ವಿಶ್ವಕಪ್‌ನಿಂದ ದ.ಆಫ್ರಿಕಾ ಔಟ್‌

Team Udayavani, Jun 24, 2019, 5:12 AM IST

ಲಂಡನ್‌: ಏಳು ಪಂದ್ಯಗಳಲ್ಲಿ 5ನೇ ಸೋಲುಂಡ ದಕ್ಷಿಣ ಆಫ್ರಿಕಾ ವಿಶ್ವಕಪ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ರವಿವಾರದ ಲಾರ್ಡ್ಸ್‌ ಪಂದ್ಯದಲ್ಲಿ ಡು ಪ್ಲೆಸಿಸ್‌ ಪಡೆ ಪಾಕಿಸ್ಥಾನ ವಿರುದ್ಧ 49 ರನ್ನುಗಳಿಂದ ಮುಗ್ಗರಿಸಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನ ಸ್ಫೋಟಕ ಆಟವಾಡಿ 7 ವಿಕೆಟಿಗೆ 308 ರನ್‌ ಗಳಿಸಿ ಸವಾಲೊಡ್ಡಿದರೆ, ದಕ್ಷಿಣ ಆಫ್ರಿಕಾ 9 ವಿಕೆಟಿಗೆ 259 ರನ್‌ ಹೊಡೆದು ಶರಣಾಯಿತು.

ಇದು ಪಾಕಿಸ್ಥಾನಕ್ಕೆ 6 ಪಂದ್ಯಗಳಲ್ಲಿ ಒಲಿದ ಕೇವಲ 2ನೇ ಜಯ. ಉಳಿದ ಮೂರೂ ಪಂದ್ಯಗಳನ್ನು ಭಾರೀ ಅಂತರದಿಂದ ಗೆದ್ದರೆ, ಅಗ್ರಸ್ಥಾನದಲ್ಲಿರುವ 4 ತಂಡಗಳಲ್ಲಿ ಕೆಲವು ಸೋಲುತ್ತ ಹೋದರಷ್ಟೇ ಪಾಕಿಸ್ಥಾನಕ್ಕೆ ನಾಕೌಟ್‌ ಅವಕಾಶವೊಂದು ಎದುರಾದೀತು.

ಚೇಸಿಂಗ್‌ ವೇಳೆ ಹಾಶಿಮ್‌ ಆಮ್ಲ (2) ಅವರನ್ನು ಬೇಗನೇ ಕಳೆದುಕೊಂಡ ಆಫ್ರಿಕಾಕ್ಕೆ ಡಿ ಕಾಕ್‌ (47) ಮತ್ತು ಡು ಪ್ಲೆಸಿಸ್‌ (63) ಆಧಾರವಾದರು. ಈ ಜೋಡಿ ಬೇರ್ಪಟ್ಟೊಡನೆ ಪಾಕ್‌ ಬೌಲರ್‌ಗಳು ಮೇಲುಗೈ ಸಾಧಿಸಿದರು. ವಹಾಬ್‌ ರಿಯಾಜ್‌ ಮತ್ತು ಶಾದಾಬ್‌ ಖಾನ್‌ ತಲಾ 3 ವಿಕೆಟ್‌ ಹಾರಿಸಿದರು.

ಪಾಕಿಸ್ಥಾನ ಪರ ಗರಿಷ್ಠ ಮೊತ್ತ ಗಳಿಸಿದ ಬ್ಯಾಟ್ಸ್‌ಮನ್‌ ಹ್ಯಾರಿಸ್‌ ಸೊಹೈಲ್‌ 59 ಎಸೆತಗಳ‌ಲ್ಲಿ 89 ರನ್‌ ಸಿಡಿಸಿದರು. ಇದರಲ್ಲಿ 9 ಬೌಂಡರಿ, 3 ಸಿಕ್ಸರ್‌ಗಳಿದ್ದವು.
ಇದಕ್ಕೂ ಮುನ್ನ ಇಮಾಮ್‌ ಉಲ್‌ ಹಕ್‌, ಫ‌ಕಾರ್‌ ಜಮಾನ್‌ ಅತ್ಯುತ್ತಮವಾಗಿ ಆಡಿ ಮೊದಲ ವಿಕೆಟಿಗೆ 14.5 ಓವರ್‌ಗಳಿಂದ 81 ರನ್‌ ಪೇರಿಸಿ ಭದ್ರ ಬುನಾದಿ ನಿರ್ಮಿಸಿದರು. ಇಬ್ಬರ ಗಳಿಕೆಯೂ ತಲಾ 44 ರನ್‌. ಹಾಗೆಯೇ ವನ್‌ಡೌನ್‌ ಬ್ಯಾಟ್ಸ್‌ ಮನ್‌ ಬಾಬರ್‌ ಆಜಂ ಕೂಡ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿ 80 ಎಸೆತಗಳಿಂದ 69 ರನ್‌ ಹೊಡೆದರು (7 ಬೌಂಡರಿ).


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ