Trasi – Maravanthe Beach : ಇಲ್ಲಿ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ !
Team Udayavani, Jul 4, 2020, 10:46 PM IST
ತ್ರಾಸಿ : ಮಳೆಗಾಲದಲ್ಲಿ ಮೀನುಗಾರರಿಗೇ ಕಡಲಿಗೆ ಪ್ರವೇಶ ನಿಷಿದ್ಧ. ಆದರೆ ತ್ರಾಸಿ-ಮರವಂತೆ ಬೀಚ್ ನಲ್ಲಿ ಕೆಲವು ಪ್ರವಾಸಿಗರು ಬೀಚ್ನಲ್ಲಿ ಅಲೆಗಳಿಗೆ ಎದೆಯೊಡ್ಡಿ ಅಪಾಯವನ್ನು ಆಹ್ವಾನಿಸುತ್ತಿದ್ದಾರೆ ! ಕೋವಿಡ್ 19 ಹಾಗೂ ಮಳೆಗಾಲದ ಕಾರಣದಿಂದ ಪ್ರಸ್ತುತ ತ್ರಾಸಿ-ಮರವಂತೆ ಬೀಚ್ಗೆ ಪ್ರವಾಸಿಗರಿಗೆ ಪ್ರವೇಶವಿಲ್ಲ. ಹಾಗಾಗಿ ತ್ರಾಸಿ ಬೀಚ್ ನಲ್ಲಿಕಲ್ಪಿಸಲಾಗಿರುವ ಕುಟೀರಗಳನ್ನೂ ನಿರ್ವಹಿಸುವವರೂ ಇಲ್ಲ, ಉಸ್ತುವಾರಿಗಳೂ ಇಲ್ಲ. ವಾಹನ ನಿಲುಗಡೆ ಜಾಗದಲ್ಲಿ ಒಂದು ಅಂಗಡಿ ಬಿಟ್ಟರೆ ಬೇರೇನೂ ಇಲ್ಲ. ಹಾಗಾಗಿ ಇಲ್ಲಿ ಹೇಳುವವರು, ಕೇಳುವವರೇ ಇಲ್ಲವಾಗಿದೆ. ಕಡಲ ತೀರವೂ ಹೈವೇಗೆ ಅಂಟಿಕೊಂಡಿರುವುದರಿಂದ, ಪಕ್ಕದಲ್ಲೇ ವಾಹನಗಳನ್ನು ನಿಲ್ಲಿಸುವ ಪ್ರವಾಸಿಗರು ನೇರವಾಗಿ ಸಮುದ್ರಕ್ಕೆ ಇಳಿಯತೊಡಗಿದ್ದಾರೆ. ಮಳೆಗಾಲದಲ್ಲಿ ಅಲೆಗಳ ರಭಸ ಹೆಚ್ಚಿದ್ದರೂ ಕಲ್ಲುಗಳು ಇರುವಲ್ಲಿ ನಿಂತು ಸೆಲ್ಪಿ, ಹುಚ್ಚಾಟದಲ್ಲಿ ತೊಡಗಿರುವುದು ಆತಂಕಕ್ಕೆ ಕಾರಣವಾಗಿದೆ. ತ್ರಾಸಿ ಬೀಚ್ ತೀರದಿಂದ ಸಮುದ್ರ ಮುಗಿಯುವವರೆಗೂ ಯಾವುದೇ ಅಡೆ ತಡೆಗಳೂ ಇಲ್ಲ, ಬೇಲಿಯೂ ಇಲ್ಲ. ಮೂರ್ನಾಲ್ಕು ಅಪಾಯ, ಸಮುದ್ರಕ್ಕೆ ಇಳಿಯಬೇಡಿ ಎಂಬ ಫಲಕ ಬಿಟ್ಟರೆ ಬೇರೆ ಯಾವ ಸುರಕ್ಷತೆಯೂ ಇಲ್ಲ. ಆದರೆ, ಪ್ರವಾಸಿಗರು, ಆ ಸ್ಥಳಗಳಿರುವಲ್ಲೇ ಸಮುದ್ರಕ್ಕೆ ಇಳಿಯುತ್ತಿದ್ದಾರೆ. ಇನ್ನೂ ಆತಂಕದ ಸಂಗತಿಯೆಂದರೆ, ಸಮುದ್ರ ತೀರಕ್ಕೆ ಹೊಂದಿಕೊಂಡೇ ಹೊದಿಸಿರುವ ಕಲ್ಲುಗಳ ರಾಶಿ ಮಧ್ಯೆಯೇ ಕೆಲವರು ಮದ್ಯ ಸೇವಿಸಿ, ಪಾರ್ಟಿ ಮಾಡುತ್ತಿರುವುದಕ್ಕೂ ಸಾಕಷ್ಟು ಸಾಕ್ಷ್ಯಗಳು ಸಿಗುತ್ತಿವೆ. ಕಂಡಲ್ಲೆಲ್ಲಾ ಮದ್ಯದ ಬಾಟಲಿಗಳು ರಾರಾಜಿಸುತ್ತಿವೆ.
ಕುಟೀರವೀಗ ಕುಡುಕರ ತಾಣ ಇದರೊಂದಿಗೆ ತ್ರಾಸಿ ಬೀಚ್ನಲ್ಲಿಪ್ರವಾಸಿಗರ ಅನುಕೂಲಕ್ಕೆಂದು ಕೆಲವು ಕುಟೀರಗಳನ್ನು ನಿರ್ಮಿಸಲಾಗಿದೆ. ಇವೆಲ್ಲವೂ ಕುಡುಕರ ಪಾರ್ಟಿಗಳ ತಾಣಗಳಾಗಿ ಮಾರ್ಪಟ್ಟಿವೆ. ರಾತ್ರಿ ಹೊತ್ತು ಇಲ್ಲಿ ಯಾರೂ ಇಲ್ಲದ ಕಾರಣ, ಕುಡುಕರು ಇಲ್ಲಿ ಸೇರಿ ಮಜಾ ಮಾಡುತ್ತಿರುವ ಕಥೆಗಳನ್ನು ಸುತ್ತಲೂ ಬಿದ್ದಿರುವ ಬಾಟಲಿಗಳೇ ಹೇಳುತ್ತವೆ. ಸ್ಥಳೀಯ ಪೊಲೀಸರು ಹಾಗೂ ತಾಲೂಕು ಆಡಳಿತ ಕೂಡಲೇ ಒಂದಿಷ್ಟು ನಿರ್ದಿಷ್ಟ ಕ್ರಮಗಳನ್ನು ಕೈಗೊಂಡು ಪ್ರವಾಸಿಗರನ್ನು ನಿರ್ಬಂಧಿಸದಿದ್ದರೆ ಅಪಾಯ ಖಚಿತ ಎನ್ನುವಂತಾಗಿದೆ. ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಆದಷ್ಟು ಬೇಗ ಸಮುದ್ರ ತೀರಕ್ಕೆ ಬೇಲಿ ಹಾಕಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹ.