ನಮ್ಮ ಕಾಲಂ: ಕಾಂಕ್ರೀಟ್ ಎಂಬ ಭಾವ ಸಮಾಧಿ
Team Udayavani, Aug 30, 2020, 4:45 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನಗರ ಪ್ರದೇಶಗಳಲ್ಲಿ ಮಾತ್ರ ಕಾಣುತ್ತಿದ್ದ ಕಾಂಕ್ರೀಟ್ ರಸ್ತೆಗಳು, ಇಂದು ಹಳ್ಳಿಯ ಮಣ್ಣಿನ ಮೇಲೂ ಗಟ್ಟಿಯಾದ ಸ್ಥಾನ ಪಡೆದುದನ್ನು ನೋಡಿದಾಗ ಬೇಸರದ ಭಾವ ಮೂಡುತ್ತದೆ.
ಮೊದ-ಮೊದಲು ಊರಿಗೆ ಕಾಂಕ್ರೀಟ್ ರಸ್ತೆಯಾಗುತ್ತದೆ ಎಂದಾಗ ಖುಷಿಪಟ್ಟ ಹಲವರಲ್ಲಿ ನಾನೂ ಒಬ್ಬ.
ಆಗ ಭಾವನೆಯ ಮೇಲೆ ಬದಲಾವಣೆಯ ಪೊರೆ ಕುಳಿತಿತ್ತು. ಆದರೀಗ ಆ ಪೊರೆ ಹರಿದು ಭಾವಕ್ಕೆ ಬೆಲೆ ಕೊಡುವ ಮನಸ್ಸಾಗಿದೆ.
ಅಷ್ಟಕ್ಕೂ ನಾನು ಕಾಂಕ್ರೀಟ್ ರಸ್ತೆಯ ಬಗ್ಗೆ ಬೇಸರ ಪಡಲು ಹಲವು ಕಾರಣ ಗಳಿವೆ. ಮೊದ ಮೊದಲೆಲ್ಲ ಬೇಸಗೆಯ ದಿನಗಳಲ್ಲಿ ಮಳೆಯಾದರೆ ಮಣ್ಣಿನ ರಸ್ತೆಯ ಮೇಲೆ ಮಳೆ ಹನಿಗಳು ಬೀಳುತ್ತಿದ್ದಂತೆ ಮಣ್ಣು ಮತ್ತು ನೀರಿನ ಮಿಶ್ರಣದಿಂದ ಒಂದು ಸುವಾಸನೆ ಮೂಗಿಗೆ ರಾಚುತ್ತಿತ್ತು.
ಈಗ ನಮ್ಮ ಹಾಗೂ ಮುಂದಿನ ಪೀಳಿಗೆಗೆ ಅದರ ಒಂದು ಅನು ಭವವೇ ಅಪರಿಚಿತವಾಗಿ ಬಿಡುತ್ತಿದೆ. ಆ ತೋಯ್ದ ನೆಲದಲ್ಲಿ ನಮ್ಮ ಪಾದಗಳು ಕೆಸರಿನ ಅಲಂಕಾರ ಮಾಡಿ ಕೊಂಡ ಸುಖ ಈಗಿನ ಪಾದಗಳಿಗೆ ಬಲುದೂರ. ಹವಾಯಿ ಪಾದರಕ್ಷೆ ಹಾಕಿ ನಡೆದಾಗಲಂತೂ ಹಿಂಬದಿಯಲ್ಲಿ ನಮ್ಮ ಬಟ್ಟೆ ಗಳೊಂದಿಗೆ ಮಣ್ಣು ಮಾಡುತ್ತಿದ್ದ ಸರಸ ಮರೆಯಲಾದೀತೇ? ಮುಖ್ಯವಾಗಿ ಭಾವ ನೆಗೆ ಪೆಟ್ಟು ಕೊಟ್ಟ ಕಾಂಕ್ರೀಟ್ ತನ್ನೊಳಗೆ ಪೂರ್ವಜರ ಪಾದದ ಮೊಹರುಗಳನ್ನೂ ಅಡಗಿಸಿ ಕೊಂಡದ್ದು. ಅವರು ನಮ್ಮಿಂದ ಭೌತಿಕ ವಾಗಿ ದೂರವಾದರೂ, ಅವರು ನಡೆದು ಪಾದವನ್ನು ಅಚ್ಚೊತ್ತಿ ಹೋಗಿದ್ದ ನೆನಪಿನ್ನು ಕಾಂಕ್ರೀಟ್‌ನ ಗರ್ಭವಾಸಿ.
ಮಣ್ಣಿನ ರಸ್ತೆ ಯಲ್ಲಿ ನಡೆದಾಗ ನಮ್ಮ ಪೂರ್ವಜರು ತಮ್ಮ ಪಾದದ ಕುರುಹನ್ನು ಬಿಟ್ಟು ಮುಂದೆ ಹೋಗುತ್ತಿದ್ದರು. ಆದರೆ ಈಗ ನಾವು ಆ ನೆನಪಿನ ಸಮಾಧಿ ಮೇಲೆ ಪಾದ ಸವೆಸುತ್ತಿದ್ದೇವೆ. ವಿಪರ್ಯಾಸವೆಂದರೆ ಕಾಂಕ್ರೀಟ್‌ನ ಕುರುಹು ಅಂಗಾಲುಗಳಲ್ಲಿ ಠಸ್ಸೆ ಒತ್ತಿದಂತೆ ಚಿತ್ರಿತವಾಗುತ್ತಿದೆ. ಜೀವನವೇ ಹಾಗೆ. ಭಾವನೆಗೆ ಬೆಲೆ ಕೊಟ್ಟರೆ ಬೆಳ ವಣಿಗೆಯ ಬದಲಾವಣೆ ಇಲ್ಲ. ಬದ ಲಾವಣೆಗೆ ಬೆಲೆ ಕೊಟ್ಟರೆ ಭಾವನೆಗೆ ನೆಲೆ ಇಲ್ಲ. ವಿಪರ್ಯಾಸದ ವಾಸ್ತವವೇ ನಮ್ಮ ಅಸ್ತಿತ್ವ!
ಮುತ್ತು ಯಲಿವಾಳ, ವಿದ್ಯಾಸಾಗರ ಶಿಕ್ಷಣ ಸಂಸ್ಥೆ, ಬೋರಂಗಾವ್