Thursday, May 17, 2012
Last Updated: 1:25:56 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ನಿರಾಕರಣೆ : ಮರುಚಿಂತನೆಗೆ ಪ್ರೇರಣೆ
    • 2010ರ ಸಾಲಿನ "ಬಸವ ಪುರಸ್ಕಾರ''ವನ್ನು ತಿರಸ್ಕರಿಸಿದ ಪರಿಸರ ಸ್ವಾಸ್ಥ್ಯದ ಪ್ರತಿಪಾದಕಿ ಮೇಧಾ ಪಾಟ್ಕರ್‌

      • ಸಂವರ್ತ ಸಾಹಿಲ್‌ | Feb 19, 2012

        ""12ನೆಯ ಶತಮಾನದ ಕ್ರಾಂತಿಕಾರಿ ಸಂತ ಕವಿ, ತಣ್ತೀಜ್ಞಾನಿ ಬಸವೇಶ್ವರರ ಹೆಸರಿನಲ್ಲಿರುವ ಈ ಪ್ರಶಸ್ತಿಯನ್ನು  ಸ್ವೀಕರಿಸುವುದೆಂದರೆ, ನನ್ನ ಪಾಲಿಗೆ ಅದೊಂದು ಗೌರವದ ಸಂಗತಿಯೇ. ಅವರು ಸಾಮಾಜಿಕ ಬದಲಾವಣೆಗಾಗಿ, ಅದರ ಸುಧಾರಣೆಗಾಗಿ, ಜಾತಿ-ಜಾತಿಯ ನಡುವಣ ಸಾಮರಸ್ಯಕ್ಕಾಗಿ  ಶ್ರಮಿಸಿದವರು. ಹೀಗಿದ್ದರೂ...'

        ಕರ್ನಾಟಕದಲ್ಲಿ  ಮೊನ್ನೆ ಮೊನ್ನೆ  ಸಂಭವಿಸಿದ ಬ್ಲೂ ಫಿಲ್ಮ್  ಪ್ರಕರಣದಿಂದಾಗಿ ರಾಜ್ಯದ ಜನತೆಯ ಹಾಗೂ ಸಮೂಹ ಮಾಧ್ಯಮಗಳ ಕಣ್ಣು  ಅಶ್ಲೀಲ ಚಿತ್ರಗಳ ಮೊಬೈಲ್‌ ಮೇಲೆ ಹೊರಳಿದ್ದರಿಂದ ; ಇದರಿಂದಾಗಿಯೇ ಅಧಿಕಾರ ಕಳೆದುಕೊಂಡ ಸಚಿವತ್ರಯರ ಮೇಲೆಯೇ ನೆಟ್ಟದ್ದರಿಂದ, ನಿಜವಾಗಿ ದೊಡ್ಡ  ಸುದ್ದಿಯಾಗಲೇಬೇಕಿದ್ದ  ಇನ್ನೊಂದು ಮಹಣ್ತೀದ ವಿದ್ಯಮಾನ ಯಾರ ಗಮನಕ್ಕೂ  ಬೀಳದೆ ಹೋಯಿತು. ಪ್ರಜಾಸತ್ತಾತ್ಮಕ ಹೋರಾಟ ಹಾಗೂ ಭಾರತದ ತೃತೀಯ ಶಕ್ತಿಯ ಸಮರ್ಥ ರೂಪಕವಾಗಿರುವ ಪರಿಸರ ಸ್ವಾಸ್ಥ್ಯದ ಪ್ರತಿಪಾದಕಿ ಮೇಧಾ ಪಾಟ್ಕರ್‌ ಅವರು ಕರ್ನಾಟಕ ಸರಕಾರ ತಮಗೆ ಕೊಡಮಾಡಿದ 2010ರ ಸಾಲಿನ "ಬಸವ ಪುರಸ್ಕಾರ'ವನ್ನು  ತಿರಸ್ಕರಿಸಿದ ಸುದ್ದಿ ಇದು.

        27 ವ ರ್ಷಗಳ ಹಿಂದೆ ಆರಂಭವಾದ ನರ್ಮದಾ ಬಚಾವೋ ಆಂದೋಲನದ  ಪ್ರತಿಪಾದಕಿ ಮೇಧಾ ಪಾಟ್ಕರ್‌ ಕರ್ನಾಟಕಕ್ಕೆ  ಅಪರಿಚಿತರೇನೂ ಅಲ್ಲ. ರಾಜ್ಯದಲ್ಲಿ  ನಡೆದಿರುವ ಹಲವು ಹೋರಾಟಗಳಲ್ಲಿ  ಹಾಗೂ ಚಳವಳಿಗಳಲ್ಲಿ  ಆಕೆ ಸಕ್ರಿಯ ಸಹಭಾಗಿ. ಅದು ಇತ್ತೀಚೆಗೆ ನಡೆದ ಪೋಸ್ಕೋ ವಿರುದ್ಧದ ಪ್ರತಿಭಟನೆ ಇರಬಹುದು ಅಥವಾ ಮಂಗಳೂರು ವಿಶೇಷ ಆರ್ಥಿಕ ವಲಯ ಪ್ರಸ್ತಾವದ ವಿರುದ್ಧದ ಹೋರಾಟವಿರಬಹುದು.

        ಈ ಪ್ರಶಸ್ತಿಯನ್ನು  ತಾನು ತಿರಸ್ಕರಿಸುತ್ತಿರುವುದೇಕೆ ಎಂಬುದನ್ನು  ಆಕೆ ಸರಕಾರಕ್ಕೆ  ಬರೆದು ತಿಳಿಸಿದ್ದು  ಹೀಗೆ - ""12ನೆಯ ಶತಮಾನದ ಕ್ರಾಂತಿಕಾರಿ ಸಂತ ಕವಿ, ತಣ್ತೀಜ್ಞಾನಿ ಬಸವೇಶ್ವರರ ಹೆಸರಿನಲ್ಲಿರುವ ಈ ಪ್ರಶಸ್ತಿಯನ್ನು  ಸ್ವೀಕರಿಸುವು ದೆಂದರೆ, ನನ್ನ ಪಾಲಿಗೆ ಅದೊಂದು ಗೌರವದ ಸಂಗತಿಯೇ. ಅವರು ಸಾಮಾಜಿಕ ಬದಲಾವಣೆಗಾಗಿ, ಅದರ ಸುಧಾರಣೆಗಾಗಿ, ಜಾತಿ-ಜಾತಿಯ ನಡುವಣ ಸಾಮರಸ್ಯಕ್ಕಾಗಿ  ಶ್ರಮಿಸಿದವರು. ಹೀಗಿದ್ದರೂ ನಾನು ಭಾಗಿಯಾಗುತ್ತ ಬಂದಿರುವ ಆಂದೋಲನಗಳ ಹಿಂದಿನ ಧೋರಣೆ ಅಕ್ರಮ ಗಣಿಗಾರಿಕೆ ಹಾಗೂ ಇತರ ಹಗರಣ ಗಳ ವಿರುದ್ಧ  ಸೂಕ್ತ  ಕ್ರಮ ತೆಗೆದುಕೊಳ್ಳುವಲ್ಲಿ ಸರಕಾರ ವಿಫ‌ಲ ವಾಗಿದೆ ಎಂಬ ಅಭಿಪ್ರಾಯವನ್ನೇ ಧ್ವನಿಸುತ್ತದೆ... ಲೋಕಾಯುಕ್ತ  ಕುರಿತ ವಿವಾದ ಇನ್ನೂ ಬಗೆಹರಿದಿಲ್ಲ . ಅಲ್ಲದೆ ರೈತರ, ಕಾರ್ಮಿಕರ, ಅಸಂಘಟಿತ ಕಾರ್ಮಿಕ ವರ್ಗದ, ಕೊಳೆಗೇರಿ ನಿವಾಸಿಗಳ ವಿಷಯ ದಲ್ಲಿ  ಸರಕಾರ ಅನುಸರಿಸುತ್ತಿರುವ ನೀತಿಗಳಿಗೆ, ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ; ಇದೇ ರೀತಿ ದುರ್ಲಭವಾಗುತ್ತಿರುವ ಭೂಮಿ, ನೀರು, ಅರಣ್ಯ ಹಾಗೂ ಖನಿಜಗಳಂಥ ಪ್ರಾಕೃತಿಕ ಸಂಪತ್ತಿನ ಖಾಸಗೀಕರಣಕ್ಕೆ  ಸರಕಾರ ನಡೆಸುತ್ತಿರುವ ಪ್ರಯತ್ನಗಳಿಗೆ  ಸಂಬಂಧಿಸಿದಂತೆ ಸರಕಾರಕ್ಕೂ  ನಮ್ಮ ಆಂದೋಲನಕಾರರಿಗೂ ನಡುವೆ ಮತಭೇದವಿದೆ. ಈ ಕಾರಣದಿಂದ ನಾನು ಈ ಪುರಸ್ಕಾರವನ್ನು  ಸ್ವೀಕರಿಸಲು ಸಾಧ್ಯವಿಲ್ಲವೆಂದು ವಿನಮ್ರಳಾಗಿ ತಿಳಿಸಬಯಸುತ್ತೇನೆ. ನೀವು ಈ ಪ್ರಶಸ್ತಿಯನ್ನು  ಇನ್ನೊಬ್ಬ  ಅರ್ಹ ಆಂದೋಲನಕಾರರಿಗೆ ನೀಡಿ ಗೌರವಿಸಬಹುದು...'

        "ಬಸವ ಪುರಸ್ಕಾರ'ವನ್ನು  ಘೋಷಿಸಿರುವುದು ಕನ್ನಡ ಮತ್ತು  ಸಂಸ್ಕೃತಿ ಇಲಾಖೆ. ಒಂದು ಪ್ರಶಸ್ತಿ ಫ‌ಲಕ ಹಾಗೂ 10 ಲಕ್ಷ  ರೂಪಾಯಿಗಳ ಸಂಭಾವನೆಯನ್ನೊಳಗೊಂಡಿರುವ ಈ ಪ್ರಶಸ್ತಿಯನ್ನು  ಸಾಮಾಜಿಕ ಸುಧಾರಣೆಗೆ ಕೊಡುಗೆಯಿತ್ತ  ಸಾಧಕರಿಗೆ ಹಾಗೂ ಬಸವ ತತ್ತÌಗಳ ಅನುಷ್ಠಾನಕ್ಕೆ  ಶ್ರಮಿಸುತ್ತ  ಬಂದಿರುವ ಮಹನೀಯರಿಗೆ ಪ್ರತಿ ವರ್ಷ ನೀಡಲಾಗುತ್ತಿದೆ.

        ಅಶ್ಲೀಲ ಚಿತ್ರ ವೀಕ್ಷಣೆಯ ಹಾವಳಿಯ ಬಗ್ಗೆ   ರಾಜ್ಯ ಮಾತ್ರವಲ್ಲ , ಇಡೀ ರಾಷ್ಟ್ರ  ನೈತಿಕ ಕಳಕ‌ಳಿ ವ್ಯಕ್ತಪಡಿಸುತ್ತಿದ್ದ  ಸಂದರ್ಭದಲ್ಲೆ  ಬಸವ ಪುರಸ್ಕಾರವನ್ನು  ತಿರಸ್ಕರಿಸಿರುವ ಪ್ರಸಂಗವೂ ಕಾಕತಾಳೀಯವೆಂಬಂತೆ ಘಟಿಸಿದೆ. ಗಮನಿಸಲೇಬೇಕಾದ ಅಂಶವೆಂದರೆ, ಬ್ಲೂ ಫಿಲ್ಮ್  ಗಲಾಟೆ ಸೃಷ್ಟಿಸಿದ ನೈತಿಕ ಪ್ರಶ್ನೆಗಿಂತಲೂ ಮೇಧಾ ಪಾಟ್ಕರ್‌ ತನ್ನ ಪತ್ರದಲ್ಲಿ  ಎತ್ತಿರುವ ಪ್ರಶ್ನೆಗಳು ಮಹಣ್ತೀದ್ದಾಗಿವೆ. ಬ್ಲೂ ಫಿಲ್ಮ್  ವೀಕ್ಷಣೆ ನಿಸ್ಸಂದೇಹವಾಗಿ  ಒಂದು ನಾಚಿಕೆಗೇಡಿನ ಸಂಗತಿ. ಆದರೆ ಮೇಧಾ ಪಾಟ್ಕರ್‌ ತನ್ನ  ಪತ್ರದಲ್ಲಿ  ಪ್ರಸ್ತಾವಿಸಿರುವ ಅಕ್ರಮ ಗಣಿಗಾರಿಕೆ, ಖಾಸಗೀಕರಣ, ಇತರ ಕಾನೂನುಬಾಹಿರ ಕ್ರಮಗಳು ಇತ್ಯಾದಿಗಳೆಲ್ಲ  ಜನಸಮೂಹಕ್ಕೆ  ಹಾಗೂ ಸಮೂಹ ಮಾಧ್ಯಮಕ್ಕೆ  ಕಾನೂನು ಹಾಗೂ ಸರಕಾರಿ ನೀತಿನಿಯಮಗಳಿಗೆ ಸಂಬಂಧಪಟ್ಟ  ವಿಷಯಗಳಾಗಿ ಮಾತ್ರ ಕಾಣಿಸುವುದು ; ಇದೇ ವೇಳೆ  ಬ್ಲೂ ಫಿಲ್ಮ್  ಖಯಾಲಿ ಮಾತ್ರ ಭಾರೀ ನೈತಿಕ ಸಮಸ್ಯೆಯಾಗಿ ಕಂಡುಬಂದಿರುವುದು ನಿಜಕ್ಕೂ ಆರೋಗ್ಯಕರವಲ್ಲ !

        ಮೇಧಾ ಪಾಟ್ಕರ್‌ ತನಗೆ ಕೊಡಮಾಡಲಾದ ಪುರಸ್ಕಾರವನ್ನು  ತಿರಸ್ಕರಿಸುವ ಮೂಲಕ ಹಾಗೂ ಅದಕ್ಕೆ  ಕಾರಣಗಳನ್ನೂ  ಸ್ಪಷ್ಟಪಡಿ ಸುವ ಮೂಲಕ, ಅಕ್ರಮ ಗಣಿಗಾರಿಕೆಯಂಥ, ಕಾನೂನುಬಾಹಿರ ಪ್ರಕರಣಗಳಂಥ, ಖಾಸಗೀಕರಣ ಹಾಗೂ ಕಾರ್ಪೊರೇಟ್‌ಕರಣ ಗಳಂಥ ವಿಷಯಗಳನ್ನು  ನೈತಿಕ ಪ್ರಶ್ನೆಗಳನ್ನಾಗಿಸಿ, ಲೋಕದ ಕಣ್ಣಿಗೆ  ಹಿಡಿಯಲೆತ್ನಿಸಿದ್ದಾರೆ. ರಾಷ್ಟ್ರದ ಪ್ರಜ್ಞಾವಂತಿಕೆಯ ರಕ್ಷಕಿಯಾಗಿರುವ ಆಕೆ ಬಸವ ಪುರಸ್ಕಾರವನ್ನು  ತಿರಸ್ಕರಿಸಿ, ನಾವು ನಾಚಿಕೊಳ್ಳಬೇಕಾದ ಕೆಲ ಪ್ರಮುಖ ಪ್ರಶ್ನೆಗಳನ್ನೂ  ಎತ್ತಿದ್ದಾರೆ. ಪ್ರಶಸ್ತಿಯನ್ನು  ತಿರಸ್ಕರಿ ಸುವ ಮೂಲಕವಷ್ಟೇ  ಅಲ್ಲ, ಇಂಥ ಪ್ರಶ್ನೆಗಳನ್ನು  ಎತ್ತುವ ಮೂಲಕ ಕೂಡ ಆಕೆ ಸರಕಾರವನ್ನು  ಇಕ್ಕಟ್ಟಿಗೀಡುಮಾಡಿದ್ದಾರೆ. ಚರಿತ್ರೆಯ ಕೆಲವು ಘಟ್ಟಗಳಲ್ಲಿ ನಿಂತು ಐತಿಹಾಸಿಕ ಸರಕಾರಿ ಪ್ರಶಸ್ತಿ ಯನ್ನು ಸ್ವೀಕರಿಸುವುದರೊಂದಿಗೆ  ತನ್ನನ್ನು  ಅದರೊಂದಿಗೆ ಗುರುತಿಸಿಕೊಳ್ಳಲು ತಾನು ಬಯಸುವುದಿಲ್ಲವೆಂದೂ, ಇದರ ಬದಲಿಗೆ ಆಡಳಿತದಿಂದ ಅನ್ಯಾಯಕ್ಕೊಳಗಾಗಿರುವ ಮಂದಿಯ ಜತೆಗೇ ತನ್ನನ್ನು  ಗುರುತಿಸಿಕೊಳ್ಳಲು ಇಚ್ಛಿಸುವೆನೆಂದೂ ಆಕೆ ಈ ಮೂಲಕ ಸೂಚ್ಯವಾಗಿ ತಿಳಿಸಿದಂತಾಗಿದೆ.

        ರವೀಂದ್ರನಾಥ ಠಾಕೂರ್‌ ಜಲಿಯನ್‌ವಾಲಾ ಬಾಗ್‌ನಲ್ಲಿನ ಸಗಟು ಸಂಹಾರವನ್ನು  ಪ್ರತಿಭಟಿಸಿ 1919ರಲ್ಲಿ  ಇಂಗ್ಲೆಂಡ್‌ ಅರಸೊತ್ತಿಗೆಯ ನೈಟ್‌ಹುಡ್‌ ಅನ್ನು   ಮರಳಿಸಿದ್ದು , ಕೋಟ ಶಿವರಾಮ ಕಾರಂತರು ಇಂದಿರಾಗಾಂಧಿಯ ತುರ್ತು  ಪರಿಸ್ಥಿತಿ ಹೇರಿಕೆ ಆದೇಶವನ್ನು  ಪ್ರತಿಭಟಿಸಿ ಪದ್ಮಭೂಷಣ ಬಿರುದನ್ನು  ಸರಕಾರಕ್ಕೆ  ಹಿಂದಿರುಗಿಸಿದ್ದು - ಇಂಥ ಘಟನೆಗಳು ಕೇವಲ ಪ್ರತಿಭಟನೆಯಷ್ಟೇ  ಅಲ್ಲ , ನೈತಿಕ  ಪ್ರಶ್ನೆಗಳಿಗೆ  ಸಂಬಂಧಿಸಿದಂತೆ ಚರಿತ್ರೆಯ ಪುಟಗಳನ್ನೇ ಬದಲಿಸುವಂಥವು. ಅಲ್ಲದೆ ಇವು ತಮ್ಮನ್ನು  ಕೆಲವರೊಂದಿಗೆ ಗುರುತಿಸಿಕೊಂಡು ಇನ್ನು  ಕೆಲವರ ವಿರುದ್ಧ  ನಿಲ್ಲುವ ಧೋರಣೆಯನ್ನು  ಪ್ರಕಟಿಸುವ ಮೂಲಕ ಅಸ್ಮಿತೆಯ ಅಥವಾ ಸ್ವ-ಗುರುತಿಸುವಿಕೆಯ ರಾಜಕಾರಣ ಪ್ರಕ್ರಿಯೆಯನ್ನೂ ನಿರ್ವಹಿಸುವಂಥವು. ಘನ  ವ್ಯಕ್ತಿಗಳ ಇಂಥ ನಡವಳಿಕೆಗಳ ಗರ್ಭದಲ್ಲಿ  ನಾವೆಲ್ಲ  ಗೌರವಿಸುವ ಗಾಂಧಿತನವಿದೆ; ಕಾರಣ ಇವು ದಬ್ಟಾಳಿಕೆ ನಡೆಸುತ್ತಿರುವ ಸರಕಾರದ ಪಾಲಿಗೆ ಆತ್ಮನಿರೀಕ್ಷಣದ ಹಾಗೂ ಅಂತರೀಕ್ಷಣದ ಅವಕಾಶವನ್ನು  ಒದಗಿಸುತ್ತವೆ. ಯಾವ ಸಮಸ್ಯೆಗಳ ಕಾರಣದಿಂದ ಒಂದು ಪ್ರಶಸ್ತಿಯನ್ನೋ ಒಂದು ಪುರಸ್ಕಾರವನ್ನೋ ತಿರಸ್ಕರಿಸಲಾಗುತ್ತಿದೆಯೇ, ಅಂಥ ಸಮಸ್ಯೆಗಳನ್ನು  ಪುನರ್‌ಪರಿಶೀಲಿಸುವಂತೆ ಸರಕಾರದ ಮೇಲೆ ಒತ್ತಡ ತರುತ್ತವೆ. ಮೇಧಾ  ಪಾಟ್ಕರ್‌  ಮಾಡಿರುವುದೂ ಇದೇ. ಸರಕಾರದ ನೀತಿಗಳನ್ನು  ತಿರಸ್ಕರಿಸುತ್ತಲೇ, ಆಕೆ ಸರಕಾರವನ್ನು  ಇಂಥ ಪ್ರಶ್ನಾರ್ಹ  ನೀತಿ  ನಿಯಮಗಳ ಬಗ್ಗೆ  ಮರುಚಿಂತನೆ ನಡೆಸುವ ಅನಿವಾರ್ಯ ಸ್ಥಿತಿಗೆ ತಳ್ಳಿದ್ದಾರೆ.
        ಇದೇ ಕಾರಣಕ್ಕಾಗಿ ಆಕೆಯ  ಈ ತಿರಸ್ಕಾರ, ಆಕೆ ತೋರುತ್ತಿರುವ ಅಸಮ್ಮತಿಯೂ ಹೌದು, ಪ್ರಜಾಪ್ರಭುತ್ವದಲ್ಲಿ  ತೋರಬೇಕಾದ ಸಹಭಾಗಿತ್ವ ರಾಜಕಾರಣದ ಪ್ರವೃತ್ತಿಯೂ ಹೌದು. ಯಾಕೆಂದರೆ ಇದು ಜನರಿಂದ ಜನರಿಗಾಗಿ ಇರುವ ಸರಕಾರದೊಂದಿಗೆ ನಡೆಸಬೇಕಾದ ಮಾತುಕತೆಯ ಪ್ರಯತ್ನವೂ ಹೌದು.

        ಸರಕಾರಿ ಪ್ರಶಸ್ತಿ ಸ್ವೀಕರಿಸಿದೊಡದೆ ಹೊಸದೊಂದು ಐಡೆಂಟಿಟಿ ಬಂದಂತಾಗುತ್ತದೆ. ಈ ಹೊಸ ಐಡೆಂಟಿಟಿ ನಮ್ಮ ಚಳುವಳಿಗಳೊಂದಿಗೆ ಗುರುತಿಸಿಕೊಂಡ ವ್ಯಕ್ತಿತ್ವವನ್ನು ಮರೆಮಾಚಿಸುವುದಷ್ಟೇ ಅಲ್ಲದೆ, ಬದಲಿಸಿಯೂಬಿಡುತ್ತದೆ. ಇದರಿಂದ, ಚಳುವಳಿಗಳಿಗೆ ಧಕ್ಕೆಯಾಗುವುದು ಖಂಡಿತ ಎಂದು ಮೇಧಾ ಅವರೇ ಹೇಳಿದ್ದಾರೆ.

        ಹ್ರಿಸ್ಟೋ ಸ್ಮಿರೆ°ಸ್ಕಿಯ ಟೇಲ್‌ ಆಫ್ ತ್ರಿ ಸ್ಟೇರ್ಸ್‌ ನ ಕಥೆಯಲ್ಲಿ  ಜನರ ಪ್ರತಿನಿಧಿಯಾಗಿ ದೊರೆಯ ಬಳಿಗೆ ಹೋಗುತ್ತಿರುವ ಒಬ್ಬ  ವ್ಯಕ್ತಿಗೆ, ಮೂರು ದೆವ್ವಗಳು ಎದುರಾಗುವ  ಪ್ರಸಂಗವೊಂದಿದೆ.  ದೊರೆಯ ಭೇಟಿಗೆಂದು ಹೋಗುತ್ತಿರುವಾಗ ಒಂದೊಂದು ಮೆಟ್ಟಿಲಲ್ಲೂ  ಒಂದೊಂದು ದೆವ್ವ  ಅವನನ್ನು  ತಡೆದು ನಿಲ್ಲಿಸುತ್ತದೆ.  ಮೊದಲನೆಯ ದೆವ್ವ  ಅವನ ಕಿವಿಯನ್ನು  ತನಗೆ ಕೊಡುವಂತೆ ಕೇಳುತ್ತದೆ. ಎರಡನೆಯ ದೆವ್ವ  ಅವನ ಕಣ್ಣನ್ನು  ಕೇಳುತ್ತದೆ. ಮೂರನೆಯ ದೆವ್ವ ಅವನ ಹೃದಯ ಹಾಗೂ ಸ್ಮರಣಶಕ್ತಿಯನ್ನು  ತನಗೆ ಕೊಡುವಂತೆ ಕೇಳುತ್ತದೆ. ಹೀಗಾಗಿ ಆತ ಕೊನೆಗೆ ಅರಸನನ್ನು  ಕಂಡಾಗ, ಆತ ದೊರೆಯ ಭಾಷೆಯಲ್ಲೇ ಮಾತನಾಡುತ್ತಾನೆ. ಕಾರಣ, ಈಗ ಆತ ಜನರ ಕೂಗನ್ನು  ಕೇಳಿಸಿಕೊಳ್ಳಲಾರ, ತನ್ನದೇ ಜನರ ಗಾಯವೊಸರುತ್ತಿರುವ ನಗ್ನ ದೇಹಗಳನ್ನು  ಕಾಣಲಾರ. ಹಾಗೂ ಅವರ ಸಂಕಷ್ಟದ ನೆನಪೇ ಈಗ ಆತನಲ್ಲಿ  ಉಳಿದಿಲ್ಲ. ಹೀಗೆ, ಜನಪರ ವ್ಯಕ್ತಿಯಾಗಿದ್ದ  ಆತ ಸರಕಾರದ ವ್ಯಕ್ತಿಯಾಗಿಬಿಡುತ್ತಾನೆ.

        ಗಿರೀಶ್‌ ಕಾರ್ನಾಡರ ತುಘಲಕ್‌ ನಾಟಕದಲ್ಲಿ  ಬರುವ  ಮೌಲ್ವಿ, ದೊರೆಯ  ವಿಮರ್ಶಕನಾಗಿ ಎಚ್ಚರಿಕೆ  ನೀಡುತ್ತಿರುತ್ತಾನೆ. ಮೌಲ್ವಿ  ತನ್ನ  ಪಾಲಿಗೆ ಅಪಾಯಕಾರಿ ಎಂಬುದನ್ನರಿತ ದೊರೆ ಆತನನ್ನು  ಆದರಪೂರ್ವಕ ಸಮ್ಮಾನಿಸುತ್ತಾನೆ. ಈ ಸತ್ಕಾರದ ಉದ್ದೇಶ, ಜನರಿಗೆ ಮೌಲ್ವಿಯ ಮೇಲಿರುವ ನಂಬಿಕೆಯನ್ನು  ಅಳಿಸಿಹಾಕುವುದು.

        ಮೇಧಾ ಪಾಟ್ಕರ್‌ ಯಾಕೆ ಸಕ್ರಿಯ ರಾಜಕಾರಣದಲ್ಲಿ ಪಾಲ್ಗೊಳ್ಳುತ್ತಿಲ್ಲ ? ಸರಕಾರದ ಪುರಸ್ಕಾರ ಒಪ್ಪಿಕೊಂಡರೇನು ? ಈ ಬಗ್ಗೆ  ಬೇಕಷ್ಟು  ಆಡಿಕೊಳ್ಳಬಹುದು. ಸಾಕಷ್ಟು  ಚರ್ಚೆಯನ್ನೂ  ಮಾಡಬಹುದು.  ಆದರೆ, ಹ್ರಿಸ್ಟೋ ಸ್ಮಿರೆ°ಸ್ಕಿ ಕಥೆ ಹಾಗೂ ಕಾರ್ನಾಡರ ನಾಟಕ ನೀಡುವ ಸಂದೇಶದ ಬೆಳಕಿನಲ್ಲಿ  ಆಕೆಯ ರಾಜಕೀಯ ನಡೆಯನ್ನು  ನಾವು ಪಾಲಿಸಬೇಕಿದೆ. ಯಾರ ಹೆಸರಿನಲ್ಲಿ  ಈಗ  ಪ್ರಶಸ್ತಿಯನ್ನು  ಘೋಷಿಸಲಾಗಿದೆಯೋ ಅಂಥ ಬಸವಣ್ಣನವರ ವಚನದ ಸಾಲನ್ನು  ನೆನಪು ಮಾಡಿಕೊಳ್ಳಿ - ಹೊಗಳಿ ಹೊಗಳಿ ಹೊನ್ನಶೂಲಕ್ಕೇರಿಸಿದರಯ್ಯ.

        ತನ್ನ ಈ ಒಂದು ಹೆಜ್ಜೆಯಿಂದಾಗಿ ಸರಕಾರ ತನ್ನ ನೀತಿ ನಿಯಮ ಗಳನ್ನು ಬದಲಿಸುತ್ತದೆ ಎಂಬ ಭ್ರಮೆಯನ್ನು ಮೇಧಾ ಇಟ್ಟುಕೊಂಡಿಲ್ಲ. ಅವರು ಹೇಳುವ ಪ್ರಕಾರ, ಅಂಥ ಶಕ್ತಿ ತನಗಿಲ್ಲ. ಅಂಥ ಸಜ್ಜನಿಕೆ, ವಿವೇಕ ಆಡಳಿತಕ್ಕಿದೆಯೊ ಗೊತ್ತಿಲ್ಲ. ಅದಕ್ಕೆ ಚಳುವಳಿಗಳನ್ನು ರೂಪಿಸಬೇಕು. ಈ ತಿರಸ್ಕಾರ ಚಳುವಳಿಯ ಜನರಿಗೆ ಹೊಸದೊಂದು ಶಕ್ತಿ ನೀಡಬಹುದೆಂಬ ಭರವಸೆ ಇದೆ.

        ಚಳುವಳಿಗಳಿಗೆ ಹಣದ ಆವಶ್ಯಕತೆ ಇದೆ ಎಂದು ಹೇಳುವ ಮೇಧಾ ನರ್ಮದಾ ಬಚಾವೋಗೆ ಯಾವುದೇ ವಿದೇಶಿ ಮೂಲದ ಹಣ, ಸಹಾಯ ಅಥವಾ ಪ್ರಶಸ್ತಿ ಪಡೆದಿಲ್ಲ ಎಂದು ಹೇಳುತ್ತ , ಸಾವಿರಾರು ಸಮಜಾಯಿಷಿಗಳನ್ನು ಚಳುವಳಿ ನಡೆಸಲಾಗುವುದಿಲ್ಲ. ಹಾಗಾಗಿ, ಇಂಥ ಸಮಜಾಯಿಷಿಗಳ ಅನಿವಾರ್ಯತೆಗೆ ನೂಕುವ ಪ್ರಶಸ್ತಿ ಸ್ವೀಕರಿಸದೆ ಇರುವುದು ಉತ್ತಮ ಎಂದು ಹೇಳಿ, ಧನಬಲ ವಿಲ್ಲದ ಚಳುವಳಿಯ ನೈತಿಕ ಬಲ ಏನೆಂಬುದರ ಪರಿಚಯ ಮಾಡಿಕೊಟ್ಟಿದ್ದಾರೆ.

        ಕೊಡಮಾಡಲಾದ ಪುರಸ್ಕಾರಕ್ಕೆ  ಅಸಮ್ಮತಿ ಪ್ರಕಟಿಸುವ ಇಂಥ ನಡವಳಿಕೆ ಒಂದು ರಚನಾತ್ಮಕ ನಡೆಯೆ? ಅಧಿಕಾರದ ಶಕ್ತಿಯ ವಿರುದ್ಧದ ಜನರ ಹಕ್ಕಿನ ಹೋರಾಟದ ಪರಿಣಾಮ ಸರಕಾರದ ಮೇಲೆ ಆಗುವುದೆಂಬುದಿದೆಯೆ? ಮುಂತಾದ ಸಂದೇಹಗಳು ಈ ಸಂದರ್ಭದಲ್ಲಿ  ಉದ್ಭವಿಸಬಹುದು.

        ಕರಿ ಘನ, ಅಂಕುಶ ಕಿರಿದೆನ್ನಬಹುದೆ? ಬಾರದಯ್ನಾ

        ಗಿರಿ ಘನ, ವಜ್ರ ಕಿರಿದೆನ್ನಬಹುದೆ ? ಬಾರದಯ್ನಾ

        ತಮಂಧ ಘನ, ಜ್ಯೋತಿ ಕಿರಿದೆನ್ನಬಹುದೆ? ಬಾರದಯ್ನಾ

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಜೂನ್‌ ತಿಂಗಳು ಹತ್ತಿರವಾದಂತೆ ನಗರಗಳ ಅಪ್ಪ, ಅಮ್ಮಂದಿರಿಗೆ ತಮ್ಮ ಚಿಣ್ಣರನ್ನು ಹತ್ತಿರದ ಯಾವ ಒಳ್ಳೆಯ ಶಾಲೆಗಳಿಗೆ ಸೇರಿಸುವುದು ಎಂಬ ಚಿಂತೆ...
      • ಈ ವಿಭಾಗದಲ್ಲಿಯೂ ಇದೆ
      • Copyright @ 2009-2010 Udayavani.All rights reserved.
      • Designed & Hosted By 4cplus