CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮಗುವಿನ ಮಾತು, ಭಾಷಾ ಕಲಿಕೆಯಲ್ಲಿ  ಕಾದು ನೋಡುವ ಪ್ರವೃತ್ತಿ ಬೇಡ

ಮಾತನಾಡಲು ಕಲಿಯುವುದು ಒಂದು ಮಗುವಿನ ಜೀವನದ ಬಹುಮುಖ್ಯ ಘಟ್ಟ. ತಮ್ಮ ಮಗುವು ಮಾತನಾಡಲು ಆರಂಭಿಸುವ ಆ ಗಳಿಗೆಯು ಪ್ರತಿಯೊಬ್ಬ ಹೆತ್ತವರ ನಿರೀಕ್ಷೆಯ ಕ್ಷಣವಾಗಿರುತ್ತದೆ. ತಮ್ಮ ಮಗು ಸರಿಯಾಗಿ ಮಾತನಾಡುತ್ತಿಲ್ಲ ಎಂಬ ವಿಚಾರವು ಹೆತ್ತವರಲ್ಲಿ ಆತಂಕವನ್ನು ಮೂಡಿಸುತ್ತದೆ. ಆದರೆ ತಂದೆ-ತಾಯಿ ಅಥವಾ ಕುಟುಂಬದ ಯಾರೋ ಸದಸ್ಯರು ಮೂರು ವರ್ಷದ ವರೆಗೂ ಮಾತನಾಡಿಲ್ಲ ಹಾಗಾಗಿ ಈ ಮಗುವೂ ಸ್ವಲ್ಪ ವಿಳಂಬವಾಗಿ ಮಾತನಾಡುತ್ತದೆ ಅನ್ನೋ ರೀತಿಯ ಸಾಂಸ್ಕೃತಿಕ ನಂಬಿಕೆಗಳು ಮಗುವಿನ ಮಾತು ಕಲಿಕೆಯ ಆರಂಭಿಕ ಪ್ರಕ್ರಿಯೆ ಎನಿಸಿರುವ ಮಾತನಾಡಲು ಸನ್ನದ್ಧವಾಗುವಿಕೆ ಎಂಬ ಅಂಶದ ಮೇಲೆ ಪರಿಣಾಮ ಉಂಟು ಮಾಡುತ್ತವೆ. ದುರದೃಷ್ಟವಶಾತ್‌ ಇಂತಹ ನಂಬಿಕೆಗಳು ನಮ್ಮ ಸಮಾಜದಲ್ಲಿ ಇನ್ನೂ ಚಾಲ್ತಿಯಲ್ಲಿವೆ. ಆದರೆ ಮಗುವಿನ ಮಾತು ಕಲಿಕೆಗೆ ಸಂಬಂಧಿಸಿದ ವಿಚಾರಕ್ಕೆ ಬಂದರೆ ಈ ಕಾದು ನೋಡುವ ವಿಧಾನವನ್ನು ಶಿಫಾರಸು ಮಾಡುವುದಿಲ್ಲ. 

ಜನನ ಸಮಯದ ಅಳುವೇ ಮಗುವಿನ ಮೊದಲ ಸಂವಹನ. ಆರಂಭದಲ್ಲಿ ಮಗುವು ತನ್ನ ಬೇಡಿಕೆಗಳನ್ನು ಅಳುವಿನ ಮೂಲಕ ವ್ಯಕ್ತಪಡಿಸುತ್ತಿರುತ್ತದೆ. ಅನಂತರ ಅದು ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ತನ್ನ ಅಳುವಿನ ವಿನ್ಯಾಸವನ್ನು ಬದಲಿಸಿಕೊಳ್ಳುತ್ತದೆ ಅಥವಾ ಅಳುವಿನಲ್ಲಿ ಬದಲಾವಣೆ ಮಾಡಿಕೊಳ್ಳುತ್ತದೆ. ಹಾಗಾಗಿ, ಸಂವಹನ ವಿನ್ಯಾಸವೊಂದು ಆರಂಭವಾಗಿದ್ದು, ಆಮೇಲೆ ಅದು ಮುಂದುವರಿಯದಿದ್ದರೆ, ಸಂವಹನವು ಮುರಿದಿರುವ ಕಾರಣ ಏನು ಎಂಬುದನ್ನು ಕಂಡು ಹಿಡಿಯುವುದು ಬಹಳ ಅವಶ್ಯಕ ಅಂಶ ಎನಿಸಿಕೊಳ್ಳುತ್ತದೆ. 

ಸಂವಹನ ಮುರಿದಿರುವುದಕ್ಕೆ ಅನೇಕ ಕಾರಣಗಳು ಇರಬಹುದು. ಶ್ರವಣ ನಷ್ಟವಾಗಿರುವಿಕೆಯ ಕಾರಣದಿಂದ, ಬೌದ್ಧಿಕ ಬೆಳವಣಿಗೆಯ ನ್ಯೂನತೆಯಿಂದ ಅಥವಾ ಇನ್ನಿತರ ಯಾವುದೋ ರೀತಿಯ ನರಸಂಬಂಧಿ ಅಸಹಜತೆಗಳ ಕಾರಣದಿಂದ ಸಂವಹನದ ವೈಫ‌ಲ್ಯ ಕಾಣಿಸಿಕೊಂಡಿರಬಹುದು; ಅಂದರೆ ಸಂವಹನ ಮುರಿದು ಹೋಗಿರಬಹುದು. ಇಷ್ಟೇ ಅಲ್ಲದೆ, ದುರದೃಷ್ಟವಶಾತ್‌ ಮನೆಯಲ್ಲಿ ಮಗುವಿನ ಮಾತಿನ ಬೆಳವಣಿಗೆಗೆ ಉತ್ತೇಜನ ನೀಡುವ ಪರಿಸರದ ಕೊರತೆ ಇರುವುದೂ ಸಹ ಮಕ್ಕಳಲ್ಲಿ ಸಂವಹನದ ಅಸಹಜತೆಯು ವ್ಯಾಪಕವಾಗಿ ಕಾಣಿಸಿಕೊಳ್ಳಲು ಒಂದು ಕಾರಣ. 

ಈಗಿನ ಪರಿಸ್ಥಿತಿಯಲ್ಲಿ, ಮಗುವಿನ ಮಾತು ಕಲಿಕೆ ವಿಳಂಬವಾಗಲು ಇರುವ ಇನ್ನೊಂದು ಕಾರಣ ಅಂದರೆ ಮಗುವಿನ ಹೆತ್ತವರು ತಮ್ಮ ವ್ಯವಹಾರಗಳಲ್ಲಿ ಬಹಳ ಬ್ಯುಸಿಯಾಗಿರುವುದು ಮತ್ತು ಈ ಕಾರಣದಿಂದ ಮಗುವು ಟಿ.ವಿ.ಯತ್ತ ಒಲವನ್ನು ಬೆಳೆಸಿಕೊಳ್ಳುವುದು. ಮಧ್ಯಪ್ರಾಚ್ಯ ದೇಶಗಳಲ್ಲಿ ಹಿಂದೆ ಇಂತಹ ಒಂದು ಸಂಗತಿ ಬಹಳ ಸಾಮಾನ್ಯವಾಗಿತ್ತು, ಯಾಕೆಂದರೆ ಅಲ್ಲಿ ಸ್ವತಂತ್ರ ಫ್ಲ್ಯಾಟ್‌ಗಳಲ್ಲಿನ ಅವರ ಜೀವನ ಕ್ರಮವು ಬಹಳ ನಿರ್ಬಂಧಿತವಾಗಿತ್ತು ಮತ್ತು ಜನರು ಬೇರೆ ಬೇರೆ ಪ್ರದೇಶಗಳಿಂದ ಬಂದವರಾಗಿರುವ ಕಾರಣದಿಂದ ಸಾಮಾಜಿಕ ಸಂವಹನದ ಸಾಧ್ಯತೆ ಬಹಳ ಕಡಿಮೆ ಇತ್ತು. ಇಷ್ಟೇ ಅಲ್ಲದೆ, ಹೆತ್ತವರು ತಮ್ಮ ಮಕ್ಕಳನ್ನು ಬಹಳ ಜನಪ್ರಿಯವಾಗಿದ್ದ ಪೋಗೋದಂತಹ ಕಾಟೂìನ್‌ ನೆಟ್‌ವರ್ಕ್‌ಗಳಲ್ಲಿ ವ್ಯಸ್ತಗೊಳಿಸುತ್ತಿದ್ದರು. ಆದರೆ ನಿಧಾನವಾಗಿ ಬೇರೆ ದೇಶಗಳ ಜೀವನಶೈಲಿಯು ನಮ್ಮ ದೇಶದಲ್ಲಿಯೂ ಕಾಣಿಸಿಕೊಂಡಿದ್ದು, ಇಲ್ಲಿಯೂ ಸಹ ಹೆತ್ತವರು ತಮ್ಮ ಮಕ್ಕಳನ್ನು ಟಿ.ವಿ.ಗೆ ಅಂಟಿಕೊಂಡಿರುವಂತೆ ಮಾಡುತ್ತಿದ್ದಾರೆ.
  
ನಮ್ಮಲ್ಲಿ ಅನೇಕರು ಮಕ್ಕಳ ಜೊತೆಗೆ ಗುಣಾತ್ಮಕವಾಗಿ ಮತ್ತು ಪ್ರಮಾಣಾತ್ಮಕವಾಗಿ ಬೆರೆಯುವ ಪ್ರಯತ್ನವನ್ನೇ ಮಾಡದೆ, ವ್ಯಾಟ್ಸಪ್‌, ಫೇಸ್‌ ಬುಕ್‌ ಅಥವಾ ಕೊನೆಯೇ ಇಲ್ಲದ ಧಾರಾವಾಹಿಗಳಲ್ಲಿ ಮುಳುಗಿರುತ್ತೇವೆ ಎನ್ನುವುದು ದುರದೃಷ್ಟಕರ ವಿಚಾರ. ಮಗುವಿಗೆ ಟಿ.ವಿ.ಯಲ್ಲಿ ಕಾಣಿಸುವ ಕಾಟೂìನುಗಳು ಅಥವಾ ಬೊಂಬೆಗಳಿಗಿಂತ ಜೀವಂತಿಕೆಯ (ನಮ್ಮಂತಹ ಮನುಷ್ಯರ) ಸಾಮಿಪ್ಯ ಬೇಕು ಎನಿಸುತ್ತಿರುತ್ತದೆ. ಆದರೆ ಹೆತ್ತವರಿಗೆ, ತಮ್ಮ ಮಗುವಿಗೆ ಮೊಬೈಲ್‌ ಫೋನ್‌ನ ಎಲ್ಲ ಆ್ಯಪ್‌ಗ್ಳು ಮತ್ತು ಐಪ್ಯಾಡ್‌ ಅನ್ನು ಬಳಸಲು ತಿಳಿದಿದೆ ಎನ್ನುವುದೇ ಹೆಮ್ಮೆಯ ವಿಚಾರ ಆಗಿರುತ್ತದೆ.  ಹೆತ್ತವರು ಮಕ್ಕಳ ಜೊತೆಗೆ ಸಮಯ ಕಳೆಯುವುದನ್ನು ಉಳಿಸಿಕೊಳ್ಳಲು, ಮಕ್ಕಳಿಗೆ ಎಲ್ಲ ರೀತಿಯ ಆಟಿಗೆಗಳನ್ನು (ಗ್ಯಾಜೆಟ್‌ಗಳನ್ನು) ಒದಗಿಸುವ ಮೂಲಕ ಎಲ್ಲ ರೀತಿಯ ತಂತ್ರಜಾnನಗಳನ್ನು ಬಳಸಿಕೊಳ್ಳುತ್ತಿದ್ದಾರೆ. ನಾವು ಯಾರೂ ಮಾತು ಕಲಿಕೆಯ ಬಗ್ಗೆ ಹೆಚ್ಚು ಯೋಚನೆಯನ್ನೇ ಮಾಡಿರುವುದಿಲ್ಲ ಯಾಕೆಂದರೆ ನಾವೆಲ್ಲರೂ ಸಹಜವಾಗಿ ಮತ್ತು ಪರಿಸರದ ಪ್ರಚೋದನೆಯಿಂದ ಮಾತು ಕಲಿತವರು. ಆದರೆ ಕೆಲವು ಮಕ್ಕಳಿಗಾಗಿ ಅವರ ಹೆತ್ತವರು ಈ ನಿಟ್ಟಿನಲ್ಲಿ ಒಂದಷ್ಟು ಹೆಚ್ಚುವರಿ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಇಂತಹ ಮಕ್ಕಳಿಗೆ ಅವರ ಹೆತ್ತವರು ಮಾತು ಮತ್ತು ಭಾಷಾ ಕಲಿಕೆಗೆ ಸಂಬಂಧಿಸಿದಂತೆ ಮನೆಯಲ್ಲಿ  ವಿಶೇಷ ಉತ್ತೇಜನ ಪ್ರೇರಣೆ ನೀಡಬೇಕಾಗುತ್ತದೆ. 
 
ಭಾಷಾ ಕಲಿಕೆ ಅನ್ನುವುದು ಜೀವನಪರ್ಯಂತ ನಡೆಯುವ ಒಂದು ಕಲಿಕಾ ಪ್ರಕ್ರಿಯೆ. ಭಾಷಾ ಕಲಿಕೆಯ ಅವಧಿಯು ಬಹಳ ನಿರ್ಣಾಯಕ ವಾದುದರಿಂದ ಮಗುವು ಎಷ್ಟು ಬೇಗನೆ ಮಾತು-ಭಾಷೆಯನ್ನು ಕಲಿಯುತ್ತದೆಯೋ ಅಷ್ಟು ಉತ್ತಮ. ಪ್ರತಿದಿನ ನಾವು ಒಂದು ಹೊಸ ಶಬ್ದವನ್ನು ಕಲಿಯುತ್ತಾ ಇರುತ್ತೇವೆ. ಆದರೆ ಒಂದು ಮಗುವಿನ ಅನಂತರದ ವಯಸ್ಸಿಗೆ ಹೋಲಿಸಿದರೆ, ಆ ಮಗುವಿನ ಜೀವನದ ಮೊದಲ ಎರಡು ವರ್ಷಗಳಲ್ಲಿ ಭಾಷೆಯನ್ನು ಗ್ರಹಿಸುವ ಅದರ ಸಾಮರ್ಥ್ಯವು ಗರಿಷ್ಠ ಪ್ರಮಾಣದಲ್ಲಿ ಇರುತ್ತದೆ.
  
ಜೀವನದ ಮೊದಲ ಕೆಲವು ವರ್ಷಗಳಲ್ಲಿ ಮಾತು ಮತ್ತು ಭಾಷಾ ಕಲಿಕೆಯ ಪ್ರಗತಿಯು ಬಹಳ ವೇಗವಾಗಿರುತ್ತದೆ ಮತ್ತು ಅನಂತರ ಈ ಕಲಿಕಾ ಪ್ರಕ್ರಿಯೆಯು ಹೆಚ್ಚು ಕಷ್ಟವಾಗಬಹುದು, ನಿಧಾನವಾಗಬಹುದು ಮತ್ತು ಸಹಜವಾಗಿಯೆ ಭಾಷೆ ಕಲಿಯುವಿಕೆಯು ಹೆಚ್ಚು ಯಶಸ್ವಿಯಾಗದೆ ಇರಬಹುದು ಎಂದು ಹೇಳುತ್ತದೆ- ಕ್ರಿಟಿಕಲ್‌ ಪೀರಿಯೆಡ್‌ ಹೈಪಾಥಿಸಿಸ್‌ (ಇಕಏ). ಹಾಗಾಗಿ ಮಗು ಮಾತು ಕಲಿಯಲು ನಿಧಾನ ಮಾಡುತ್ತಿದೆ ಎಂಬ ಅಂಶವನ್ನು ಎಷ್ಟು ಬೇಗನೆ ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆಯೋ ಅಷ್ಟು ಒಳ್ಳೆಯದು.    
ಸ್ಪೀಚ್‌ ಪ್ಯಾಥಾಲಜಿಸ್ಟ್‌  ಅನ್ನು 
ನಾನು ಯಾವಾಗ ಭೇಟಿ ಆಗಬೇಕು? 

ನಿಮ್ಮ ಮಗುವನ್ನು ನಮ್ಮಲ್ಲಿಗೆ ಕರೆತರಲು ನೀವು ಯಾಕಿಷ್ಟು ತಡ ಮಾಡಿದಿರಿ? ಎಂಬ ನಮ್ಮ ಪ್ರಶ್ನೆಗೆ ಹೆಚ್ಚಿನ ಹೆತ್ತವರು ಕೇಳುವ ಮರು-ಪ್ರಶ್ನೆ ಇದು. ನಿಮ್ಮ ಮಗು ಸರಿಯಾಗಿ ಮಾತನಾಡುತ್ತಿಲ್ಲ ಅಥವಾ ಮಾತಿನ ಕಲಿಕೆ ನಿಧಾನವಾಗುತ್ತಿದೆ ಎನ್ನುವ ಸಂದೇಹ ನಿಮಗೆ ಯಾವಾಗ ಬರುತ್ತದೋ ಆಗಲೇ ವೈದ್ಯರನ್ನು ಭೇಟಿ ಆಗಬೇಕು ಎನ್ನುವುದೇ ನಮ್ಮ ಸರಳ ಉತ್ತರ. ಈ ವಿಷಯದಲ್ಲಿ ನಿಮ್ಮ ಕಲ್ಪನೆಗಿಂತಲೂ ನಿಖರತೆ ಮುಖ್ಯ, ಯಾಕೆಂದರೆ ಅದು ನಿಮ್ಮ ಮಗು. ಇಂತಹ ಸಂದರ್ಭಗಳಲ್ಲಿ ಮಗು ಮಾತನಾಡುವಂತಾಗಲು, ಮನೆಮದ್ದುಗಳಿಗೆ ಅಥವಾ ಸಾಂಸ್ಕೃತಿಕ ನಂಬಿಕೆಗಳ ಮೊರೆ ಹೋಗುವುದು ಒಂದು ಸಾಮಾನ್ಯ ರಿವಾಜು. ಉದಾಹರಣೆಗೆ ಮಗುವಿನ ನಾಲಗೆಗೆ ಬಜೆ ತಿಕ್ಕುವುದು (ಸಾಂಸ್ಕೃತಿಕ ನಂಬಿಕೆಗಳಿಗೆ ವಿರೋಧ ಇಲ್ಲ). ಒಂದು ವೇಳೆ ಇಂತಹ ಒಂದು ನಂಬಿಕೆ ಅಥವಾ ವಿಧಾನವು ಅಷ್ಟೊಂದು ಮ್ಯಾಜಿಕ್‌ ಮಾಡುವುದಾದರೆ, ನಮ್ಮಲ್ಲಿ ಮಾತನಾಡಲು ಬರದಿರುವ ಒಂದು ಮಗುವೂ ಇರುತ್ತಿರಲಿಲ್ಲ ಅಲ್ಲವೇ? ಮಾತು ಮತ್ತು ಭಾಷಾ ಕಲಿಕೆಯ ಪ್ರಗತಿಯು ಯಾವುದೋ ಔಷಧದಿಂದ ಸಾಧ್ಯವಾಗದು. ಇದಕ್ಕೆ ಹೆತ್ತವರ ಉತ್ತೇಜನ ಅವಶ್ಯಕ. ಇದರಿಂದ ಮಕ್ಕಳ ಮಾತು ಮತ್ತು ಭಾಷಾ ಬೆಳವಣಿಗೆಯ ಮೇಲೆ ಮಹತ್ವದ ಪರಿಣಾಮ ಉಂಟಾಗುವುದು. 

ಆದುದರಿಂದ ನಮ್ಮ ಸಲಹೆ ಏನೆಂದರೆ, ನಿಮ್ಮ ಮಗುವಿನ ಮಾತು ಮತ್ತು ಭಾಷಾ ಕಲಿಕೆಯ ಬಗ್ಗೆ ನಿಮಗೆ ಯಾವಾಗ, ಏನೇ ಸಂದೇಹ ಬಂದರೂ ಆದಷ್ಟು ಬೇಗನೆ ಲ್ಯಾಂಗ್ವೇಜ್‌ ಪ್ಯಾಥಾಲಜಿಸ್ಟ್‌ (ಮಾತು ಮತ್ತು ಭಾಷಾ ಕಲಿಕೆಗೆ ಸಂಬಂಧಿಸಿದ ತಜ್ಞ ವೈದ್ಯರು) ಅವರನ್ನು ಭೇಟಿಯಾಗಬೇಕು. ಈ ತಜ್ಞ ವೈದ್ಯರು ಮಗುವಿಗೆ ನಿಜವಾಗಿಯೂ ಮಾತು ಕಲಿಕೆಯ ಸಮಸ್ಯೆ ಇದೆಯೇ, ಇದ್ದರೆ ಸಮಸ್ಯೆಗೆ ಕಾರಣವಾಗಿರುವ ಅಂಶ ಏನು ಎಂಬುದನ್ನು ಗುರುತಿಸುತ್ತಾರೆ. 

ಮಕ್ಕಳ ಮಾತು ಕಲಿಕೆಯಲ್ಲಿ ವಿಳಂಬವಾಗುವ ಬಗ್ಗೆ ಸ್ವಲ್ಪವೇ ಸಂದೇಹ ಬಂದರೂ ಆದಷ್ಟು ಬೇಗ ತಜ್ಞರಲ್ಲಿ ಕರೆದುಕೊಂಡು ಹೋಗಬೇಕು. ಈ ಸಮಸ್ಯೆಯು ಬಹಳ ಸಣ್ಣ ವಯಸ್ಸಿನಲ್ಲಿಯೇ ಪತ್ತೆಯಾಗಿ ಸೂಕ್ತ ಕ್ರಮ ಕೈಗೊಳ್ಳುವುದರಿಂದ ಮಗುವಿಗೆ ಬಹಳ ಪ್ರಯೋಜನವಾಗುತ್ತದೆ. ನೀವು ವಿಳಂಬ ಮಾಡಿದಷ್ಟೂ ಫ‌ಲಿತಾಂಶ ಕಳಪೆಯಾಗಿರಬಹುದು. ಹಾಗಾಗಿ ಮಗುವಿನ ಮಾತು ಕಲಿಕೆಯ ವಿಷಯದಲ್ಲಿ ಕಾದು ನೋಡುವ ನಡವಳಿಕೆ ಬೇಡ, ಯಾಕೆಂದರೆ ಮಾತು ಅನ್ನುವುದು ನಮ್ಮೆಲ್ಲರ ಜೀವನದ ಬಹುಮುಖ್ಯ ಸಂವಹನ ಮಾಧ್ಯಮ.  

ಒಂದು ದಿನ ಒಬ್ಬ ತಾಯಿ (ಒಬ್ಬ ಬ್ಯುಸಿ ಆಗಿರುವ ತಾಯಿ ಎಂದು ನಾನಿಲ್ಲಿ ಹೇಳಬೇಕು.........) ತಮ್ಮ 5 ವರ್ಷದ ಮಗುವಿನ ಜೊತೆಗೆ ನಮ್ಮ ಕ್ಲಿನಿಕ್‌ಗೆ ಬಂದರು, ತಮ್ಮ ಮಗ ವಯಸ್ಸಿಗೆ ಸಹಜವಾಗಿ ಮಾತನಾಡುತ್ತಿಲ್ಲ ಎಂಬುದು ಅವರ ಅಳಲು. 

ಮೇಡಂ ದಯವಿಟ್ಟು ನನ್ನ ಮಗ ಮಾತನಾಡುವಂತೆ ಮಾಡಿ, ಇದಕ್ಕೆ ನಾನು ಎಷ್ಟು ಬೇಕಾದರೂ ಹಣ ಖರ್ಚು ಮಾಡಲು ತಯಾರಿದ್ದೇನೆ, ಏನೇ ಆದರೂ ನನ್ನ ಮಗ ಮಾತನಾಡಬೇಕು ಎಂದು ನನ್ನಲ್ಲಿ ಹೇಳಿಕೊಂಡರು. ಅವರ ಜೊತೆ ಮಾತನಾಡುತ್ತಾ, ನೀವು ಯಾಕೆ ಇಷ್ಟು ತಡ ಮಾಡಿದ್ರಿ? 5 ವರ್ಷದ ವರೆಗೂ ನಿಮ್ಗೆ ನಿಮ್ಮ ಮಗ ಮಾತ್ನಾಡ್ತಾ ಇಲ್ಲ ಅಂತ ಗೊತ್ತಾಗ್ಲಿಲ್ವೇ? ಇದು ನಿಮಗೆ ಈಗ ಹೇಗೆ ಗೊತ್ತಾಯಿತು? ನಾನು ಅವರಲ್ಲಿ ಕೇಳಿದೆ. ಅವರು ಉತ್ತರಿಸಲು ಆರಂಭಿಸಿದರು, ಕೆಲವು ಮಕ್ಕಳು ತಡವಾಗಿ ಮಾತು ಕಲಿಯುತ್ತಾರೆ ಅಲ್ಲವೇ.........ನನ್ನ ಮಗನೂ ಅದೆ ಗುಂಪಿಗೆ ಸೇರಿದವನು ಅಂತ ನಾನು ಅಂದೊRಂಡೆ. ನಾನು  ಮನೆಯಲ್ಲಿರುವುದು ಕಡಿಮೆ. ನನ್ನ ಮಗ ಕೆಲಸದವರ ಜೊತೆಗೆ ಇರ್ತಾನೆ. 

ಅವನು ನಮ್ಮೆಲ್ಲರಿಗಿಂತಲೂ ಟಿ.ವಿ.ಯನ್ನು ಹೆಚ್ಚು ಆನಂದಿಸ್ತಾನೆ..... ಹಾಗಾಗಿ ಅವನಿಗೆ ಯಾವುದು ಇಷ್ಟವೊ ಅದರಲ್ಲೇ ಖುಷಿ ಪಡ್ತಾ ಇದ್ದಾನೆ ಅಂತ ನಾನು ಅಂದೊRಂಡು ಬಿಟ್ಟೆ!!!!!!!!!!!!!!!! ಎಂದು ಹೇಳಿದರು ಆ ತಾಯಿ. ನಾನು ಆ ಹುಡುಗನಲ್ಲಿ ಮಾತು ಆರಂಭಿಸಿದಾಗ ಮತ್ತೂಂದು ಆಶ್ಚರ್ಯಕರ ಸಂಗತಿ ನನಗೆ ತಿಳಿದು ಬಂತು, ಪ್ರಾಣಿಗಳ ಬಗ್ಗೆ ಬಿಟ್ಟರೆ ಆ ಹುಡುಗನಿಗೆ ಬೇರೇನೂ ಮಾತು ಬರುತ್ತಿರಲಿಲ್ಲ. ಮನೆಯಲ್ಲಿ ಯಾರಿದ್ದಾರೆ ನಾನು ಅವನಲ್ಲಿ ಕೇಳಿದೆ, ಆನೆ, ಹುಲಿಗಳು .......  ಹೀಗೆ 5 ವರ್ಷದ ಆ ಹುಡುಗ ಪ್ರಾಣಿಗಳ ಹೆಸರು ಹೇಳುತ್ತಾ ಹೋದ. ಇದು ಡಿಸ್ಕವರಿ ಚಾನೆಲ್‌ ಸೃಷ್ಟಿಸಿದ  ಅದ್ಭುತ. ಹೌದು, 5 ವರ್ಷದ ಆ ಹುಡುಗ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಆ ಚಾನೆಲ್‌ನಲ್ಲಿ ಎಷ್ಟು ವ್ಯಸ್ತನಾಗಿರುತ್ತಿದ್ದ ಅಂದರೆ, ಅವನಿಗೆ ಪ್ರಾಣಿಗಳ ಹೆಸರುಗಳನ್ನು ಬಿಟ್ಟರೆ ಬೇರೇನೂ ಮಾತು ಬರುತ್ತಿರಲಿಲ್ಲ.  ಕೆಲಸದಾಕೆ ಆತನಿಗೆ ಸಮಯಕ್ಕೆ ಸರಿಯಾಗಿ ಊಟ ತಿಂಡಿಗಳನ್ನು ಕೊಡುತ್ತಿದ್ದಳು. 

ಪ್ರಾಣಿಗಳ ಆವಶ್ಯಕತೆಗಳನ್ನು ನಾವು ಯಾವ ರೀತಿ ಪೂರೈಸುತ್ತೇವೆಯೋ ಅದೇ ರೀತಿಯಲ್ಲಿ ಆ ಮಗುವಿನ ಆವಶ್ಯಕತೆಗಳು ಸಹ ಪೂರೈಕೆ ಆಗುತ್ತಿದ್ದವು. ಅಂದರೆ ಆ ಮಗುವಿಗೆ ಸಮಯಾನುಸಾರ ಪೂರೈಕೆ ಆಗುತ್ತಿದ್ದುದು ಆಹಾರ ಪಾನೀಯ ಮಾತ್ರ. ತಮ್ಮ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಆಹಾರವನ್ನು ಒದಗಿಸಿ, ಅವರ ಶರೀರದ ಬೆಳವಣಿಗೆಯನ್ನು ಸಮಸ್ಥಿತಿಯಲ್ಲಿ ಇರಿಸುವುದೇ ಮಕ್ಕಳ ಪಾಲನೆಯ ಪ್ರಾಥಮಿಕ ಉದ್ದೇಶ ಎಂಬುದು ನಮ್ಮಲ್ಲಿ ಬಹುತೇಕ ಹೆತ್ತವರ ಭಾವನೆಯಾಗಿದೆ. 

ನಿಮ್ಮ ಮಗುವಿನ ಮಾತು,  ಭಾಷಾ ಕಲಿಕೆಯ ಪ್ರಗತಿಯ ಬಗ್ಗೆ ತಿಳಿದುಕೊಳ್ಳಿ

ನಿಮ್ಮ ಮಗುವಿನ ಚಲನವಲನ ಬೆಳವಣಿಗೆ ( ಸಹಜವಾಗಿದೆಯೇ? (ತಲೆಯ ನಿಯಂತ್ರಣ, ಅತ್ತಿತ್ತ ತಿರುಗಿಸುವುದು, ತೆವಳುವುದು, ಅಂಬೆಗಾಲಿಡುವಿಕೆ, ಕುಳಿತುಕೊಳ್ಳುವುದು, ನಿಂತುಕೊಳ್ಳುವುದು ಮತ್ತು ನಡಿಗೆ)

ನಿಮ್ಮ ಮಗು 6 ತಿಂಗಳ ವಯಸ್ಸಿನಲ್ಲಿ ತೊದಲು ನುಡಿಯುತ್ತಿತ್ತೇ?

ಪ್ರತೀ ಬಾರಿ ಹೆಸರು ಹಿಡಿದು ಕೂಗಿದಾಗಲೂ ನಿಮ್ಮ ಮಗು ಅದಕ್ಕೆ ಸ್ಪಂದಿಸುತ್ತದೆಯೇ?

ಇಲ್ಲಿ ಬಾ ಅಪ್ಪನ ಕಡೆ ನೋಡು ಎಂಬ ಸರಳ ಸೂಚನೆಗಳಿಗೆ ನಿಮ್ಮ ಮಗು ಸ್ಪಂದಿಸುತ್ತಾನೆಯೇ

ಹಿರಿಯರ ಮಾತುಕತೆಗೆ ನಿಮ್ಮ ಮಗು ಗಮನ ಕೊಡುತ್ತದೆಯೇ, ಮಾತನಾಡುವಾಗ ಕಣ್ಣಿಗೆ ಕಣ್ಣು ಕೂಡಿಸುತ್ತದೆಯೇ?

ನಿಮ್ಮ ಮಗು ಜನರತ್ತ, ವಸ್ತುಗಳತ್ತ ನೋಡುತ್ತದೆಯೇ ಮತ್ತು ಹಿರಿಯರ ಗಮನವನ್ನು ಸೆಳೆಯುತ್ತದೆಯೇ?

ತನ್ನ ಇಷ್ಟದ ವಸ್ತುವಿನತ್ತ ಬೊಟ್ಟು ಮಾಡಿ ತೋರಿಸಲು ನಿಮ್ಮ ಮಗು ಪ್ರಯತ್ನಿಸುತ್ತದೆಯೇ?

ನಿಮ್ಮ ಮಗು ಇತರ ಮಕ್ಕಳ ಜತೆಗೆ ಆಟ-ಆಡುತ್ತದೆಯೇ?

ನಿಮ್ಮ ಮಗು ತನ್ನ ಮೊದಲ ಜನ್ಮ ದಿನದ ಸಂದರ್ಭದಲ್ಲಿ ಕನಿಷ್ಠ ಒಂದಾದರೂ ಅರ್ಥಪೂರ್ಣ ಶಬ್ದವನ್ನು ನುಡಿದಿದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಮೇಲೆ ಹೇಳಿದ ಒಂದು ಅಂಶದಲ್ಲಿ ನಿಮ್ಮ ಮಗು ವಿಫ‌ಲವಾದರೆ, ಇಂದೇ ನಿಮ್ಮ ಮಗುವನ್ನು ಸ್ಪೀಚ್‌ ಲಾಂಗ್ವೇಜ್‌ ಪ್ಯಾಥಾಲಜಿಸ್ಟ್‌  ಬಳಿಗೆ ವಿಶ್ಲೇಷಣೆಗಾಗಿ ಕರೆದೊಯ್ಯಿರಿ! 

ಉಡುಪಿಯ ಟಿಎಂಎ ಪೈ ಆಸ್ಪತ್ರೆಯಲ್ಲಿಯೂ ಈ ಸೇವೆ ಲಭ್ಯವಿದೆ.

ಡಾ| ದೀಪಾ ಎನ್‌. ದೇವಾಡಿಗ
ಅಸೋಸಿಯೆಟ್‌  ಪ್ರೊಫೆಸರ್‌ 
ಡಾ| ವೀಣಾ ಕೆ.ಡಿ.  
ಅಸೋಸಿಯೆಟ್‌  ಪ್ರೊಫೆಸರ್‌  
ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗ, 
ಎಸ್‌ಒಎಎಚ್‌ಎಸ್‌, ಮಣಿಪಾಲ

Back to Top