Thursday, May 17, 2012
Last Updated: 1:25:56 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ವಿದಾಯದ ಕೆಲವು ಕ್ಷಣಗಳು
    • ವಿದಾಯದ ಕೆಲವು ಕ್ಷಣಗಳು

      • ಪಿ. ಬಿ. ಪ್ರಸನ್ನ | Feb 12, 2012

        ಗಂಡನ ಮನೆಗೆ ಹೊರಟು ನಿಂತಾಗ ತಾಯಿ ಕಣ್ಣಲ್ಲೂ ನೀರಿಲ್ಲ. ಮಗಳ ಕಣ್ಣಲ್ಲಂತೂ ದೇವರಾಣೆ ಇಲ್ಲ! ಯಾಕಿರಬಹುದು? ಅಂತ ಕಾರಣ ಹುಡುಕಿದೆ. ಈಗಿನ ತಲೆಮಾರಿನವರು ಆಷಾಢ ಅಂತ ಒಮ್ಮೆ, ನಾಗರಪಂಚಮಿ ಅಂತ ಮತ್ತೂಮ್ಮೆ, ಗೌರಿ ಹಬ್ಬ ಅಂತ ಮಗದೊಮ್ಮೆ ಬಂದರೆ ತವರು ಮನೆಯಿಂದ ಕದಲುವುದೇ ಇಲ್ಲ. ಅಳಿಯಂದಿರೂ ಹಾಗೆಯೇ ಹತ್ತನೆಯ ಗ್ರಹವಾಗಿ ಮಾವನ ಮನೆಯ ಸುತ್ತಲೇ ತಿರುಗುತ್ತಿರುತ್ತಾರೆ.

        ಅಪ್ಪಾ... ಶಾಲೆಯವ್ರು ನಮ್ಗೆ ಸೆಂಡ್‌ ಆಫ್ ಮಾಡ್ತಾರಂತೆ. ಟೂಫಿಫ್ಟಿ ರೂಪೀಸ್‌ ಕೊಡ್ಬೇಕಂತೆ '- ಇದು ಏಳನೆಯ ತರಗತಿ ಮುಗಿಸಲಿದ್ದ ಮಗಳ ಉವಾಚ.

        ""ಅಲ್ವೇ...ನೀವೇ ದುಡ್ಡು ಕೊಟ್ಟು ನಿಮ್ಮ ಸೆಂಡ್‌ ಆಫ್ ಮಾಡಿಸ್ಕೊಳ್ಳೋದು ಯಾವ ಕರ್ಮವೇ? ನಿಮ್ಮ ಸ್ಕೂಲ್‌ನವ್ರಿಗೆ ಬುದ್ಧಿ ಗಿದ್ದಿ ಇಲ್ವಾ?' ನನ್ನ  ತಕರಾರು.

        ""ನೀವು ಯಾವ ಕಾಲದಲ್ಲಿದ್ದೀರಿ? ಈಗ ಎಲ್ಲ ಕಡೇನೂ ಹಾಗೆಯೇ. ಸುಮ್ನೆ ದುಡ್‌ಕೊಟ್‌ ಕಳಿÕ ' ಹೆಂಡತಿ ವಿರೋಧ ಪಕ್ಷದವಳಾಗಿ ಮಗಳ ಬೆಂಬಲಕ್ಕೆ ನಿಂತಳು. ಕೊನೆಗೂ ಸೋತು ಹಣಕೊಟ್ಟು ಕಳುಹಿಸಿದೆ.

        ದಶಕಗಳ ಹಿಂದೆ ನಾವು ಏಳನೆಯ ತರಗತಿಯಲ್ಲಿದ್ದಾಗ ನಮಗೆ ಶಾಲೆಯವರೇ ಮಾಡಿದ ಸೆಂಡ್‌ ಆಫ್ನತ್ತ ಮನಸ್ಸು ಓಡಿತು. ಆಗ ಅದನ್ನು ಸರಸ್ವತೀ ಪೂಜೆ ಎಂಬ ಧಾರ್ಮಿಕ ಹೆಸರಿನಿಂದ ಕರೆಯಲಾಗುತ್ತಿತ್ತು.
        ಶಾಲೆಯ ಅಭಿವೃದ್ಧಿ ಸಮಿತಿ ಸದಸ್ಯರು, ಅಧ್ಯಾಪಕರು ಒಂದಿಷ್ಟು ಹಣ ಹಾಕುತ್ತಿದ್ದರು. ಆರನೆಯ ತರಗತಿಯವರು ನಮ್ಮನ್ನು ಬೀಳ್ಕೊಡುವವರು. ನಾವು ನಿರ್ಗಮನಕ್ಕೆ ಸನ್ನದ್ಧರಾದವರು. ಶಾಲೆಯ ಸವಿನೆನಪುಗಳ ಬಗ್ಗೆ ಹಿರಿಯರು ಬರೆದುಕೊಟ್ಟ ಭಾಷಣಗಳನ್ನು ಉರುಹಚ್ಚಿ ಹೇಳುತ್ತಿದ್ದೆವು. ಅಧ್ಯಾಪಕರು, ಮುಖ್ಯೋಪಾಧ್ಯಾಯರು ನಾವು ಹೈಸ್ಕೂಲು ಓದಲು ಪಟ್ಟಣಕ್ಕೆ ಹೋಗುವಾಗ ಹೇಗಿರಬೇಕು, ಪಬ್ಲಿಕ್‌ ಪರೀಕ್ಷೆಯನ್ನು ಹೇಗೆ ಎದುರಿಸಬೇಕು (ಆಗ ಏಳನೆಯ ತರಗತಿಗೆ ಪಬ್ಲಿಕ್‌ ಪರೀಕ್ಷೆ ಇತ್ತು). ಗುಣ ನಡತೆ ಹೇಗಿರಬೇಕು ಎಂದೆಲ್ಲ ಉಪದೇಶ ನೀಡುತ್ತಿದ್ದರು. ಆನಂತರ ಶಾರದಾ ಪೂಜೆ, ಪ್ರಸಾದ ವಿತರಣೆ, ಬಾಳೆಹಣ್ಣು, ಪಂಚಕಜ್ಜಾಯ, ಸಿಹಿಬೂಂದಿ ಇತ್ಯಾದಿ. ಅನಂತರ ಗ್ರೂಪ್‌ ಫೋಟೋ. ಆಮೇಲೆ ಹಿರಿಯರ ಕಾಲಿಗೆ ಬೀಳುವ ಕಾರ್ಯಕ್ರಮ. ಆಗ ಹಿರಿಯ ಅಧ್ಯಾಪಕಿಯರು ಯಾಕೋ ಏನೋ ಅತ್ತು ಬಿಡುತ್ತಿದ್ದರು.
        ಅವರನ್ನು ನೋಡಿದ ಕೆಲವು ಹುಡುಗಿಯರೂ ಅಳುತ್ತಿದ್ದರು. ಯಾಕೆ? ಎಂದು ಕೇಳಿದರೆ, "ಗೊತ್ತಿಲ್ಲ , ಟೀಚರ್‌ ಅಳ್ತಿದ್ದಾರೆ. ಅದಕ್ಕೆ ನಾವೂ ಅಳ್ತಾ ಇದ್ದೇವೆ' ಅನ್ನುತ್ತಿದ್ದರು!

        ಗ್ರೂಪ್‌ ಫೋಟೋ ಎಂದೆನಲ್ಲವೆ? ಅದರದ್ದೇ ಒಂದು ಮಜಾ. ಏಳನೆಯ ತರಗತಿಯಲ್ಲಿ ತೆಗೆದಿದ್ದ ಗ್ರೂಪ್‌ ಫೋಟೋದಲ್ಲಿ ನಾನು ಆತ್ಮೀಯ ಗೆಳೆಯನಾಗಿದ್ದ ಸೇಸಪ್ಪನ ಹೆಗಲಿಗೆ ಕೈ ಹಾಕಿ ನಿಂತಿದ್ದೆ. ಸುಮ್ಮನೆ ನಿಂತಿರಲಿಲ್ಲ. ನನ್ನ ಕೈಯಲ್ಲಿದ್ದ ವಾಚು ಫೋಟೋದಲ್ಲಿ ಬರುವಂತೆ ತೋರಿಸಿಕೊಂಡು ನಿಂತಿದ್ದೆ. ಕಾರಣ ಇಷ್ಟೆ ; ನಾವು ಪೇಟೆಗೆ ಹೋಗಿ ಪಬ್ಲಿಕ್‌ ಪರೀಕ್ಷೆ ಬರೆಯುವವರಾಗಿದ್ದುದರಿಂದ ನಮ್ಮ ತರಗತಿಯ ಹೆಚ್ಚಿನವರ ಕೈಯಲ್ಲಿ ಸೆಕೆಂಡ್‌ ಹ್ಯಾಂಡ್‌ ವಾಚಿತ್ತು. ನನ್ನಲ್ಲೂ ದಿನ ಬಿಟ್ಟು ದಿನಕ್ಕೆ ಜೀವಂತವಾಗುವ ವಾಚಿತ್ತು. ಸೇಸಪ್ಪ ಪಾಪ, ಪಿಳಿ ಪಿಳಿ ನಮ್ಮ ವಾಚನ್ನೇ ನೋಡುತ್ತಿದ್ದ. ಫೋಟೋ ತೆಗೆಯುವಾಗ ಎಲ್ಲರೂ ಕೈ ಕಟ್ಟಿ, ಎಡ ಮುಂಗೈಯನ್ನು ಕ್ಯಾಮರಾದತ್ತ ಬರುವಂತೆ ಮಾಡಿ ತಮ್ಮ ತಮ್ಮ ವಾಚುಗಳನ್ನು ಪ್ರದರ್ಶಿಸುತ್ತಿದ್ದರು. ಇದರಿಂದಾಗಿ ಎಲ್ಲರ ಕೈಗಳಲ್ಲಿದ್ದ ವಾಚು ಫೋಟೋದಲ್ಲಿ ಬರುತ್ತಿತ್ತು. ಈ ಪದ್ಧತಿ ಪರಂಪರಾಗತವಾಗಿ ಬಂದಿದ್ದುದರಿಂದ ನಾವೂ ಅದನ್ನೇ ಮುಂದುವರಿಸಲು ನಿರ್ಧರಿಸಿದ್ದೆವು. ವಿಷಯ ಹೀಗಿರುವಾಗ ವಾಚಿಲ್ಲದ ಸೇಸಪ್ಪನಿಗೆ ಬೇಸರವಾಗಬಾರದಲ್ಲ? ಹಾಗಾಗಿ ನನ್ನ ವಾಚ್‌ ಹಸ್ತವನ್ನು ಅವನ ಭುಜದ ಮೇಲೆ ಹಾಕಿ ನಮಗಿಬ್ಬರಿಗೂ ಒಂದೇ ವಾಚು ಎಂದು ಸಾಬೀತುಪಡಿಸಿದ್ದೆ !

        ಕಾಲೇಜಿನ ಅಂತಿಮ ವರ್ಷ ಮುಗಿಯುತ್ತ ಬಂದಾಗ "ಸೆಂಡ್‌ ಆಫ್'ನ ಸುದ್ದಿಯೇ ಇರಲಿಲ್ಲ. ಎಲ್ಲ ಹಂತಗಳಲ್ಲೂ ವಿದಾಯ ಕೂಟವನ್ನು ದಾಟಿ ಬಂದ ನಮಗೆ ಕಾಲೇಜಿನ ಹಂತದಲ್ಲಿ ಇಲ್ಲ ಅಂದರೆ ಹೇಗೆ, ಅವಮಾನ!- ಎಂದು ಭಾವಿಸಿ ಪ್ರಿನ್ಸಿಪಾಲರ ಕೊಠಡಿಗೆ ನುಗ್ಗಿದೆವು. ಕಾಲೇಜಿನ ವತಿಯಿಂದ ನಮಗೆ ಸೆಂಡ್‌ ಆಫ್ ಬೇಕೇ ಬೇಕು ಎಂದು ಗಲಾಟೆ ಮಾಡಿದೆವು. ನಮ್ಮ ಎಲ್ಲ ಗಲಾಟೆ ಮುಗಿದ ಬಳಿಕ ಪ್ರಿನ್ಸಿಪಾಲರು ""ನೋಡ್ರಯ್ನಾ, ಕೆಲವು ವರ್ಷಗಳ ಹಿಂದಿನವರೆಗೂ ಫೈನಲ್‌ ಇಯರ್‌ನವ್ರಿಗೆ ನಾವೇ ಸೆಂಡ್‌ ಆಫ್ ಮಾಡ್ತಿದ್ವಿ. ಆದ್ರೆ ಏನು ಪ್ರಯೋಜನ? ಎಪ್ರಿಲ್‌ನಲ್ಲಿ, ಅಕ್ಟೋಬರ್‌ನಲ್ಲಿ, ತಿರಾY ಎಪ್ರಿಲ್‌ನಲ್ಲಿ ಪರೀಕ್ಷೆ ಬರಿಯೋಕ್ಕೆ ಅಂತ ಶೇಕಡಾ ತೊಂಬತ್ತರಷ್ಟು ವಿದ್ಯಾರ್ಥಿಗಳು ಬರ್ತಾನೇ ಇರ್ತಾರೆ ! ಕೆಲವ್ರನ್ನಂತೂ ಯುನಿವರ್ಸಿಟಿನೇ ನಿಮ್ಮ  ಸ್ಕೀಂ ಮುಗೀತು, ಇನ್ನು ಪರೀಕ್ಷೆ ಬರೀ ಬೇಡ್ರಪ್ಪಾ ಅಂತ ಹೇಳಿ ನಿಲ್ಸುತ್ತೆ. ಅಲ್ಲಿ ತನಕಾನೂ ಬರ್ತಾನೇ ಇರ್ತಾರೆ. ಹೀಗಿರುವಾಗ ಯಾಕ್ರಯ್ನಾ ಸೆಂಡ್‌ ಆಫ್ ಬೇಕು? ನೀವೆಲ್ಲ ಒಂದೇ ಎಟೆಮ್‌rನಲ್ಲಿ ಪಾಸಾದ್ರೆ ನಾವೇ ಕೈಯಾರೆ ಖರ್ಚು ಮಾಡಿ ಗ್ರ್ಯಾಂಡಾಗಿ ಸೆಂಡ್‌ ಆಫ್ ಮಾಡಿಸ್ತೀನಿ' ಎಂದು ಹೇಳಿದರು. ಆದರೆ ನಾವು ಪ್ರಿನ್ಸಿಪಾಲರ ಮೇಲಿನ ಗುರುಭಕ್ತಿಯಿಂದ ಹಣ ಖರ್ಚಾಗದಂತೆ ನೋಡಿಕೊಂಡೆವು!

        ನಮ್ಮ ಸಾಹಿತ್ಯದಲ್ಲಿ ವಿದಾಯದ ಬೇರೆ ಬೇರೆ ಕ್ಷಣಗಳ ಚಿತ್ರಣ ಸೊಗಸಾಗಿ ಮೂಡಿ ಬಂದಿದೆ. ಪಂಪನ ಆದಿಪುರಾಣದಲ್ಲಿ ವಜ್ರದಂತ ತನ್ನ ಮಗಳಾದ ಶ್ರೀಮತಿ ಹಾಗೂ ಅಳಿಯನಾದ ವಜ್ರಜಂಘರನ್ನು ಕಳುಹಿಸಿಕೊಡುವ ಸಂದರ್ಭದ ಪದ್ಯ ಹೀಗಿದೆ:

        ಪೊಡವಡುವಪ್ಪಿಕೊಳ್ವ ನೆನೆಯುತ್ತಿರಿಮೆಂಬ ಸಮಸ್ತ ವಸ್ತುವಂ

        ಕುಡುವ ಪಲರ್ಮೆಯುಂ ಪರಸಿ ಸೇಸೆಯನಿಕ್ಕುವ ಬುದ್ಧಿವೇಳ್ವ ಕ

        ಯೆÂಡೆ ನಿಮಗೆಂದೊಡಂಬಡಿಪ ನಲ್ಲರಗಲ್ಕೆಗೆ ಕಣ್ಣ ನೀರ್ಗಳಂ

        ಮಿಡಿವ...

        ಸಾಕಿ ಬೆಳೆಸಿದ ಮುದ್ದಿನ ಮಗಳು ಗಂಡನ ಮನೆಗೆ ಹೊರಟು ನಿಂತಾಗ ನಡೆಯಬಹುದಾದ ವಿದ್ಯಮಾನಗಳನ್ನು ಒಂದೊಂದು ಶಬ್ದದಲ್ಲಿ ಕೆತ್ತಿ ಇಟ್ಟಿದ್ದಾನೆ ಕವಿ. ನನಗೆ ಕುತೂಹಲವಿರುವುದು ಕಣ್ಣ  ನೀರ್ಗಳಂ ಮಿಡಿವ ಎನ್ನುವ ಶಬ್ದದ ಬಗ್ಗೆ.

        ಇವತ್ತಿನ ಆಧುನಿಕ ಫ್ಯಾಷನ್‌ ಮದುವೆಗಳನ್ನು ಗಮನಿಸಿದ್ದೇನೆ. ಗಂಡನ ಮನೆಗೆ ಹೊರಟು ನಿಂತಾಗ ತಾಯಿ ಕಣ್ಣಲ್ಲೂ ನೀರಿಲ್ಲ. ಮಗಳ ಕಣ್ಣಲ್ಲಂತೂ ದೇವರಾಣೆ ಇಲ್ಲ ! ಯಾಕಿರಬಹುದು? ಅಂತ ಕಾರಣ ಹುಡುಕಿದೆ. ಈಗಿನ ತಲೆಮಾರಿನವರು ಆಷಾಢ ಅಂತ ಒಮ್ಮೆ, ನಾಗರಪಂಚಮಿ ಅಂತ ಮಗದೊಮ್ಮೆ, ಗೌರಿ ಹಬ್ಬ, ದೀಪಾವಳಿ ಅಂತ ಬಂದರೆ- ತವರು ಮನೆಯಿಂದ ಕದಲುವುದೇ ಇಲ್ಲ. ಅಳಿಯಂದಿರೂ ಹಾಗೆಯೇ ಹತ್ತನೆಯ ಗ್ರಹವಾಗಿ ಮಾವನ ಮನೆಯ ಸುತ್ತಲೇ ತಿರುಗುತ್ತಿರುತ್ತಾರೆ. ಹೀಗಾಗಿ ವಿದಾಯದ ಸಂದರ್ಭದಲ್ಲಿ ಕಣ್ಣೀರು ಬರುವುದಾದರೂ ಹೇಗೆ?

        ವಿಷಯಾಂತರವಾಯಿತು ಕ್ಷಮಿಸಿ. ಮರಳಿ ಸಾಹಿತ್ಯಕ್ಕೆ ಬರುತ್ತೇನೆ. ವಿ.ಸೀ.ಯವರ-

        ಎಮ್ಮ ಮನೆಯಂಗಳದಿ

        ಬೆಳೆದ ಹೂವನ್ನು

        ನಿಮ್ಮ ಮಡಿಲಲ್ಲಿ ಇರಿಸುತಿಹೆವು

        - ಎಂಬ ಭಾವಗೀತೆ ಎಷ್ಟು ಹೃದಯಂಗಮವಾಗಿದೆ. ಹೂವಿನಂತೆ ಬೆಳೆಸಿದ ಮಗಳನ್ನು ಜೋಪಾನ ನೋಡಿಕೊಳ್ಳಿ ಎಂದು ಆದ್ರìರಾಗಿ ಕೇಳಿಕೊಳ್ಳುತ್ತಿದ್ದಾರೆ ತಾಯಿ-ತಂದೆಯರು. ಕೆ. ಎಸ್‌. ನರಸಿಂಹಸ್ವಾಮಿ ಅವರ ರೈಲು ನಿಲ್ದಾಣದಲ್ಲಿ ಕವನದಲ್ಲಿ ಬಾಣಂತಿ ಮಗಳನ್ನು ಕಳುಹಿಸಿ ಕೊಡುವ ತಾಯಿಯ ಚಿತ್ರಣವಿದೆ. ಇಡೀ ಕವನ ತಾಯಿ-ಮಗಳ ಸಂಭಾಷಣೆಯ ಸ್ವರೂಪದಲ್ಲಿದೆ. ಮೇಲ್ನೋಟಕ್ಕೆ ಸಾಮಾನ್ಯವಾಗಿ, ಸರಳವಾಗಿ ಸಾಗುವ ಸಾಲುಗಳಲ್ಲಿ ಥಟ್ಟನೆ ಸೆಳೆಯುವುದು -"ಬಿಸಿನೀರಿದೆಯಾ ಹಾಲಿಗೆ?' ಎಂಬ ಪ್ರಶ್ನೆಗೆ "ಹೌದಮ್ಮಾ ಕಣ್ಣಲ್ಲೂ ಇದೆ' ಎಂದು ಅವಳು ನೀಡುವ ಉತ್ತರ. ಮಗಳ ಬೇಗುದಿಯನ್ನು ಕವಿ ಸೂಕ್ಷ್ಮವಾಗಿ ಸೆರೆಹಿಡಿದಿದ್ದಾರೆ.

        ಜನಪದ ಸಾಹಿತ್ಯದಲ್ಲಿ ಬರುವ-

        ತೊಟ್ಟಿàಲ ಹೊತ್ಕೊಂಡು ತವರ್ಬಣ್ಣ ಉಟ್ಕೊಂಡು

        ಅಪ್ಪ ಕೊಟ್ಟೆಮ್ಮೆ ಹೊಡಕೊಂಡು| ತೌರೂರ

        ತಿಟØತ್ತಿ ತಿರುಗಿ ನೋಡ್ಯಾಳು||

        ಎಂಬ ತ್ರಿಪದಿಯಲ್ಲಿ ವಿದಾಯದ ಹೃದಯಂಗಮ ಚಿತ್ರಣವಿದೆ. ತಿಟ್ಟು ಹತ್ತಿ ತಿರುಗಿ ತೌರೂರನ್ನು ಆಕೆ ಧನ್ಯತೆಯಿಂದ, ಕೃತಜ್ಞತೆಯಿಂದ ತಿರುತಿರುಗಿ ನೋಡುತ್ತಲೇ ಇದ್ದಾಳೆ.

        ಕಾಳಿದಾಸನ ಅಭಿಜ್ಞಾನ ಶಾಕುಂತಲಂನಲ್ಲಿ ಆಕೆ ತನ್ನ ಗಂಡನ ಮನೆಗೆ ಹೊರಟು ನಿಂತ ಸಂದರ್ಭ ಹೃದಯಂಗಮವಾಗಿ ಮೂಡಿ ಬಂದಿದೆ. ತಾನು ಆಶ್ರಮದಲ್ಲಿ ಸಾಕಿದ ಜಿಂಕೆಯ ಮರಿಗಳನ್ನು ಸಖೀಯರ ಕೈಗಿತ್ತು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳುತ್ತಾಳೆ. ಆಗ ಸಖೀಯರು ನಮ್ಮನ್ನು ಯಾರ ಕೈಗೆ ಒಪ್ಪಿಸಿದೆ? ಎಂದು ದುಃಖದಿಂದ ಪ್ರಶ್ನಿಸುತ್ತಾರೆ. ಜಿಂಕೆಯ ಮರಿಗಳು ಮೇವನ್ನು ಬಿಟ್ಟು  ಬಾಯಿ ತೆರೆದುಕೊಂಡೇ ಆಕೆಯನ್ನು ನೋಡುತ್ತಿರುತ್ತವೆ. ಒಂದು ಮರಿಯಂತೂ ಆಕೆಯ ಸೀರೆಯನ್ನು ಜಗ್ಗುತ್ತಿರುತ್ತದೆ.

        ವಾಲ್ಮೀಕಿ ರಾಮಾಯಣದಲ್ಲಿ ಬರುವ ರಾಮನ ವನವಾಸದ ಸಂದರ್ಭದ ವಿದಾಯದ ಸನ್ನಿವೇಶ ನಮ್ಮನ್ನೊಮ್ಮೆ ಅಲುಗಾಡಿಸಿ ಬಿಡುತ್ತದೆ. ರಾಮ ಹೊರಟು ನಿಂತಿದ್ದಾನೆ. ಸೀತೆ ನಾರುಡೆ ಉಡಲಾಗದೆ ಮುಗ್ಧಳಾಗಿ ನಿಂತಿದ್ದಾಳೆ. ರಾಮನೇ ಉಡಿಸುತ್ತಾನೆ. ಅದನ್ನು ಕಂಡ ಅರಮನೆಯವರು ಕಂಬನಿ ಮಿಡಿಯುತ್ತಾರೆ. ರಾಮ ಹೊರಟು ನಿಂತ. ದಶರಥ, "ಒಂದು ತುತ್ತನ್ನಾದರೂ ನನ್ನ ಜೊತೆ ಉಂಡು ಹೋಗು' ಎಂದು ಬೇಡುತ್ತಾನೆ. ಭರತನಿಗೆ ಸಂದ ನೆಲದಲ್ಲಿ ತಾನು ಉಂಡರೆ ಋಣಕ್ಕೆ ಬೀಳುತ್ತೇನೆ ಎನ್ನುವ ಕಾರಣದಿಂದ ರಾಮ ಮುಂದಕ್ಕೆ ಸಾಗುತ್ತಾನೆ. ಅಯೋಧ್ಯೆಯ ಜನರು ಬಿಡುವುದಿಲ್ಲ. ಅವನ ಬೆನ್ನ ಹಿಂದೆಯೇ ಬರುತ್ತಾರೆ. ಸರಯೂ ನದಿ ತೀರಕ್ಕೆ ಬಂದಾಗ ರಾಮ ಅವರನ್ನು  ಮರಳಿ ಹೋಗುವಂತೆ ವಿನಂತಿಸಿಕೊಳ್ಳುತ್ತಾನೆ.

         ಇಲ್ಲೊಂದು ಸೂಕ್ಷ್ಮವಿದೆ. ವಿದಾಯ ಹೇಳುವಾಗ ನೀರಿನ ನೆಲೆ ಕಾಣುವ ತನಕ ಕಳುಹಿಸಿ ಕೊಡಬೇಕು ಎನ್ನುವುದು ಆ ಕಾಲದ ಪದ್ಧತಿಯಾಗಿತ್ತು. ಕಾಲ ಬದಲಾದಂತೆ ಮನೆಗೆ ಬಂದವರನ್ನು ಬಸ್‌ಸ್ಟಾಂಡ್‌, ರೈಲ್ವೇ ಸ್ಟೇಷನ್‌ ಹೀಗೆ ಬಿಟ್ಟು ಬರುವ ಪದ್ಧತಿ ಬಂತು. ಅನಂತರ ಗೇಟಿನ ತನಕ ಬರುವ ಕ್ರಮ ಬಂತು. ಈಗ ಅದೆಲ್ಲ  ಹೋಗಿದೆ. ಇತ್ತೀಚೆಗೆ ಮುಸ್ಸಂಜೆ ಹೊತ್ತಿಗೆ ಆಮಂತ್ರಣ ಪತ್ರಿಕೆ ಕೊಡಲು ನೆಂಟರ ಮನೆಗೆ ಹೋಗಿದ್ದೆ. ಮುಸ್ಸಂಜೆ ಆಗುತ್ತಿದ್ದಂತೆ ಅವರು, "ದಯವಿಟ್ಟು ನೀವು ಹೊರಡಿ, ನಿಮ್ಮನ್ನು ಕಳುಹಿಸಿ ಕೊಡಲು ಬಾಗಿಲು ಕೂಡ್ಲೆ  ತೆಗುª ಹಾಕೆºàಕು. ಸೊಳ್ಳೆ ಎಲ್ಲ ಒಳಗೆ ಬರ್ತವೆ. ಏನೂ ಅಂದೊRàಬೇಡಿ ಪ್ಲೀಸ್‌. ನೆಕ್ಸ್ಟ್  ಟೈಂ ಫ್ರೀಯಾಗಿ ಬನ್ನಿ' ಅಂತ ಹೇಳಿದವರೇ ನನ್ನನ್ನು ಹೊರಗೆ ಕಳುಹಿಸಿ ದಢಾರಂತ ಬಾಗಿಲು ಹಾಕಿಕೊಂಡರು!

        ಹಿಂದೆಲ್ಲ ಸಾವು ಸಂಭವಿಸಿದರೆ ಇಡೀ ಕೇರಿ, ಇಡೀ ಹಳ್ಳಿ ಸೂತಕವನ್ನು ಆಚರಿಸುತ್ತಿತ್ತು. ಮಣ್ಣಾಗುವವರೆಗೆ ಯಾರ ಮನೆಯಲ್ಲೂ ಏನನ್ನೂ ಮಾಡುತ್ತಿರಲಿಲ್ಲ.ಈಗ ಕಾಲ ಬದಲಾಗಿದೆ. ಹೆಣ ಎತ್ತುವ ಟೈಂ ಯಾವಾಗ? ಎಂದು ಕೇಳಿಕೊಂಡು ಎಲ್ಲ ಒಟ್ಟಾಗುತ್ತಾರೆ. ಅಳುವವರಿಗೂ ಬಿಡುವಿಲ್ಲ. ಅತ್ತರೂ ಟಿ.ವಿ. ರಿಯಾಲಿಟಿ ಷೋಗಳಲ್ಲಿ  ಸೋತವರು ಮೇಕಪ್‌ ಕರಗದಂತೆ ಲೆಕ್ಕ ಮಾಡಿ ಎರಡು ಹನಿ ಉದುರಿಸುವಂತೆ ಅಳುತ್ತಾರೆ. "ಜೀವನವೇ ಇಷ್ಟು. ಇವತ್ತು ಅವ, ನಾಳೆ ನಾವು' ಎಂದೆಲ್ಲ ಮಾತನಾಡುತ್ತಿರುವವರು ಮಣ್ಣಾದ ಮರುಕ್ಷಣದಲ್ಲೇ ಮಸಾಲೆದೋಸೆಗೆ, ಸಂಜೆಯಾದರೆ ಬಾರಿಗೆ ನುಗ್ಗುತ್ತಾರೆ!

        ಇತ್ತೀಚೆಗೆ ನಮ್ಮೂರಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ತೀರಿಕೊಂಡರು. ತೊಂಬತ್ತು ದಾಟಿದ್ದ ಹಿರಿಯ ವ್ಯಕ್ತಿ. ಅಪ್ಪಟ ಗಾಂಧೀವಾದಿ. ತಹಶೀಲ್ದಾರರು ನನಗೆ ಫೋನಾಯಿಸಿ ತಾಲೂಕಿನ ಪರವಾಗಿ ಗೌರವ ಅರ್ಪಿಸಲು ತಾನು ಹೋಗುತ್ತಿದ್ದೇನೆಂದೂ, ತನ್ನೊಂದಿಗೆ ಬಂದು ಅವರ ಬಗ್ಗೆ ಒಂದೆರಡು ಮಾತು ತನ್ನ ಪರವಾಗಿ ಆಡಬೇಕೆಂದು ವಿನಂತಿಸಿಕೊಂಡರು. ನನಗೂ ನನ್ನೂರ ಸ್ವಾತಂತ್ರ್ಯ ಯೋಧರ ಬಗ್ಗೆ ಗೌರವವಿತ್ತು. ಗಂಧದ ಹಾರ ಹಿಡಿದುಕೊಂಡು ನಾನೂ ತಹಶೀಲ್ದಾರರೂ ಅಲ್ಲಿಗೆ ಹೋದೆವು. ಮನೆಯವರೆಗೆ ಜೀಪು ಹೋಗುತ್ತಿರಲಿಲ್ಲ. ಸ್ವಲ್ಪ ದೂರ ನಡೆದುಕೊಂಡು ಹೋದೆವು. ಅವರ ಮನೆಯ ಕಡೆಯಿಂದ ದೊಡ್ಡದಾಗಿ ಸಿನಿಮಾ ಹಾಡು ಬರುತ್ತಿತ್ತು.

        ಎಕ್ಕ ರಾಜ ರಾಣಿ ನನ್ನ ಕೈಯ್ಯೊಳಗೆ

        ಹಿಡಿ ಮಣ್ಣು ನಿನ್ನ ಬಾಯೊಳಗೆ

        ಎನ್ನುವ  ಅರ್ಥಗರ್ಭಿತವಾದ ಹಾಡು! ಅಲ್ಲಿ ಹೋಗಿ ನೋಡುತ್ತೇವೆ; ತೀರಿಕೊಂಡವರ ಮೊಮ್ಮಕ್ಕಳು, ಮರಿಮಕ್ಕಳು ಶವದ ಸುತ್ತ ಕುಣಿಯುತ್ತಿದ್ದಾರೆ ! ವಿಚಾರಿಸಿದಾಗ ತೀರಿಕೊಂಡವರ ಮಗಳೊಬ್ಬಳು ಬರುವಾಗ ಸಂಜೆಯಾಗುತ್ತದೆ ಎಂದೂ ಅವರು ಬರುವ ತನಕ ಟೈಂಪಾಸಿಗೆ ಕುಣಿಯುತ್ತಿರುವುದಾಗಿಯೂ ಹೇಳಿದ ಒಬ್ಬ ಮೊಮ್ಮಗ. ಯಾವಾಗ ತಹಶೀಲ್ದಾರರ ಜೊತೆ ಪತ್ರಕರ್ತರನ್ನು, ಟಿ.ವಿ. ಚಾನೆಲ್‌ನವರನ್ನು ಕಂಡರೋ ತತ್‌ಕ್ಷಣ ಕೀಲಿ ಕೊಟ್ಟವರಂತೆ ಎಲ್ಲರೂ ಬಾಯಿ ಬಡಿದುಕೊಂಡು ಅಳಲು ಪ್ರಾರಂಭಿಸಿದರು! ನನ್ನ ಸಂತಾಪದ ನುಡಿಗಳು ಒಳಗೇ ಉಳಿದವು.

        ಇಷ್ಟೆಲ್ಲ ವಿದಾಯದ ಕ್ಷಣಗಳನ್ನು ಹೇಳಿದ ಮೇಲೆ ನಮ್ಮ ಕಚೇರಿಯವರು ಇತ್ತೀಚೆಗೆ ನನಗೆ ಮಾಡಿದ ವಿದಾಯವನ್ನು ಹೇಳದಿದ್ದರೆ ಪೂರ್ತಿಯಾಗುವುದಿಲ್ಲ.

        ಇತ್ತೀಚೆಗೆ ನನಗೆ ಭಡ್ತಿ ಮತ್ತು ಪದೋನ್ನತಿಯಾಗಿ ದೂರದ ಊರಿಗೆ ವರ್ಗಾವಣೆಯಾಗಿತ್ತು. ವಿದಾಯ ಕೂಟಕ್ಕೆ ಸೀನಿಯರ್‌ ಮ್ಯಾನೇಜರ್‌ ಬಂದಿದ್ದರು. ಅವರಿಗೆ ಅಪೂರ್ವವಾದ ಕನ್ನಡ ಶಬ್ದಗಳನ್ನು ಹಾಕಿ ಭಾಷಣ ಮಾಡುವ ಚಟ. ಅವರು ಮಾತನಾಡಿದ ರೀತಿ ಕೇಳಿ ಇದು ನನ್ನ ವಿದಾಯ ಕೂಟವೋ, ಶ್ರದ್ದಾಂಜಲಿ ಸಭೆಯೋ ಎಂದು ಗೊಂದಲಕ್ಕೆ ಬಿದ್ದೆ. ಅವರ ಮಾತು ಹೀಗಿತ್ತು-""ಶ್ರೀಯುತರದ್ದು ಇನ್ನೂ ಸಣ್ಣ ವಯಸ್ಸು. ಇಷ್ಟು ಸಣ್ಣ ವಯಸ್ಸಿನಲ್ಲಿ ಸಾಧನೆ ಮಾಡಿದ ಇವರು ಇವತ್ತು ನಮ್ಮನ್ನು  ಅಗಲಿದ್ದಾರೆ.
        ಇಷ್ಟೊಂದು ಸಾಧನೆ ಮಾಡಿದ ಇವರು ಆದಷ್ಟು ಬೇಗ ಕೀರ್ತಿಶೇಷರಾಗಲಿ ಎಂದು ಹಾರೈಸುತ್ತೇನೆ. ಇದರ ಲಾಭ ಇವರ ಶ್ರೀಮತಿಯವರಿಗೆ ಸಿಗಲಿ ಎಂದು ಮನಃಪೂರ್ವಕವಾಗಿ ಹಾರೈಸುತ್ತೇನೆ‌' ಎಂದರು.
        ವೇದಿಕೆಯಲ್ಲಿದ್ದ ಹೆಂಡತಿಗೆ ಸಂತೋಷವಾಯಿತು. ಅಲ್ಲಿದ್ದ ಎಲ್ಲ ಸಹೋದ್ಯೋಗಿಗಳು ಕ್ಯಾರೆಟ್‌ ಹಲ್ವ ಸವಿಯುತ್ತ ಮನಸೊÕà ಇಚ್ಛೆ ಚಪ್ಪಾಳೆ ತಟ್ಟಿ ಮ್ಯಾನೇಜರರನ್ನು ತೃಪ್ತಿಗೊಳಿಸಿದರು. ವೇದಿಕೆಯಲ್ಲಿ ಕೂತಿದ್ದ ನನಗೆ ಪ್ರೇತಾತ್ಮದ ಅನುಭವವಾಗಿ "ಅಳಿವುದು ಕಾಯ ಉಳಿವುದು ಕೀರ್ತಿ' ಹಾಡು ನೆನಪಾಗತೊಡಗಿತು.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಜೂನ್‌ ತಿಂಗಳು ಹತ್ತಿರವಾದಂತೆ ನಗರಗಳ ಅಪ್ಪ, ಅಮ್ಮಂದಿರಿಗೆ ತಮ್ಮ ಚಿಣ್ಣರನ್ನು ಹತ್ತಿರದ ಯಾವ ಒಳ್ಳೆಯ ಶಾಲೆಗಳಿಗೆ ಸೇರಿಸುವುದು ಎಂಬ ಚಿಂತೆ...
      • ಈ ವಿಭಾಗದಲ್ಲಿಯೂ ಇದೆ
      • Copyright @ 2009-2010 Udayavani.All rights reserved.
      • Designed & Hosted By 4cplus