ದೇಣಿಗೆಗಾಗಿ 2 ಲಕ್ಷ ಡಾಲರ್ ಸಂಗ್ರಹಿಸಿದ 6ರ ಪೋರ!
Team Udayavani, Jan 20, 2020, 8:19 AM IST
ಆಸ್ಟ್ರೇಲಿಯಾದ ಬೃಹತ್ ಕಾಡ್ಗಿಚ್ಚು ಕೋಟ್ಯಂತರ ಪ್ರಾಣಿಗಳನ್ನು ಬಲಿತೆಗೆದುಕೊಂಡಿರುವಂತೆಯೇ, ಕಾಡ್ಗಿಚ್ಚು ನಿಯಂತ್ರಣಕ್ಕೆ ನೆರವಾಗಲೆಂದು ಹಲವು ಸಂಘಟನೆಗಳು ದೇಣಿಗೆ ಸಂಗ್ರಹದಲ್ಲಿ ತೊಡಗಿವೆ. ಇವರೆಲ್ಲರ ಪ್ರಯತ್ನದ ನಡುವೆಯೇ 6 ವರ್ಷದ ಪುಟಾಣಿಯೊಬ್ಬನ ಹೃದಯ ವೈಶಾಲ್ಯತೆ ಜಗತ್ತಿನಾದ್ಯಂತ ಎಲ್ಲರ ಮನಸ್ಸನ್ನೂ ತಟ್ಟಿದೆ.
ಅಂದ ಹಾಗೆ ಈತ ಮಾಡಿದ್ದೇನು ಗೊತ್ತಾ? ಮಸ್ಸಾಚ್ಯುಸೆಟ್ಸ್ನ 6 ವರ್ಷದ ಬಾಲಕ ಓವೆನ್ ಕೋಲಿ, ಮಣ್ಣಿನಿಂದಲೇ ಪುಟ್ಟ ಪುಟ್ಟ ಕೋಲಾಗಳ ಪ್ರತಿಕೃತಿಗಳನ್ನು ರಚಿಸಿದ್ದಾನೆ. ಅನಂತರ, ಯಾರ್ಯಾರು ಕಾಡ್ಗಿಚ್ಚು ನಿಯಂತ್ರಣಕ್ಕೆ 50 ಡಾಲರ್ ಅಥವಾ ಅದಕ್ಕಿಂತ ಹೆಚ್ಚು ದೇಣಿಗೆ ನೀಡುತ್ತಾರೋ ಅವರಿಗೆಲ್ಲ ತಾನು ಮಾಡಿರುವ ಕೋಲಾದ ಪ್ರತಿಕೃತಿಗಳನ್ನು ಉಡುಗೊರೆಯಾಗಿ ನೀಡುತ್ತಿದ್ದಾನೆ.
ಈ ಮೂಲಕ ಈ ಪೋರ ಕೆಲವೇ ವಾರಗಳಲ್ಲಿ 2 ಲಕ್ಷ ಡಾಲರ್ ಗಳನ್ನು (1.42 ಕೋಟಿ ರೂ.) ಸಂಗ್ರಹಿಸಿದ್ದಾನೆ. ಈತನ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.