• ಬರಗಾಲ 

  ಕೆರೆ ಬಾವಿ ಬತ್ತಿದೆ  ನೆಲ ಬಿರುಕು ಬಿಟ್ಟಿದೆ  ಕೋಗಿಲೆ, ಮಲ್ಲಿಗೆ ಎಲ್ಲಿದೆ? ಒಳ್ಳೆಯ ಕಾವ್ಯಕ್ಕೂ  ಈಗ ಬರಗಾಲ ಕೆ.ಎಸ್‌.ನ  ಅಂಥ ಕವಿ ಇಲ್ಲದೆ ! ಎಚ್‌.ಡುಂಡಿರಾಜ್‌

 • ಕ್ಯಾಂಟೀನ್‌ ರಾಜಕೀಯ

  ಐದು ರೂಪಾಯಿಗೆ ತಿಂಡಿ ಹತ್ತು ರೂಪಾಯಿಗೆ ಊಟ ಜನರನ್ನು ಸೆಳೆವ ಹಾದಿ ದರ ಕಡಿಮೆ ಎಂದು ಮಿತಿ ಮೀರಿ ತಿಂದು ಶುರುವಾಗಬಹುದು ಭೇದಿ!  ಎಚ್‌.ಡುಂಡಿರಾಜ್‌

 • ಬೇಸಿಗೆ 

  ನಿನ್ನೆ ಸಂಜೆ ಕಡಲಿಗೆ  ಈಜಲು ಇಳಿದವ  ಇಂದು ಬಂದ ಹೊರಗೆ  ಸೂರ್ಯನಿಗೂ ಸಹ  ಸಹಿಸಲಾಗುತ್ತಿಲ್ಲ  ಬೇಸಿಗೆಯ ಬೇಗೆ!   -ಎಚ್‌.ಡುಂಡಿರಾಜ್‌

 • ಐಪಿಎಲ್‌

  ಕೋಟಿಗಟ್ಟಲೆ ದುಡ್ಡಿಗೆ ಆಟಗಾರರ ಹರಾಜು ಚೀರ್‌ ಹೆಣ್ಣುಗಳ ಕುಣಿತ ಕುಡಿತ, ಮಸ್ತಿ, ಮೋಜು ಸಭ್ಯರ ಕ್ರೀಡೆ ಹೆಸರಿನಲ್ಲಿ ಸಿರಿವಂತರ ಜೂಜು! -ಎಚ್‌.ಡುಂಡಿರಾಜ್‌

 • ವಿರೋಧಾಭಾಸ

  ಮೂಢನಂಬಿಕೆಗಳನ್ನು ನಿಷೇಧಿಸುವ ಮಸೂದೆ ಸದನದಲ್ಲಿ ಶೀಘ್ರವೇ ಮಂಡನೆ ಅದಕ್ಕಿಂತ ಮೊದಲು ಮಳೆಗಾಗಿ ರಾಜ್ಯದ ಎಲ್ಲಾ ಮಂದಿರಗಳಲ್ಲಿ ಅರ್ಚನೆ ! -ಎಚ್‌.ಡುಂಡಿರಾಜ್‌

 • ತಳದಲ್ಲಿ

  ಹೈಕಮಾಂಡ್‌ ಕಡಿವಾಣ ಭಿನ್ನಮತ ಶಮನ ಒಗ್ಗಟ್ಟಿನ ನಾಟಕ ಶುರು ಭಾಜಪದ ಕೊಳದಲ್ಲಿ ಮೇಲೆ ತಿಳಿನೀರು ತಳದಲ್ಲಿ ಉಂಟು ಕೆಸರು ! – ಎಚ್‌.ಡುಂಡಿರಾಜ್‌

 • ಚರ್ಚೆ

  ಬರದಿಂದ ಕಂಗೆಟ್ಟ ಜನರು ಕೇಳುತ್ತಿಹರು ಕುಡಿಯಲು ಬೊಗಸೆ ನೀರು ರಾಜಕಾರಣಿಗಳು ಚರ್ಚೆ ನಡೆಸುತ್ತಿಹರು ಮುಂದಿನ ಸಿಎಂ ಯಾರು ?           – ಎಚ್‌.ಡುಂಡಿರಾಜ

 • ವಯಸ್ಸು 

  ವಯಸ್ಸಾದರೂ ಕೆಲವರು  ತುಂಬಾ ತುಂಬಾ ತೆಳ್ಳಗೆ  ಪತಿಯ ಜತೆಗಿದ್ದರೆ ಕಾಣುತ್ತಾರೆ  ಪತ್ನಿಯಲ್ಲ ಮಗಳ ಹಾಗೆ  ಇನ್ನು ಕೆಲವರು ಪಾರ್ಲರಿಗೆ  ದುಡ್ಡು ಹಾಕಿದರೂ ದಂಡ  ಮಗನ ಹಾಗೆ ಕಾಣುತ್ತಾನೆ ಗಂಡ ! ಎಚ್‌.ಡುಂಡಿರಾಜ್‌

 • ಭಿನ್ನಮತ

  ಕಾದಾಡುತ್ತಿದ್ದಾರೆ ಪಕ್ಷದ ಹಿರಿಯ ನಾಯಕರು ಆಹಾ! ಬಾಹುಬಲಿ-ರಾಣಾ ಪರಿಣಾಮವಾಗಿ ಕಾರ್ಯಕರ್ತರು ಪಾಪ ತಬ್ಬಿಬ್ಬು, ಹೈರಾಣ ! ಎಚ್‌. ಡುಂಡಿರಾಜ್‌ 

 • ಬಾಹುಬಲಿ 

  ಯಾವುದು ಹೆಚ್ಚು ಚೆಂದ ? ಬಾಹುಬಲಿ ಎರಡಾ  ಬಾಹುಬಲಿ ಒಂದಾ ? ಒಂದಂತೂ ನಿಜ  ಬಾಚುತ್ತಿದೆ ದುಡ್ಡು  ಎರಡೂ ಬಾಹುಗಳಿಂದ ! – ಎಚ್‌.ಡುಂಡಿರಾಜ್‌

 • ಷಷ್ಟ್ಯಬ್ದ

  ಷಷ್ಟ್ಯಬ್ದ ಸಮಾರಂಭ ಮಾಡಲೇ ಬೇಕು ಅರವತ್ತಾಯಿತೆಂದು ಗೊತ್ತಾಗಲು ಇಲ್ಲದಿದ್ದರೆ ಅನ್ನಿಸುತ್ತದೆ ಹೀಗೇ ಇದ್ದೆ ನಾನು ಅಮ್ಮ ನನ್ನನ್ನು ಹೆತ್ತಾಗಲೂ!                 – ಎಚ್‌. ಡುಂಡಿರಾಜ್‌

 • ಹನಿಗಾರಿಕೆ

  ತಿಂದದ್ದು ಬಿಟ್ಟಿ ಸಿಕ್ಕಿತು ಎಂದು ಇಟ್ಟದ್ದೆಲ್ಲವನ್ನೂ ಒಂದೂ ಬಿಡದೆ ತಿಂದು ತೇಗಿದವರಿಗೆ ಹೊಟ್ಟೆ ಕೆಟ್ಟಮೇಲೆ ತಿಳಿಯಿತು ತಿಂದದ್ದು ಹೆಚ್ಚಾಯಿತೆಂದು ! ಎಚ್‌.ಡುಂಡಿರಾಜ್‌

 • ಬೇಸಿಗೆ

  ಅಯ್ಯೋ ಹಾಳು ಸೆಖೆ ಎಂದು ದೂರಬೇಡಿ ಬೇಸಿಗೆಯನ್ನು ಮರಗಳಿರುವಲ್ಲಿ ಉಂಟು ನೆರಳು, ಹೂವು, ಹಣ್ಣು ಚಳಿಗಾಲದಲ್ಲಿ ಏನಿದೆ ಮಣ್ಣು? ಮುಚ್ಚಿರುತ್ತದೆ ಮಂಜುಗಡ್ಡೆ ಎಲ್ಲವನ್ನೂ!  ಎಚ್‌. ಡುಂಡಿರಾಜ್‌

 • ಕಾರಣ

  ನನಗೆ ಖಂಡಿತ ಇಲ್ಲ ಬರೆದ ಕವನಗಳೆಲ್ಲ ಶ್ರೇಷ್ಠ ಅನ್ನುವ ಭ್ರಮೆ ಕೆಲವಾದರೂ ನಿಮಗೆ ಇಷ್ಟವಾದರೆ ಕಾರಣ ಕನ್ನಡ ಭಾಷೆಯ ಮಹಿಮೆ!   – ಎಚ್‌. ಡುಂಡಿರಾಜ್‌  

 • ಆಗುವುದು 

  ಮಹತ್ವದ್ದನ್ನು ಸಾಧಿಸಲು  ಮೊದಲು ಮಾಡಬೇಕಾದ್ದು   ಮನಸ್ಸು  ನಂತರ ನಿರಂತರ ಯತ್ನ  ಕಠಿಣ ಶ್ರಮ , ತಪಸ್ಸು  ಸುಮ್ಮನೆ ಇದ್ದರೆ  ಆಗುವುದು  ಒಂದೇ ಒಂದು  ವಯಸ್ಸು! ಎಚ್‌.ಡುಂಡಿರಾಜ್‌

 • ಉಸ್ತುವಾರಿ

   ಪಕ್ಷ ಬೇರೆಯಾದರೇನು ? ಉಸ್ತುವಾರಿ ಬೇರೆಯಲ್ಲ  ಬಿಜೆಪಿಗೆ ಮುರಳೀಧರ  ಕಾಂಗ್ರೆಸ್‌ಗೆ    ವೇಣು ಗೋಪಾಲ  ಇಬ್ಬರದ್ದೂ ಒಂದೆ  ದನಕಾಯೋ ದಂಧೆ ! -ಎಚ್‌.ಡುಂಡಿರಾಜ್‌

 • ಒಳಗೆ-ಹೊರಗೆ

  ಇದ್ದೇ ಇರುತ್ತದೆ ಬಿಡಿ ಒಳ ಜಗಳ, ಒಳ ಒಪ್ಪಂದ ರಾಜಕೀಯದೊಳಗೆ ಆದರೆ ಅದು ಒಳಗೇ ಇರಬೇಕು ಒಳ ಉಡುಪಿನ ಹಾಗೆ!  – ಎಚ್‌. ಡುಂಡಿರಾಜ್‌

 • ಆರ್‌ಸಿಬಿ 

  ಬಿಸಿನೆಸ್ಸಲ್ಲಿ ನಷ್ಟ ಆಗಿ  ಕೋಟಿಗಟ್ಟಲೆ ಸಾಲ  ಧಣಿಗಳು ಹೇಗೋ ಲಂಡನ್ನಲ್ಲಿ  ಕಳೆಯುತ್ತಿಹರು ಕಾಲ  ಅಂಥದ್ರಲ್ಲಿ  ಹೀಗ್‌ ಅಡೋದಾ ? ಸಾಲು ಸಾಲು ಸೋಲಾ ? ತೀರದ ಸಾಲ ಸೋಲ ! -ಎಚ್‌.ಡುಂಡಿರಾಜ್‌

 • ಸಿಎಂ ಪ್ರವಾಸ 

  ಸೂಟು ಬೂಟಲ್ಲಿ  ಮಿಂಚಿದರು ಸಿದ್ದು  ಬೆರಗಾದರು ದುಬೈ ಜನ  ಆದರೂ ಕೊಂಚ  ಸಪ್ಪೆ ಅನ್ನಿಸಿತು  “ಪಂಚೆ’ ಇಲ್ಲದ ಭಾಷಣ! – ಎಚ್‌.ಡುಂಡಿರಾಜ್‌

 • ಸಂದೇಹ

  ಮಂತ್ರಿವರ್ಯರ ಸನ್ಮಾನಕ್ಕೆ ಬೆಳ್ಳಿಯ ಗದೆ ಏಕೆ? ಶತ್ರುಗಳ ಜತೆ ಸೆಣೆಸಲು ದುಬಾರಿ ಲೋಹವೇ ಬೇಕೆ? ಉಕ್ಕಿನ ಗದೆ ಆಗದೆ?     – ಎಚ್‌. ಡುಂಡಿರಾಜ್‌

ಹೊಸ ಸೇರ್ಪಡೆ