿಸುವಂತೆ ನ್ಯಾಯಪೀಠ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.
17 ಅರ್ಜಿಗಳ ಇತ್ಯರ್ಥ: ಕೊರೊನಾ 1 ಮತ್ತು 2ನೇ ಅಲೆ ವೇಳೆ ಉದ್ಭವಿಸಿದ್ದ ಸಮಸ್ಯೆಗಳಿಗೆ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈಗ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಅರ್ಜಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ಕಾಲ-ಕಾಲಕ್ಕೆ ಅಗತ್ಯ ನಿರ್ದೇಶನಗಳನ್ನು ನೀಡಿತ್ತು. ಅದರಂತೆ, ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ.
ಆದ್ದರಿಂದ, ಬಹುತೇಕ ಅರ್ಜಿಗಳ ವಿಚಾರಣೆ ಮುಂದುವರಿಸುವ ಅವಶ್ಯಕತೆ ಇಲ್ಲ. ಕೆಲವೊಂದು ಅರ್ಜಿಗಳನ್ನು ಮಾತ್ರ ಇನ್ನೂ ವಿಚಾರಣೆಗೆ ಬಾಕಿ ಉಳಿಸಿಕೊಳ್ಳಬಹುದು ಎಂದು ಅರ್ಜಿವಾರು ವಿವರಣೆ ನೀಡಿದರು. ಇದನ್ನು ದಾಖಳಿಸಿಕೊಂಡ ನ್ಯಾಯಪೀಠ, ಸದ್ಯ ಅವಶ್ಯಕತೆ ಇಲ್ಲದ 17 ಅರ್ಜಿಗಳನ್ನು ಇತ್ಯರ್ಥಪಡಿಸಿತು. ಉಳಿದ ಅರ್ಜಿಗಳ ವಿಚಾರಣೆಯನ್ನು 2022ರ ಜ.27ಕ್ಕೆ ಮುಂದೂಡಲಾಯಿತು.
ಕೊರೊನಾ ಲಸಿಕೆ ಕಡ್ಡಾಯ ಬೇಡ: ಅರ್ಜಿ ವಜಾ
ವೈದ್ಯಕೀಯ ಕಾರಣ ಇರುವ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಕೊರೊನಾ ಲಸಿಕೆ 1ನೇ ಡೋಸ್ ಕಡ್ಡಾಯಗೊಳಿಸದಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂಬ ಅರ್ಜಿಯನ್ನು ಇದೇ ವೇಳೆ ಹೈಕೋರ್ಟ್ ತಳ್ಳಿ ಹಾಕಿದೆ.
ಈ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಲಸಿಕೆ ಹಾಕಿಸಿಕೊಳ್ಳದವರು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರುವ ಶಾಲಾ-ಕಾಲೇಜುಗಳಿಗೆ ಹೋಗಿ ಅಲ್ಲಿರುವ ವಿದ್ಯಾರ್ಥಿಗಳನ್ನು ಅಪಾಯಕ್ಕೆ ದೂಡಲು ಬಯಸುವುದಿಲ್ಲ. ಹಾಗಾಗಿ, ಈ ವಿಚಾರದಲ್ಲಿ ಸರ್ಕಾರಕ್ಕೆ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿತು.