ಖಾಸಗಿ ಸ್ಕೂಲ್ಗೆ ಕಮ್ಮಿ ಇಲ್ಲ ನಂದಿಹಳ್ಳಿ ಸರ್ಕಾರಿ ಶಾಲೆ!

Team Udayavani, Jul 12, 2019, 3:47 PM IST

ಯಡ್ರಾಮಿ: ನಂದಿಹಳ್ಳಿ ಗ್ರಾಮದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ಪ್ರಶಸ್ತಿ ಪತ್ರ ಪಡೆದರು.

ಯಡ್ರಾಮಿ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಪಾಲಕರೇ ಹೆಚ್ಚು. ಖಾಸಗಿ ಶಾಲೆಗಳು ಅಬ್ಬರದ ಪ್ರಚಾರದಿಂದ ಪಾಲಕರನ್ನು ಮತ್ತು ಮಕ್ಕಳನ್ನು ತಮ್ಮತ್ತ ಸೆಳೆಯುವುದು ಸಹಜವಾಗಿದೆ. ಅಲ್ಲದೇ ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಮಾಯವಾಗಿದೆ ಎನ್ನುವ ಮಾತನ್ನು ನಿತ್ಯ ಜನತೆ ಆಡಿಕೊಳ್ಳುವ ಕಾಲವಿದು. ಈ ಎಲ್ಲ ಪ್ರಶ್ನೆಗಳಿಗೆ ನಂದಿಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಉತ್ತರವಾಗಿ ನಿಲ್ಲುತ್ತದೆ.

ಯಡ್ರಾಮಿ ತಾಲೂಕಿನ ಯಲಗೋಡ ಗ್ರಾಪಂ ವ್ಯಾಪ್ತಿಗೆ ಬರುವ ಈ ಹಳ್ಳಿಯ ಶಾಲೆ ತಾಲೂಕಿಗೇ ಮಾದರಿಯಾಗಿದೆ. ನಂದಿಹಳ್ಳಿ ಶಾಲೆ 1 ರಿಂದ 5ನೇ ತರಗತಿ ವರೆಗೂ ಒಟ್ಟು 99 ಮಕ್ಕಳ ದಾಖಲಾತಿಯಿದೆ.

ಸುಭಾನ್‌ ಪಟೇಲ್ ಮತ್ತು ಮೈಲಾರಲಿಂಗ ಎನ್ನುವ ಇಬ್ಬರೇ ಶಿಕ್ಷಕರು ಐದನೇ ತರಗತಿವರೆಗೂ ಪಾಠ ಮಾಡುತ್ತಾರೆ. ಅಲ್ಲದೇ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶ್ರಮಿಸುತ್ತಿದ್ದಾರೆ.

ಕಳೆದ 2018-19ನೇ ಸಾಲಿಗೆ 5ನೇ ತರಗತಿಯ 26 ವಿದ್ರ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ 24 ವಿದ್ಯಾರ್ಥಿಗಳು ಮೊರಾರ್ಜಿ ವಸತಿ ಶಾಲೆಗೆ ಆಯ್ಕೆಯಾಗುವ ಮೂಲಕ ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವ ಹಾಗೆ ಫಲಿತಾಂಶ ತಂದಿದ್ದಾರೆ. ಇದರಿಂದ ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿ ಹೆಚ್ಚಿದೆ.

ಶಾಲೆಯಲ್ಲಿ ಕ್ವಿಜ್‌ ಕಾಂಪಿಟೇಶನ್‌, ಭಾಷಣ ಸ್ಪರ್ಧೆ ಮತ್ತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಎಂಟು ವರ್ಷಗಳಿಂದ ನಡೆಸಿಕೊಂಡು ಬಂದಿದ್ದೇವೆ. ಇದರಿಂದ ಮಕ್ಕಳಿಗೆ ಉತ್ತಮ ಕಲಿಕೆಯಾಗಿ ಪ್ರತಿವರ್ಷವೂ ಒಳ್ಳೆಯ ಫಲಿತಾಂಶ ಬಂದೇ ಬರುತ್ತದೆ. ಈ ಬಾರಿ 24 ಮಕ್ಕಳು ಮೊರಾರ್ಜಿ ವಸತಿ ಶಾಲೆಗೆ ಆಯ್ಕೆ ಆಗಿದ್ದು ನಮಗೆ ಖುಷಿ ತಂದಿದೆ. •ಸುಭಾನ್‌ಪಟೇಲ, ಪ್ರಭಾರಿ ಮುಖ್ಯ ಶಿಕ್ಷಕ

ಇಬ್ಬರು ಶಿಕ್ಷಕರು ಉತ್ತಮವಾಗಿ ಪಾಠ ಹೇಳಿಕೊಡುತ್ತಾರೆ. ಶಾಲೆ ಸ್ವಚ್ಛತೆ ಬಗ್ಗೆ ಅವರಿಗೆ ಕಾಳಜಿ ಇದೆ. ಅವರನ್ನು ಬೇರೆ ಶಾಲೆಗೆ ಇಲಾಖೆ ವರ್ಗ ಮಾಡಿದರೂ ನಾವು ಅದನ್ನು ವಿರೋಧಿಸಿ ಅವರನ್ನು ಇಲ್ಲೇ ಉಳಿಸಿಕೊಂಡಿದ್ದೇವೆ. ನಮ್ಮ ಮಕ್ಕಳು ಅವರ ಕೈಯಾಗ ತಯಾರಾಗ್ಯಾರ್‌. •ಸುಭಾಸ ಮುತ್ತಕೋಡ, ಗ್ರಾಪಂ ಮಾಜಿ ಸದಸ್ಯ , ನಂದಿಹಳ್ಳಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ