Thursday, May 17, 2012
Last Updated: 1:25:56 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಅಲ್ಲಿತ್ತು ಅಮೆರಿಕ ಇಲ್ಲಿ ಬಂತು ಈಗ...
    • ದೇಶಭಕ್ತಿ ಗೀತೆ ಕೇಳಿ ನಡುಬೀದಿಯಲ್ಲಿ ಕುಣಿಯ ತೊಡಗಿದ ಭಿಕಾರಿನ್‌ ಮಹಿಳೆ

      • ನೇಮಿಚಂದ್ರ | Feb 12, 2012

        ತಮ್ಮ ದೈನಂದಿನ ಈ ಕಟು ಶ್ರಮದ ಜೀವನವನ್ನು ಸುಖವೆಂದು ಸ್ವೀಕರಿಸುವ, ಶ್ರಮವಿಲ್ಲದ ಗಳಿಕೆಯನ್ನು ನಿರಾಕರಿಸುವ, "ಕಾಯಕವೇ ಕೈಲಾಸ' ಬಸವಣ್ಣನವರ ನುಡಿಗಟ್ಟನ್ನು ಬದುಕಿ ತೋರಿಸುವ ಈ ಜನರ ಮುಗುಳ್ನಗೆಯಲ್ಲಿ ನಮ್ಮ ದಿಟವಾದ  ಭಾರತೀಯತೆ ಜೀವಂತವಾಗಿದೆ.

        ಖರಗ್‌ಪುರದ ಕಿರುಬೀದಿಗಳಲ್ಲಿ ಅಲೆಯುತ್ತ ಹೊರಟೆ. ಒಂದೆಡೆ ದೊಡ್ಡ ಮೈಕ್‌ ನೆಟ್ಟಿತ್ತು. ಅದರಿಂದ ಅಬ್‌ ಕೆ ಬರಸ್‌ ತುಝೆ ಧರತೀ ಕಿ ರಾಣಿ ಬನಾ ದೇಂಗೆ ಎಂಬ ದೇಶಭಕ್ತಿಗೀತೆ ದೊಡ್ಡ ಕಂಠದಲ್ಲಿ ಹೊರಬಿತ್ತು. ಅಲ್ಲೇ ಬೀದಿಯ ಬದಿಯಲ್ಲಿ ನೆಲದ ಮೇಲೆ ಕುಳಿತು ಎದುರಲ್ಲೊಂದು ಬಟ್ಟಲು ಇಟ್ಟು ಬೇಡುತ್ತಿದ್ದ ಭಿಕಾರಿನ್‌ ತಾಯಿ ಮತ್ತು ಮಗಳು, ಮೈಕ್‌ನಲ್ಲಿ ಈ ಹಾಡು ಬರುತ್ತಿದ್ದಂತೆ, ಎದ್ದು ನಡುಬೀದಿಯಲ್ಲಿ ನರ್ತಿಸತೊಡಗಿದರು. ಸೈಕಲ್‌ಗ‌ಳು, ಸೈಕಲ್‌ ರಿûಾಗಳು, ಕೆಲವು ಕಾರುಗಳು ಹಾರ್ನ್ ಕಿರುಚಿಸದೆ, ಆಕೆಯ ಮೇಲೆ ರೇಗಾಡದೆ, ಅವರನ್ನು ಸರಿಸಿಕೊಂಡು ನಿಧಾನಕ್ಕೆ ತಮ್ಮ ಗಾಡಿ ಚಲಾಯಿಸಿಕೊಂಡು ಹೋದರು.

        ಕಿರುಬೀದಿಗಳಲ್ಲಿ ಅಲೆಯುತ್ತ ಹೊರಟೆ. ರಸ್ತೆ ಬದಿಯ ಸಣ್ಣ ಅಂಗಡಿಯಲ್ಲಿ "ಒಂದು ಕುಲ್ಲಡ್‌ ಚಹಾ ಐದು ರೂಪಾಯಿ, ಅರ್ಧ ಚಹಾ ನಾಲ್ಕು ರೂಪಾಯಿ' ಎಂದು ಬರೆದಿತ್ತು. ಇದ್ಯಾವ ಲೆಕ್ಕ ಎಂದು ಕೇಳಬೇಡಿ. ಅರ್ಧ ಚಹಾ ಕೇಳಿದೆ, ಸಣ್ಣ ಮಣ್ಣಿನ ಬಟ್ಟಲಲ್ಲಿ, ತುದಿಗಿಂತ ತುಸು ಕಡಮೆ ಇದ್ದ ಚಹಾ ಕೈಗೆ ಬಂದಿತು. ಚಹಾ ಕುಡಿಯುವ ಅಭ್ಯಾಸ ನನಗಿಲ್ಲ, ಆದರೆ ಈ "ಅರ್ಧ ಚಹಾ ಎಂದರೇನು?' ಎಂಬ ಕುತೂಹಲಕ್ಕೆ, ಬೆಳಗಿನ ಈ ಚಳಿಗೆ ಏನಾದರೂ ಬಿಸಿ ಇರಲೆಂದುಕೊಂಡಿದ್ದೆ. ಐದು  ರೂಪಾಯಿಯ ಪೂರ್ತಿ ಚಹಾ ಕೂಡ ದುಬಾರಿಯಾದ ಬಡತನದ ನಗರ, ಸಡಗರದಿಂದ‌ ಗಣತಂತ್ರ ಆಚರಿಸುತ್ತಿತ್ತು. 

        ಇದೇ ಬಸಾರಿನ ಹೊಟೆಲುಗಳಿನ್ನೂ ತೆರೆದಿರಲಿಲ್ಲ. ದೊಡ್ಡ ಢಾಬಾ ಅಂಗಡಿಯ ಎದುರಿನ ತೆರೆದ ಚರಂಡಿಯಿಂದ, ಒಬ್ಟಾಕೆ ಕೊಳಕು ಕಪ್ಪನೆಯ ಕೆಸರನ್ನು ಎತ್ತಿ ಎತ್ತಿ ಬಾಣಲೆಯಲ್ಲಿ ಹಾಕಿಕೊಳ್ಳುತ್ತಿದ್ದಳು. "ಏನದು?' ಎಂದೆ, "ಕೋಯಲಾ' (ಇದ್ದಿಲು) ಎಂದಳು. ಆ ಢಾಬಾದಲ್ಲಿ ಬಳಸಿದ ಇದ್ದಿಲಿನ ದೊಡ್ಡ ದೊಡ್ಡ ತುಂಡುಗಳು ಉರಿದು ಸಣ್ಣ ಸಣ್ಣ ಚೂರುಗಳಾಗಿ ಚರಂಡಿ ಸೇರಿದ್ದವು. ಅವುಗಳನ್ನು ಆ ಕೊಳಕು ಕಪ್ಪು$ ನಾಲೆಯಿಂದ ಈಕೆ ಬರಿಗೈಯಲ್ಲಿ ಎತ್ತಿ ಬಾಣಲೆಗೆ ಹಾಕಿಕೊಳ್ಳುತ್ತಿದ್ದಳು. ನಂತರ ಹಿಂತಿರುಗುವಾಗ ಗಮನಿಸಿದೆ, ಬಡ ಮನೆಗಳ ಎದುರು, ಅನೇಕ ಮಹಿಳೆಯರು ಅಂತಹುದೇ ಬಾಣಲೆಯಿಂದ ಹೊರಬಿದ್ದ ಕಲ್ಲಿದ್ದಿಲ ಪುಡಿಯನ್ನು ಉಂಡೆ ಮಾಡಿ ಬಿಸಿಲಿಗೆ ಒಣಗಿಸಲು ಇಡುವುದು ಕಾಣಿಸಿತು. "ಏನಿದು?' ಮತ್ತೆ ಕೇಳಿದ್ದೆ, "ಇದ್ದಿಲಿನ ಉಂಡೆ, ಒಲೆ ಉರಿಸಲು' ತಲೆಯೆತ್ತಿ ಹಸನ್ಮುಖವಾಗಿ ಒಬ್ಟಾಕೆ ಉತ್ತರಿಸಿದಳು.

        ದೇಶಕ್ಕೆ ಸ್ವಾತಂತ್ರ ಬಂದು 64 ವರ್ಷ, ಈ ಜನಕ್ಕೆ ಏನು ದಕ್ಕಿದೆ, ನಾಲೆಯಿಂದ ಹೊರತೆಗೆದ ಕಪ್ಪು$ ಕೊಳಕು ಇದ್ದಲಿನ ಪುಡಿಯ ಹೊರತಾಗಿ? 74ರ ವಯಸ್ಸಿನಲ್ಲಿ ತನ್ನೆಲ್ಲ ಸ್ನಾಯುಬಲವನ್ನು ತೊಡಗಿಸಿ ಸೈಕಲ್‌ ತುಳಿದು ಗಳಿಸುವ ಪುಡಿಗಾಸು ದಕ್ಕಿದೆ. ಅಭಿವೃದ್ಧಿಯೆಂಬುದೆಲ್ಲ ಬೆಂಗಳೂರಿನಂತಹ ಝಗಮಗಿಸುವ ಮೆಟ್ರೋ ಪಟ್ಟಣಗಳಿಗೆ ಮಾತ್ರ ಸೀಮಿತವಾಗಿದೆ. ಇಲ್ಲಿಯ ಮಾಲ್‌ಗ‌ಳಲ್ಲಿ ಮಾತ್ರ "ಇಂಡಿಯಾ ಶೈನಿಂಗ್‌'. ದೇಶದ ಅಸಮಾನ ಅಭಿವೃದ್ಧಿ ಕಣ್ಣಿಗೆ ಇಲ್ಲಿ ರಾಚಿತ್ತು.

        ಸಂಜೆ, ಕೆಲಸ ಮುಗಿಸಿದ ಕಿರಿಯ ಸಹೋದ್ಯೋಗಿಗಳು "ಗೋಲ್‌ ಬಸಾರ್‌ಗೆ ಹೋಗೋಣ' ಎಂದಾಗ, ಮತ್ತೆ ಹೊರಟು ನಿಂತೆ. ಇಬ್ಬಿಬ್ಬರು ನಿಂತು ಸೈಕಲ್‌ ರಿûಾ ಕೇಳಿದಾಗ 60 ರೂಪಾಯಿ ಹೇಳಿದರು. ಇಲ್ಲಿ ಎಷ್ಟು ದೂರ ಎಂಬುದಷ್ಟೆ ಮುಖ್ಯವಲ್ಲ, ಎಷ್ಟು ಜನ ಕೂರುತ್ತೇವೆ ಎಂಬುದರ ಮೇಲೆ ರಿûಾ ಬಾಡಿಗೆ ನಿರ್ಧಾರವಾಗುತ್ತದೆ. ಕಾರಣ, ಇವು ಮೋಟಾರು ಅಳವಡಿಸಿದ ನಮ್ಮ ಆಟೋರಿûಾಗಳಲ್ಲ, ಇವರು ತಮ್ಮ ಬೆವರಿನ ಪರಿಶ್ರಮದಲ್ಲಿ ಸೈಕಲ್‌ ತುಳಿದು, ಏರು ಸೇತುವೆಯಲ್ಲಿ ಎಳೆದು ಕರೆದೊಯ್ಯಬೇಕು ಸ್ನಾಯುಬಲದಲ್ಲಿ. ಇಲ್ಲಿ ಗಮನಿಸಿದೆ, ಈ ಊರ ತುಂಬೆಲ್ಲ ಸೈಕಲ್‌ಗ‌ಳು, ಸೈಕಲ್‌ ರಿûಾಗಳು. ಎಳೆಯರು, ಹಿರಿಯರು ಮಾತ್ರವಲ್ಲ, ಸಡಗರದಿಂದ ಅಲಂಕರಿಸಿಕೊಂಡ ಗೃಹಿಣಿಯರು, ಉದ್ಯೋಗಸ್ಥ ಮಹಿಳೆಯರು ಕೂಡಾ ಚಂದದ ಸೀರೆ ಉಟ್ಟು ಕಸೂತಿಯ ಶಾಲು ಹೊದ್ದು ಶಿಸ್ತಿನಿಂದ ಸೈಕಲ್‌ ಹೊಡೆಯುವರು. ಕಾರು, ಆಟೋರಿûಾಗಳ ಸಂಖ್ಯೆ ಕಡಮೆ. ತಮ್ಮ ಪರಿಶ್ರಮದ ಬೆವರಿನಲ್ಲಿ ದೈಹಿಕ ಶ್ರಮದಲ್ಲಿ ದುಡಿವ ಇವರೆಲ್ಲರೂ, ಅತ್ಯಲ್ಪ$ಇಂಧನವನ್ನು, ನಮ್ಮ ದೇಶದ ಅತಿ ಕಡಮೆ ಸಂಪನ್ಮೂಲಗಳನ್ನು ಬಳಸುತ್ತಿದ್ದಾರೆ.

        "ಒಬ್ಬ ಅಮೆರಿಕನ್‌ ಮಗು ಗಬಳಿಸುವ ಸಂಪನ್ಮೂಲಗಳಲ್ಲಿ ನೂರು ಭಾರತೀಯ ಮಕ್ಕಳು, ಐನೂರು ಇಥಿಯೋಪಿಯಾದ ಮಕ್ಕಳು ಬದುಕುತ್ತಾರೆ. ಜಗತ್ತಿನ ಸಂಪನ್ಮೂಲಗಳೆಲ್ಲವೂ ತನ್ನ ಆಸ್ತಿ ಎಂದು ಭಾವಿಸಿರುವ ದೇಶ ಅಮೆರಿಕ' ಎಂದು ಕೇಳಿದ್ದೆ. ಇಂದು ನಾವು ಮೆಟ್ರೋ ಪಟ್ಟಣಗಳ ಜನ, ಅಮೆರಿಕಗೆ ಹೋಗದೆಯೇ, ನಮ್ಮೂರಿನಲ್ಲಿ ಅಮೆರಿಕವನ್ನು ಸೃಷ್ಟಿಸಿದ್ದೇವೆ. ದೇಶದ ನೆಲ, ಜಲ, ಇಂಧನ, ಖನಿಜ, ಸಂಪನ್ಮೂಲಗಳನ್ನು ಕೊಳ್ಳುವ ತಾಕತ್ತಿರುವ ನಾವು, ಮನ ಬಂದಂತೆ ಅನಗತ್ಯ ಅತಿಬಳಕೆ ಮತ್ತು ಅಪವ್ಯಯ ಮಾಡುತ್ತಿದ್ದೇವೆ. 

        ಅಮೆರಿಕ ಅಗಾಧ ಸಂಪನ್ಮೂಲಗಳನ್ನು ಗಬಳಿಸುತ್ತಾ, ಪರಿಸರಕ್ಕೆ ಇಂಗಾಲದ ಡೈಆಕ್ಸೆ„ಡ್‌ ಉಗಿಯುತ್ತಾ, ಬಡದೇಶಗಳಿಗೆ "ನಿಮ್ಮ ಎಮಿಷನ್‌ ಕಡಿಮೆ ಮಾಡಿರಿ' ಎಂದು ಉಪದೇಶ ನೀಡುತ್ತದೆ. ಆದರೆ ಅಮೆರಿಕ ಎಂಬುದು ಒಂದು ದೇಶವಲ್ಲ, ನಾವೂ ಕೂಡಾ ಪಟ್ಟಣದಲ್ಲಿ ಎಗ್ಗಿಲ್ಲದೆ ವಿದ್ಯುತ್ಛಕ್ತಿ ಬಳಸುತ್ತೇವೆ, ಕಾರಿನಲ್ಲಿ, ಕಛೇರಿ, ಕಾರ್ಖಾನೆಯಲ್ಲಿ ಹವಾನಿಯಂತ್ರಣ,  ಕೆಲವರು ಮನೆಯಲ್ಲೂ ಕೂಡಾ. ನೆನ್ನೆ ಮೊನ್ನೆಯವರೆಗೆ ಭಾರತೀಯ ಮಾದರಿಯ ನಮ್ಮ ಮನೆ, ಕಛೇರಿಗಳಲ್ಲಿ ಕಿಟಕಿ ಬಾಗಿಲು ತೆರೆದಿತ್ತು. ಭಾರತೀಯ ವಿಧಾನದ ವಾಸ್ತುಶಿಲ್ಪವಿತ್ತು. ಉರಿಬೇಸಿಗೆಯಲ್ಲಿ ಜಯಪುರದ ಹವಾಮಹಲ್‌ನಲ್ಲಿ ನಿಂತಿದ್ದೆ, ಎಷ್ಟು ತಂಪಾಗಿತ್ತು ಈ ಗುಲಾಬಿನಗರಿಯ ಈ ಮಹಲು! ಇಂದು ಎಲ್ಲೆಲ್ಲೂ ಸ್ಟೀಲ್‌ ಮತ್ತು ಗಾಜಿನ ಕಟ್ಟಡಗಳು. ಕಿಟಕಿ ಬಾಗಿಲನ್ನು ಮುಚ್ಚಿ, ಸೂರ್ಯನ ಬೆಳಕು ಶಾಖವನ್ನು ಹೊರಗಿಟ್ಟು, ಹವಾನಿಯಂತ್ರಿತ ಗೊಳಿಸಿ, ಹಗಲು ಹೊತ್ತೂ ದೀಪ ಉರಿಸಿ, ವಿದ್ಯುತ್ಛಕ್ತಿಯನ್ನು ಅಗಾಧವಾಗಿ ಗಬಳಿಸುತ್ತೇವೆ. ಮಾಲ್‌ಗ‌ಳು ಮುಚ್ಚಿದರೂ ದೀಪಗಳು ಉರಿಯುತ್ತಿರುತ್ತವೆ. ಅಮೆರಿಕ ಎಂಬುದು ಇಂದು ಅಟ್ಲಾಂಟಿಕ್‌ ಸಮುದ್ರದಾಚೆಯ ಖಂಡದಲ್ಲಿರುವ ಭೂಗೋಳಿಕ ಸತ್ಯವಲ್ಲ. ಅಮೆರಿಕ ಎಂಬುದು ಒಂದು ಮನಃಸ್ಥಿತಿ. ಅಲ್ಲಿದ್ದ ಅಮೆರಿಕ ಇಲ್ಲಿ ಬಂದಿದೆ ಈಗ, ನಮ್ಮ ಪಟ್ಟಣದ ಝಗಮಗಿಸುವ ಹಾದಿಬೀದಿಗಳಲ್ಲಿ ಅಮೆರಿಕ ಇದೆ. ನಮ್ಮ ಮನೆಯಲ್ಲಿ, ಮನದಲ್ಲಿ ಅಮೆರಿಕ ನೆಲೆಸಿದೆ. ಕೊಳ್ಳುಬಾಕತನದ ಪರಮಾವಧಿಯನ್ನು ನಮ್ಮ ಮನಸ್ಸು ಮಿದುಳಿನಿಂದ ಹೊರಗಟ್ಟದೆ ನಾವು ಭಾರತೀಯರಾಗಲಾರೆವು.   

        ಇಲ್ಲಿ ಈ ಮಹಿಳೆ, ಇಡೀ ಕುಟುಂಬಕ್ಕೆ ಆಹಾರ ಬೇಯಿಸಲು ಬಳಸುತ್ತಿ ರುವುದು ನಾಲೆಗೆ ಬಿದ್ದ ಬಳಸಿ ಬಿಸಾಕಿದ ಒಂದು ಬಾಣಲೆಯಷ್ಟು ಇದ್ದಿಲಿನ ಚೂರುಗಳು. ಒಂದು ಕ್ಷಣ ಯೋಚಿಸಿ, ನಾವೆಷ್ಟು ಇದ್ದಿಲನ್ನು ಬಳಸುತ್ತಿದ್ದೇವೆಂದು ಟನ್‌ಗಟ್ಟಲೆ ಇದ್ದಿಲು! ಅಚ್ಚರಿಯಾಗುತ್ತಿದೆಯೆ, ನಾಗೇಶ ಹೆಗಡೆಯವರ ಪುಸ್ತಕದಿಂದ ಕೆಳಗಿನ ಮಾತುಗಳನ್ನು ಉಲ್ಲೇಖೀಸುತ್ತೇನೆ:

        "ಜನರಿಗೆ ಎಲ್ಲಾ ಬಗೆಯ ಸುಖ ಸೌಕರ್ಯ ಒದಗಿಸಲಿಕ್ಕೆ ಅಪಾರವಾದ ಶಕ್ತಿಮೂಲಗಳು ಬೇಕಾಗುತ್ತವೆ. ನಾವು ಬಳಸುವ ಶಕ್ತಿಮೂಲಗಳಲ್ಲಿ ಅತ್ಯಂತ ಮುಖ್ಯವಾದುದು ಹಾಗೂ ಅತ್ಯಂತ ಪರಿಶುದ್ಧವಾದುದು ವಿದ್ಯುತ್‌ ಶಕ್ತಿ. ಈ ವಿದ್ಯುತ್ತಿನ ದೌರ್ಭಾಗ್ಯ ಏನೆಂದರೆ  ಇದರ ಉತ್ಪಾದನೆಗೆ ನಾವು ಈಗಲೂ "ಕ್ಷಯಿಸುವ' ಸಂಪತ್ತನ್ನೇ ಬಳಸುತ್ತೇವೆ. ಅಂದರೆ ಅರಣ್ಯವನ್ನು ಮುಳುಗಿಸಿ, ಜಲಾಶಯ ನಿರ್ಮಿಸಿ, ಅಥವಾ ಕಲ್ಲಿದ್ದಲು-ಪೆಟ್ರೋಲನ್ನು ಉರಿಸಿ, ಇಲ್ಲವೆ ಪರಮಾಣು ಇಂಧನಗಳನ್ನು ಉರಿಸಿ ವಿದ್ಯುತ್‌ ಉತ್ಪಾದನೆ ಮಾಡುತ್ತೇವೆ. ಇದು ತುಂಬಾ ದುಬಾರಿಯ ಶಕ್ತಿ. ನಮಗೆ ವಿದ್ಯುತ್ತು ಅಗ್ಗದ ದರದಲ್ಲಿ ಸಿಗುತ್ತಿದ್ದರೂ, ರಾಷ್ಟ್ರಕ್ಕೆ ತುಂಬಾ ದುಬಾರಿಯ ಸಂಗತಿ. ಎಷ್ಟೆಲ್ಲ ಸಂಪತ್ತನ್ನು ನುಂಗುತ್ತ, ಭಾರೀ ಪ್ರಮಾಣದಲ್ಲಿ ಪರಿಸರ ಮಾಲಿನ್ಯ ಉಂಟು ಮಾಡುತ್ತ ಈ ಪರಿಶುದ್ಧ ಶಕ್ತಿ ನಮ್ಮ ನಿಮ್ಮ ಮನೆಗೆ ಬರುತ್ತದೆ'.

        ಇದು ಎಷ್ಟು ದುಬಾರಿ ಎನ್ನುವುದಕ್ಕೆ ನಾಗೇಶ ಹೆಗಡೆ ಅವರು ಒಂದು ಉದಾಹರಣೆ ಕೊಡುತ್ತಾರೆ.
        ""ರಾಯಚೂರಿನಲ್ಲಿ ಕಲ್ಲಿದ್ದಲನ್ನು ಉರಿಸಿ, ನೀರು ಕುದಿಸಿ, ವಿದ್ಯುತ್ತು ಉತ್ಪಾದಿಸುವ ಸ್ಥಾವರ ಇದೆ ತಾನೆ? ಇದರ ದಕ್ಷತೆ ಕೇವಲ ಶೇಕಡ 33ರಷ್ಟು ಮಾತ್ರ! ಅಂದರೆ, ನೂರು ಟನ್‌ ಕಲ್ಲಿದ್ದಲನ್ನು ಉರಿಸಿದರೆ, ಅದರಲ್ಲಿ ಕೇವಲ 33 ಟನ್‌ಗಳಷ್ಟು ಶಕ್ತಿ ಮಾತ್ರ ವಿದ್ಯುತ್ತಾಗಿ ಪರಿವರ್ತನೆ ಆಗುತ್ತದೆ. ಆ 33 ಟನ್‌ ಕಲ್ಲಿದ್ದಲಿನ ಶಾಖವಾದರೂ ವಿದ್ಯುತ್‌ ರೂಪದಲ್ಲಿ ಪೂರ್ತಿಯಾಗಿ ಬಳಕೆಗೆ ಸಿಗುತ್ತಿದೆಯೆ? ಅದೂ ಇಲ್ಲ...'

        ""...ಹಾಗೆಂದು ಈ ಸೋರಿಕೆಗೆ ಕೆಪಿಸಿ ಅಥವಾ ಕೆಪಿಟಿಸಿಯನ್ನು ದೂರಿದರೆ ಅಷ್ಟೇನೂ ಪ್ರಯೋಜನವಿಲ್ಲ. ನಮ್ಮ ಇಡೀ ವ್ಯವಸ್ಥೆಯೇ ಹಾಗಿದೆ. ದೂರದ ಆಂಧ್ರ ಪ್ರದೇಶದ ಸಿಂಗರೇಣಿಯಲ್ಲಿ ಕಲ್ಲಿದ್ದಲನ್ನು ಅಗೆದು ತೆಗೆಯುತ್ತಾರೆ. ಅಗೆಯಲಿಕ್ಕೆ, ಒಡೆಯಲಿಕ್ಕೆ ಎತ್ತಲಿಕ್ಕೆ ಶೇಕಡಾ 10ರಷ್ಟು ಶಕ್ತಿ ಖರ್ಚಾಗುತ್ತದೆ. ಅಷ್ಟು ದೂರದಿಂದ ರೈಲಿನಲ್ಲಿ ಕಲ್ಲಿದ್ದಲನ್ನು ಸಾಗಿಸಿ ತರಲಿಕ್ಕೆ ಮತ್ತೆ ಶೇಕಡಾ 10-15ರಷ್ಟು ಶಕ್ತಿ ಖರ್ಚಾಗಿರುತ್ತದೆ.
        ಈಗಾಗಲೇ ಹೇಳಿದಂತೆ, ವಿದ್ಯುತ್‌ ಸ್ಥಾವರದಲ್ಲಿ ಉರಿಯುವಾಗ ಶೇಕಡಾ 66ರಷ್ಟು ವ್ಯರ್ಥವಾಗುತ್ತದೆ. ಆ ವಿದ್ಯುತ್ತನ್ನು ತಂತಿಯ ಮೂಲಕ ರಾಯಚೂರಿನಿಂದ ಸಾಗಿಸಿ ತರುವಾಗ ಶೇಕಡಾ 20ರಷ್ಟು ಸೋರಿ ಹೋಗುತ್ತದೆ. ಅಂತಿಮವಾಗಿ ನಮಗೆ ತಲುಪುವುದು ಶೇಕಡಾ 10-15ರಷ್ಟು ಮಾತ್ರ...'

        ""...ಇಂಥ ಅತ್ಯಮೂಲ್ಯವಾದ ಸಂಪತ್ತನ್ನು ನಾವು ಅಗ್ಗಕ್ಕೆ ಸಿಕ್ಕಿತೆಂದು ಬೇಕಾಬಿಟ್ಟಿ ಬಳಸುತ್ತೇವೆ. ವ್ಯರ್ಥ ಬಳಕೆ ಮಾಡುತ್ತೇವೆ, ದುರ್ಬಳಕೆ ಮಾಡುತ್ತೇವೆ, ಅದಕ್ಷ ರೀತಿಯಲ್ಲಿ ಬಳಸುತ್ತೇವೆ...'
        ನೀವು ಓದಲೇಬೇಕಾದ ನಾಗೇಶ ಹೆಗಡೆ ಅವರ ನಾಲ್ಕು ಪುಸ್ತಕಗಳಿವೆ - ಇರುವುದೊಂದೇ ಭೂಮಿ, ಅಭಿವೃದ್ಧಿಯ ಅಂಧಯುಗ, ಋತುಸಂಹಾರ, ಪ್ರತಿದಿನ ಪರಿಸರ ದಿನ.

        ಹೌದಲ್ಲವೆ, ಅಗ್ಗವಾಗಿ ಸಿಗುವುದನ್ನೆಲ್ಲ ಅಪವ್ಯಯ ಮಾಡುತ್ತೇವೆ. ನೀರು, ವಿದ್ಯುತ್‌, ಪೆಟ್ರೋಲ್‌ - ಹಣಕ್ಕೆ ಸಿಗುತ್ತದೆ. ಕೊಳ್ಳುವ ತಾಕತ್ತು ಇರುವ ಮಧ್ಯಮವರ್ಗ ನಾವು. ಆರ್ಥಿಕ ಉದಾರೀಕರಣದಲ್ಲಿ ಉದ್ಧಾರವಾದವರು. ದೇಶದ 30 ಕೋಟಿಗೂ ಹೆಚ್ಚು ಜನಕ್ಕೆ ರಾತ್ರಿ ಕಗ್ಗತ್ತಲೆಯಲ್ಲಿ ಮನೆ ಬೆಳಗಲೂ ವಿದ್ಯುತ್‌ ಇಲ್ಲ. ಮಕ್ಕಳು ಬುಡ್ಡಿದೀಪದಲ್ಲಿ ಓದಬೇಕು. 80 ಕೋಟಿಗೂ ಮೀರಿದ ನಮ್ಮ ದೇಶದ ಜನ ಅಡಿಗೆ ಮಾಡಲು ಸೌದೆ, ಬೆರಣಿ, ಅಲೆದಲೆದು ಆರಿಸಿ ತಂದ ಪುರುಳೆ ಬಳಸುತ್ತಾರೆ. ನಾವಿಲ್ಲಿ ಅನಗತ್ಯವಾಗಿ ಹವಾನಿಯಂತ್ರಿತಗೊಳಿಸಿದ್ದೇವೆ ಕಚೇರಿ, ಕಾರ್ಖಾನೆ, ಮನೆ, ಮಾಲ್‌ಗ‌ಳನ್ನು! ಪರಿಸೆಗಳು, ಜಾತ್ರೆಗಳು, ಬಸಾರುಗಳು ಇರುವ ಜಾಗವನ್ನೂ ಆಕ್ರಮಿಸಿ ಮಾಲ್‌ಗ‌ಳನ್ನು ನಿರ್ಮಿಸಲು ಹೊರಟಿದ್ದೇವೆ. ನಾವೂ ಬೆವರಬಲ್ಲೆವೆ ಒಂದಿಷ್ಟು? ಕಚೆೇರಿಯ ಕೋಣೆಗೆ ಹವಾನಿಯಂತ್ರಣ ಹಾಕಲು ಬಂದಾಗ, "ನನ್ನ ಕೋಣೆಗೆ ಬೇಡವೆಂದ' ನಿರ್ಧಾರ ನೆನಪಿಸಿಕೊಂಡು ಖುಷಿ ಪಡುತ್ತೇನೆ.  ಆದರೆ ಮರುಕ್ಷಣ ಆತ್ಮಸಾಕ್ಷಿ ಚುಚ್ಚುತ್ತದೆ. ಈ ಅಪವ್ಯಯದಲ್ಲಿ ನನ್ನ ಪಾಲು ಅಪಾರವಿದೆ ಎಂಬ ಅಪರಾಧಿಪ್ರಜ್ಞೆ ಸೂಜಿಯ ಮೊನೆಯಾಗುತ್ತದೆ.

        ಊರಿಗೆ ಹೋಗಿ ತೊಟ್ಟಿಕ್ಕುವ ನಲ್ಲಿ ರಿಪೇರಿ ಮಾಡಿಸಬೇಕು, ವ್ಯರ್ಥ ದೀಪ ಉರಿಸುವುದನ್ನು ನಿಲ್ಲಿಸಬೇಕು, ಸ್ನಾನಕ್ಕೆ ಬಿಸಿನೀರು ಕಾಯಿಸಿ, ಕಂಪ್ಯೂಟರ್‌ ಮುಂದೆ ಕುಳಿತು, ಅದು ತಣ್ಣಗಾದ ಮೇಲೆ ಜ್ಞಾನೋದಯವಾಗಿ ಮತ್ತೆ ಗೀಸರ್‌ ಹಚ್ಚುವುದನ್ನು ತಪ್ಪಿಸಬೇಕು. ಹೊಸವರ್ಷ ಇನ್ನೂ ಮಾಸಿಲ್ಲ, ಹೊಸ ನಿರ್ಣಯಗಳನ್ನು ತೆಗೆದುಕೊಳ್ಳ‌ಬಹುದಲ್ಲವೆ?

        ಅಮ್ಮ ನೆನಪಾದಳು ಖರಗ್‌ಪುರದ ಈ ಗಲ್ಲಿಗಳಲ್ಲಿ. "ಪರಿಸರವಾದ', "ಐ.ಎಸ್‌.ಒ. 14000' ಅಮ್ಮನಿಗೆ ಅರಿವಿರಲಿಲ್ಲ. ಬಯಲು ಸೀಮೆಯ ಹಳ್ಳಿಗಾಡಿನ ಅಪ್ಪಟ ಅನಕ್ಷರಸ್ಥ ಅಮ್ಮ. ಆದರೆ, ಅಮ್ಮನ ಬದುಕೇ ಪರಿಸರವಾದದ ಜೀವಂತ ಉದಾಹರಣೆ. ಮನೆಯಲ್ಲಿ ಯಾವುದೂ ತ್ಯಾಜ್ಯವಲ್ಲ. ಎಲ್ಲವೂ ಮರುಹುಟ್ಟು ಪಡೆಯುವುದು. ಯಾವುದೂ ಬಳಸಿ ಬಿಸಾಕಿದ್ದಲ್ಲ. ಹೊರಗೆ ಹೊರಟಾಗಲೆಲ್ಲ ಬಟ್ಟೆಯ ಕೈಚೀಲ ಕೈಯಲ್ಲಿ. ಹಣ್ಣು ತರಕಾರಿಯ ಸಿಪ್ಪೆ , ಅಡುಗೆ ಮನೆಯ ಕಸ-ಮುಸುರೆ ಎಲ್ಲವೂ ಹಿತ್ತಲಲ್ಲಿ ತೋಡಿದ ಗುಂಡಿಯ ಒಳ ಸೇರಿ ಮಣ್ಣು ಮುಚ್ಚಿ ಸಾವಯವ ಗೊಬ್ಬರವಾಗುವುದು. ತೆಂಗಿನ ಮರದ ಗರಿ, ತೆಂಗಿನಕಾಯಿಯ ನಾರು, ಮಟ್ಟೆ, ಕರಟ, ಕಡ್ಡಿ ಕಸ, ಹಾಳೆ ಕಾಗದದ ಚೂರು ಎಲ್ಲವೂ ಬಚ್ಚಲು ಮನೆಯಲ್ಲಿ ಬೆಚ್ಚಗೆ ನೀರು ಕಾಯಿಸುತ್ತವೆ. ಅನವಶ್ಯಕವಾಗಿ ಕೊಂಡವ‌ಳಲ್ಲ, ಏನನ್ನೂ ಹೊರಗೆಸೆದವಳಲ್ಲ. ನನಗಿಂತ ಒಂಬತ್ತು ವರ್ಷ ಹಿರಿಯವಳಾದ ನನ್ನಕ್ಕ ಮಲಗಿದ್ದ ತೊಟ್ಟಿಲಲ್ಲೆ ನಾವೆಲ್ಲ ತೂಗಿದ್ದು, ನನ್ನ ಮಗಳೂ ಕೂಡ! ಅದೇ ತೊಟ್ಟಿಲು ಸುತ್ತ ಮುತ್ತಲ ಅದೆಷ್ಟೋ ಮನೆಗಳಲ್ಲಿ ಮಗುವನ್ನು ತೂಗಿ ಹಿಂತಿರುಗಿ ಬಂದು ಇನ್ನೂ ಅಟ್ಟದ ಮೇಲೆ ಗಟ್ಟಿಯಾಗಿ ಕುಳಿತಿದೆ.

        ಅಮ್ಮನ ಕೊನೆಯ ವರ್ಷಗಳಲ್ಲಿ ಆಥೆÅ„ಟಿಸ್‌ ಬಿಗಿ ಹಿಡಿದು ಬಿಲ್ಲಿನಂತೆ ಬಾಗಿದ ಮೊಣಕಾಲುಗಳಲ್ಲಿ ಅಡ್ಡಾಡುತ್ತ ಅಮ್ಮ, ಮನೆಯ ಸುತ್ತಲ ನಾಲ್ಕಡಿಯ ಜಾಗದಲ್ಲಿ ಕರಿಬೇವು, ನಿಂಬೆ, ಪರಂಗಿ, ಸೀಬೆ, ಸೀತಾಫ‌ಲ, ತೊಗರಿ, ದಾಸವಾಳ, ನಂದಿಬಟ್ಟಲು ಏನೆಲ್ಲ ಬೆಳೆದಿದ್ದಳು. ದಟ್ಟವಾಗಿ ಹಬ್ಬಿದ ವೀಳೆದೆಳೆ ಬಳ್ಳಿ, ನಾನು "ಬಲು ಒಳ್ಳೆಯದು' ಎಂದು ಬೆಂಗಳೂರಿಂದ ಕೊಂಡೊಯ್ದ ಅಮೃತಬಳ್ಳಿ, ಅಮ್ಮನ ಮನೆಯ ಮಣ್ಣಲ್ಲಿ ಭವ್ಯವಾಗಿ ಬೆಳೆದು ಮಹಡಿ ಮೆಟ್ಟಿಲು ಏರಿ ತಾರಸಿ ಮುಟ್ಟಿವೆ. ಅಮ್ಮನ ಹಾದಿಯಲ್ಲಿ ಹೆಜ್ಜೆ ಹಾಕಿದ ಅಕ್ಕ, ಮುಂಬಾಗಿಲಲ್ಲೆ, ಅವರೆ ಕಾಯಿ, ಹಾಗಲ ಕಾಯಿ ಬಳ್ಳಿಗಳನ್ನು ಹರಡಿ ನಿಲ್ಲಿಸಿದ್ದಾಳೆ. ತಮ್ಮ ಬದುಕಿನ ಬಹುಪಾಲನ್ನು ಪಟ್ಟಣದಲ್ಲಿ ಕಳೆದರೂ, ಅಮ್ಮನ ಒಳಗೆ ಬಯಲು ಸೀಮೆಯ ಬೆವರಿಳಿಸಿ ದುಡಿವ ರೈತ ಹೆಣ್ಣುಮಗಳಿದ್ದಳು. ಬಿತ್ತಿ ಬೆಳೆಯುವ ಹಸಿರು ಹರಡುವ ಹಸಿ ಮನಸ್ಸಿನ ಹೆಣ್ಣು ಮಗಳು.

        *

        ಆ ರಿûಾ ಎಳೆವ ಮುದುಕಪ್ಪಹೇಳಿದ "ಐಐಟಿ ಇರುವ ಜಾಗದಲ್ಲಿ ಜೈಲು ಇದ್ದದ್ದು, ಜಂಗಲ್‌ ಆಗಿದ್ದು' ನಿಜವಿತ್ತು. ಹಿಜಿÉ ಎಂಬಲ್ಲಿ ಇರುವ ಸಣ್ಣ ರೈಲು ನಿಲ್ದಾಣದ ಬಳಿ ಐಐಟಿ ಇದೆ. ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡ ಹಿಜಿÉ ಇದು. ಇಸವಿ 1931, ಸ್ವಾತಂತ್ರ ಹೋರಾಟಗಾರ ದಿನೇಶ್‌ ಗುಪ್ತಾಅವರಿಗೆ ಗಲ್ಲಿನ ಶಿಕ್ಷೆ ವಿಧಿಸಿದ್ದ ನ್ಯಾಯವಾದಿಯ ಸಾವಿನ ಸುದ್ದಿ ಕೇಳಿ, ಹಿಜಿÉ ಜೈಲಿನಲ್ಲಿದ್ದ ಸ್ವಾತಂತ್ರ ಹೋರಾಟಗಾರರು ಸಂತಸದಿಂದ ಕೂಗೆಬ್ಬಿಸಿದ್ದರು. ಬ್ರಿಟಿಷರು ಅವರೆಲ್ಲರನ್ನು ಅವರ ಬಂಧೀಖಾನೆಯ ಕೋಣೆಯಲ್ಲಿಯೇ ಕೊಂದು ಹಾಕಿದ್ದರು. ಇಂದು ಹಿಜಿÉ ಜೈಲು ಐಐಟಿಯ ಆವರಣದೊಳಗಿದೆ. ಈ ಹಿಜಿÉ ಜೈಲಿನಲ್ಲಿ ಮಹಾತ್ಮಾ ಗಾಂಧಿ ಕೂಡಾ ಕೆಲ ಸಮಯ ಕಳೆದಿದ್ದರು.

        ಮಹಾಭಾರತದಲ್ಲಿ ಬರುವ ಹಿಡಿಂಬನ ನಾಡು ಖರಗ್‌ಪುರ್‌ ಎಂಬ ನಂಬಿಕೆ ಇದೆ. ಖರಗ್‌ಪುರ್‌ ಒಂದು ಕಾಲಕ್ಕೆ ಹಿಜಿÉ ಸಾಮ್ರಾಜ್ಯವಾಗಿತ್ತು. ಕುಶಾಣರು, ಗುಪ್ತರು, ಪಾಲ್‌ ರಾಜವಂಶ ಮತ್ತು ಮುಘಲರು ಆಳಿದ ತಾಣ. ಹದಿನೇಳನೆ ಶತಮಾನದಲ್ಲಿ ಹಿಜಿÉ ರಾಜಧಾನಿಯಾಗಿ ಮೆರೆದು, 18ನೇ ಶತಮಾನದಲ್ಲಿ ಹಿಂದು ದೊರೆಗಳು, ನಂತರ ಮುಘಲ್‌ ಆಳ್ವಿಕೆಯ ಅಡಿ ಸಮೃದ್ಧಿಯ ಶಿಖರವೇರಿತ್ತು. 1898ರಲ್ಲಿ ಬ್ರಿಟಿಷರ ಕಾಲದಲ್ಲಿ ಖರಗ್‌ಪುರ್‌ ರೈಲು ಜಂಕ್ಷನ್‌ ಆಗಿ ಸ್ಥಾಪಿತವಾಯಿತು.

        ಈ ಬೀದಿಗಳಲ್ಲಿ ನಡೆಯುವಾಗ ಯೋಚಿಸಿದೆ, ಬೆಂಗಳೂರು ಎಂಬುದಾದರೂ ಏನು, ನೂರೆಂಟು ಹಳ್ಳಿಗಳನ್ನು ಆಕ್ರಮಿಸಿ ಬೆಳೆ‌ದ ಪಟ್ಟಣ. ಈ ಪಟ್ಟಣದ ಒಡಲಾಳದಲ್ಲಿಯೂ ನೀವು ಬಡತನವನ್ನು ಕಾಣುತ್ತೀರ! ಝಗಮಗಿಸುವ ಮಾಲ್‌ಗ‌ಳ ಬಗಲಲ್ಲಿಯೇ ಕಡು ಬಡತನದ ಗಲ್ಲಿಗಳನ್ನು ಕಾಣುತ್ತೀರ! ಹಾಗೆಯೇ ಈ ವೇಗದ ಬದುಕಿನ, ಕೊಳ್ಳುಬಾಕತನದ  ನಡುವೆಯೂ ಮುರುಳಿ ನಾಗ್‌ನಂತೆ ನಿಷ್ಠೆ, ಪ್ರಾಮಾಣಿಕತೆ, ಸೌಜನ್ಯವನ್ನು ಉಳಿಸಿಕೊಂಡವರನ್ನು ಕಾಣುತ್ತೀರ ! 

        ದಿನಾಂಕ 20 ಜನವರಿ 2012, "ನ್ಯಾಷನಲ್‌ ಗೇಮ್ಸ್‌ ವಿಲೇಜ್‌'ನಲ್ಲಿರುವ ಬೊಳುವಾರರ ಮನೆಗೆ ಹೋಗಿದ್ದೆ. ಅವರು ಬರೆಯುತ್ತಿರುವ ಅದ್ಭುತ ಕಾದಂಬರಿ ಸ್ವಾತಂತ್ರದ ಓಟಕ್ಕೆ ಬರ್ಲಿನ್‌ ಗೋಡೆಯ ವಿವರಗಳನ್ನು ಕೇಳಿದ್ದರು. "ಹೌದು ಸರ್‌, ಒಂದೂವರೆ ದಶಕಗಳ ಹಿಂದೆ ನಾನಲ್ಲಿ ಹೋಗಿದ್ದೆ' ಎಂದ ನಾನು, ನನ್ನ ಪ್ರವಾಸ ಕಥನ ಒಂದು ಕನಸಿನ ಪಯಣದ ಕೆಲವು ಪುಟಗಳನ್ನು ಜೆರಾಕ್ಸ್‌ ಮಾಡಿಸಿ ಕೊಟ್ಟಿದ್ದೆ.

        ಅವರ ಮನೆಯಿಂದ ಹೊರಟಾಗ ರಾತ್ರಿ ತಡವಾಗಿತ್ತು. ಯಾವ ಆಟೋದವರೂ ಕರೆದೆಡೆಗೆ ಬರಲೊಲ್ಲರು. ಕಡೆಗೆ ಈ ಆಟೋ ಬಂದು ನಿಂತಿತು, "ವಿಜಯನಗರ' ಎಂದೆ. "ಬನ್ನಿ ಹತ್ತಿಕೊಳ್ಳಿ' ಎಂದ. ಹೆಚ್ಚು ಕೊಡಬೇಕು ಎಂದು ರಗಳೆ ತೆಗೆಯಲಿಲ್ಲ. ಕುಳಿತು ರಿಚ¾ಂಡ್‌ ಸರ್ಕಲ್‌ಗೆ ಬಂದಿದ್ದೇನೆ, ಮೀಟರ್‌ ಇನ್ನೂ 35 ರೂಪಾಯಿ ತೋರಿಸುತ್ತಿತ್ತು. "ಅರೆ ಈತನ ಮೀಟರ್‌ ಸರಿಯಾಗಿ ಓಡುತ್ತಿಲ್ಲವೆ' ಅನುಮಾನಿಸುವಷ್ಟರಲ್ಲಿ, ಆತ ಮಾತು ಆರಂಭಿಸಿದ್ದ. ""ಮೇಡಂ, ನನ್ನ ಮನೆ ಹೆಬ್ಟಾಳ ಹತ್ತಿರ, ರಾತ್ರಿಯಾಗಿದೆ. ಆದರೆ ನಾನು ಕರೆದ ಕಡೆಗೆ ಹೋಗುತ್ತೇನೆ, ಬರೋಲ್ಲ ಅನ್ನೋಲ್ಲ. ಪ್ರಾಮಾಣಿಕವಾಗಿ ದುಡಿಯುತ್ತೇನೆ'. ಆತನೊಡನೆ ಮಾತನಾಡುತ್ತ ಹೊರಟಂತೆ, "ಆತನ ಮನೆ ಮೊದಲು ಗಾಯತ್ರಿ ನಗರದ ವಠಾರದಲ್ಲಿ ಇತ್ತು. ಒಂಬತ್ತು ಮನೆಗೆ ಎರಡು ಶೌಚಾಲಯ. ಸಣ್ಣ ಕೋಣೆಯ ಮನೆಯಲ್ಲಿ ಮಕ್ಕಳಿಗೆ ಓದಲು ಬಲು ಕಷ್ಟವಾಗುತ್ತಿತ್ತು' ಎಂಬೆಲ್ಲ ವಿವರಗಳು ತಿಳಿದವು. ""ದಿನಕ್ಕೆ 500 ರೂಪಾಯಿ ಗಳಿಸುತ್ತೇನೆ. ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ಕೊಡೋದೊಂದೇ ನನ್ನ ಉದ್ದೇಶ. ನನ್ನ ಮಗಳು ಹೇಗೆ ಓದಿದ್ದಾಳೆ ಗೊತ್ತಾ ಮೇಡಂ, ಕ್ಲಾಸಿಗೇ ಮೊದಲು ಬಂದಳು. ಪಿ.ಯು.ಸಿ. ಗೆ ಕರೆದು ಸೀಟು ಕೊಟ್ಟಿದ್ದರು. ಈಗ ಇಂಜಿನಿಯರಿಂಗ್‌ ಓದುತ್ತಿದ್ದಾಳೆ. ಅವಳ ಕಾಲೇಜಿಗೆ ಹತ್ತಿರವಾಗಲಿ ಅಂತ ಹೆಬ್ಟಾಳಕ್ಕೆ ಮನೆ ಬದಲಿಸಿದೆ. ಎಲೆಕ್ಟ್ರಾನಿಕ್ಸ್‌ ಓದಿದವರಿಗೆ ಕೆಲಸ ಬೇಗ ಸಿಗುತ್ತಾ ಮೇಡಂ...?' ನಮ್ಮ ಮಾತು ಮುಂದುವರೆದಿತ್ತು. ಮತ್ತೆ ಹೇಳಿದ ""ಮಗಳು ಹೇಳುತ್ತಾಳೆ- ಈ ಆಟೋ ಓಡಿಸೋ ಕೆಲಸ ನಿಲ್ಲಿಸಿಬಿಡು. ನನ್ನ  ಗೆಳತಿಯರು, ಆಟೋದವರು ಒರಟಾಗಿ ವರ್ತಿಸುತ್ತಾರೆ.
        ಮೀಟರ್‌ ಹೆಚ್ಚು  ಮಾಡಿ ಮೋಸ ಮಾಡುತ್ತಾರೆ. ಕರೆದಲ್ಲಿಗೆ ಬರೋಲ್ಲ, ಮುಖ ತಿರುಗಿಸಿ ಹೋಗುತ್ತಾರೆ ಎಂದಾಗ ನನಗೆ ಅಪಮಾನ ಆಗುತ್ತೆ- ಎನ್ನುತ್ತಾಳೆ'

        ಮನೆಯ ಎದುರು ಆಟೋ ನಿಂತಿತು. ಮೀಟರ್‌ ಗಮನಿಸಿದೆ ನೂರಾಎರಡು ರೂಪಾಯಿ ಆಗಿತ್ತು. ಎರಡು ರೂಪಾಯಿ ಚಿಲ್ಲರೆ ಇಲ್ಲದ ನಾನು ನೂರಾ ಹತ್ತು ರೂಪಾಯಿ ಕೊಟ್ಟೆ. ಆತ ಹತ್ತು ರೂಪಾಯಿ ಹಿಂತಿರುಗಿಸಿ, ನೂರು ರೂಪಾಯಿ ಇಟ್ಟುಕೊಂಡ. ನಾನು ಹೇಳಿದೆ, "ನಿಮ್ಮ ಮಗಳಿಗೆ ಹೇಳಿ, ಅಪ್ಪಆಟೋರಿûಾ ಓಡಿಸುವುದು ಅವಮಾನದ ವಿಷಯವಲ್ಲ. ಪ್ರಾಮಾಣಿಕವಾಗಿ ಶ್ರಮದಿಂದ ಸೌಜನ್ಯದಿಂದ ಓಡಿಸುವ ನಿಮ್ಮಂತಹ ಅಪ್ಪನ ಬಗ್ಗೆ ಆಕೆಗೆ ಅಭಿಮಾನ ಇರಲಿ'.

        ಬೆಂಗಳೂರಿನ ನಡುವೆ ಕ್ಷಣವನ್ನು ಹಣವಾಗಿಸುವ ಆತುರದ ಅವಸರದ ಜನರ ನಡುವೆಯೂ, ತಮ್ಮ ಪ್ರಾಮಾಣಿಕತೆಯನ್ನು ಉಳಿಸಿಕೊಂಡ ಈತನ ಹೆಸರು ನಾರಾಯಣಪ್ಪ. ಆತನ ಬಲುಬುದ್ಧಿವಂತ ಮಗಳು ಶ್ವೇತಾ. ತಾನು ಕೆಲಸಕ್ಕೆ ಸೇರಿದ ಮೇಲೆ ದುಡಿದು ಗಳಿಸಿ, "ಅಪ್ಪನಿಗೊಂದು ಅಂಗಡಿ ಹಾಕಿಕೊಡುವ' ಆಕೆಯ ಕನಸು ಸಾಧಿಸಲಿ ಎಂಬ ಹಾರೈಕೆ ನನ್ನದು. ಬೆಂಗಳೂರಿನ ಅಂತರಾಳದಲ್ಲೂ ನಿಮಗೆ ನಾರಾಯಣಪ್ಪನಂತಹ ಅನೇಕರು ಸಿಗುತ್ತಾರೆ.

        ಗಣತಂತ್ರದ ಈ ದಿವಸ ನೆನಪಾಗಿತ್ತು, ಜಾನ್‌ ಎಫ್. ಕೆನಡಿಯವರ ಆ ಮಾತುಗಳು - "ದೇಶ ನಿಮಗೇನು ಮಾಡಿತು ಕೇಳಬೇಡಿ, ದೇಶಕ್ಕಾಗಿ ನೀವೇನು ಮಾಡಿದಿರಿ ಕೇಳಿಕೊಳ್ಳಿ'. ನಮ್ಮ ಕೆಲಸವನ್ನು ಮನಸಿಟ್ಟು, ಶ್ರಮದಿಂದ ಶ್ರದ್ಧೆಯಿಂದ ಪ್ರಾಮಾಣಿಕವಾಗಿ ಮಾಡುವುದು ದೇಶಕ್ಕೆ ನಾವು ಕೊಡಬಲ್ಲ ಶ್ರೇಷ್ಠ ಕೊಡುಗೆ. ದಿಶಾ, ವುಟ್ಟಿ, ಮುರುಳಿನಾಗ್‌, ನಾರಾಯಣಪ್ಪ, ನಮ್ಮಮ್ಮ, ನಿಮ್ಮಮ್ಮ ನಮಗೆ ಈ ಹಾದಿಯಲ್ಲಿ ಮಾರ್ಗದರ್ಶಕರಾಗುತ್ತಾರೆ.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಜೂನ್‌ ತಿಂಗಳು ಹತ್ತಿರವಾದಂತೆ ನಗರಗಳ ಅಪ್ಪ, ಅಮ್ಮಂದಿರಿಗೆ ತಮ್ಮ ಚಿಣ್ಣರನ್ನು ಹತ್ತಿರದ ಯಾವ ಒಳ್ಳೆಯ ಶಾಲೆಗಳಿಗೆ ಸೇರಿಸುವುದು ಎಂಬ ಚಿಂತೆ...
      • ಈ ವಿಭಾಗದಲ್ಲಿಯೂ ಇದೆ
      • Copyright @ 2009-2010 Udayavani.All rights reserved.
      • Designed & Hosted By 4cplus