CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ತುಳು ಕಲಿಕೆ: ವಿದ್ಯಾರ್ಥಿಗಳ ಸಂಖ್ಯೆ ವೃದ್ಧಿ

ಮಂಗಳೂರು: ತೃತೀಯ ಭಾಷೆಯಾಗಿ ತುಳುವನ್ನು ಆಯ್ಕೆ ಮಾಡಿರುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ 956 ಮಂದಿ ತುಳು ಭಾಷೆಯನ್ನು ಆಯ್ಕೆ ಮಾಡಿದ್ದರೆ, ಈ ಬಾರಿ ಸಂಖ್ಯೆ 1,584ಕ್ಕೇರಿದೆ.

ದ.ಕ. ಜಿಲ್ಲೆಯಲ್ಲಿ 1,513 ಮತ್ತು ಉಡುಪಿಯಲ್ಲಿ 71 ಮಂದಿ ಈ ಬಾರಿ ತೃತೀಯ ಭಾಷೆಯಾಗಿ ತುಳುವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಪೈಕಿ ಪುತ್ತೂರು-876, ಬೆಳ್ತಂಗಡಿಯ 218, ಸುಳ್ಯದ 138, ಬಂಟ್ವಾಳದ 158 ಮತ್ತು ಮಂಗಳೂರಿನ 123 ವಿದ್ಯಾರ್ಥಿಗಳು ಸೇರಿದ್ದಾರೆ.

ಉಭಯ ಜಿಲ್ಲೆಗಳಲ್ಲಿ 426 ವಿದ್ಯಾರ್ಥಿಗಳು ಈ ಬಾರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಯಾಗಿ ತುಳುವನ್ನು ಬರೆಯಲಿದ್ದಾರೆ. ಕಳೆದ ವರ್ಷ ಒಟ್ಟು 283 ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಯಲ್ಲಿ ತುಳು ವಿಷಯವನ್ನೂ ಬರೆದಿದ್ದರು. ಅಲ್ಲದೇ 2017-18ನೇ ಸಾಲಿನಲ್ಲಿ 6ನೇ ತರಗತಿಯಲ್ಲಿ 97, 7ನೇ ತರಗತಿಯಲ್ಲಿ 126, 8ನೇ ತರಗತಿಯಲ್ಲಿ 418, 9ನೇ ತರಗತಿಯಲ್ಲಿ 517 ವಿದ್ಯಾರ್ಥಿಗಳು ತುಳು ಅಧ್ಯಯನ ಮಾಡುತ್ತಿದ್ದಾರೆ.

33 ಶಾಲೆಗಳಲ್ಲಿ ತುಳು ಪಠ್ಯ: 
ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಒಟ್ಟು 33 ಶಾಲೆಗಳಲ್ಲಿ ತೃತೀಯ ಭಾಷೆಯಾಗಿ ತುಳು ಪಠ್ಯವನ್ನು ಬೋಧಿಸಲಾಗುತ್ತಿದೆ. ಕಳೆದ ವರ್ಷ 20 ಶಾಲೆಗಳಲ್ಲಿ ಬೋಧಿಸಲಾಗುತ್ತಿದ್ದರೆ, ಈ ವರ್ಷ ಅದಕ್ಕೆ 13 ಶಾಲೆಗಳು ಹೊಸ ಸೇರ್ಪಡೆಯಾಗಿವೆ. ಈ ಪೈಕಿ ದ.ಕ. ಜಿಲ್ಲೆಯಲ್ಲಿ 30 ಹಾಗೂ ಉಡುಪಿ ಜಿಲ್ಲೆಯಲ್ಲಿ 3 ಶಾಲೆಗಳಿವೆ. ದ.ಕ.ದ ಪುತ್ತೂರಿನ 15, ಬೆಳ್ತಂಗಡಿಯ 5, ಸುಳ್ಯದ 4, ಬಂಟ್ವಾಳದ 3, ಮಂಗಳೂರಿನ 3 ಶಾಲೆಗಳಲ್ಲಿ ಪ್ರಸಕ್ತ ವರ್ಷ ತುಳು ಬೋಧಿಸಲಾಗುತ್ತಿದೆ.

ತುಳು ಬೋಧಿಸುತ್ತಿರುವ ಶಾಲೆಗಳು: ಸರಕಾರಿ ಪ್ರೌಢ ಶಾಲೆ ಕಬಕ, ಸ.ಪ.ಪೂ. ಕಾಲೇಜು ಕೊಂಬೆಟ್ಟು, ಸರಕಾರಿ ಪ್ರೌಢಶಾಲೆ ಪಾಪೆಮಜಲು, ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಕಾಣಿಯೂರು, ಪ್ರಗತಿ ಕನ್ನಡ ಮಾಧ್ಯಮ ಶಾಲೆ ಕಾಣಿಯೂರು, ಹಿ.ಪ್ರಾ. ಶಾಲೆ ಕೆಮ್ಮಾಯಿ, ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆ ರಾಮಕುಂಜ, 
ಸ.ಪ.ಪೂ. ಕಾಲೇಜು ಉಪ್ಪಿನಂಗಡಿ, ಸಹಿಪ್ರಾ ಶಾಲೆ ಉಪ್ಪಿನಂಗಡಿ, ಸ.ಪ.ಪೂ. ಕಾಲೇಜು ಸವಣೂರು, ಸರ್ವೋದಯ ಪ್ರೌಢಶಾಲೆ ಸುಳ್ಯಪದವು, ವಿದ್ಯಾರಶ್ಮಿ ವಿದ್ಯಾಲಯ ಸವಣೂರು, ಸ.ಪ.ಪೂ.ಕಾಲೇಜು ಬೆಳ್ಳಾರೆ, ಸಹಿಪ್ರಾ ಶಾಲೆ ಬೆಳ್ಳಾರೆ, ವಿಟ್ಲ ಪ.ಪೂ. ಕಾಲೇಜು, ಸರಕಾರಿ ಪ್ರೌಢಶಾಲೆ ಸರಪಾಡಿ, ಸರಕಾರಿ ಪ್ರೌಢಶಾಲೆ ಕೊಯ್ಯೂರು, ವಾಣಿ ಪಪೂ ಕಾಲೇಜು ಬೆಳ್ತಂಗಡಿ, ಪೊಂಪೈ ಪ್ರೌಢಶಾಲೆ ಲೇಡಿಹಿಲ್‌, ಉಡುಪಿ ಸರಕಾರಿ ಮಹಿಳಾ ಪಪೂ ಕಾಲೇಜುಗಳಲ್ಲಿ ಕಳೆದ ವರ್ಷದಿಂದಲೇ ತುಳುವನ್ನು ತೃತೀಯ ಭಾಷೆ ಯಾಗಿ ಬೋಧಿಸಲಾಗುತ್ತಿದೆ.

ಹೊಸದಾಗಿ ಸೇರ್ಪಡೆಗೊಂಡ 13 ಶಾಲೆಗಳು
ಇನ್ನು 13 ಶಾಲೆಗಳು ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿವೆ. ಬೆಸೆಂಟ್‌ ಪ್ರೌಢಶಾಲೆ ಕೊಡಿಯಾಲ್‌ಬೈಲ್‌, ರಾಮಕೃಷ್ಣ ಪ್ರೌಢಶಾಲೆ ಹರೇಕಳ, ಎಸ್‌ಡಿಎಂ ಕನ್ನಡ ಮಾಧ್ಯಮ ಶಾಲೆ ಧರ್ಮಸ್ಥಳ, ಸರಕಾರಿ ಪ್ರೌಢಶಾಲೆ ಬದನಾಜೆ, ಎಸ್‌ಡಿಎಂ ಕನ್ನಡ ಮಾಧ್ಯಮ ಶಾಲೆ ಉಜಿರೆ, ಬೆಥನಿ ಪಪೂ ಕಾಲೇಜು ನೂಜಿಬಾಳ್ತಿಲ, ರಾಮಕೃಷ್ಣ ಪ್ರೌಢಶಾಲೆ ಪುತ್ತೂರು, ಸರಕಾರಿ ಪ್ರೌಢಶಾಲೆ ದೋಳ್ಪಾಡಿ, ಕರ್ನಾಟಕ ಪ್ರೌಢಶಾಲೆ ಮಾಣಿ, ಕೆ.ಎಸ್‌. ಗೌಡ ಸ್ಮಾರಕ ಶಾಲೆ ನಿಂತಿಕಲ್ಲು, ಸ.ಪ.ಪೂ. ಕಾಲೇಜು ಪಂಜ, ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆ ಉಚ್ಚಿಲ ಹಾಗೂ ಪಡುಬೆಳ್ಳೆ ನಾರಾಯಣ ಗುರು ಆಂಗ್ಲ ಮಾಧ್ಯಮ ಪ್ರೌಢಶಾಲೆಗಳು ಹೊಸದಾಗಿ ಸೇರ್ಪಡೆಗೊಂಡ ಶಾಲೆಗಳಾಗಿವೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್‌ ಚಂದ್ರಹಾಸ್‌ ರೈ ಬಿ. ತಿಳಿಸಿದ್ದಾರೆ.

Back to Top