
Heart attack: ಜಿಮ್ ನಲ್ಲಿ ವರ್ಕೌಟ್ ಮಾಡುವ ವೇಳೆ ಕುಸಿದು ಬಿದ್ದು 21ರ ಯುವಕ ಮೃತ್ಯು
ಗಾಜಿಯಾಬಾದ್ ಜಿಮ್‌ನಲ್ಲಿ ಟ್ರೆಡ್‌ಮಿಲ್‌ನಲ್ಲಿ ಓಡುತ್ತಿರುವಾಗ ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪಿದ್ದಾನೆ
Team Udayavani, Sep 17, 2023, 9:09 AM IST

ಲಕ್ನೋ: ಜಿಮ್ ನಲ್ಲಿ ಯುವಕನೊಬ್ಬ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಶನಿವಾರ (ಸೆ.16) ರಂದು ನಡೆದಿದೆ.
ಸರಸ್ವತಿ ವಿಹಾರ್ ಮೂಲದ ಸಿದ್ದಾರ್ಥ್(21) ಮೃತ ಯುವಕ. ಇವರು ನೋಯ್ಡಾದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದರು.
ಸಿದ್ದಾರ್ಥ್ ಎಂದಿನಂತೆ ಶನಿವಾರ ಕೂಡ ಜಿಮ್ ಗೆ ತೆರಳಿದ್ದಾರೆ. ಈ ವೇಳೆ ವರ್ಕೌಟ್ ಮಾಡುವ ಟ್ರೆಡ್ ಮಿಲ್ ಗೆ ಹತ್ತಿದ್ದಾರೆ. ಟ್ರೆಡ್ ಮಿಲ್ ನಲ್ಲಿ ಓಡುವ ವೇಳೆ ಸಿದ್ದಾರ್ಥ್ ಒಂದು ಕ್ಷಣಕ್ಕೆ ವೇಗವನ್ನು ಕಡಿಮೆ ಮಾಡಿ ನಿಂತುಕೊಂಡಿದ್ದಾರೆ. ಅದೇ ವೇಳೆಗೆ ಅವರು ಕುಸಿದು ಬಿದ್ದಿದ್ದಾರೆ.
ಅವರನ್ನು ನೋಡಿದ ಜಿಮ್ ನಲ್ಲಿದ್ದ ಇಬ್ಬರು ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅವರು ಪ್ರಜ್ಞೆತಪ್ಪಿ ಯಾವುದೇ ಪ್ರತಿಕ್ರಿಯೆ ನೀಡದ ಪರಿಣಾಮ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಸಿದ್ದಾರ್ಥ್ ಅದಾಗಲೇ ಮೃತಪಟ್ಟಿದ್ದಾರೆ. ಅವರಿಗೆ ಹೃದಯಾಘಾತವಾಗಿದೆ ಎಂದು ವೈದ್ಯರು ಪರೀಕ್ಷಿಸಿ ಹೇಳಿದ್ದಾರೆ.
ಕುಸಿದು ಬಿದ್ದಿರುವ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕುಸಿದು ಬೀಳುವ 10 ನಿಮಿಷದ ಮೊದಲು ಸಿದ್ದಾರ್ಥ್ ತನ್ನ ತಾಯಿ ಜೊತೆ ಫೋನಿನಲ್ಲಿ ಮಾತನಾಡಿದ್ದರು ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
