Thursday, May 17, 2012
Last Updated: 12:24:52 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಮಹಿಳಾ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಭಾವನೆಗಳ ಪ್ರಸವ ವೇದನೆ
  • ಹೆರುವುದೊಂದು ಯಾಂತ್ರಿಕ ಕೆಲಸವಲ್ಲ...
  • ಒಂದು ಬಲಿಷ್ಠ ವರ್ಗಕ್ಕೆ ಹೆಣ್ಣೂ ಒಂದು ವಸ್ತು ಮತ್ತು ಉಳಿದವೆಲ್ಲ ಚಿಲ್ಲರೆ ವಿಷಯಗಳು.

    • ನಾರಾಯಣೀ ದಾಮೋದರ್‌ | Feb 03, 2012

      ಧೌಮ್ಯ ಮಹರ್ಷಿಯ ಶಿಷ್ಯನಾಗಿದ್ದ ಅರುಣಿ ಎಂಬಾತನು ಗುರುವಿನ ಅಪ್ಪಣೆಯಂತೆ, ಗದ್ದೆಯಲ್ಲಿ ಬೆಳೆದ ಪೈರನ್ನು ಧಾರಾಕಾರ ಮಳೆಯ ನೀರಿನಿಂದ ರಕ್ಷಿಸಲೋಸುಗ, ತನ್ನ ದೇಹವನ್ನೇ ಗದ್ದೆಯ ಬದುವಿಗೆ ಅಡ್ಡವಾಗಿಟ್ಟು ಮಲಗಿದ. ಎಷ್ಟು ಹೊತ್ತಾದರೂ ಹಿಂದಿರುಗದ ಶಿಷ್ಯನನ್ನು ಹುಡುಕುತ್ತಾ ಬಂದ ಗುರುಗಳು, ಬದುವಿಗೆ ಒತ್ತಿಕೊಂಡು ನೀರಿನಲ್ಲಿ ಮಲಗಿದ್ದ ಅರುಣಿಯನ್ನು ಕಂಡು, "ಓ ಅರುಣಿ, ಅಲ್ಲಿಂದ ಎದ್ದು ಬಾ' ಎಂದರು. ಆಗ ಆ ಉದಕದಿಂದ ಎದ್ದು ಬಂದ ಅರುಣಿಯನ್ನು ಅಂದಿನಿಂದ ಎಲ್ಲರೂ "ಉದ್ದಾಲಕ' ಎಂದೇ ಕರೆಯತೊಡಗಿದರು. ಇಂತಹ ವಿಧೇಯ, ಕರ್ತವ್ಯನಿಷ್ಠ, ಮುಂದೆ ವಿದ್ವಾಂಸನೂ ಆದ ಉದ್ದಾಲಕನಿಗೆ ಶ್ವೇತಕೇತು ಮತ್ತು ನಚಿಕೇತ ಎಂಬ ಧೀಮಂತ ಮಕ್ಕಳಿದ್ದರು.

      ಉದ್ದಾಲಕನಿದ್ದ ಆ ಕಾಲದಲ್ಲಿ, ವಿಶೇಷವಾದ ಸಾಮಾಜಿಕ ಪದ್ಧತಿಯೊಂದು ರೂಢಿಯಲ್ಲಿತ್ತು. ಜನಸಂಖ್ಯೆಯು ತೀರ ವಿರಳವಾಗಿದ್ದ ಆ ಕಾಲದಲ್ಲಿ, ಹುಟ್ಟಿದ ಮಕ್ಕಳಲ್ಲಿ ಬದುಕಿ ಉಳಿಯುವವರ ಸಂಖ್ಯೆಯೂ ಕಡಿಮೆಯಿತ್ತು. ದೊಡ್ಡ ಕುಟುಂಬವನ್ನೇ ಆಸ್ತಿ ಎಂದುಕೊಳ್ಳುತ್ತಿದ್ದ ಆ ಕಾಲದಲ್ಲಿ, "ಶತಾಯುಷಿಯಾಗು', "ಅಷ್ಟಪುತ್ರ ಸೌಭಾಗ್ಯವತಿಯಾಗು'  ಎಂದು ಹಾರೈಸುವುದೇ ದೊಡ್ಡ ಆಶೀರ್ವಾದವೆನ್ನಿಸಿತ್ತು.

      ಅಂತಹ ಕಾಲದಲ್ಲಿ, ವಿವಾಹಿತ ಪತ್ನಿಗೆ ಸಂತಾನವಾಗದಿದ್ದರೆ ಇನ್ನೊಬ್ಬ ಸ್ತ್ರೀಯೊಂದಿಗೆ, ಆಕೆಗೆ ವಿವಾಹವಾಗಿದ್ದರೂ ಆಕೆಯ ಪತಿಯ ಅನುಮತಿ ಪಡೆದು, ಸುಸಂಸ್ಕೃತ ಸ್ತ್ರೀಯ ಗರ್ಭದಿಂದಲೇ ಸಂತಾನ ಪಡೆಯುವ ಪದ್ಧತಿಯು ತೀರ ಸಾಮಾನ್ಯವಾಗಿತ್ತು.

      ಇಂತಹ ಕಾಲಘಟ್ಟದಲ್ಲಿದ್ದ ಉದ್ದಾಲಕನ ಪತ್ನಿಯನ್ನು ಪರಪುರುಷ ನೊಬ್ಬ ಸಂತಾನಕ್ಕಾಗಿ ಯಾಚಿಸಿದನಂತೆ. ಈ ವಿಚಾರವು ಉದ್ದಾಲಕನ ಪುತ್ರನಾದ ಶ್ವೇತಕೇತುವಿಗೆ ತಿಳಿಯಿತು. ಅವನು ಸಿಡಿಮಿಡಿಕೊಂಡ; "ಅನಾಗರಿಕ ಪದ್ಧತಿ' ಎಂದು ತೀವ್ರವಾಗಿ ಪ್ರತಿಭಟಿಸಿದ. ಒಂದು ಹೆಣ್ಣನ್ನು ಹತ್ತಾರು ಜನರು ಸಾರ್ವಜನಿಕ ವಸ್ತುವಿನಂತೆ ಉಪಯೋಗಿಸುವ ಕ್ರಮವನ್ನು ಬಲವಾಗಿ ಖಂಡಿಸಿ, ಸಮಾಜದಲ್ಲೆಲ್ಲ ವಿವಾದದ ಅಲೆಯನ್ನೇ ಎಬ್ಬಿಸಿದನಂತೆ. ಕೊನೆಗೂ ತನ್ನ ತಾಯಿಧಿಧಿಯು ಅಂತಹ ಕೃತ್ಯಕ್ಕೆ ಒಳಗಾಗದಂತೆ ತಡೆದು, ತರ್ಕದಲ್ಲಿ ಗೆದ್ದು ಸಮಾಜವನ್ನು ಒಪ್ಪಿಸಿ, ಒಂದು ಹೀನ ಸಂಪ್ರದಾಯವನ್ನು ನಿಲ್ಲಿಸಿಯೇ ಬಿಟ್ಟನಂತೆ. ಮರ್ಯಾದೆ ಎಂಬ ಪದಕ್ಕೆ ಮಾನವಂತ ವ್ಯಾಖ್ಯೆಯನ್ನೇ ಬರೆದು, ಸ್ತ್ರೀ ಪುರುಷರಿಬ್ಬರ ಬದುಕಿಗೂ ಒಂದು ಘನತೆಯನ್ನು ತಂದುಕೊಟ್ಟನಂತೆ.

      ಇದು ಪುರಾಣದ ಅಂತೆ - ಕಂತೆ. ಪುರಾಣವೆಂದರೆ ಮೂಗು ಮುರಿಯುವ ನಾವೀಗ ಬಹಳ ಮುಂದುವರಿದಿದ್ದೇವೆ. ನಾಗರಿಕತೆಯ ಉತ್ತುಂಗದಲ್ಲಿದ್ದೇವೆ ಅಂದುಕೊಂಡಿದ್ದೇವೆ. ಆದರೆ, ಇಂದಿನ ಸಾಮಾಜಿಕ ಅಭಿರುಚಿಗಳನ್ನು ನೋಡಿದರೆ ನಾವು ಮೌಡ್ಯದಲ್ಲಿದ್ದೇವೆಯೆ? ಎಂದೂ ಅನಿಸದಿರದು.
      ದುಡ್ಡಿಗೆ ಅಕ್ಷರಗಳನ್ನು ಮಾರುವ ಈ ಕಾಲದಲ್ಲಿ ತಾಯಿಯ ಹಾಲು ಕ್ರಯಕ್ಕೆ ಸಿಗುತ್ತದೆ! ಹೆಣ್ಣಿನ ಗರ್ಭಕೋಶವು ಬಾಡಿಗೆಗೆ ಸಿಗುತ್ತದೆ! ಇವತ್ತು ಹೆಣ್ತನ ಎಂಬುದು ಅಂಗಡಿಯಲ್ಲಿ ಸಿಗುವ ವಸ್ತುವಾಗಿ ಬಿಟ್ಟಿದೆ. ಈಗ ಹೆಣ್ಣಿನ ಉಪಯೋಗ ನಡೆಯುತ್ತಿರುವ ರೀತಿ ನೋಡಿದರೆ ಕ್ರೂರ ಭವಿಷ್ಯಕ್ಕೆ ಒಂದು ಸುಂದರ ಮುನ್ನುಡಿ ಬರೆಯುವಂತೆ ಕಾಣುತ್ತದೆ.

      ಹಿಂದೆ ಎದೆಹಾಲಿಲ್ಲದ ತಾಯಿಯ ಮಗುವಿಗೆ ಬೇರೆ ತಾಯಂದಿರು ಹಾಲು ಕುಡಿಸಿದ ಎಷ್ಟೋ ಉದಾಹರಣೆಗಳಿವೆ. ಮಕ್ಕಳಾಗದಾಗ ಇನ್ನೊಂದು ಮದುವೆಯಾಗಿ ಮಕ್ಕಳನ್ನು ಪಡೆದ/ಆಗಲೂ ಪಡೆಯದ ಉದಾಹರಣೆಗಳೂ ಇವೆ. ಈ ಸಂದರ್ಭಗಳಲ್ಲಿ ನಂಬಿಕೆಯ ಜೊತೆಗೆ ಮಾನವೀಯತೆ ಎಂಬುದು ಎದ್ದುಕಾಣುವ ಅಂಶವಾಗಿತ್ತು. ಇನ್ನೊಂದು ಮದುವೆಯಾದಾಗ, ಆ ಇನ್ನೊಂದು ಹೆಣ್ಣಿನ ಸುಖದುಃಖಗಳನ್ನು ಹಂಚಿಕೊಳ್ಳುವ ಜವಾಬ್ದಾರಿಯನ್ನೂ ಹೊರಬೇಕಾಗಿತ್ತು.

      ಆದರೆ, ಇವತ್ತಿನ ಘಟನೆಗಳ ಹಿಂದೆ ಕೇವಲ ದುಡ್ಡಿನ ಝಣಝಣ ಮಾತ್ರ ಕೇಳಿಸುತ್ತಿದೆ. ಅದೇ ಅಪಾಯಕಾರಿ ಅಂಶ. ಇದೇ ಚಾಳಿ ಮುಂದುವರಿದರೆ, ನಮ್ಮ ಸಮಾಜವು ನಿಧಾನವಾಗಿ ಹೆಣ್ಣುಗಳನ್ನೆಲ್ಲ ಘನತೆವೆತ್ತ ವೇಶ್ಯೆಯರನ್ನಾಗಿಸಬಹುದೆ? "ಮೈ - ಅಂಗ ಮಾರಾಟಕ್ಕಿದೆ' ಎನ್ನುವುದು ದಂಧೆಯಾದರೆ, ಅದರ ಅಡ್ಡ ಪರಿಣಾಮಗಳೇನಾಗಬಹುದು? ಅಂತಹ ಅಡ್ಡ ಪರಿಣಾಮಗಳು ಢಾಳಾಗಿ ಕಾಣಿಸಿ ಕ್ಯಾನ್ಸರ್‌ ಆಗುವವರೆಗೂ ಇಂತಹ ದಂಧೆಯ ಬಗೆಗೆ ಯಾರೂ ಚಕಾರ ಎತ್ತುವ ಅಗತ್ಯವಿಲ್ಲವೆ?

      "ಹೆಣ್ಣಿಗೆ ಏನಂತೆ? ಏನೂ ಉದ್ಯೋಗ ಸಿಗದಿದ್ದರೂ ಚಿಂತೆ ಇಲ್ಲ. ಬಾಡಿಗೆ ತಾಯಾದರೆ ಲಕ್ಷಗಟ್ಟಲೆ ಸಿಗುತ್ತದೆ ' ಎಂಬ ಮಾತನ್ನು ಕೇಳಿ ಯಾವ ಹೆಣ್ಣು ಆನಂದಿಸಬಹುದು?

      ಗರ್ಭಧಾರಣೆಯಾಗಿ ನವಮಾಸ ಮಗುವನ್ನು ಹೊತ್ತು ಅನಂತರ ಹೆರುವ ಕ್ರಿಯೆಯು ಕೇವಲ ದೈಹಿಕವೆ? ಅದರಲ್ಲಿ ಯಾವುದೇ ಭಾವನಾತ್ಮಕ ಸಂಬಂಧವಿಲ್ಲವೆ? ಪದೇ ಪದೇ ಬಾಡಿಗೆ ತಾಯಾಗುವ ಹೆಣ್ಣಿಗೆ ಭಾವನೆಗಳ ತಾಕಲಾಟವಿರದೆ ಹೋದೀತೆ? ಅದರಿಂದ ಆ ಹೆಣ್ಣಿನ ಬದುಕಿನ ಮೇಲೆ ಎಂತಹ ಪರಿಣಾಮಗಳಾಗಬಹುದು? ಈ ವಿಷಯದಲ್ಲಿ ಏನಾದರೂ ಸಂಶೋಧನೆಗಳಾಗಿವೆಯೆ?

      ಆಗಿಲ್ಲ. ಅದು ಆಗುವುದೂ ಇಲ್ಲ. ಆದರೂ ಅದಕ್ಕೆ ಹೇಳಿಕೊಳ್ಳುವ ಮಹಣ್ತೀ ಸಿಗುವುದಿಲ್ಲ. ಯಾಕೆಂದರೆ, ಜಗತ್ತಿನ ಎಲ್ಲವೂ ತಮ್ಮ ಸುಖಕ್ಕಾಗಿಯೇ ಇರುವುದು ಎಂಬ ಚಿಂತನೆಯುಳ್ಳ ಒಂದು ಬಲಿಷ್ಠ ವರ್ಗಕ್ಕೆ ಹೆಣ್ಣೂ ಒಂದು ವಸ್ತು ಮತ್ತು ಉಳಿದವೆಲ್ಲ ಚಿಲ್ಲರೆ ವಿಷಯಗಳು.

      ಯಾವನೇ ಒಬ್ಬ "ಬುದ್ಧಿಜೀವಿ'ಯೂ ಈವರೆಗೆ, ಇಂತಹ ಅಮಾನವೀಯ ಕೃತ್ಯಗಳ ಬಗೆಗೆ ಉಸಿರೆತ್ತಿದ್ದು ಉಂಟಾ? ಅವರ ಬುದ್ಧಿ ಓಡುವುದು ಕೋಮು ಗಲಭೆ, ಮಡೆಸ್ನಾನ, ನಾಗಮಂಡಲ... ಮುಂತಾದ ಪ್ರಚಾರದ ಪ್ರಯೋಜನ ಸಿಗುವ ಕಡೆಗಳಲ್ಲೇ. ಇಡಿಯ ಸಾಮಾಜಿಕ ವ್ಯವಸ್ಥೆಯ ಬಂಧವನ್ನೇ ಅಪರಾತಪರಾ ಮಾಡುವ ಶಕ್ತಿಯುಳ್ಳ ಹೆಣ್ಣಿನ ದುರುಪಯೋಗದ ಸ್ಥಿತಿಯು ಅವರನ್ನು ತಟ್ಟುವುದಿಲ್ಲ. ಬಹುಶಃ ಅವರಿಗೆಲ್ಲ ಇಂತಹ ಚಳವಳಿಯಿಂದ ಹೇಳಿಕೊಳ್ಳುವ ಲಾಭವಿಲ್ಲ ಅಥವಾ ಸಂದರ್ಭ ಸಿಕ್ಕಿದರೆ ಇಂತಹ ಕೃತ್ಯ ನಡೆಸಲು ಅವರೂ ಹಿಂದೆ ಮುಂದೆ ನೋಡಲಾರರು ಅಂದುಕೊಳ್ಳಬೇಕಾಗುತ್ತದೆ.

      ನಾವು ದಾರಿ ತಪ್ಪುತ್ತಿರುವುದು ಮಾತ್ರವಲ್ಲ, ನಮ್ಮ ದಿಕ್ಕೇ ತಪ್ಪುತ್ತಿದೆ. ಎಲ್ಲಿಗೆ ಪಯಣ? ಯಾವುದು ದಾರಿ? ಎಂಬ ಅಯೋಮಯ ಸ್ಥಿತಿ ಬಂದಿದೆಯೇ ಎಂದು ಯೋಚಿಸಬೇಕಾಗಿದೆ.

      ಯೋಚಿಸಿ, ಎದೆ ಹಾಲು ಮಾರುವುದು, ಬಾಡಿಗೆ ತಾಯಿ ಆಗುವುದು ಕೂಡ ಒಂದು ಉದ್ಯೋಗ ಎಂಬ ಹಂತಕ್ಕೆ ನಮ್ಮ ಹೆಣ್ಣುಮಕ್ಕಳು ಬಂದೇ ಬಿಟ್ಟರೆ, ಇಡಿಯ ಸಾಮಾಜಿಕ ಚಿತ್ರಣ ಏನಾಗಬಹುದು?

      ತನಗೆ ಮಗು ಬೇಕೆನ್ನಿಸಿದಾಗ, ಸ್ವಂತ ಖುಶಿಗೆ ಮಗುವಿನ ಅಗತ್ಯ ಕಂಡಾಗ, ಒಂದು ಹೆಣ್ಣು ತಾನೇ ಮುಂದಾಗಿ ವಿಜ್ಞಾನ (!)ದ ಸಹಾಯದಿಂದ ಗರ್ಭವತಿಯಾಗಿ, ಹೆತ್ತು, ಸ್ವತಂತ್ರ (!)ವಾಗಿ ಅದನ್ನು ಸಾಕಬಹುದು. ಇನ್ನು ಯಾವ ಹೆಣ್ಣಿಗೂ ಗಂಡಿನ ಆವಶ್ಯಕತೆಯೇ ಇಲ್ಲ. ಅಡುಗೆ ಕೆಲಸ, ಸಂಸಾರ ನಿಭಾಯಿಸುವ ದೊಡ್ಡ ಹೊರೆಯೂ ಇಲ್ಲ. ಅತ್ತೆ ಮಾವನೆಂಬ ರಾಹುಕೇತುಗಳ ಕಾಟವೂ ಇಲ್ಲ. ಆಡಿದ್ದೇ ಆಟ, ಮಾಡಿದ್ದೇ ಘನ ಕಾರ್ಯ. ಸಿಕ್ಕಾಪಟ್ಟೆ ಸ್ವಾತಂತ್ರ್ಯ!

      ಆಗ ಏನಾಗಬಹುದು? ಗಂಡಸರೆಲ್ಲ "ವೀರ್ಯದಾನಿ' ಪಟ್ಟವೇರಬಹುದು. ವೀರ್ಯದಾನವೇ ಮಹಾದಾನ ಎಂದು ಸರಕಾರವೂ ಘೋಷಣೆ ಹೊರಡಿಸಬಹುದು. ಅಪ್ಪ ಎಂಬ ಪಟ್ಟವು ಘಟ್ಟವೇರಬಹುದು. ಯಾವ ಅರ್ಜಿಯಲ್ಲೂ ಅಪ್ಪ- ಅಮ್ಮ ಎಂಬ ವಿವರವೇ ಅನಗತ್ಯವಾಗಬಹುದು. ಅತಿ ಹೆಚ್ಚು ವೀರ್ಯದಾನ ಮಾಡಿದಾತನಿಗೆ "ಪುರುಷೋತ್ತಮ' ಎಂದೂ, ಅತಿ ಹೆಚ್ಚು ಬಾರಿ ಬಾಡಿಗೆ ತಾಯಿಯಾದಾಕೆಗೆ "ಮಹಾತಾಯಿ' ಎಂದೂ ಪ್ರಶಸ್ತಿ ಸಿಗಬಹುದು; ಜೊತೆಗೆ ಈ ಎಲ್ಲ ಅಪಸವ್ಯಗಳನ್ನೂ "ಸಮಾಜಸೇವೆ ' ಎಂದು ಹೊಗಳಿ ಪೇಟ ತೊಡಿಸಬಹುದು.

      ಕ್ರೌರ್ಯ, ಹಿಂಸೆ - ಸಮಾಜದಲ್ಲಿ ತಾಂಡವವಾಡಬಹುದು. ನಾವು ಮತ್ತೂಮ್ಮೆ ಯಶಸ್ವಿಯಾಗಿ ಶಿಲಾಯುಗಕ್ಕೆ ನುಗ್ಗಬಹುದು. ಬರಬರುತ್ತ ದುಡ್ಡಿನ ಸೊಕ್ಕಿನಿಂದ, ಸುಖದ ವಿಕಾರ ಕಲ್ಪನೆಯಿಂದ, ದೈಹಿಕ ಅಸಾಮರ್ಥ್ಯದ ಸುಳ್ಳು ನೆಪವೊಡ್ಡಿ ಬಾಡಿಗೆ ತಾಯಂದಿರ ನೆರವು ಪಡೆವ ಮಂದಿ ಇನ್ನೂ ಹೆಚ್ಚಾಗಬಹುದು. ಇತ್ತ, ಬಡತನ - ಅನಾಥ ಭಾವಕ್ಕೆ ಒಳಗಾದ ಸ್ತ್ರೀಯರು ತಮ್ಮ ದೇಹದ ಭಾಗವನ್ನೇ ಬಾಡಿಗೆಗೆ ಕೊಟ್ಟು ಒಳದಾರಿಯಿಂದ ದುಡ್ಡು ಸಂಪಾದಿಸುವ ಧಾವಂತದಲ್ಲಿ ನಜ್ಜುಗುಜ್ಜಾಗಬಹುದು. ಅದಕ್ಕಾಗಿ, ಹೊಸ ಬಾಡಿಗೆ ಕಾನೂನು ಸಿದ್ಧವಾಗಿ, ಸರ್ವಾನುಮತದಿಂದ ಸ್ವೀಕೃತವಾಗಬಹುದು. ಎಲ್ಲರ ಬದುಕೂ ದುರ್ಭರವಾಗಬಹುದು.

      ಎಂಥ ಕ್ರೂರ ಹೊಂದಾಣಿಕೆ! ಪ್ರೀತಿಯೇ ಇಲ್ಲದೆ ನಡೆಸುವ ಇಡೀ ಕ್ರಿಯೆಯಲ್ಲಿ ಮೆರೆದಾಡುವ ದುಡ್ಡಿನ ವ್ಯವಹಾರವು ಅತ್ಯಂತ ಹೇಸಿಗೆ ಮತ್ತು ಮಾನಹಾನಿಕರವಾದದ್ದು.

      ಹೀಗಾದರೆ ಸಾಮಾಜಿಕ ಅಸಮತೋಲನವು ಯಾವ ಹಂತ ತಲುಪಬಹುದು?

      ಪ್ರಕೃತಿಯ ವಿರುದ್ಧ ಹೋರಾಡುವ ಛಲ ನಮಗೆ ಬೇಕೆ? ಆ ಪ್ರಕೃತಿಯು ಒಮ್ಮೆ ಮೈಕೊಡವಿದರೆ ನಾಮಾವಶೇಷವಾಗುವ ನಮಗೆ ಅಧಿಕ ಪ್ರಸಂಗವಾದರೂ ಎಷ್ಟು?

      ಸಂಶೋಧನೆ ಬೇಕು: ನಮ್ಮ ಏಳ್ಗೆಗಾಗಿ ಮಾತ್ರ ಬೇಕು. ನಡೆಸಿದ ಸಂಶೋಧನೆಗಳೆಲ್ಲವೂ ಆಚರಣೆಗೆ ಯುಕ್ತವೆ?

      ತಾಯಿ ಎಂಬ ಪದವೇ ಸಾಂತ್ವನ ನೀಡುವ ಶಕ್ತಿಯುಳ್ಳದ್ದು. ತಾಯ್ತನವೆಂಬ ಪದವಿಯೆದುರು ಯಾವ ಪದವಿಯೂ ನಿಲ್ಲಲಾರದು. ಈ ಹಿನ್ನೆಲೆಯಲ್ಲಿ - ಬಾಡಿಗೆ ತಾಯಿ ಎಂಬ ಪದವೇ ಮನುಷ್ಯನ ಧಾರ್ಷ್ಟ್ಯದ ರೂಪಕವಾಗಿ ಕಾಣುತ್ತದೆ. ತಾಯ್ತನವನ್ನು ಕ್ರಯಕ್ಕೆ ಮಾರುವ/ಕೊಂಡುಕೊಳ್ಳುವ ದುಷ್ಟತನವನ್ನು ಕಂಡರೆ ಗಾಬರಿಯಾಗುತ್ತದೆ. ಎಲ್ಲ ಬಗೆಯ ಕೋಮಲ ಭಾವನೆಗಳನ್ನು ಕೊಲ್ಲುವ ಜ್ಞಾನಕ್ಕೆ ವಿಜ್ಞಾನ ಎನ್ನುತ್ತೀರಾ? ಸುಜ್ಞಾನ ಎನ್ನುತ್ತೀರಾ?

      ಪ್ರೀತಿಗೆ, ಅವಲಂಬನೆಗೆ ಮಗು ಬೇಕೆನ್ನಿಸಿದರೆ ಸಮಾಜದಲ್ಲಿ ಲಕ್ಷಾಂತರ ಅನಾಥ ಮಕ್ಕಳಿದ್ದಾರೆ. ಅಂತಹ ಮಕ್ಕಳಿಗೆ ಭದ್ರ ಬದುಕನ್ನು ಕೊಟ್ಟರೆ ನಿಜವಾದ ಸಮಾಜ ಸೇವೆಯೂ ಆದೀತು. ಹೆರಿಗೆ, ನೋವು ಏನೂ ಇಲ್ಲದೆ ಮಗು ಮಾತ್ರ ಬರಲಿ ಎನ್ನುವ ದುಡ್ಡುಳ್ಳ ದಡ್ಡ ದಂಪತಿಗಳಿಗೆ ಧಿಕ್ಕಾರವಿರಲಿ.

      ಇನ್ನೊಂದು ದಿನ ಬರಬಹುದು. ಅಳದೇ ಇರುವ, ಯಾವಾಗಲೂ ನಗುತ್ತಿರುವ, ಹೇಳಿದಂತೆ ಕೇಳುವ, ಏನೂ ಹಠ ಮಾಡದಿರುವ ರೊಬೋಧಿಟ್‌ ಮಗು ಸಾಕು - ಎನ್ನುವ ಸ್ವಾರ್ಥೀ ಪಡೆ ಎದ್ದು ಬರಬಹುದು. ನಮ್ಮಂಥ ಹೆತ್ತವರಿಗೆ ಮತ್ತೆಂಥ ಮಕ್ಕಳು ಸಿಕ್ಕಾರು?

      ಮೊದಲೇ ಹೇಳಿದಂತೆ, ಪುರಾಣ ಕಾಲದಲ್ಲೇ ಅಂದಿನ ಅನಾಗರಿಕ ಕಾಲ ನಿಯಮಗಳನ್ನು ಧಿಕ್ಕರಿಸಿದ ದೃಷ್ಟಾಂತಗಳಿದ್ದವು. ದೈಹಿಕ ಅಸಾಮರ್ಥ್ಯ ಮತ್ತು ಅನಿವಾರ್ಯತೆಗಳನ್ನು ಆಧರಿಸಿದ ಮಾನವೀಯ ಹೊಂದಾಣಿಕೆಯೂ ಅಂದಿನ ಭಾವಯುದ್ಧದಲ್ಲಿ ಜಯಿಸಲಿಲ್ಲ. ಸಾಮಾಜಿಕ ಮನ್ನಣೆಯೂ ಪ್ರಶ್ನಾರ್ಹವಾಯಿತು. ಆದರೆ ಈಗ ?

      ನಾವು ಬಹಳ ಮುಂದುವರಿದಿದ್ದೇವೆ! ಹೆಣ್ಣಿನ ದೇಹವೇ ನಮಗೀಗ ದುಡಿಮೆಯ ಸಾಧನ! ಹೇಗೆ ಹೇಗೋ ದುಡ್ಡು ಸಂಪಾದಿಸಿ, ಅರ್ಹತೆಗೆ ಮೀರಿದ ಗಂಟಿನ ಸೊಕ್ಕಿನಿಂದ, ಕಷ್ಟ/ಜವಾಬ್ದಾರಿ ಒಂದೂ ಇಲ್ಲದೆ ಇಷ್ಟ ಪ್ರಾಪ್ತಿ ಮಾಡಿಕೊಳ್ಳುವ ಇಂದಿನ ನಾಟಕಕ್ಕೆ ಏನೆನ್ನೋಣ? ಲಾಭ ಕೇಂದ್ರಿತ ಬುದ್ಧಿ ವ್ಯಾಪಾರ ನಡೆಸುವ ನಮಗೆ ಲಾಭಿಯಿಂದ ಗಳಿಸುವ ಪ್ರಶಸ್ತಿ ಬಿಟ್ಟರೆ ಮತ್ತೇನೂ ಸಿಗಲಾರದು.

      ತಾನು ಸತ್ತು ಸ್ವರ್ಗ ಕಾಣಬೇಕು ಎಂಬ ಗಾದೆ ಮಾತನ್ನು ಲೇವಡಿ ಮಾಡವಂತೆ, ಯಾರನ್ನೋ ಸಾಯಿಸಿ ತಾನು ಪಡೆಯುತ್ತೇನೆನ್ನುವ ಸ್ವರ್ಗಸುಖವೆಂಬ ದುಷ್ಟತನಕ್ಕೆ ಇಂಬು ಕೊಡುವ ಆವಿಷ್ಕಾರಗಳು ನಮಗೆ ಬೇಕೆ? ಅದು ಸಾಧುವೆ? ಸಾಧ್ಯವೆ?

      ನಮ್ಮ ನೈತಿಕ ಮೌಲ್ಯವು ಪ್ರೀತಿಯೆಂಬ ಹಸಿ ಭಾವನೆಯನ್ನು ಸಮೂಲವಾಗಿ ಕೊಂದು ಹಾಕಿಬಿಡುವ ಅಪಾಯವು ನಮ್ಮ ಮುಂದೆ ಅಟ್ಟಹಾಸ ಮಾಡಿದಂತೆ ಕಾಣುವುದಿಲ್ಲವೆ? ನಾವೂ ಮನುಷ್ಯರೆ? ಛಿ!

    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    • Copyright @ 2009-2010 Udayavani.All rights reserved.
    • Designed & Hosted By 4cplus