ಪುದು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಆಂಗ್ಲ ಮಾಧ್ಯಮ
Team Udayavani, Jun 10, 2019, 6:10 AM IST
ಬಂಟ್ವಾಳ: ತಾಲೂಕಿನ ಪುದು ಸ.ಹಿ.ಪ್ರಾ. ಶಾಲೆಯಲ್ಲಿ ವರ್ಷ ಕಳೆದಂತೆ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆ ಯಾಗುತ್ತಲೇ ಇತ್ತು. ಮಕ್ಕಳನ್ನು ಹೇಗೆ ತರುವುದು ಎಂಬ ಚಿಂತೆ ಕಾಡಿತ್ತು. ಈ ಹಿನ್ನೆಲೆಯಲ್ಲಿ ಕಳೆದ 4 ವರ್ಷಗಳ ಹಿಂದೆ ಇಲ್ಲಿನ ಶಿಕ್ಷಕರು ಹಾಗೂ ಎಸ್ಡಿಎಂಸಿಯವರು ನಡೆಸಿದ ಅಭಿಯಾನದಿಂದ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿತ್ತು.
ಶಾಲೆಯಲ್ಲಿ ಕಳೆದ ವರ್ಷ 110 ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದು, 39 ವಿದ್ಯಾರ್ಥಿಗಳು 1ನೇ ತರಗತಿಗೆ ಸೇರ್ಪಡೆಗೊಂಡಿದ್ದರು. ಈ ಬಾರಿ ಶಾಲೆಯ ಶೇ. 50 ಕ್ಕಿಂತಲೂ ಹೆಚ್ಚು ಅಂದರೆ ಬರೋಬ್ಬರಿ 63 ವಿದ್ಯಾರ್ಥಿ ಗಳು 1ನೇ ತರಗತಿಗೆ ಸೇರ್ಪಡೆಗೊಂಡಿದ್ದಾರೆ. ಆಂಗ್ಲ ಮಾಧ್ಯಮ ಶಿಕ್ಷಣದಿಂದ ಮುಂದಿನ ವರ್ಷಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಶಾಲೆಗೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ.
ಒಂದು ಹಂತದಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಕುಸಿದಿದ್ದು, ಬಳಿಕ ಮನೆ ಮನೆಗೆ ತೆರಳಿ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುವಂತೆ ಮನವಿ ಮಾಡಲಾಗಿತ್ತು. ಹೀಗಾಗಿ ಪ್ರಸ್ತುತ ವರ್ಷದಲ್ಲಿ ವಿದ್ಯಾರ್ಥಿ ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೂಲ ಸೌಕರ್ಯವೂ ಉತ್ತಮ ಸ್ಥಿತಿಯಲ್ಲಿದೆ.