ಇಂದು ವಿಶ್ವ ಜಲದಿನ: ಜೀವಜಲ ಸಂರಕ್ಷಣೆಗೆ ಪಣತೊಡೋಣ


Team Udayavani, Mar 22, 2019, 5:16 AM IST

wataer-3.png

ನೀರಿಲ್ಲದೇ ಬದುಕಲು ಸಾಧ್ಯವೇ ಇಲ್ಲ. ಅದಕ್ಕಾಗಿ ಇದನ್ನು ಜೀವಜಲ ಎನ್ನಲಾಗುತ್ತದೆ. ಪ್ರತಿಯೊಬ್ಬರಿಗೂ ಇದು ಅತೀ ಮುಖ್ಯ. ಹಾಗಾಗಿ ಈ ಸಂಪನ್ಮೂಲವನ್ನು ಕಾಪಾಡಿಕೊಳ್ಳುವುದು ಅನಿವಾರ್ಯ. ಅದಕ್ಕೆ ಒಬ್ಬರು, ಇಬ್ಬರು ಕೆಲಸ ಮಾಡಿದರೆ ಸಾಲದು. ಎಲ್ಲರೂ ಪಣ ತೊಟ್ಟು ನಿಂತಾಗ ಮಾತ್ರ ನೀರಿನ ಅಭಾವ ತಡೆಗಟ್ಟಬಹುದು. ವಿಶ್ವ ಜಲ ದಿನವನ್ನು ಮಾರ್ಚ್‌ 22ರಂದು ಸಿಹಿ ನೀರಿನ ಪ್ರಾಮುಖ್ಯದ ಮೇಲೆ ಗಮನ ಕೇಂದ್ರೀಕರಿಸುವುದಕ್ಕಾಗಿ ಮತ್ತು ಸಿಹಿ ನೀರಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗಾಗಿ ಆಚರಿಸಲಾಗುತ್ತದೆ. 

1992ರಲ್ಲಿ ರಿಯೊ ಡಿ ಜನೈರೋದಲ್ಲಿ ನಡೆದ ವಿಶ್ವ ಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿಯ ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಸಿಹಿ ನೀರಿನ ದಿನವನ್ನು ಆಚರಿಸಲು ಶಿಫಾರಸು ಮಾಡಲಾಯಿತು. ಅದೇ ವರ್ಷ ಡಿ. 22ರಂದು ವಿಶ್ವಸಂಸ್ಥೆ ಸಂಸತ್ತಿನಲ್ಲಿ ಈ ನಿರ್ಣಯವನ್ನು ಸ್ವೀಕರಿಸಿ 1993 ಮಾರ್ಚ್‌ 22ರಂದು ಮೊದಲ ವಿಶ್ವ ಜಲ ದಿನವೆಂದು ಘೋಷಿಸಲಾಯಿತು. 

ಪ್ರಚಾರ, ಅಭಿವೃದ್ಧಿ
ಜನರಿಗೆ ಈ ದಿನದ ಪ್ರಾಮುಖ್ಯದ ಅರಿವು ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.  ವಿವಿಧ ಸಾಕ್ಷ್ಯಚಿತ್ರಗಳು, ಸಮ್ಮೇಳನ, ವಿಚಾರಗೋಷ್ಠಿ, ಸಂಬಂಧಪಟ್ಟ ಸಂಘಟನೆಗಳ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸಲಾಯಿತು.

ವಿಶ್ವ  ನೀರಿನ ದಿನವನ್ನು ಆಚರಿಸುವುದು ಏಕೆ? 
ಜಾಗತಿಕ ಜಲ ದಿನವನ್ನು  ಆಚರಿಸುವುದಕ್ಕೆ ತುಂಬಾ ಕಾರಣಗಳಿದ್ದು ಮುಖ್ಯವಾಗಿ ನೀರಿನ ಸಂಬಂಧಿತ ಸಮಸ್ಯೆಗಳ ಬಗ್ಗೆ ಇನ್ನಷ್ಟು ತಿಳಿಯಲು ಅವಕಾಶ ಮಾಡಿಕೊಡಲು ಮತ್ತು ನೀರು ಮತ್ತು ನೈರ್ಮಲದ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ಒಂದು ಥೀಮ್‌ಅನ್ನು ನಿಗದಿ ಪಡಿಸಿ ಅದರಂತೆ ಕಾರ್ಯನಿರ್ವಹಿಸಲು ಜನರನ್ನು  ಅಣಿಗೊಳಿಸುವುದು.

ಮನೆ ಮನೆಗಳಲ್ಲಿ  ಜಾಗೃತಿ
ಅಂತಾರಾಷ್ಟ್ರೀಯ ದಿನವನ್ನು ಒಂದು ದಿನ ಆಚರಿಸುವ ಬದಲಾಗಿ ಮನೆ ಮನೆಗಳಲ್ಲಿ ಜಾಗೃತಿ ಕಾರ್ಯ ಆರಂಭವಾಗಬೇಕು. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಕೂಡ ನೀರು ಪೋಲಾಗದಂತೆ ನೋಡಿಕೊಳ್ಳಬೇಕು.

ಯುಎನ್‌ ಪಾತ್ರ
ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಇರುವ ಏಕೈಕ ಘಟಕ ಯುಎನ್‌ 30ಕ್ಕೂ ಹೆಚ್ಚು ಯುಎನ್‌ ಸಂಘಟನೆಗಳು ನೀರಿನ ನೈರ್ಮಲ್ಯ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ವಹಿಸುತ್ತವೆೆ. 

ಅಂತರ್ಜಲ ಕುಸಿತ; ನಾವು ಎಡವಿದ್ದೆಲ್ಲಿ…
ಮಳೆಗಾಲದಲ್ಲಿ ಓಡುವ ನೀರನ್ನು ತಡೆ ಹಿಡಿಯದೆ ಹಾರೆ ಹಿಡಿದುಕೊಂಡು ನೀರಿನ ಓಡುವಿಕೆಗೆ ಮಾರ್ಗ ಮಾಡಿಕೊಟ್ಟಿರುವುದು ಇಂದಿನ ನೀರಿನ ಅಭಾವಕ್ಕೆ ಒಂದು ಕಾರಣ. ಇಂದು ಹನಿ ನೀರು ಸಂಗ್ರಹಿಸಲೂ ನಾವು ಮನಸ್ಸು ಮಾಡುತ್ತಿಲ್ಲ. ಸರಕಾದಿಂದ ಡ್ಯಾಂಗಳು ಮಂಜೂರಾದರೂ ಅಧಿಕಾರಿಗಳಿಗಿಂತ ಹೆಚ್ಚಿನ ನಿರಾಸಕ್ತಿ ಆಸುಪಾಸಿನ ಜನರಿಗಿರುವ ಕಾರಣಕ್ಕೆ ಇಂದು ಸರಕಾರ ಮಟ್ಟದ ಜಲ ಸಂಗ್ರಹ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ನೀರಿನ ಸದ್ಬಳ‌ಕೆ ಮತ್ತು ಸಂಗ್ರಹಕ್ಕೆ ಸರಕಾರಗಳಿಗಿಂತ ಒಂದು ಹೆಜ್ಜೆ ಮುಂದೆ ನಿಂತು ಯೋಚಿಸಬೇಕಾದ ಅನಿವಾರ್ಯ ಬಂದೊದಗಿದೆ. ನಮ್ಮ ಪುರಾತನ ಕೃಷಿ ಪದ್ಧತಿಗಳು ನೀರಿನ ಸಮೃದ್ಧಿಯ ಉಳಿವಿಗೆ ಕಾರಣವಾಗಿತ್ತು. ಅಂದರೆ ಇಂದಿನ ನೀರಿನ ಕೊರತೆಗೆ ನಾವಿಂದು ಆಚರಿಸಿಕೊಂಡು ಬರುತ್ತಿರುವ ಕೃಷಿ ಪದ್ಧತಿಯೂ ಒಂದು ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಜನರಿಗೆ ನೀರಿನ ಅಭಾವ ಎದುರಾಗುವ ಸೂಚನೆ ದೊರೆತ ಬಳಿಕ ಹನಿ ನೀರಾವರಿ ಪದ್ಧತಿಯ ಮೊರೆಹೋಗಲು ಆರಂಭಿಸಿದರು. ಆದರೆ ಬತ್ತಿ ಹೋದ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕಾರ್ಯೋನ್ಮುಖವಾಗಲಿಲ್ಲ. 

ದೂರವಾದ ಬತ್ತದ ಕೃಷಿ
ಇಂದು ಬತ್ತದ ಕೃಷಿ ಅಪರೂಪವಾಗಿದೆ. ವರ್ಷದಲ್ಲಿ 3 ಬೆಳೆ ಪಡೆಯುತ್ತಿದ್ದ ಪಾರಂಪರಿಕ ಕೃಷಿಕರು ಇಂದು ಏಕ ಬೆಳೆಗೆ ಸಂತೃಪ್ತರಾಗಿದ್ದಾರೆ. ಭತ್ತದ ಕೃಷಿ ಗದ್ದೆಯಲ್ಲಿ ಸದಾ ನೀರು ಸಂಗ್ರಹಿಸಲಾಗುತ್ತಿತ್ತು. ಇದರಿಂದ ಗದ್ದೆ ಭೂಮಿಗೆ ನೀರುಣಿಸುತ್ತಿತ್ತು. ಆದರೆ ಇಂದು ವಿಶೇಷವಾಗಿ ಕರಾವಳಿಯಲ್ಲಿ  ಶೇ. 20ರಷ್ಟು ಮಾತ್ರ ಭತ್ತದ ಕೃಷಿ ಕಾಣಬಹುದಾಗಿದೆ. ಈ ಶೇ. 80 ಭತ್ತ ನಾಟಿ ಇಂದು ವಾಣಿಜ್ಯ ಬೆಳೆಗಳ ಪಾಲಾಗಿವೆ. ದಶಕಗಳ ಹಿಂದೆ ಕಾಲುವೆಗಳ ಮೂಲಕ ಬಯಲಿನಲ್ಲಿ ನೀರನ್ನು ಹರಿಸಲಾಗುತ್ತಿತ್ತು. ಬತ್ತ ಬೆಳೆಯುತ್ತಿದ್ದ ಗದ್ದೆಗಳು ವಾಣಿಜ್ಯ ಬೆಳೆಗಳಿಗೆ ಮಾರಿ ಹೋದ ಕಾರಣಕ್ಕೆ ಸಮತಟ್ಟಾದ ಬಯಲಿನಲ್ಲಿ ನೀರು ಸುಲಭವಾಗಿ ಹರಿಯುತ್ತಿತ್ತು. ಈ ಸಂದರ್ಭವೂ ನೀರು ಭೂಮಿಗೆ ಇಂಗುತ್ತಿತ್ತು. ಜತೆಗೆ ಆಸುಪಾಸಿನ ಕೊಳವೆಗಳು, ಬಾವಿಗಳು, ಹಳ್ಳಗಳು ಸಮೃದ್ಧ ವಾಗಿದ್ದವು. ಪರಿಣಾಮ ನೀರಿನ ಅಭಾವ ಕಾಡಿರಲಿಲ್ಲ.

ಬದಲಾದ ಸನ್ನಿವೇಶದಲ್ಲಿ ಕಾಲುವೆ ಮೂಲಕ ಹರಿಯುತ್ತಿದ್ದ ನೀರು ಪೈಪ್‌ ಮೂಲಕ ಹರಿಯಲು ಆರಂಭವಾಯಿತು. ಇದರಿಂದಾಗಿ ಅಂತರ್ಜಲಕ್ಕೆ ನೀರಿನ ಮರುಪೂರಣವಾಗಲೇ ಇಲ್ಲ. ನೀರು ಮತ್ತಷ್ಟು ಆಳಕ್ಕೆ ತಲುಪಿತು. ಇದರಿಂದ ಎಚ್ಚೆತ್ತ ನಾವು “ಡ್ರಿಪ್‌ ಇರಿಗೇಶನ್‌’ ಅಥವಾ ಹನಿ ನೀರಾವರಿ ಪದ್ಧತಿಯ ಮೊರೆ ಹೋದವು. ಇಡೀ ತೋಟಗಳಿಗೆ ಹರಿಯುತ್ತಿದ್ದ ನೀರು ಬಳಿಕ ಕೃಷಿ ಬುಡಗಳಿಗೆ ಮಾತ್ರ ಸಿಂಪಡನೆಗೊಳ್ಳಲು ಸೀಮಿತವಾಯಿತು.
ಅಂತರ್ಜಲ ಬತ್ತಿದ ಬಳಿಕ ಬೋರ್‌ವೆಲ್‌ಗ‌ಳು ಕೊರೆಯಲು ಆರಂಭವಾದವು. ಸಣ್ಣ ಪುಟ್ಟ ನೀರಿನ ನರಗಳು ಸೇರಿ ಬಾವಿಗಳಿಗೆ ಸೇರುತ್ತಿದ್ದ ಆಕರ ನಿಂತು ಬಿಟ್ಟವು. ಬಾವಿಗಳು ಬತ್ತಿದವು. ಅತ್ತ ಕೊಳವೆ ಬಾವಿಗೆ ಯೋಗ್ಯ ನೀರು ಲಭಿಸದ ಕಾರಣ ಅದನ್ನು ಮುಚ್ಚಲಾಯಿತು. ಹೀಗೆ ಕೊಳವೆ ಬಾವಿಯ ಮೇಲೆ ಕೊಳವೆ ಬಾವಿಗಳು ಕೊರಸಲ್ಪಟ್ಟು ನೀರಿಗೆ ಆಹಾಕಾರ ಎದುರಾದವು.

ಹೀಗೆ ಮಾಡೋಣ
ನಮ್ಮ ಖಾಲಿ ಗುಡ್ಡಗಳು, ರಬ್ಬರು ತೋಪುಗಳು, ಗೇರು ತೋಟಗಳು, ಕಾಡುಗಳಲ್ಲಿ ನೀರಿನ ಸಂಗ್ರಹಕ್ಕೆ ಮನಸ್ಸು ಮಾಡೋಣ. ಇದಕ್ಕಾಗಿ ಇಂಗು ಗುಂಡಿಗಳನ್ನು ತೋಡಬೇಕಾಗಿದೆ. ಓಡುವ ನೀರನ್ನು ನಮ್ಮ ಭೂಮಿಯಲ್ಲಿ ಹರಿಯುವಂತೆ ಮಾಡಬೇಕು. ಹರಿಯುವ ನೀರನ್ನು ತೆವಳುವ ಹಾಗೇ ಮಾಡಿ, ಬಳಿಕ ಇಂಗುವ ಹಾಗೆ ಮಾಡಬೇಕು. ನಮ್ಮದಲ್ಲದ ಖಾಲಿ ಜಾಗ ಮನೆಯ ಸಮೀಪ ಇದೇ ಎಂದಾದರೆ ವಾರಸುದಾರನ ಗಮನಕ್ಕೆ ತಂದು ನೀರಿನ ಸಂಗ್ರಹಕ್ಕೆ ಕಾರ್ಯ ಪ್ರವೃತ್ತರಾಗೋಣ. ಏಕೆಂದರೆ ಜಾಗ ಇನ್ನೊಬ್ಬರದ್ದಾದರೂ ಇಂಗುವ ನೀರು ನಮ್ಮ ಭೂಮಿಗೂ ಹರಿಯುತ್ತದೆ ಎಂಬುದನ್ನು ಮರೆಯದಿರೋಣ. ಸರಕಾರದ ಅನುದಾನಕ್ಕೋಸ್ಕರ ಕಾಟಾಚಾರಕ್ಕೆ ಇಂಗುಗುಂಡಿ ತೋಡುವುದನ್ನು ತಡೆ ಹಿಡಿಯಬೇಕಾಗಿದೆ. ನಮ್ಮ ಭೂಮಿಯಲ್ಲಿ ನೀರು ಇಂಗಿಸುವುದಕ್ಕೆ ಸರಕಾರ ನಮಗೆ ಅನುದಾನ ನೀಡುತ್ತಿದೆ. ಪ್ರತಿ ವರ್ಷ ನಿರ್ಮಿಸಿದ ಇಂಗು ಗುಂಡಿಗಳನ್ನು ಮಳೆಗಾಲ ಆರಂಭವಾಗುವುದಕ್ಕೆ ಮೊದಲು ಶುದ್ಧಗೊಳಿಸಿ ಕಸ ಕಡ್ಡಿಗಳನ್ನು ತೆಗೆಯಬೇಕು. ಇದರಿಂದ ನೀರಿಗೆ ದೊಡ್ಡ ಆಕರ ಲಭಿಸಿದಂತಾಗುತ್ತದೆ. ಕೊರೆಸಿದ ಕೊಳವೆ ಬಾವಿಯಲ್ಲಿ ನೀರು ಲಭ್ಯವಾಗದೇ ಇದ್ದರೆ ಅದನ್ನು ಮುಚ್ಚುವತ್ತ ಬಹುತೇಕರು ಯೋಚಿಸುವುದಿದೆ. ಆದರೆ ವೈಜ್ಞಾನಿಕ ವಿಧಾನ ಅನುಸರಿಸಿ ಕೊಳವೆಬಾವಿಗಳಿಗೆ ಮರುಪೂರಣಗೊಳಿಸುವತ್ತ ಚಿಂತಿಸಬೇಕಾಗಿದೆ.

  ಥೀಮ್‌


2019ರ ಅಂತಾರಾಷ್ಟ್ರೀಯ ನೀರಿನ ಥೀಮ್‌  ಲೀವಿಂಗ್‌  ನೋ ವನ್‌ ಬಿಹೈಂಡ್‌(ಹಿಂದೆ  ಯಾರನ್ನು  ಬಿಡುವುದಿಲ್ಲ) ಇದು ಸುಸ್ಥಿರ  ಅಭಿವೃದ್ಧಿಯ ಅಜೆಂಡಾವಾಗಿದ್ದು, ಇದರಿಂದ ಪ್ರತಿಯೊಬ್ಬರು ಪ್ರಯೋಜನ ಪಡೆಯಬೇಕು  ಎನ್ನುವುದು ಮೂಲ ಗುರಿಯಾಗಿದೆ. ಎಲ್ಲರಿಗೂ ನೀರಿನ ಲಭ್ಯತೆ ಮತ್ತು ಸಮರ್ಥನೀಯ ನಿರ್ವಹಣೆಯು ಪ್ರಮುಖ ಉದ್ದೇಶವಾಗಿದ್ದು,ಇದರಿಂದ ಯಾರೂ ಹಿಂಜರಿಯ ಬಾರದು ಎಂಬುದು ಇದರ ಅರ್ಥ. 

ವಾಟರ್‌ಮ್ಯಾನ್‌ ರಾಜೇಂದ್ರ ಸಿಂಗ್‌ 
ರಾಜಸ್ಥಾನದ ಆಳ್ವಾರ್‌ ಜಿಲ್ಲೆಯಲ್ಲಿ ಒಂದು ಕಾಲದಲ್ಲಿ  ಅಂತರ್ಜಲ ಕುಸಿದು, ನೀರಿನ ಮೂಲಗಳು ಎಲ್ಲ ಬತ್ತಿ ಹೋಗಿ ಅಕ್ಷರಶಃ ಮರುಭೂಮಿಯಂತಾಗಿತ್ತು. ಶಿಕ್ಷಣಕ್ಕಿಂತ ನೀರಿನ ಸಮಸ್ಯೆಯೇ ತುಂಬಾ ದೊಡ್ಡದು ಎಂದು ಅಲ್ಲಿನ ಜನ ಘೋಷಿಸಿದ್ದರು. ಕಪ್ಪು ಪ್ರದೇಶ ಎಂದೇ ಆಳ್ವಾರ್‌ ಜಿಲ್ಲೆ ಜನಜನಿತವಾಗಿತ್ತು.  ಇಂತಹ ಸಂದರ್ಭ 1984ರಲ್ಲಿ 26 ವರ್ಷದ ಯುವಕನೊಬ್ಬ ಆ ಸ್ಥಳಕ್ಕೆ ಬರುತ್ತಾನೆ. ಕಪ್ಪು ಪ್ರದೇಶವನ್ನು  ಶ್ವೇತ ಪ್ರದೇಶವಾಗಿ ಮಾರ್ಪಡಿಸಿದಾತನೇ ರಾಜೇಂದ್ರ ಸಿಂಗ್‌.  ಸ್ಥಳೀಯವಾಗಿ ನೀರಿನ ಸಮಸ್ಯೆಯನ್ನು ಗಮನಿಸಿದ ಆತ, ಮೊದಲು ಹಳ್ಳಿಗಳಲ್ಲಿ ಜನರನ್ನು ಸಂಘಟಿಸಿ, ಕೆರೆಕಟ್ಟೆಗಳನ್ನು ಪುನಶ್ಚೇತನಗೊಳಿಸಿ, ಚೆಕ್‌ಡ್ಯಾಂಗಳನ್ನು ನಿರ್ಮಿಸುವ ಮೂಲಕ ಅಂತರ್ಜಲ ಪ್ರಮಾಣ ಹೆಚ್ಚಿಸಲಾಗುತ್ತದೆ. ಮಳೆ ನೀರನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ, ಜನರಿಗೆ ಈ ಬಗ್ಗೆ ಅರಿವು ಮೂಡಿಸಿ, ಕೇವಲ ಮೂರೇ ವರ್ಷಗಳಲ್ಲಿ ಆಳ್ವಾರ್‌ ಜಿಲ್ಲೆಯ ನೀರಿನ ಸಮಸ್ಯೆ ನಿರ್ವಹಿಸಿದ ಭಗೀರಥನಾಗುತ್ತಾನೆ.  ಮುಂದೆ ವಾಟರ್‌ ಮ್ಯಾನ್‌ ಎಂದು ಪ್ರಸಿದ್ಧರಾದ ಇವರಿಗೆ 2015ರಲ್ಲಿ ಪ್ರತಿಷ್ಠಿತ ಸ್ಟಾಕ್‌ ಹೋಮ್‌ ಪ್ರಶಸ್ತಿ ಬಂದಿದೆ.  

ಕಡಿಮೆ ನೀರಿನಲ್ಲಿ ಚಿನ್ನದ ಬೆಳೆ 


ನೀರಿನ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದರೂ ಜನ ಕೃಷಿ ಚಟುವಟಿಕೆ ಗಳಿಗೆ ಹೆಚ್ಚಿನ ಪೋಲು ಮಾಡಲಾ ಗುತ್ತಿದೆ ಎಂಬ ಅಪವಾದ ನಡುವೆ ಇಲ್ಲೊಂದು ದಿಲ್ಲಿಯ ಮೂವರ ಗೆಳೆಯರ ಬಳಗ ಕಡಿಮೆ ನೀರಿನಲ್ಲಿ ಚಿನ್ನದ ಬೆಳೆ ಬೆಳದು ಮಾದರಿ ಯಾಗಿದ್ದಾರೆ.   ಉಲ್ಲಾಸ್‌, ಧ್ರುವ್‌ ಮತ್ತು ದೀಪಕ್‌ ಎಂಬ  ದಿಲ್ಲಿಯ 3 ಗೆಳೆಯರು ತಮ್ಮ 1,50,000   ಸ್ಕೆ çರ್‌ ಫೀಟ್‌ ಪ್ರದೇಶದಲ್ಲಿ ಶೇ.80ರಷ್ಟು  ಕಡಿಮೆ ನೀರು ಬಳಕೆ ಮಾಡಿ, ದಿನಕ್ಕೆ 250 ಕೆ.ಜಿ. ತರಕಾರಿ ಬೆಳೆಯುತ್ತಿದ್ದಾರೆ. ಉಲ್ಲಾಸ್‌ ಅವರ ತಾಯಿ ಕಾಯಿಲೆಗೆ ತುತ್ತಾದಾಗ ಆಕೆಗೆ  ಉಸಿರಾಡಲು  ಶುದ್ಧ ಗಾಳಿ, ತಿನ್ನಲು ಪುಷ್ಕಳ ಆಹಾರ ನೀಡಬೇಕೆನ್ನುವ  ಇಂಗಿತವೇ ಈ ಮಹತ್ಕಾರ್ಯಕ್ಕೆ ಪ್ರೇರಣೆ ನೀಡಿತು. 

ದಕ್ಷ ಅಧಿಕಾರಿಯ ಪ್ರಾಮಾಣಿಕ ಪ್ರಯತ್ನ  

 ಒಡಿಶಾದ ಮಯೂರ್‌ಬಂಜ್‌ ಜಿಲ್ಲೆಯ ಕೆಂದೂಜ್‌ಹರಿನಲ್ಲಿ ಸುಮಾರು 80 ಬುಡಕಟ್ಟು ಕುಟುಂಬಗಳು ವಾಸಿಸುತ್ತಿದ್ದವು.  ಬೇಸಗೆ ಬಂತೆಂದರೆ ಈ ಗ್ರಾಮಗಳಿಗೆ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ರಾಜೇ ಶ್‌ ಪಾಟೀಲ್‌ ಎಂಬವರು ಯಾವುದೇ ವಿದ್ಯುತ್‌ನ ಸಹಾಯವಿಲ್ಲದೇ ನೀರು ಪೊರೈಕೆಗೆ ಮಾಡಿದ ಪ್ರಾಮಾಣಿಕ ಪ್ರಯತ್ನ ಮಾದರಿ.  
ನೀರಿನ ಸಮಸ್ಯೆಯನ್ನು ಗಂಭೀರವಾಗಿ  ಪರಿಗಣಿಸಿದ ಜಿಲ್ಲಾಧಿಕಾರಿ ಪಾಟೀಲ್‌ ಅವರು ಕಾಡಿನಲ್ಲಿ ಪೋಲಾಗುತ್ತಿದ್ದ ನೀರಿನ ಮೂಲವನ್ನು ಗಮನಿಸಿ, ತಡೆಗೋಡೆ ನಿರ್ಮಿಸಿದರು. ಡಯಾಮೀಟರ್‌ಗಳಿಂದ ಪೈಪ್‌ನ ಮೂಲಕ ಕೆಂದೂಜ್‌ಹರಿ ಗ್ರಾಮಕ್ಕೆ  ಹರಿಸಲಾಯಿತು.  ಇದರಿಂದ ಅಲ್ಲಿನ ಬುಡಕಟ್ಟು ಜನಾಂಗದವರು ಈ ನೀರಿನಿಂದ ಕೃಷಿ ಮತ್ತು ಕುಡಿಯಲು ಬಳಿಸಿದರು.  

ದೇಶದ ಟಾಪ್‌ 5 ಡ್ಯಾಂ ಗಳು
1.ತೇಹ್ರಿ ಡ್ಯಾಮ್: ಉತ್ತರಾ ಖಂಡದ ಭಗೀರಥಿ ನದಿಗೆ ಕಟ್ಟಲಾಗಿರುವ ತೇಹ್ರಿ ಅಣೆಕಟ್ಟು ಭಾರತದ ಅತೀ ದೊಡ್ಡ ಡ್ಯಾಂ ಆಗಿದೆ. ವಿಶ್ವದ 8ನೇ ಅತೀ ಎತ್ತರದ ಡ್ಯಾಂ ಎಂದು ಗುರುತಿಸಿಕೊಂಡಿದೆ.
ಎತ್ತರ: 261 ಮೀ.
ಉದ್ದ: 575 ಮೀ.
ನಿರ್ಮಾಣ: ಕಲ್ಲು ಮತ್ತು ಮಣ್ಣು
ಸಂಗ್ರಹಣೆ ಸಾಮರ್ಥ್ಯ: 2,100,000 ಎಕ್ರೆ ಪೀಟ್‌
ವಿದ್ಯುತ್‌ ಸಂಗ್ರಹ: 1000 ಮೆ.ವ್ಯಾ.

2. ಭಾಕ್ರಾ ನಂಗಲ್‌ ಡ್ಯಾಂ

ಹಿಮಾಚಲ ಪ್ರದೇಶದ ಸಟ್ಲೆàಜ್‌ ನದಿಗೆ ಕಟ್ಟಲಾಗಿರುವ ಭಾಂಕ್ರಾ ನಂಗಲ್‌ ಅಣೆಕಟ್ಟು ದೇಶದ ಅತೀ ದೊಡ್ಡ, ಏಷ್ಯಾದ 2ನೇ ಅತೀ ದೊಡ್ಡ ಡ್ಯಾಂ.
ಎತ್ತರ: 226 ಮೀ. ಉದ್ದ: 520 ಮೀ. ನಿರ್ಮಾಣ: ಕಾಂಕ್ರೀಟ್‌. ಸಂಗ್ರಹಣೆ ಸಾಮರ್ಥ್ಯ: 7,501,775 ಎಕ್ರೆ ಫೀಟ್‌ ವಿದ್ಯುತ್‌ ಸಂಗ್ರಹ: 1325 ಮೆ.ವ್ಯಾ.
3. ಸರ್ದಾರ್‌ ಸರೋವರಂ ಡ್ಯಾಂ
ಗುಜರಾತ್‌ನ ನರ್ಮದಾ ನದಿಗೆ ನಿರ್ಮಿಸಿರುವ ಸರ್ದಾರ್‌ ಸರೋವರಂ ಡ್ಯಾಂ 4 ರಾಜ್ಯಗಳಿಗೆ ನೀರುಣಿಸುತ್ತಿದೆ. ಈ ಡ್ಯಾಂನ ಎತ್ತರವನ್ನು ಈಗಿರುವ 163 ಮೀ. ನಿಂದ 121.9 ಮೀ. ಹೆಚ್ಚಿಸಲು ಸರಕಾರ ಉದೇಶಿಸಿದೆ. ಇದರಿಂದ ವಿಶ್ವ ಎರಡನೇ ಅತೀ ಎತ್ತರದ ಡ್ಯಾಂ ಎಂಬ ಕೀರ್ತಿಗೆ ಹೆಸರಾಗಲಿದೆ. ಅಮೆರಿಕಾದ ಗ್ರಾÂಂಡ್‌ ಕೌಲಿ ಮೊದಲ ಸ್ಥಾನದಲ್ಲಿದೆ.
ಎತ್ತರ: 163 ಮೀ. ಉದ್ದ: 1,210 ಮೀ. ವಿಶೇಷತೆ: ಗ್ರಾವಿಟಿ ಡ್ಯಾಂ
ಸಂಗ್ರಹಣೆ ಸಾಮರ್ಥ್ಯ: 7,701,775 ಎಕ್ರೆ ಫೀಟ್‌
ವಿದ್ಯುತ್‌ ಸಾಮರ್ಥ್ಯ: 1,450 ಮೆ.ವ್ಯಾ.
4. ಹಿರಾಕುಡ್‌ ಡ್ಯಾಂ
ಟ್ರೈಬಲ್‌ ಸ್ಟೇಟ್‌ ಎಂದೇ ಹೆಸರಾಗಿರುವ ಒಡಿಶಾದ ಮಹಂದಿ ನದಿಗೆ ನಿರ್ಮಿಸಿದ ಡ್ಯಾಂ ಹಿರಾಕುಡ್‌. ಇದು ವಿಶ್ವದ ಅತೀ ಉದ್ದನೆಯ ಡ್ಯಾಂ ಆಗಿದೆ. 
ಎತ್ತರ: 60.96 ಮೀ. ಉದ್ದ: 25.8 ಕೀ. ಮೀ. ಸಂಗ್ರಹಣೆ ಸಾಮರ್ಥ್ಯ: 4,779,965 ಎಕ್ರೆ ಫೀಟ್‌
ವಿದ್ಯುತ್‌ ಸಾಮರ್ಥ್ಯ: 307.5 ಮೆ.ವ್ಯಾ.
5. ನಾಗಾರ್ಜುನ ಸಾಗರ ಡ್ಯಾಂ
ತೆಲಂಗಾಣದ ಪ್ರವಾಸೋದ್ಯಮದ ಮೊದಲ ಆಯ್ಕೆಯಾಗಿ ನಾಗಾರ್ಜುನ ಸಾಗರ ಡ್ಯಾಂ ಅನ್ನು ಜನ ನೋಡಿ ಕಣ್ತುಂಬಿಕೊಳ್ಳುತ್ತಾರೆ. ರಾಜ್ಯದ ಕೃಷ್ಣಾ ನದಿಗೆ ನಿರ್ಮಸಿರುವ ಈ ಡ್ಯಾಂ ವಿಶ್ವದ ಅತೀ ಆಕರ್ಷಣೀಯ ಕೇಂದ್ರವಾಗಿದೆ.  ವಿಶೇಷ ಎಂದರೆ ನಾಗಾರ್ಜುನ ಸಾಗರ ಡ್ಯಾಂ 26 ಗೇಟ್‌ಗಳನ್ನು ಹೊಂದಿದೆ. ಕಲ್ಲು ಮತ್ತು ಇಟ್ಟಿಗೆಗಳಿಂದ ಜನರೇ ನಿರ್ಮಿಸಿದ ಡ್ಯಾಂ ಇದು.
ಎತ್ತರ: 124 ಮೀ. ಉದ್ದ: 1,450 ಮೀ. ಸಂಗ್ರಹಣೆ ಸಾಮರ್ಥ್ಯ: 9,371,845 ಎಕ್ರೆ ಫೀಟ್‌
ವಿದ್ಯುತ್‌ ಸಾಮರ್ಥ್ಯ: 816 ಮೆ.ವ್ಯಾ.

ನೀರು:  ಅಂಕಿ- ಅಂಶ
*ಜಗತ್ತಿನಾದ್ಯಂತ ಶುದ್ಧ ನೀರು ಸಿಗದೆ ಬದುಕುತ್ತಿರುವವರ ಸಂಖ್ಯೆ  210 ಕೋಟಿ.     
* ವಿಶ್ವದ ನಾಲ್ಕರಲ್ಲಿ  ಒಂದು ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಕುಡಿಯಲು ಶುದ್ಧ ನೀರಿಲ್ಲ.
* ಜಗತ್ತಿನಾದ್ಯಂತ ಗ್ರಾಮೀಣ ಭಾಗದ ಶೇ. 80ರಷ್ಟು ಮಂದಿ ಸುರಕ್ಷಿತವಲ್ಲದ ನೀರಿನ ಮೂಲಗಳನ್ನು ನಂಬಿ ಬದುಕುತ್ತಿದ್ದಾರೆ. 
*  ಜಗತ್ತಿನ ಒಟ್ಟು ಜನ ಸಂಖ್ಯೆಯ 3ನೇ ಎರಡು ಭಾಗದಷ್ಟು ಜನರು ಕನಿಷ್ಠ ವರ್ಷದ ಒಂದು ತಿಂಗಳಾದರೂ ನೀರಿನ ಸಮಸ್ಯೆ ಎದುರಿಸುತ್ತಾರೆ. *  2030ರ ವೇಳೆಗೆ ನೀರಿನ ಅಭಾವದಿಂದ ವಲಸೆ ಹೋಗಬಹುದು ಎಂದು ಅಂದಾಜಿಸಲಾದವರ ಸಂಖ್ಯೆ ಸುಮಾರು 70 ಕೋಟಿ. 
*  ಬರಗಾಲದಿಂದಾಗಿ ಪ್ರತಿವರ್ಷ ವಲಸೆ ಹೋಗುವವರ ಸಂಖ್ಯೆ ಸುಮಾರು  2.53  ಕೋಟಿ. 
* ಜಗತ್ತಿನಾದ್ಯಂತ  ನಗರ ಪ್ರದೇಶದ 5ರಲ್ಲಿ  4 ಮಂದಿ ಪೈಪ್‌ ಮೂಲದ ನೀರನ್ನೇ ಅವಲಂಬಿಸಿದ್ದಾರೆ.
*  ವರ್ಷವೊಂದರಲ್ಲಿ  ಶೇ. 69ರಷ್ಟು ಕೃಷಿಗೆ ಬಳಕೆಯಾದರೆ, ಕೈಗಾರಿಕೆಗಳು ಶೇ. 19 ಮತ್ತು ಮನೆ ಬಳಕೆಗೆ ಶೇ. 12ರಷ್ಟು ನೀರು ಬಳಕೆಯಾಗುತ್ತಿದೆ.
*  ಕೈಗಾರಿಕೆಗಳು ಬಳಸುವ ನೀರಿನ ಪ್ರಮಾಣದಲ್ಲಿ ಶೇ. 75ರಷ್ಟು ಶಕ್ತಿ ಉತ್ಪಾದನೆಗೆ ಬಳಕೆಯಾಗುತ್ತಿದೆ.
* ಸಾಮಾನ್ಯವಾಗಿ ಒಂದು ಕೆ.ಜಿ. ಭತ್ತ ಬೆಳೆಯಲು 3ರಿಂದ 5 ಸಾವಿರ ಲೀ., 1 ಕೆ.ಜಿ. ಸೋಯಾಕ್ಕೆ 2 ಸಾವಿರ ಲೀ., 1.ಕೆ.ಜಿ ಗೋಧಿಗೆ 900 ಲೀ., 1 ಕೆ.ಜಿ. ಬಟಾಟೆಗೆ  500 ಲೀ. ನೀರಿನ ಆವಶ್ಯಕತೆ ಇದೆ.
*  ಭೂಮಿಯ ಮೇಲಿರುವ ನೀರು ಶೇ. 97.5ರಷ್ಟು ಉಪ್ಪು, ಶೇ. 2.5 ರಷ್ಟು ಸಿಹಿ ನೀರು.
*  ಸಿಹಿ ನೀರಿನ ಶೇ. 70ರಷ್ಟು ಭಾಗ ಹಿಮರೂಪದಲ್ಲಿದೆ. ಶೇ. 30ರಷ್ಟು  ಅಂತರ್ಜಲ ಮತ್ತು ಇತರ ರೂಪದಲ್ಲಿದೆ.
* ಜಗತ್ತಿನಾದ್ಯಂತ ಸುಮಾರು ಶೇ. 15ರಿಂದ  20ರಷ್ಟು ನೀರು ದೇಶೀಯ ಬಳಕೆಗಲ್ಲದೆ, ರಫ್ತಿಗಾಗಿ ಬಳಕೆಯಾಗುತ್ತಿದೆ.
* ಮಾನವನ ದೇಹ ಶೇ. 60ಕ್ಕಿಂತ ಹೆಚ್ಚು ನೀರಿನಿಂದ ಆವೃತವಾಗಿದೆ. ರಕ್ತದಲ್ಲಿ ಶೇ. 92, ಮೆದುಳು ಮತ್ತು ಸ್ನಾಯುಗಳಲ್ಲಿ ಶೇ. 75 ಮತ್ತು ಎಲುಬುಗಳಲ್ಲಿ  ಶೇ. 22ರಷ್ಟು ನೀರಿನಂಶವಿದೆ.
* ದಿನವೊಂದಕ್ಕೆ ಸಾಮನ್ಯ ಮನುಷ್ಯನ ದೇಹಕ್ಕೆ ಅಗತ್ಯವಿರುವ ನೀರಿನ ಪ್ರಮಾಣ 2 ಲೀ.

ಜಲ ಸಂರಕ್ಷಣೆಗೆ ಮಾದರಿ ಪ್ರಾಚೀನ ವ್ಯವಸ್ಥೆ
ಬರ ಎದುರಿಸಲು ಮಾರ್ಗ ಇದೆ; ಮನಸ್ಸು ಬೇಕು
ನೀರಿನ ಕೊರತೆ ಸದ್ಯ ನಾವು ಎದುರಿಸುವ ಸಮಸ್ಯೆಗಳ ಪೈಕಿ ಪ್ರಮುಖವಾದುದು. ವರ್ಷದಿಂದ ವರ್ಷಕ್ಕೆ ಬರ ಪೀಡಿತ ಪ್ರದೇಶಗಳ ಸಂಖ್ಯೆ ಹೆಚ್ಚುತ್ತಿರುವುದು ಸಮಸ್ಯೆ ಬಿಗಡಾಯಿಸುತ್ತಿರುವುದಕ್ಕೆ ಸಾಕ್ಷಿ. ಇನ್ನೊಂದು ಮುಖ್ಯ ವಿಚಾರವೆಂದರೆ ಈ ಸಮಸ್ಯೆಗೆ ಪರಿಹಾರ ನಮ್ಮಲ್ಲೇ ಇದೆ. ಸಾರ್ವಜನಿಕರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿದರೆ ಸಮಸ್ಯೆ ಈಗಿನಷ್ಟು ಬೃಹದಾಕಾರವಾಗಿ ಕಾಡುವುದಿಲ್ಲ. ಜಲ ಸಂರಕ್ಷಣೆಯಲ್ಲಿ ಮಾದರಿಯಾಗಬಲ್ಲ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಅವುಗಳನ್ನು ಗುರುತಿಸುವ ಕೆಲಸವಾಗಬೇಕಷ್ಟೆ. 

ಮಾದರಿ ಲಾಪೋಡಿಯಾ
ರಾ
ಜಸ್ಥಾನದ ಲಾಪೋಡಿಯಾ ಬರ ಪರಿಸ್ಥಿಯನ್ನು ಎದುರಿಸುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ಮಳೆ ಬೀಳುವ ಪ್ರಮಾಣ ಕಡಿಮೆ. ಆದರೂ ನೀರಿನ ಸಂರಕ್ಷಣೆಯಲ್ಲಿ ಅದ್ಭುºತ ಕೆಲಸ ಮಾಡಿದೆ. ಚೌಕ ಎನ್ನುವ ವ್ಯವಸ್ಥೆಯೊಂದಿಗೆ ಇಲ್ಲಿ ನೀರು ಇಂಗಿಸಲಾಗುತ್ತಿದ್ದು, ಮಾದರಿ ಎನಿಸಿಕೊಂಡಿದೆ. ಬರ ನಿರ್ವಹಣೆಗಾಗಿ ಹಿಂದಿನಿಂದಲೇ ಭಾರತೀಯರು ಮಾರ್ಗೋಪಾಯ ಕಂಡುಕೊಂಡಿದ್ದರು. ಪಾರಂಜವ್ಯಗಳು (ಪಾರಂಪರಿಕ ಜಲ ಸಂರಕ್ಷಣಾ ವ್ಯವಸ್ಥೆ) ಎಂದು ಕರೆಯಲ್ಪಡುವ ಇವು ಆಯಾಯ ಮಣ್ಣಿಗೆ, ವಾತಾವರಣಕ್ಕೆ ಹೊಂದಿಕೆಯಾಗುವ, ಬೀಳುವ ಮಳೆ ಆಧಾರದಲ್ಲಿ ದೇಶಾದ್ಯಂತ ಪ್ರಚಲಿತದಲ್ಲಿದ್ದವು. ರಾಜಸ್ಥಾನದ ಮರುಭೂಮಿಯಲ್ಲೂ ಅಲ್ಲಿಗೆ ಹೊಂದಿಕೆಯಾಗುವ ಇಂತಹ ವ್ಯವಸ್ಥೆ ಇತ್ತು. ಆದರೆ ಅವುಗಳನ್ನು ಮರೆತಿರುವುದು ಇಂದಿನ ದುಃಸ್ಥಿತಿಗೆ ಕಾರಣ. ಕೆರೆ, ಕಟ್ಟ, ಮದಕ, ಗೋಕಟ್ಟೆ, ಜೋಹಾಡ್‌ ಮುಂತಾದವುಗಳನ್ನು ಪುನರುಜ್ಜೀವನಗೊಳಿಸಿದರೆ ನೀರಿನ ಕೊರತೆ ನೀಗಬಹುದು. ಇದಕ್ಕೆ ಉತ್ತಮ ಉದಾಹರಣೆ ತಲೆಕೊಳ. ಹಿಂದೆಲ್ಲ ಕೆರೆಯ ಮೇಲ್ಭಾಗದಲ್ಲಿ ನೀರು ಇಂಗಿಸಲು ವ್ಯವಸ್ಥೆ ಮಾಡಲಾಗುತ್ತಿತ್ತು. ಇದಕ್ಕೆ ತಲೆಕೊಳ ಎಂದು ಹೆಸರು. ಹಿರಿಯರು ಮಾಡಿಟ್ಟಿರುವ ಇಂತಹ ವ್ಯವಸ್ಥೆಗಳನ್ನು ಅಧ್ಯಯನ ಮಾಡಿದರೆ ಜಲ ಸಂರಕ್ಷಣೆಯ ದಾರಿ ಗೊಚರಿಸುತ್ತದೆ ಎನ್ನುತ್ತಾರೆ  ಜಲ ತಜ್ಞ ಶ್ರೀ ಪಡ್ರೆ.

ಸತ್ಯಮೇವ ಜಯತೇ ವಾಟರ್‌ ಕಪ್‌
ಮಹಾರಾಷ್ಟ್ರದ ಡಾ| ಅವಿನಾಶ್‌ ಪಾಲ್‌ ಎನ್ನುವ ವೈದ್ಯ ಹಳ್ಳಿ ಹಳ್ಳಿಗೆ ತೆರಳಿ ನೀರಿನ ಮೂಲಗಳನ್ನು ಪುನರುಜ್ಜೀವನಗೊಳಿಸುವ ಬಗ್ಗೆ ಮಾಹಿತಿ ನೀಡುತ್ತಿದ್ದರು. ಇದರಿಂದ ಪ್ರೇರೇಪಣೆಗೊಂಡ ನಟ ಅಮೀರ್‌ ಖಾನ್‌ ಹುಟ್ಟು ಹಾಕಿದ್ದೇ ಪಾನಿ ಫೌಂಡೇಷನ್‌. ಈ ಸಂಸ್ಥೆ ಮೂಲಕ ಹಳ್ಳಿಗಳಲ್ಲಿ ನಡೆಸುವ ಸ್ಪರ್ಧೆಯೇ ಸತ್ಯಮೇವ ಜಯತೇ ವಾಟರ್‌ ಕಪ್‌. ಪಾನಿ ಫೌಂಡೇಷನ್‌ ಮಹಾರಾಷ್ಟ್ರದ ಬರ ಪೀಡಿತ ಗ್ರಾಮಗಳನ್ನು ಗುರುತಿಸಿ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸುತ್ತದೆ. ಸ್ಪರ್ಧೆ ನಡೆಯುವುದು ಒಟ್ಟು 45 ದಿನಗಳವರೆಗೆ. ಈ ಸಮಯದಲ್ಲಿ ಬರ ಪರಿಸ್ಥಿತಿ ಎದುರಿಸುವ ರೀತಿ, ನೀರು ಸಂರಕ್ಷಣೆಗೆ ಕೈಗೊಳ್ಳಬೇಕಾದ ವಿಧಾನಗಳನ್ನು ತಿಳಿಸಲಾಗುತ್ತದೆ. ತಜ್ಞರಿಂದ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ. ಜತೆಗೆ ಪಾನಿ ಫೌಂಡೇಷನ್‌ ವೆಬ್‌ಸೈಟ್‌ನಲ್ಲಿ ಷರತ್ತುಗಳು, ಕಾರ್ಯ ವಿಧಾನ, ಹಿಂದಿನ ವರ್ಷಗಳ ಸಾಹಸಗಾಥೆಗಳು ಮುಂತಾದ 150ಕ್ಕೂ ಹೆಚ್ಚು ವೀಡಿಯೋಗಳನ್ನು ಅಪ್‌ಲೋಡ್‌ ಮಾಡುತ್ತಾರೆ. ಇವುಗಳ ಸಹಾಯದಿಂದ ಗ್ರಾಮಸ್ಥರು ನೀರಿನ ಮೂಲಗಳನ್ನು ಪುನರುಜ್ಜೀವನಗೊಳಿಸಬೇಕು. ಸ್ಪರ್ಧೆಯಿಂದಾಗಿ ಅನೇಕ ಗ್ರಾಮಗಳು ಬರದಿಂದ ಪಾರಾಗಿವೆ ಎನ್ನುತ್ತಾರೆ ಶ್ರೀ ಪಡ್ರೆ.

ವೇಲು ಗ್ರಾಮದ ಯಶಸ್ಸಿನ ಕಥೆ
ಸತ್ಯಮೇವ ಜಯತೇ ವಾಟರ್‌ ಕಪ್‌ನ 2016ರ ಸಾಲಿನ ವಿಜೇತ ಮಹಾರಾಷ್ಟ್ರದ ವೇಲು ಗ್ರಾಮದ ಯಶಸ್ಸಿನ ಕಥೆ ಎಲ್ಲರಿಗೂ ಸ್ಫೂರ್ತಿಯಾಗಬಲ್ಲದು. ವಾರ್ಷಿಕ ಸುಮಾರು 275 ಮಿ.ಮೀ. ಮಳೆ ಸುರಿಯುವ ಇಲ್ಲಿ ನೀರಿಗೆ ಹಾಹಾಕಾರ ಸಾಮಾನ್ಯವಾಗಿತ್ತು. 2016ರಲ್ಲಿ ಸತ್ಯಮೇಯ ಜಯತೇ ವಾಟರ್‌ ಕಪ್‌ನಲ್ಲಿ ಭಾಗವಹಿಸಿದ ಅನಂತರ ಗ್ರಾಮದ ಚಿತ್ರಣವೇ ಬದಲಾಯಿತು. ಪ್ರತಿ ವರ್ಷ ಬೇಸಗೆಯಲ್ಲಿ ಟ್ಯಾಂಕರ್‌ ನೀರು ಆಶ್ರಯಿಸುತ್ತಿದ್ದ ಗ್ರಾಮಸ್ಥರು ಇಂದು ಟ್ಯಾಂಕರ್‌ ನೀರು ಬೇಡ ಎನ್ನುವ ಮಟ್ಟಕ್ಕೆ ಬೆಳೆದಿದ್ದಾರೆ.

 ಸೂಕ್ತ ಅಧ್ಯಯನ ಅಗತ್ಯ
ನೀರಿನ ಕೊರತೆ ನೀಗಲು ಮಳೆ ನೀರು ಸಂಗ್ರಹದ ಜತೆಗೆ ಅರಣ್ಯ ಪ್ರದೇಶ, ಹಸುರು ಆವರಣ ಬೆಳೆಸಬೇಕು. ಕಾಡನ್ನು ಉಳಿಸಲು ಶ್ರಮಿಸಬೇಕು. ಕಾಡ್ಗಿಚ್ಚು ತಡೆಗೆ ಕ್ರಮ ಕೈಗೊಳ್ಳಬೇಕು. ಭಾರತ ಮಾತ್ರವಲ್ಲ ತೃತೀಯ ಜಗತ್ತಿನ ಎಲ್ಲ ದೇಶಗಳ ನೀರಿನ ಸುಸ್ಥಿರತೆಗೆ ಬೇಕಾದ ಪಾಠ ಭಾರತದ ಚರಿತ್ರೆಯಲ್ಲಿದೆ. ಅವುಗಳ ಸೂಕ್ತ ಅಧ್ಯಯನ ಅಗತ್ಯ.
ಶ್ರೀ ಪಡ್ರೆ, ಜಲ ತಜ್ಞ

ನದಿ ಹರಿದ ಕಥೆ
ಮಳೆ ನೀರು ತಡೆದ ಕಾರಣ ನದಿಗಳು ಪುನರುಜ್ಜೀವನಗೊಂಡು ಮತ್ತೆ ಹರಿದ ಘಟನೆ ನಮ್ಮ ಕಣ್ಣ ಮುಂದೆಯೇ ಇದೆ. ಸೊರಗಿದ್ದ ರಾಜಸ್ಥಾನದ ಜೈಪುರದಲ್ಲಿರುವ ನಾಂಡುವಾಳಿ ನದಿಯನ್ನು ಜನರೇ ಸೇರಿ ಐದು ವರ್ಷಗಳಲ್ಲಿ ಹರಿಯುವಂತೆ ಮಾಡಿದ್ದಾರೆ. ಕೇರಳದ ಪಾಲಕ್ಕಾಡ್‌ ಜಿಲ್ಲೆಯಲ್ಲಿ ಸರಕಾರದ ಅಟ್ಟಪ್ಪಾಡಿ ಹಿಲ್‌ ಏರಿಯಾ ಡೆವಲಪ್‌ಮೆಂಟ್‌ ಎಂಬ ಸಂಸ್ಥೆ ಸ್ಥಳೀಯರ ಸಹಭಾಗಿತ್ವದಲ್ಲಿ ಬತ್ತಿದ್ದ 28 ಕಿ.ಮೀ. ಉದ್ದದ ಕೊಡುಂಗರ ಪಳ್ಳಂ ಹರಿಯುವಂತೆ ಮಾಡಿದೆ. ಇದಕ್ಕಾಗಿ ಅನುಸರಿಸಿದ್ದು ಸರಳ ಮಾರ್ಗಗಳನ್ನು. ಒಂದು ಬೋಳಾದ ಪ್ರದೇಶ, ಗುಡ್ಡಗಳಿಗೆ ಹಸುರು ಹೊದೆಸಿದ್ದು. ಇನ್ನೊಂದು ಹರಿವ ಮಳೆ ನೀರನ್ನು ಇಂಗಿಸಿದ್ದು. ಇತ್ತೀಚೆಗೆ ಸಾಗರ ಸಮೀಪದ ದ್ಯಾವಸಹೊಳೆ ಎನ್ನುವ 10 ಕಿ.ಮೀ. ಉದ್ದದ ಹೊಳೆಯನ್ನು ಪುನರುಜ್ಜೀವನಗೊಳಿಸಲು ಸ್ಥಳೀಯರು ಮುಂದಾಗಿರುವುದು ಉತ್ತಮ ಬೆಳವಣಿಗೆ. 

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.