Kalaburgi: ಕೋವಿಡ್ ಸೋಂಕಿತ ಕುಟುಂಬಕ್ಕೆ ಮಹಿಳಾ ಪಿಎಸ್ಐಯಿಂದ ನೆರವಿನ ಅಭಯ
Team Udayavani, Jul 19, 2020, 8:27 PM IST
ಕಲಬುರಗಿ: ಕೋವಿಡ್ ಸೋಂಕಿತರು ಮತ್ತು ಅವರ ಮನೆಯವರನ್ನು ಅಸ್ಪ್ರಶ್ಯತರನ್ನಾಗಿ ನೋಡಲಾಗುತ್ತಿದೆ ಎಂಬ ಅಪವಾದ ಎಲ್ಲೆಡೆ ಕೇಳಿ ಬರುತ್ತಿದೆ. ಸೋಂಕಿತ ಕುಟುಂಬದವರನ್ನು ನೆರೆ-ಹೊರೆಯವರು ಮಾತನಾಡಿಸಲು ಸಹ ಹಿಂದೇಟು ಹಾಕುತ್ತಿದ್ದಾರೆ. ಹೀಗೆ ಗ್ರಾಮದ ಜನರಿಂದ ತಾತ್ಸಾರಕ್ಕೆ ಒಳಗಾಗಿದ್ದ ಸೋಂಕಿತ ಕುಟುಂಬಕ್ಕೆ ಮಹಿಳಾ ಪಿಎಸ್ಐಯೊಬ್ಬರು ನೆರವಿನ ಅಭಯ ನೀಡುವ ಮೂಲಕ ಮಾದರಿಯಾಗಿದ್ದಾರೆ. ತಾಲೂಕಿನ ಫರಹತಾಬಾದ್ ಗ್ರಾಮದಲ್ಲಿ ವೃದ್ಧೆಯೊಬ್ಬರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡ ಪರಿಣಾಮ ಐಸೋಲೇಷನ್ ವಾರ್ಡ್ ದಾಖಲಿಸಲಾಗಿದೆ. ಇತ್ತ, ಮನೆಯಲ್ಲಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಚಿಕ್ಕ ಮಕ್ಕಳು ಇದ್ದಾರೆ. ಇದರಲ್ಲಿ ಒಬ್ಬ ಮಹಿಳೆ ಗರ್ಭಿಣಿಯಾಗಿದ್ದಾರೆ. ಮನೆಯಲ್ಲಿ ಸೋಂಕು ಪತ್ತೆಯಾದ ಕಾರಣಕ್ಕೆ ಅಕ್ಕ-ಪಕ್ಕದವರು “ಸೂತಕದ ಮನೆ’ಯಂತೆ ನೋಡಿದ್ದಾರೆ. ಮನೆಯಿಂದ ಹೊರಗಡೆ ಬಂದು ನೀರು ತುಂಬಿಸಿಕೊಳ್ಳಲು ಮಹಿಳೆಯರಿಗೆ ನೆರೆ-ಹೊರೆಯವರು ಅವಕಾಶ ನೀಡಿಲ್ಲ. ಇದರಿಂದ ಅಡುಗೆ ಮಾಡಲು ದಿನಸಿ ಖರೀದಿಗೂ ಮಹಿಳೆಯರು ಹೋಗಿಲ್ಲ. ಇಡೀ ಒಂದು ದಿನ ಊಟವೂ ಮಾಡದೆ, ಝಳಕವೂ ಮಾಡದೆ ಹಾಗೆ ಕಳೆದಿದ್ದಾರೆ. ಮರುದಿನ ಫರಹತಾಬಾದ್ ಠಾಣೆಗೆ ಕರೆ ಮಾಡಿ ತಮ್ಮ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ತಕ್ಷಣವೇ ಠಾಣೆಯ ಪಿಎಸ್ಐ ಯಶೋಧಾ ಕಟಕೆ ಅವರು ಮಹಿಳೆಯರಿಗೆ ಮನೆಗೆ ಬಂದು ವಿಚಾರಿಸಿದ್ದಾರೆ. ಮಹಿಳೆಯರಿಗೆ ಧೈರ್ಯ ತುಂಬಿ ತಮ್ಮ ಠಾಣೆಯಿಂದಲೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿಸಿದ್ದಾರೆ. ಅಲ್ಲದೇ, ತಾವೇ ಸಕ್ಕರೆ, ಚಹಾ ಪುಡಿ, ಬಿಸ್ಕಟ್, ಚಾಕಲೇಟ್ ಖರೀದಿಸಿ ಮನೆಯವರಿಗೆ ನೀಡಿದ್ದಾರೆ. ಕೋವಿಡ್ ಸೋಕಿಗೆ ಹೆದರ ಬೇಡಿ. ಸರಿಯಾಗಿ ಆಗಾಗ ಕೈತೊಳೆದುಕೊಳ್ಳಿ. ಮುಖಕ್ಕೆ ಬಟ್ಟೆ ಕಟ್ಟುವುದು, ಮಾಸ್ಕ್ ಧರಿಸುವುದು ಮಾಡಿ. ಬಿಸಿ ನೀರು ಕುಡಿರಿ. ಮಕ್ಕಳನ್ನು ಸಮಯಕ್ಕೆ ಸರಿಯಾಗಿ ಊಟ ನೀಡಿ ಎಂದು ಯಶೋಧಾ ಕಟಕೆ ಆತ್ಮೀಯತೆಯಿಂದ ಮಾತನಾಡಿಸಿ, ಮುಂದೆ ಏನಾದರೂ ಸಹಾಯ ಬೇಕಾದರೆ ನನಗೆ ಕರೆ ಮಾಡಿ ಎಂದು ಮಹಿಳೆಯರಿಗೆ ಅಭಯ ನೀಡಿದ್ದಾರೆ.