ಎತ್ತರದ ಮರಗಳ ಮಧ್ಯೆ ನಿಂತಿತ್ತು ಇಬ್ಬನಿಯ ಹುಲಿ!


Team Udayavani, Jan 7, 2018, 6:00 AM IST

Sanjay-Gubbi,.jpg

ಗ್ರೀನ್‌ ಆಸ್ಕರ್‌ ಪುರಸ್ಕೃತ ಸಂಜಯ್‌ ಗುಬ್ಬಿ ವನ್ಯಜೀವಿ ಸಂರಕ್ಷಣೆ, ವಿಜ್ಞಾನದ ಮುಂಚೂಣಿಯಲ್ಲಿರುವವರು. ಗ್ರಾಮೀಣ ಪ್ರದೇಶದಿಂದ ಬಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.  ರಾಜ್ಯ ವನ್ಯಜೀವಿ ಮಂಡಳಿಯಲಲ್ಲದೆ ಸರ್ಕಾರದ ಇನ್ನು ಹಲವು ಸಮಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೈಸೂರಿನ ನೇಚರ್‌ ಕನ್ಸರ್ವೇಷನ್‌ ಫೌಂಡೇಶನ್‌ನಲ್ಲಿ ವಿಜ್ಞಾನಿಯಾಗಿದ್ದಾರೆ. ಸ್ಥಳೀಯ ಭಾಷೆಗಳಲ್ಲಿ ವನ್ಯಜೀವಿ ಸಂರಕ್ಷಣೆ, ವಿಜ್ಞಾನ ಮತ್ತು ನಿಸರ್ಗ ಶಿಕ್ಷಣವನ್ನು ಪ್ರಚಲಿತಪಡಿಸುವುದು ಬಹು ಮುಖ್ಯವೆಂದು ನಂಬಿದ್ದಾರೆ. “ವನ್ಯಜೀವಿಗಳ ಜಾಡುಹಿಡಿದು’ ಅವರ ಪುಸ್ತಕ ಮತ್ತು ಈಗ ಪ್ರಕಟಗೊಳ್ಳುತ್ತಿರುವ “ಸೆಕೆಂಡ್‌ ನೇಚರ್‌’ ಆಂಗ್ಲ ಪುಸ್ತಕ ಜಗತ್ತಿನಲ್ಲಿ ಅವರ ಮೊದಲ ಪ್ರಯತ್ನ. ಅವರ ಮತ್ತೂಂದು ಪ್ರೀತಿಯೆಂದರೆ ಕನ್ನಡ ಮತ್ತು ಸ್ಥಳೀಯ ತಿಂಡಿ ತಿನಿಸುಗಳು.

ಸಂಜಯ್‌ ಗುಬ್ಬಿ ಅವರು 2017 ವಿಟ್ಲಿ  ಪ್ರಶಸ್ತಿಗೆ(ಗ್ರೀನ್‌ ಆಸ್ಕರ್‌) ಪಾತ್ರರಾದಾಗ, ಅವರ ವನ್ಯ ಕಾಯಕದ ಬಗ್ಗೆ ಸರ್‌ ಡೇವಿಡ್‌ ಅಟೆನ್‌ಬರೋ ನೀಡಿದ ಪರಿಚಯ  ವಿಡಿಯೋ ನೋಡಲು ಈ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ. ಅಥವಾ ಈ ಲಿಂಕ್‌ goo.gl/FkTXnA ಟೈಪ್‌ ಮಾಡಿ.

ಫೆಬ್ರವರಿ ತಿಂಗಳ ಒಂದು ಬೆಳಗ್ಗೆ ನಾಗರಹೊಳೆಯ ಕಲ್ಲಹಳ್ಳ ಪ್ರದೇಶದಲ್ಲಿ ಹೋಗುತ್ತಿದ್ದೆ. ಮುಂಜಾನೆ ಬೆಳಕು, ಬೃಹದಾಕಾರ ವಾಗಿ, ಯಥೇತ್ಛವಾಗಿ ಬೆಳೆದಿದ್ದ ಬೊಂಬಿರುವ ಮಂಜು ಕಾಡಿನ ಮೇಲೆ ತೆಳು ಮಸ್ಲಿನ್‌ ಬಟ್ಟೆಯ ಹಾಗೆ ನಾಜೂಕಾಗಿ ಆವರಿಸಿಕೊಂಡಿತ್ತು. ದೂರದಲ್ಲಿ ಕೋಗಿಲೆಚಾಣ ಪಕ್ಷಿಯೊಂದು ಕೂಗುತ್ತಿರುವುದು ಕೇಳುತ್ತಿದೆ, ಹಲವಾರು ಇತರ ಹಕ್ಕಿಗಳ ಕಲರವ ಬಿಟ್ಟರೆ ಇನ್ನೇನೂ ಶಬ್ದವಿಲ್ಲ. 130 ಕೋಟಿ ಜನಸಂಖ್ಯೆಯಿರುವ ನಮ್ಮ ದೇಶದಲ್ಲಿ ನಿಶ್ಶ‌ಬ್ದವೊಂದು ಬಹು ಅಪರೂಪವಾದ ಪದಾರ್ಥ. ಕಾಡಿನ ರಸ್ತೆಯಲ್ಲಿ ಸಾಗುತ್ತಿದ್ದ ನನಗೆ ಸುಮಾರು ಐವತ್ತು ಮೀಟರ್‌ ದೂರದಲ್ಲಿ ಕಿತ್ತಳೆ ಬಣ್ಣದ ತೊಗಲಿನ ಮೇಲೆ ಬಿಳಿ ಚುಕ್ಕೆಗಳುಳ್ಳ ಜಿಂಕೆಗಳು ರಸ್ತೆಯ ಬದಿಯಲ್ಲಿ ಮೇಯುತ್ತಿದ್ದದ್ದು ಕಂಡವು. ವಾಹನವನ್ನು ನಿಧಾನಗೊಳಿಸಿ ಜಿಂಕೆಗಳನ್ನು ನೋಡಲು ನಿಲ್ಲಿಸಿದೆ. ಗಂಡು, ಹೆಣ್ಣು ಮರಿಗಳಿರುವ ಸುಮಾರು 15 ಜಿಂಕೆಗಳು ನೆಮ್ಮದಿಯಿಂದ ಹುಲ್ಲು ಮೇಯುತ್ತಿದ್ದವು. ಜಿಂಕೆಗಳ ಹಿಂದೆ ಇನ್ನೊಂದು ಐವತ್ತು ಮೀಟರ್‌ ದೂರದಲ್ಲಿ ಕಾಡಿನ ರಸ್ತೆಯ ಎರಡೂ ಹಾದಿಗಳಲ್ಲಿ ರಸ್ತೆ ಉಬ್ಬುಗಳ ಹಾಗೆ ವಿಚಿತ್ರವೆನಿಸುವ ಆಕಾರಗಳು ಕಂಡುಬಂದವು. ಸ್ವಲ್ಪ ಕೂಲಂಕಷವಾಗಿ ನೋಡಬೇಕು ಎಂದಿತು ನನ್ನ ನಿಸರ್ಗ ಪ್ರವೃತ್ತಿ. ದುರ್ಬೀನನ್ನು ಕಣ್ಣಿಗಿಟ್ಟು ನೋಡಿದೊಡನೆ ನನ್ನಲ್ಲಿ ರಕ್ತ ಸಂಚಲನ ಹೆಚ್ಚಿತು. “ಹುಲಿ, ಹುಲಿ’ ಎಂದು ಪಿಸುಗುಟ್ಟಿದೆ. 

ಒಂದರ ಬದಿಯಲ್ಲಿ ಇನ್ನೊಂದು. ಬಾಗಿ, ಕಾಡಿನ ರಸ್ತೆಯಲ್ಲಿ ಮುದುಡಿ ಕುಳಿತ ಎರಡೂ ಹುಲಿಗಳು ತಲೆ ತಗ್ಗಿಸಿ ಹುಲ್ಲು ಮೇಯುತ್ತಿರುವ ಜಿಂಕೆಗಳನ್ನೇ ನೆಟ್ಟ ದೃಷ್ಟಿಯಿಂದ ನೋಡುತ್ತಾ ಕುಳಿತಿವೆ. ಎರಡರ ತಲೆಗಳು ಮುಂಗಾಲಿನ ಪಾದಗಳ ಮಧ್ಯೆ ಇವೆ. ಅವುಗಳ ಕಿವಿಗಳು ಆಗಾಗ್ಗೆ ಕೆಲವೇ ಕೆಲ ಮೈಕ್ರೋಮೀಟರ್‌ ಅಲ್ಲಾಡುವುದು ಬಿಟ್ಟರೆ ದೇಹದ ಎಲ್ಲಾ ಭಾಗಗಳು ತಟಸ್ಥ. ಇದ್ದಕ್ಕಿದ್ದ ಹಾಗೆ ಎಡ ಬದಿಯಲ್ಲಿದ್ದ ಹುಲಿಯು ಯಾವುದೇ ಸದ್ದಿಲ್ಲದೇ ಪಕ್ಕದಲ್ಲಿದ್ದ ಪೊದೆಯೊಳಗೆ ಕ್ಷಣಾರ್ಧದಲ್ಲಿ ಮಾಯವಾಯಿತು. ಬಲ ಬದಿಯಲ್ಲಿದ್ದ ಕಿತ್ತಳೆ ಬಣ್ಣದ ಗುಂಡಾಕಾರವು, ಅದೇ ಮುದುಡಿಕೊಂಡ ಭಂಗಿಯಲ್ಲಿ ಮೆಲ್ಲನೆ ಒಂದೊಂದೇ ಸೆಂಟಿಮೀಟರ್‌ ತೆವಳುತ್ತ ಹತ್ತು ಮೀಟರ್‌ನಷ್ಟು ಮುಂದೆ ಬಂದಿದೆ. ಗುರಿ ತಲುಪಲು ಇನ್ನೇನು ನಲವತ್ತು ಮೀಟರ್‌ನಷ್ಟೇ ದೂರ ಕ್ರಮಿಸಬೇಕು. ಎಲ್ಲವೂ ನಿಶ್ಶಬ್ದ. ಗಾಡಿಯಲ್ಲಿದ್ದ ನನಗೆ ಎಳ್ಳಷ್ಟೂ ಅಲುಗಾಡಲು ಆಗುತ್ತಿಲ್ಲ. ಮನಸ್ಸಿನಲ್ಲಿ ಹುಲಿ ಓಡಿ ಬಂದು ಜಿಂಕೆ ಹಿಡಿಯುವ ಚಿತ್ರಣ, ಚಲನಚಿತ್ರದ ಸುರುಳಿಯಂತೆ ಓಡುತ್ತಿದೆ. ನನ್ನ ಎದೆ ಬಡಿತ ನನಗೇ ಕೇಳಿಸುತ್ತಿದೆ. 

ಇದ್ದಕ್ಕಿದ್ದ ಹಾಗೆ ಗುಂಪಿನ ತುದಿಯಲ್ಲಿ ಮೇಯುತ್ತಿದ್ದ ಉದ್ದ ಮತ್ತು ಅಗಲವಾದ ಕೋಡುಗಳುಳ್ಳ ಗಂಡು ಜಿಂಕೆಯೊಂದು ತಲೆಯೆತ್ತಿ ಹುಲಿ ಮುದುಡಿ ಕುಳಿತಿದ್ದ ದಿಕ್ಕಿನಲ್ಲಿ ನೋಡಿತು. ತತ್‌ಕ್ಷಣವೇ, “ಕು,ಕು’ ಎಂದು ಕಾಡೆಲ್ಲಾ ಮಾರ್ದನಿಸುವಷ್ಟು ಗಟ್ಟಿಯಾಗಿ ಕೂಗಿತು. ಇದು ಜಿಂಕೆಗಳು ತಮ್ಮ ಗುಂಪಿನ ಸದಸ್ಯರಿಗೆ ಮತ್ತು ಕಾಡಿನ ಇತರ ಪ್ರಾಣಿಗಳಿಗೆ “ಅಪಾಯವಿದೆ ಜಾಗರೂಕರಾಗಿ’ ಎಂದು ಎಚ್ಚರಿಸುವ ಸಂಕೇತ. ಹಿಂದೆ ರಾಜರ ಸಮಯದಲ್ಲಿ ಕೋಟೆ ಕಾಯುವ ಪಹರೆಯವರು ಅಪಾಯ ಕಂಡೊಡನೆ ಕಹಳೆ ಊದುತ್ತಿದ್ದ ಹಾಗೆ. ಎಚ್ಚರಿಕೆಯ ಗಂಟೆ ಕೇಳಿದೊಡನೆ ಜಿಂಕೆಗಳೆಲ್ಲವೂ ದಿಕ್ಕಾಪಾಲಾಗಿ ಓಡಿದವು. ಕ್ಷಣಾರ್ಧದಲ್ಲಿ ನನ್ನ ಮತ್ತು ಹುಲಿಯ ಮಧ್ಯೆ ಪರದೆಯಂತಿದ್ದ ಜಿಂಕೆಗಳು ಮಾಯವಾಗಿದ್ದವು. ಸುದ್ದಿ ಬಿತ್ತರವಾಗಿಬಿಟ್ಟಿತ್ತು. ಹುಲಿ ಬೇಟೆಯಾಡುವ ಅಪರೂಪದ ದೃಶ್ಯವನ್ನು ನೋಡಲು ಕಾಯುತ್ತಿದ್ದ ನನಗೆ ಅದೊಂದು ಆ್ಯಂಟಿ ಕ್ಲೈಮಾಕ್ಸ್‌ ಎಂದೆನಿಸಿತು. ಆದರೆ ಮುಂದಿನ ಎರಡು ನಿಮಿಷಗಳು ನನ್ನ ಜೀವಿತಾವಧಿಯಲ್ಲಿ ಮರೆಯಲಾಗದಂತಹ ದೃಶ್ಯವನ್ನು ನಿಸರ್ಗ ನನ್ನ ಮುಂದೆ ತೆಗೆದಿಟ್ಟಿತು. 

ಹುಲಿಯು ತನ್ನ ಗುಟ್ಟು ರಟ್ಟಾಯಿತೆಂದು ತಿಳಿದು ಎದ್ದು ನಿಂತಿತು. ಕಣ್ಣಾಮುಚ್ಚಾಲೆ ಆಟದಲ್ಲಿ ಮೊದಲು ಸಿಕ್ಕಿಹಾಕಿಕೊಂಡ ಮಕ್ಕಳ ಹಾಗೆ ಅದು ನಿರಾಸೆಗೊಂಡಿರಬೇಕು. ಅದಕ್ಕೆ ಇದ್ದಕ್ಕಿದ್ದ ಹಾಗೆ ತನ್ನ ಎದುರು, ಸ್ವಲ್ಪ ದೂರದಲ್ಲಿ, ಮಂಜಿನ ಮಧ್ಯೆ ಅಸ್ಪಷ್ಟವಾಗಿದ್ದ ವಿಚಿತ್ರವಾದ ದೊಡ್ಡ ಆಕಾರ ಕಂಡಿರಬೇಕು. ಕುತೂಹಲದಿಂದ ತಲೆಯನ್ನು ಬಲಕ್ಕೆ ಎಡಕ್ಕೆ ಚನ್ನಪಟ್ಟಣ ಗೊಂಬೆಯ ಹಾಗೆ ಆಡಿಸುತ್ತಾ ಮೆಲ್ಲನೆ ಮುಂದೆ ಬಂದಿತು. ತನ್ನ ಮುಂದಿರುವ ಆಕಾರವೇನು ಎಂದು ತಿಳಿಯದೆ ತನ್ನ ಬಲ ಪಾದವನ್ನು ಸ್ವಲ್ಪ ಎತ್ತಿ ಹಿಡಿದು ಅನುಮಾನದಿಂದ ಅಲುಗಾಡದೆ ನಿಂತಲ್ಲೇ ನಿಂತಿತು. ನನ್ನ ಮುಂದಿದ್ದ ದೃಶ್ಯವು ಯಾವುದೇ ನ್ಯೂನತೆಯಿಲ್ಲದೆ ಅತ್ಯದ್ಭುತ ವರ್ಣ ಚಿತ್ರದಂತಿತ್ತು. ಇಬ್ಬನಿಯಿಂದ ಕೂಡಿದ ಕಾಡು, ಎತ್ತರದ ಮರಗಳ ಮಧ್ಯೆ ಬಹು ಗಾಂಭೀರ್ಯದಿಂದ ನಿಂತಿದ್ದ ಹುಲಿ, ಅದರ ಹಿಂದಿನಿಂದ ಮರಗಳಿಂದ ತೂರಿಬಂದು ಹುಲಿಯ ಮೇಲೆ ಬೀಳುತ್ತಿದ್ದ ಎಳೆಬಿಸಿಲು ಅನುಭಾವಿ ದೃಶ್ಯವೊಂದನ್ನು ಸೃಷ್ಟಿ ಮಾಡಿತ್ತು. ಇಬ್ಬನಿಯ ಹುಲಿಯೆಂದುಕೊಂಡೆ ನನ್ನ ಮನದಲ್ಲಿ.     
   
ಇದೇ ಪ್ರಾಣಿ ಪ್ರಪಂಚದಲ್ಲಿ ಹಲವಾರು ಜನರನ್ನು ವನ್ಯಜೀವಿ ಸಂರಕ್ಷಣೆಯತ್ತ ಆಕರ್ಷಿಸಿರುವುದು ಮತ್ತು ಅವಗಳ ಸಂರಕ್ಷಣೆ ಹೋರಾಡಲು ಸ್ಫೂರ್ತಿ ತಂದುಕೊಟ್ಟಿರುವುದು. ಈ ಜೇನು ತುಪ್ಪ ಬಣ್ಣದ ಕಣ್ಣಿನ ಮಾರ್ಜಾಲವು ಹಲವರಿಗೆ ಹಲವು ತರಹದ ನಿರೂಪಣೆ – ಉಗ್ರವಾದ ಪರಭಕ್ಷಕ, ವಸ್ತುಗಳನ್ನು ಬಿಕರಿಸಲು ಉಪಯೋಗವಾಗುವ ಮಾರುಕಟ್ಟೆಯ ಲಾಂಛನ, ಪ್ರವಾಸಿಗರನ್ನು ಸೆಳೆಯುವ ಅಯಸ್ಕಾಂತ…ಹೀಗೆ ಪಟ್ಟಿ ಬಹು ಉದ್ದ. ಭಾರತದಂತಹ ದೇಶಗಳಲ್ಲಿ ಇದಕ್ಕೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವಿದೆ. ಜಾನಪದ ಕಲೆ, ದಂತಕಥೆ, ಸಾಹಿತ್ಯವನ್ನು ಈ ಪ್ರಾಣಿಯು ಈಗಿನ ಮತ್ತು ಹಿಂದಿದ್ದ ವ್ಯಾಪ್ತಿ ದೇಶಗಳಲ್ಲಿ ಪ್ರೇರೇಪಿಸಿದೆ. ಪ್ರಸಿದ್ಧ ಆಂಗ್ಲ ಕವಿ ವಿಲಿಯಂ ಬ್ಲೇಕ್‌ ಹುಲಿಯ ಬಗ್ಗೆ ಬರೆದಿರುವ “ಟೈಗರ್‌, ಟೈಗರ್‌ ಬರ್ನಿಂಗ್‌ ಬ್ರೈಟ್‌’ ಪ್ರಚಲಿತ ಕವನಕ್ಕೆ ಪ್ರೇರಣೆ. ಹುಲಿ ಮತ್ತು ಮಾನವನ ಮೇಲೆ ಹಲವಾರು ಶತಮಾನಗಳಿಂದ ಪರಸ್ಪರ ಪ್ರಭಾವವಾಗಿದೆ. 

ಭೂತಾನ್‌ ದೇಶದಲ್ಲಿ ಹುಲಿಗಳು ಬಹು ಮುಖ್ಯವಾದ ಧಾರ್ಮಿಕ ಗುರುತಾಗಿವೆ. ಭಾರತದಿಂದ ಎಂಟನೇ ಶತಮಾನದಲ್ಲಿ ಇಲ್ಲಿಗೆ ಬೌದ್ಧ ಧರ್ಮ ತಂದ ಸಂತ ಪದ್ಮಸಂಭವನಿಗೆ ಹುಲಿಯೇ ವಾಹನ. ಹಲವು ಹಿಂದೂ ದೇವರುಗಳು ಹುಲಿಯನ್ನು ತಮ್ಮ ವಾಹನವನ್ನಾಗಿ ಉಪಯೋಗಿಸುವುದರಿಂದ, ಮೊಹರಂ ಹಬ್ಬದ ಸಮಯದಲ್ಲಿ ಹುಲಿವೇಷವನ್ನು ಹಾಕಿ ಕುಣಿಯುವುದರವರೆಗೆ ಹಿಂದೂ ಮತ್ತು ಇಸ್ಲಾಂ ಆಚರಣೆಗಳಲ್ಲಿ ಹುಲಿಗಿರುವ ಪಾತ್ರವನ್ನು ತೋರಿಸುತ್ತದೆ. ಇಂಡೋನೇಷ್ಯಾ ದೇಶದ ಜಾವ ದ್ವೀಪದಲ್ಲಿ ಹುಲಿಗೆ ಸುಲ್ತಾನನಷ್ಟೇ ಸ್ಥಾನಮಾನವನ್ನು ನೀಡಲಾಗುತ್ತದೆ. ಆಧುನಿಕ ಸಮಯದಲ್ಲಿ ಕ್ರೀಡಾ ತಂಡಗಳಿಂದ ಹಿಡಿದು, ರಾಜಕೀಯ ಪಕ್ಷಗಳು ಹುಲಿಯನ್ನು ತಮ್ಮ ಲಾಂಛನವನ್ನಾಗಿ ಮಾಡಿಕೊಂಡಿವೆ. ಭಾರತವನ್ನು ಸೇರಿ ಏಷ್ಯಾ ಖಂಡದ ಆರು ದೇಶಗಳಲ್ಲಿ ಹುಲಿಯೇ ರಾಷ್ಟ್ರೀಯ ಪ್ರಾಣಿ. 

ಈ ಪ್ರಾಣಿಯು ಚೆಲುವು, ಮತ್ತು ಶಕ್ತಿ, ಸಾಮರ್ಥ್ಯದ ಸಂಕೇತವಾಗಿದೆ. ಪ್ರಕೃತಿಯು, ಸಾವಿರಾರು ವರ್ಷಗಳ ವಿಕಸನದ ಮೂಲಕ, ನಿಷ್ಕಳಂಕವಾಗಿ ಅರಳಿಸಿರುವ ಪ್ರಾಣಿಯೇ ಹುಲಿ. 

ಹವಾಮಾನ ವ್ಯತ್ಯಾಸಗಳಿಗೆ ಹೊಂದಿಕೊಳ್ಳುವ ಅವುಗಳ ಸಾಮರ್ಥ್ಯ ಅತ್ಯದ್ಭುತ. ವರ್ಷದಲ್ಲಿ ಒಂಬತ್ತು ತಿಂಗಳು ಹಿಮಾವೃತವಾಗಿರುವ ರಷ್ಯಾ ದೇಶದ ಈಶಾನ್ಯ ಭಾಗದ  ಕಾಡುಗಳಿಂದ ಹಿಡಿದು, ಹೆಚ್ಚು ಕಡಿಮೆ 50 ಡಿಗ್ರಿ ಸೆಂಟಿಗ್ರೇಡು ತಲುಪುವ ಭಾರತದ ರಾಜಸ್ಥಾನದ ಕಾಡುಗಳಲ್ಲಿ ಕೂಡ ಹುಲಿಗಳು ಕಂಡುಬರುತ್ತವೆ. ಇವುಗಳಿಗೆ ಇಂತಹದೇ ಕಾಡುಗಳು ಬೇಕೆಂದಿಲ್ಲ. ಮಳೆಗಾಡುಗಳಿಂದ ಹಿಡಿದು, ಕುರುಚಲು ಕಾಡುಗಳವರೆಗೆ ಎಲ್ಲ ಆವಾಸ ಸ್ಥಾನಗಳಲ್ಲೂ ವಾಸಿಸಬಲ್ಲವು. ಹಾಗಾಗಿ ಅವುಗಳಿಗೆ ಹಲವು ಜೀವಿ ಪರಿಸ್ಥಿಯ ವಿಳಾಸಗಳಿವೆ. ಆದರೆ, ಒಣ, ಉಷ್ಣ ಹುಲ್ಲುಗಾವಲುಗಳಿರುವ ಕಾಡುಗಳಲ್ಲಿ ಹುಲಿಗಳು ಅತೀ ಹೆಚ್ಚಿನ ಸಂಖ್ಯೆ ತಲುಪುತ್ತವೆ. ಆದರೆ ದೊಡ್ಡ ಹರವಿರುವ ಕಾಡು ಮತ್ತು ಅದಕ್ಕೆ ಬೇಕಾದಷ್ಟು ಆಹಾರದ ಇರುವಿಕೆ ಬಹು ಅಗತ್ಯ. ಹಾಗಾಗಿಯೇ ನಾಗರಹೊಳೆ, ಬಂಡೀಪುರ, ಖಾಜಿರಂಗಾ, ಕಾನ್ಹಾ, ಪೆಂಚ್‌ ವನ್ಯಜೀವಿಧಾಮಗಳಲ್ಲಿ ಇವುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಇಲ್ಲಿ ಸಸ್ಯಾಹಾರಿ ಪ್ರಾಣಿಗಳಿಗೆ ಬೇಕಾದ ಹುಲ್ಲು, ತೊಗಟೆ, ಹಣ್ಣು, ಬೀಜ, ಕಂದಮೂಲಗಳೆಲ್ಲವೂ ಪ್ರಾಣಿಗಳ ಕೈಗೆಟುಕುವ, ಅಲ್ಲಿ, ಬಾಯ್ಗೆಟುಕುವ ಮಟ್ಟದಲ್ಲಿಯೇ ಸಿಗುತ್ತವೆ. ಕುದುರೆಮುಖದಂತಹ ಮಳೆಗಾಡುಗಳಲ್ಲಿ ಇವುಗಳು ನಾಗರಹೊಳೆಯ ಸಾಂದ್ರತೆ ತಲುಪುವುದಿಲ್ಲ. ಅಲ್ಲಿನ ಆವಾಸಸ್ಥಾನ ಹುಲಿಗಳ ಬಲಿಪ್ರಾಣಿಗಳಾದ ಕಡವೆ, ಕಾಟಿ, ಕಾಡುಹಂದಿ ಇನ್ನಿತರ ಗೊರಸುಳ್ಳ ಪ್ರಾಣಿಗಳನ್ನು ಹೆಚ್ಚಿನ ಸಂಖ್ಯೆಯನ್ನು ಬೆಂಬಲಿಸಲು ಸಾಧ್ಯವಿಲ್ಲ. ಅಲ್ಲಿ ಪೌಷ್ಟಿಕಾಂಶವಿರುವುದೆಲ್ಲ ಮರಗಳ ಮೇಲೆ, ನೆಲ ಮಟ್ಟದಲ್ಲಿ ಸಿಗುವ ಪೌಷ್ಟಿಕಾಂಶವಿರುವ ಆಹಾರ ಕಡಿಮೆ. ಹಾಗಾಗಿ ಅಲ್ಲಿ ಹುಲಿಗಳ ಬಲಿ ಪ್ರಾಣಿಗಳ ಸಂಖ್ಯೆ ಬಹಳ ವಿರಳ. 

ಉತ್ತಮ ಸಂಖ್ಯೆಯಲ್ಲಿ ಬಲಿ ಪ್ರಾಣಿಗಳಿರುವ ಬೆಂಗಳೂರು ಮಹಾನಗರದ ವ್ಯಾಪ್ತಿಯಷ್ಟು ಒಣ ಉಷ್ಣ ಕಾಡಿದ್ದರೆ, ಅದರಲ್ಲಿ ಸುಮಾರು 60-70 ಹುಲಿಗಳಿರುವ ಸಾಧ್ಯತೆಯಿರುತ್ತದೆ. ಇದೇ ಗಾತ್ರದ ರಷ್ಯಾ ದೇಶದ ಕಾಡುಗಳಲ್ಲಿ ಕೇವಲ ಒಂದು ಅಥವಾ ಎರಡು ಹುಲಿಗಳಿರುತ್ತವೆ. ಅಲ್ಲಿನ ಹಿಮಾವೃತ ಕಾಡುಗಳಲ್ಲಿ ಹೆಚ್ಚಿನ ಬಲಿಪ್ರಾಣಿಗಳು ಬದುಕಿ ಉಳಿಯುವುದು ಬಹು ಕಷ್ಟ. ಹಾಗೆಯೇ, ಈಶಾನ್ಯ ಏಷ್ಯಾ ಖಂಡದ ಇಂಡೋನೇಷ್ಯಾ, ಥಾಯ್‌ಲ್ಯಾಂಡ್‌, ಬರ್ಮಾ ಮತ್ತಿತರ ದೇಶಗಳಲ್ಲಿ ಲಕ್ಷಾಂತರ ಎಕರೆ ಒಣ ಉಷ್ಣ ಕಾಡುಗಳಿದ್ದರೂ, ಬಲಿಪ್ರಾಣಿಗಳ ಅತಿಯಾದ ಬೇಟೆಯಿಂದ ಅಲ್ಲಿನ ಕಾಡುಗಳಲ್ಲಿ ಹುಲಿಗಳ ಸಂಖ್ಯೆ ಬಹು ಕಡಿಮೆ.  
 
ಇಂದಿನ ಚೀನಾ ದೇಶದಲ್ಲಿ ಹುಲಿಗಳು ವಿಕಸನಗೊಂಡವು ಎಂದು ಕೆಲ ವಿಜ್ಞಾನಿಗಳು ಅಭಿಪ್ರಾಯಪಟ್ಟರೆ, ಕೆಲವರು ಇದು ಇಂದಿನ ರಷ್ಯಾ ದೇಶದ ಸೈಬೀರಿಯದಲ್ಲಿ ವಿಕಸನಗೊಂಡಿತು ಎಂದು ಹೇಳುತ್ತಾರೆ. ಆದರೆ ಭಾರತಕ್ಕೆ ಹುಲಿಗಳು ಕೇವಲ 12,000 ವರ್ಷಗಳ ಹಿಂದೆ ಬಂದು ತಲುಪಿದವು. 

ಇಂದು ಹುಲಿ ಉಳಿದಿರುವ 13 ದೇಶಗಳಲ್ಲಿ ಪ್ರಭುತ್ವದ ಮಾದರಿಗಳು ಹಲವಾರು. ಭಾರತದಂತಹ ಪ್ರಜಾಪ್ರಭುತ್ವದಿಂದ ಹಿಡಿದು ರಾಜತ್ವವಿರುವ ಭೂತಾನ್‌ ದೇಶಗಳಲ್ಲಿ ಹುಲಿ ಸಂರಕ್ಷಣೆಗೆ ಬೆಂಬಲ ನೀಡಲಾಗಿದೆ. ಪ್ರಪಂಚದ ಅತೀ ಹೆಚ್ಚು ಬಿಲಿಯನೇರ್‌ ಹಾಗೂ ಕಡು ಬಡತನವಿರುವ ಭಾರತದಂತಹ ಅರ್ಥವ್ಯವಸ್ಥೆಯಿಂದ ಹಿಡಿದು ಮಿಶ್ರಿತ ಅರ್ಥವ್ಯವಸ್ಥೆಯಿರುವ ಥಾಯ್‌ಲ್ಯಾಂಡ್‌ ದೇಶಗಳಲ್ಲೂ ಕೂಡ ಹುಲಿಗಳು ಉಳಿದಿವೆ. ಆದರೆ ಈ ಸುಂದರ ಪ್ರಾಣಿ ಇಂದು ಆವಾಸಸ್ಥಾನದ ನಾಶ, ಛಿದ್ರೀಕರಣ, ಅವುಗಳ ನೈಸರ್ಗಿಕ ಆಹಾರದ ಬೇಟೆ ಇನ್ನಿತರ ಅಪಾಯಗಳಿಂದ ವಿನಾಶದ ಅಂಚಿಗೆ ತಲುಪಿದೆ. ಕಾಳಿ, ಮಹದೇಶ್ವರ, ಅಯ್ಯಪ್ಪ ಇನ್ನಿತರ ಹಲವಾರು ದೇವರಿಗೆ ಶಕ್ತಿ ವಾಹನವಾಗಿರುವ ಈ ಸುಂದರ ಪ್ರಾಣಿ ನಮ್ಮ ದೇಶದಲ್ಲಿ ನನ್ನ ಜೀವಿತಾವಧಿಯಲ್ಲಂತೂ ನಶಿಸಿಹೋಗುವುದಿಲ್ಲವೆಂದು ನನ್ನ ಅಚಲ ನಂಬಿಕೆ.  

(ಮುಂದಿನ ಕಂತುಗಳಲ್ಲಿ ಕೆಲವು ಲೇಖನಗಳಿಗೆ ಸಂಬಂಧ ಪಟ್ಟ ವೀಡಿಯೋ ತುಣುಕು “ಉದಯವಾಣಿ’ ಜಾಲತಾಣದಲ್ಲಿ ಲಭ್ಯವಿರುತ್ತದೆ.)

– ಸಂಜಯ್‌ ಗುಬ್ಬಿ
[email protected]

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.