Thursday, May 17, 2012
Last Updated: 12:24:52 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಜೈಪುರ ಸಾಹಿತ್ಯೋತ್ಸವ
    • ಸಾಹಿತ್ಯ ಕ್ಷೇತ್ರ ಕುಂಭ ಮೇಳದಲ್ಲಿ ಮಿಂದು
    • ಸಾಹಿತ್ಯ ಕ್ಷೇತ್ರ ಕುಂಭ ಮೇಳದಲ್ಲಿ ಮಿಂದು

      • ಮಾನವಿ ಬೆಳಗಾಂವಕರ್‌ | Feb 05, 2012

        ಕಳೆದ ಜನವರಿ 20ರಿಂದ 24ರವರೆಗೆ ಜೈಪುರದಲ್ಲಿ ವಿಶ್ವಮಟ್ಟದ ಸಾಹಿತಿಗಳ ಸಮಾವೇಶ ನಡೆಯಿತು. ಈ ಬಾರಿ ಅದಕ್ಕೆ ಪ್ರಚಾರ ಸಿಕ್ಕಿದ್ದು ದ ಸಟಾನಿಕ್‌ ವರ್ಸಸ್‌ನ ಲೇಖಕ ಸಲ್ಮಾನ್‌ ರಶಿªಯವರನ್ನು ಬರಗೊಡದ ಕಾರಣಕ್ಕಾಗಿ.

        ಈ ಸಾಹಿತ್ಯೋತ್ಸವದಲ್ಲಿ ಪಾಲ್ಗೊಂಡ ಸಹೃದಯಿಯೊಬ್ಬರು ಹೀಗೆ ಬರೆಯುತ್ತಾರೆ...

        ಜೈಪುರ ಸಾಹಿತ್ಯ ಸಮ್ಮೇಳನದ ಬಗ್ಗೆ ನಾನು ಮೊದಲು ಕೇಳಿದ್ದು 2006ರಲ್ಲಿ ಅಥವಾ ಈ ಸಾಹಿತ್ಯೋತ್ಸವದ ಬಗ್ಗೆ ಇನ್ನೂ ಹೆಚ್ಚು ಸ್ಪಷ್ಟವಾಗಿ ತಿಳಿದು ಬಂದದ್ದು 2007ರಲ್ಲಿ. ಅಂದಿನಿಂದಲೂ ನನಗೆ ಅದರಲ್ಲಿ ಪಾಲ್ಗೊಳ್ಳಬೇಕೆಂಬ ಆಸೆ. ಸ್ವಂತ ಆಸಕ್ತಿಯ ನಿಷ್ಠಾವಂತ ಓದುಬಾಕಳಾಗಿರುವ ನನಗೆ, ಈ ಸಾಹಿತ್ಯೋತ್ಸವ ಸಾಹಿತ್ಯಕ್ಷೇತ್ರದ ಕುಂಭಮೇಳವಾಗಿಯೇ ಕಂಡಿದೆ. ಭಾರತದಲ್ಲಿ ಜರಗುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಸಾಹಿತ್ಯ ಸಮ್ಮೇಳನ ಇದು. ಇದನ್ನು ಆರಂಭಿಸಿದವರು ಅಗ್ರಗಣ್ಯ ಸಾಹಿತಿ ವಿಲಿಯಮ್‌ ಡಾಲ್‌ ರಿಂಪಲ್‌. ಇದು ನೆರವೇರುತ್ತಿರುವುದು ಲಾಭ-ನಷ್ಟದ ಬಗ್ಗೆ ತಲೆಕೆಡಿಸಿಕೊಳ್ಳದ ಸಾಹಿತ್ಯ ನಿಷ್ಠ ಸಂಘಟಕರಿಂದ. ಸಾಹಿತಿ ಗಳನ್ನೂ ಓದುಗರನ್ನೂ ಸಮೀಪಕ್ಕೆ ತಂದು ಅವರ ನಡುವೆ ಆಪ್ತ ಸಂವಾದವನ್ನು , ಅರ್ಥಪೂರ್ಣ ಮುಖಾಮುಖೀಯನ್ನು ಸಾಧ್ಯವಾಗಿಸುವ ಮಹತ್ತರ ಉದ್ದೇಶದ ಸಾಹಿತ್ಯ ಪರ್ವ ಇದು. ಇಂಥ ಉದಾತ್ತ ಸಾಹಿತ್ಯ ಸಂಸ್ಕೃತಿಯ ಕಲ್ಪನೆಯನ್ನು ಸಾಕಾರ ಗೊಳಿಸುವ ಆಶಯ ಇಂದಿನ ಕಾಲಕ್ಕೆ ಅಪೂರ್ವವೇ. ಉತ್ಸವದ ಆರಂಭದ ವರ್ಷದಿಂದಲೂ ಡಾಲ್‌ರಿಂಪಲ್‌ ಅವರ ಹೆಸರು ಹಾಗೂ ಸಮ್ಮೇಳನದ ಕಲಾಪಗಳ ಸ್ವರೂಪ ಒಂದಕ್ಕೊಂದು ತಳುಕು ಹಾಕಿಕೊಂಡು ಬಂದಿವೆ. ಸಾಹಿತ್ಯ ಜಗತ್ತಿನ ಅತ್ಯುತ್ತಮ ಅಭಿರುಚಿಯ ಮಂದಿ ಯನ್ನು ಸಮ್ಮೇಳನದತ್ತ ಸೆಳೆಯುತ್ತ ಬಂದಿವೆ. ಆದರೆ,
        ವಿದ್ಯಾರ್ಥಿನಿಯಾಗಿದ್ದಾಗಿನ ನನ್ನ ಆರ್ಥಿಕ ತೊಡಕು ಹಾಗೂ ಉದ್ಯೋಗಿಯಾದಾಗ ಎದುರಾದ ಸಮಯದ ಅಭಾವದಿಂದಾಗಿ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಇಷ್ಟು ವರ್ಷ ಸಾಧ್ಯವಾಗಲೇ ಇಲ್ಲ.

        ಸಮ್ಮೇಳನ ಆರಂಭವಾದ ವರ್ಷ ಅಂದರೆ 2006ರಲ್ಲಿದ್ದ ಸ್ಥಿತಿಗೆ ಹೋಲಿಸಿದರೆ ಇದು ತನ್ನ ಜನ ಸಮ್ಮರ್ದತೆಯ ಪ್ರಮಾಣದಲ್ಲೂ  ಜನಪ್ರಿಯತೆಯಲ್ಲೂ ಸಾಕಷ್ಟು ಬೆಳೆದಿದೆ. 2006ರಲ್ಲಿ ಇದರಲ್ಲಿ ಪಾಲ್ಗೊಂಡಿದ್ದ ಲೇಖಕರ ಸಂಖ್ಯೆ ಕೇವಲ 18. ಸಭಾಸದರಾಗಿ ಪಾಲ್ಗೊಂಡ ಸಾಹಿತ್ಯಪ್ರೇಮಿಗಳು ಕೇವಲ 100 ಮಂದಿ . ಈ ವರ್ಷ ಸುಮಾರು 10,000 ಸಾಹಿತ್ಯಾಸಕ್ತರು ಬಂದಿದ್ದರೆ, ಅವರೊಂದಿಗೆ ಸಂವಾದ/ ಚರ್ಚೆ/ ವಿಚಾರವಿನಿಮಯ ನಡೆಸಿದ ಸಾಹಿತಿಗಳು ಹಾಗೂ ಭಾಷಣಗಾರರು ಸುಮಾರು ನೂರು ಮಂದಿ.
        ಪ್ರಾರಂಭಿಕ ವರ್ಷಗಳಲ್ಲಿ ಉತ್ಸವದ ಗಾತ್ರ ಕಿರಿದಾಗಿದ್ದು ಲೇಖಕರ- ಓದುಗರ ಮುಖಾಮುಖೀಗೆ ಸಾಕಷ್ಟು ಅವಕಾಶವಿತ್ತೆಂಬ, ಈ ಬಾರಿ ಹಾಗೆ ಆಗಲಾರದೆಂಬ ಮುನ್ಸೂಚನೆಯನ್ನು ನನಗೆ ನೀಡಿದವರಿದ್ದರು. ಅವರು ಹೇಳಿದ್ದು ನಿಜ ಎಂದು ಒಪ್ಪಿಕೊಂಡರೂ ಈ ಬಾರಿ ಸಮ್ಮೇಳನದ ಸಂಘಟಕರು ಅದನ್ನೊಂದು ಪುಟ್ಟ ಆತ್ಮೀಯ ಸಮಾರಂಭವನ್ನಾಗಿಸಲು ಪಟ್ಟಪರಿಶ್ರಮವನ್ನು ಕಂಡು ನನಗೆ ತುಂಬಾ ಸಂತೋಷವೂ ಆಯಿತು.
        ಜತೆಗೆ ಆಶ್ಚರ್ಯವೂ ಆಯಿತು. ಸಮ್ಮೇಳನ ನಡೆದದ್ದು ಜೈಪುರದ  ಹೃದಯ ಭಾಗದಲ್ಲಿರುವ ಡಿಗ್ಗಿ ಅರಮನೆಯಲ್ಲಿ. ಅರಮನೆಯ ಪರಿಸರ ಸಾಕಷ್ಟು ವಿಶಾಲವಾಗಿದ್ದು , ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ  ಸಮ್ಮೇಳನದ ಪ್ರತಿನಿಧಿಗಳಿಗೆ ಅಲ್ಲಲ್ಲಿ ಚದುರಿದಂತೆ ಕುಳಿತು ಆಸ್ವಾದಿಸಲು ಸಾಕಷ್ಟು ಅನುಕೂಲಕರವಾಯಿತು. ವಾರಾಂತ್ಯದ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂದವರ ಕಾಲ ಸಪ್ಪಳದಿಂದಾಗಿ ಸಮ್ಮೇಳನ ತಾಣ ಸಾಕಷ್ಟು ಚಿಕ್ಕದಾಯಿತೇ ಎನ್ನಿಸುವಂತಾದರೂ ಇದು ಕೂಡಾ ಉತ್ಸವಕ್ಕೆ ವಿಚಿತ್ರ ಮೆರುಗನ್ನೇ ನೀಡಿತು.

        ಉತ್ಸವದ ಬಗ್ಗೆ ಈಗಾಗಲೇ ಸಾಕಷ್ಟು ಅನಿಸಿಕೆಗಳು, ಪ್ರತಿಕ್ರಿಯೆಗಳು ಪ್ರಕಟವಾಗಿವೆ. ಈ ಬಾರಿ ಜನಸಂಖ್ಯೆ ವಿಪರೀತವಾಗಿತ್ತು, ಹೀಗಾಗಿ ಆತ್ಮೀಯತೆಯ ಕೊರತೆ ಎದ್ದು ಕಾಣುತ್ತಿತ್ತು. ಹಿಂದಣ ವರ್ಷಗಳಿಗೆ ಹೋಲಿಸಿದರೆ ಇದು ಇನ್ನೊಂದು ವ್ಯಾಪಾರೀಕೃತ ಸಾಹಿತ್ಯ ಸಮ್ಮೇಳನದಂತಿತ್ತು, ಇತ್ಯಾದಿ. ಆದರೆ ಇದನ್ನು ಒಪ್ಪಲಾಗದು. ಈಚೆಗಿನ ಕೆಲವು ವರ್ಷಗಳಲ್ಲಿ ಸಮ್ಮೇಳನದ ತಾಣವಾದ ಜೈಪುರ ಅರಮನೆಯನ್ನು  ಸಾಕಷ್ಟು ಚೆನ್ನಾಗಿ ಅಲಂಕರಿಸುವಲ್ಲಿ , ಒಂದೇ ಸಮಯದಲ್ಲಿ ನಾಲ್ಕೈದು ಕಡೆಗಳಲ್ಲಿ ಅರ್ಥಪೂರ್ಣ ವಿಚಾರಗೋಷ್ಠಿಗಳು, ಚರ್ಚೆಗಳು, ಸಂವಾದಗಳು ನಡೆಯುವುದಕ್ಕೆ ಅನುಕೂಲವಾಗಲೆಂದು ಪ್ರತ್ಯಪ್ರತ್ಯೇಕ ವೇದಿಕೆಗಳನ್ನು ಸಜ್ಜುಗೊಳಿಸುವಲ್ಲಿ ಸಂಘಟಕರ ಪರಿಶ್ರಮ ಎದ್ದು ಕಾಣುತ್ತಿತ್ತು. ಪ್ರತಿಯೊಂದು ಸಭಾ ವೇದಿಕೆಯೂ / ಸಭಾಂಗಣವೂ ಸಾಕಷ್ಟು ವಿಶಾಲವಾಗಿತ್ತು. ಪ್ರತಿ ಸಭಾಂಗಣದಲ್ಲೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ವಿಪುಲ ಸ್ಥಳಾವಕಾಶವಿತ್ತು. ಖ್ಯಾತಪ್ರಖ್ಯಾತ ಸಾಹಿತಿಶ್ರೇಷ್ಠರು ಪಾಲ್ಗೊಂಡದ್ದರಿಂದ (ಹಾಗೂ ವಿಶ್ವವಿಖ್ಯಾತರಾದ ಒಬ್ಬರು ಪಾಲ್ಗೊಳ್ಳದೆ ಇದ್ದುದರಿಂದ !)ಉಂಟಾಗಿದ್ದ ಗೊಂದಲ- ಗಡಿಬಿಡಿಗೆ, ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಸಾಹಿತ್ಯಾಸಕ್ತರ ಆಸಕ್ತಿ ಸ್ವಾರಸ್ಯಪೂರ್ಣ, ಸಮಾನಾಂತರ ಪೈಪೋಟಿ ನೀಡುವಂತಿತ್ತು! ವಿವಾದದ ಬಗ್ಗೆ ನಾನಿಲ್ಲಿ ಏನನ್ನೂ ಹೇಳಬಯಸುವುದಿಲ್ಲ.
        ಸಾಹಿತಿ ಗಣ್ಯರ ಪೈಕಿ ವಿನ್‌ಫ್ರೇ ಅವರ ಮಾತುಗಳನ್ನು ಆಲಿಸಲು ಎಷ್ಟು ಜನರಿಗೆ ಆಸಕ್ತಿ ಇತ್ತೋ , ಅಷ್ಟೇ ಆಸಕ್ತಿಯಿಂದ ಅಷ್ಟೇ ಸಂಖ್ಯೆಯಲ್ಲಿ ಆಯೇಷಾ ಜಲಾಲ್‌, ಭುಟ್ಟೋ ಅಥವಾ ಮಿಇಂತ್‌-ಉ ಹಾಗೂ ಆ್ಯಮಿ ಚುಆ ಮುಂತಾದವರ ಮಾತುಗಳನ್ನೂ ಆಲಿಸಿದವರಿದ್ದರು. ಚೇತನ್‌ ಭಗತ್‌ ಅವರಿಗೆ ಎಷ್ಟರ ಮಟ್ಟಿನ ಪ್ರೊತ್ಸಾಹಕರ ಪ್ರತಿಕ್ರಿಯೆ ಲಭ್ಯವಾಯಿತೋ ಅಷ್ಟೇ ಉತ್ಸಾಹ ಬೆನ್‌ ಓಕ್ರಿ ಅವರ ಬಗೆಗೂ ಪ್ರಕಟವಾಯಿತು. ಇದೆಲ್ಲ ಸಾಧ್ಯವಾದುದು ಹೆಚ್ಚಿನ ಸಂಖ್ಯೆಯಲ್ಲಿ ನೆರೆದ ಸಭಾಸದರಿಂದ; ಅವರ ವೈವಿಧ್ಯಮಯ ಆಸಕ್ತಿಗಳ ದೆಸೆಯಿಂದ.

        ನನಗೆ ವೈಯಕ್ತಿಕವಾಗಿ ಮೆಚ್ಚುಗೆಯಾದ ಗೋಷ್ಠಿಯೆಂದರೆ ಆಯೇಷಾ ಜಲಾಲ್‌ ಅವರದು. ವಿಶೇಷತ: ಭಾರತ, ಪಾಕಿಸ್ಥಾನ ಹಾಗೂ ದಕ್ಷಿಣ ಏಶ್ಯಾಗಳ ಬಗ್ಗೆ ತೀವ್ರ ಆಸಕ್ತಿ ತಳೆದಿರುವ ಪ್ರಸಿದ್ಧ ಇತಿಹಾಸಕಾರ್ತಿ ಆಯೇಷಾ , ನನ್ನ ಅತ್ಯಂತ ಮೆಚ್ಚಿನ ಲೇಖಕ ವಿಲಿಯಂ ಡಾಲ್‌ರಿಂಪಲ್‌ ಅವರ ಜತೆಗೆ ನಡೆಸಿದ ಸಂವಾದವನ್ನು ಆಲಿಸುವ ವಿಶೇಷ ಅವಕಾಶ ಇಲ್ಲಿ ನನಗೆ ಲಭಿಸಿತು. ಕಾರ್ಯಕ್ರಮದ ಬಳಿಕ ಆಕೆಯನ್ನು ಕಂಡು ಮಾತನಾಡಿಸುವ ಅವಕಾಶವೂ ಸಿಕ್ಕಿತು. ಉತ್ಸವದ ಸ್ಥಳದಲ್ಲೇ ಖರೀದಿಸಿದ ಆಕೆಯ ಎರಡು ಗ್ರಂಥಗಳ ಪ್ರತಿಗಳಲ್ಲಿ ಆಕೆಯ ಹಸ್ತಾಕ್ಷರವನ್ನು ಪಡೆದುಕೊಂಡೆ. ಈ ಎರಡು ಗ್ರಂಥಗಳು ಈಗ ನನ್ನ ಪುಸ್ತಕಭಂಡಾರದಲ್ಲಿನ ಅಮೂಲ್ಯ ನಿಧಿಗಳು.

        ಜೈಪುರ ಸಾಹಿತ್ಯೋತ್ಸವದಲ್ಲಿ ಪಾಲ್ಗೊಂಡ ಆಸಕ್ತರಲ್ಲಿ ಹೆಚ್ಚಿನವರು ಯುವಕ-ಯುವತಿಯರು. ವಿಶೇಷವಾಗಿ ವಿದ್ಯಾರ್ಥಿಗಳೇ. ಸಮ್ಮೇಳನ ಕುರಿತಂತೆ ನಡೆದಿರುವ ಪ್ರಚಾರ -ಅಪಪ್ರಚಾರಗಳೇನೇ ಇರಲಿ, ಅದು ಹುಟ್ಟುಹಾಕಿರುವ ವಿವಾದಗಳೇನೇ ಇರಲಿ, ಓದುವ ಸಂಸ್ಕೃತಿಯನ್ನು , ಪುಸ್ತಕದೊಡನೆಯ ಒಡನಾಟವನ್ನು ಹಾಗೂ ಬರಹಗಾರರೊಂದಿಗಿನ ಸಂವಾದ/ ಮುಖಾಮುಖೀಯನ್ನು ಪ್ರೋತ್ಸಾಹಿಸುವ ಯಾವುದೇ ಕಾರ್ಯಕ್ರಮವಿರಲಿ , ಅದು ಸ್ವಾಗತಾರ್ಹವೆಂದೇ ಹೇಳಬೇಕು. ವಿಶೇಷವಾಗಿ , ಇಂದಿನ ಟೆಲಿವಿಜನ್‌ - ಇಂಟರ್‌ನೆಟ್‌ ಕಾಲದ ಧಾವಂತದ ಜೀವನದಲ್ಲಿ ಇಂಥ ಉತ್ಕೃಷ್ಟ ಸಾಹಿತ್ಯ- ಸಿದ್ಧಪ್ರಸಿದ್ಧ  ಸಾಹಿತಿ- ಆಸಕ್ತ ಸಾಹಿತ್ಯಾಸಕ್ತರ ನಡುವೆ ಏರ್ಪಡಬೇಕಾದ ಗಂಭೀರ ಮುಖಾಮುಖಯ ಮಹಣ್ತೀ ಎಷ್ಟೆಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಜೂನ್‌ ತಿಂಗಳು ಹತ್ತಿರವಾದಂತೆ ನಗರಗಳ ಅಪ್ಪ, ಅಮ್ಮಂದಿರಿಗೆ ತಮ್ಮ ಚಿಣ್ಣರನ್ನು ಹತ್ತಿರದ ಯಾವ ಒಳ್ಳೆಯ ಶಾಲೆಗಳಿಗೆ ಸೇರಿಸುವುದು ಎಂಬ ಚಿಂತೆ...
      • ಈ ವಿಭಾಗದಲ್ಲಿಯೂ ಇದೆ
      • Copyright @ 2009-2010 Udayavani.All rights reserved.
      • Designed & Hosted By 4cplus