ಔಟಾಗದಿದ್ದರೂ ಹೊರ ನಡೆದ ಕೊಹ್ಲಿ

Team Udayavani, Jun 17, 2019, 4:46 PM IST

ಮ್ಯಾಂಚೆಸ್ಟರ್: ಭಾರತ ತಂಡದ ನಾಯಕ  ವಿರಾಟ್ ಕೊಹ್ಲಿ ನಿನ್ನೆಯ ಪಂದ್ಯದ ಬ್ಯಾಟಿಂಗ್‌ ವೇಳೆ ಎಡವಟ್ಟು ಮಾಡಿಕೊಂಡರು. ಮೊಹಮ್ಮದ್‌ ಅಮಿರ್‌ ಎಸೆದ 48ನೇ ಓವರ್‌ನ 4ನೇ ಎಸೆತದಲ್ಲಿ ಚೆಂಡು ಬೌನ್ಸ್‌ ಆಯಿತು.

ಅದನ್ನು ಬಾರಿಸಲು ಕೊಹ್ಲಿ ವಿಫ‌ಲವಾದರು. ಚೆಂಡು ಕೀಪರ್‌ ಸರ್ಫಾರಾಜ್ ಕೈಗೆ ಸೇರಿತು. ಪಾಕಿಸ್ತಾನೀಯರು ಅರೆ ಮನಸ್ಸಿನಿಂದ ಮನವಿ ಮಾಡಿದರು. ಅಂಪೈರ್‌ ಅದನ್ನು ಪುರಸ್ಕರಿಸಲಿಲ್ಲ. ಆದರೆ ಅಂಪೈರ್‌ ತೀರ್ಪಿಗೆ ಕಾಯದೇ ಕೊಹ್ಲಿ ಮೈದಾನದಿಂದ ಹೊರನಡೆದರು. ಪುನರ್‌ಪರಿಶೀಲನೆಯಲ್ಲಿ ಔಟಲ್ಲ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿತ್ತು.

ಹಾಗಿರುವಾಗ ಅಂಪೈರ್‌ ನಾಟೌಟ್‌ ಕೊಟ್ಟರೂ, ಕೊಹ್ಲಿ ಯಾಕೆ ಹೀಗೆ ಮಾಡಿದರು ಎನ್ನುವುದು ಪ್ರಶ್ನಾರ್ಥಕವಾಗಿದೆ. ಡ್ರೆಸ್ಸಿಂಗ್‌ ಕೋಣೆಯಲ್ಲಿ ತಮ್ಮ ತಪ್ಪಿನಿಂದ ಕೊಹ್ಲಿ ಸಿಟ್ಟಾಗಿದ್ದು ಕಾಣಿಸುತ್ತಿತ್ತು. ಬ್ಯಾಟ್‌ಗೆ ಚೆಂಡು ತಾಕಿದಾಗ ಬರುವ ಒಂದು ಶಬ್ದ ಕೇಳಿಸಿದಂತಾಗಿದ್ದರಿಂದ ಕೊಹ್ಲಿ ಇಂತಹ ನಿರ್ಧಾರ ಮಾಡಿರಬಹುದೆಂದು ಊಹಿಸಲಾಗಿದೆ.

11,000 ರನ್‌ ಕೊಹ್ಲಿ ವಿಶ್ವದಾಖಲೆ

ವಿಶ್ವದಾಖಲೆಗಳ ಮೇಲೆ ವಿಶ್ವದಾಖಲೆ ನಿರ್ಮಿಸುತ್ತಿರುವ ವಿರಾಟ್‌ ಕೊಹ್ಲಿ ಭಾನುವಾರ ಇನ್ನೊಂದು ವಿಶ್ವದಾಖಲೆ ನಿರ್ಮಿಸಿದರು. ಅವರು ಏಕದಿನದಲ್ಲಿ 11,000 ರನ್‌ಗಳನ್ನು ಅತಿ ವೇಗವಾಗಿ ಗಳಿಸಿದ ಆಟಗಾರ ಎನಿಸಿಕೊಂಡರು. ಜೊತೆಗೆ ಸಚಿನ್‌ ತೆಂಡುಲ್ಕರ್‌ ದಾಖಲೆಯನ್ನು ನೆಲಸಮ ಮಾಡಿದರು. ತೆಂಡುಲ್ಕರ್‌ 11,000 ರನ್‌ ಗಳಿಸಲು 276 ಇನಿಂಗ್ಸ್‌ ಬಳಸಿಕೊಂಡಿದ್ದರು. ಇದುವರೆಗೆ 230 ಪಂದ್ಯವಾಡಿರುವ ಕೊಹ್ಲಿ, ಆ ಪೈಕಿ 222 ಇನಿಂಗ್ಸ್‌ಗಳಲ್ಲಿ (ಬ್ಯಾಟಿಂಗ್‌ ಮಾಡಿರುವ ಪಂದ್ಯ ಸಂಖ್ಯೆ) 11,000 ರನ್‌ ಮುಟ್ಟಿದರು. ಪಂದ್ಯಕ್ಕೂ ಮುನ್ನ 10943 ರನ್‌ ಗಳಿಸಿದ್ದ ಅವರಿಗೆ ಈ ವಿಶ್ವದಾಖಲೆ ನಿರ್ಮಿಸಲು ಕೇವಲ 57 ರನ್‌ ಅಗತ್ಯವಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ