Sunday, May 19, 2013
Last Updated: 5:31:18 AM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಗ್ರಾಮೀಣ ಘನತ್ಯಾಜ್ಯ ವಿಲೇವಾರಿಗೆ ಸ್ವಯಂ ಚಾಲಿತ ಯಂತ್ರ
    • ತ್ಯಾಜ್ಯ ವಿಲೇವಾರಿಯ ಯಂತ್ರ.

      • ರಾಕೇಶ್‌ ಕುಂಜೂರು | May 01, 2012

        ಕರಾವಳಿಯ ಯುವ ತಂತ್ರಜ್ಞರು ಶೋಧಿಸಿದ ಘಟಕ ಬೆಳಪುವಿನಲ್ಲಿ ಲೋಕಾರ್ಪಣೆಗೆ ಸಿದ್ಧತೆ

        ಕಾಪು: ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕಂಡು ಬರುವ ನಿತ್ಯ ದ‌ುರ್ವಾಸನೆ, ತ್ಯಾಜ್ಯ ವಿಲೇವಾರಿಗೆ ಪರದಾಟ, ಪ್ಲಾಸ್ಟಿಕ್‌ ನಿಷೇಧ ಆದೇಶವನ್ನು ಸಮರ್ಪಕವಾಗಿ ಅನುಷ್ಟಾನಕ್ಕೆ ತರಲಾಗದೇ ಅವಹೇಳನಕ್ಕೆ ಗುರಿಯಾಗುವ ಪರಿಸ್ಥಿತಿ, ಪರಿಸರ ನೈರ್ಮಲ್ಯವನ್ನು ಕಾಪಾಡಲಾಗದೇ ಪರದಾಡುವ ಪರಿಸ್ಥಿತಿಯನ್ನು ದೂರಮಾಡಿ ಅದಕ್ಕೊಂದು ಒಂದು ಸೂಕ್ತ ಪರಿಹಾರ ಒದಗಿಸ ಬಲ್ಲ ಘನ ತ್ಯಾಜ್ಯ ವಿಲೇವಾರಿ ಯಂತ್ರವನ್ನು ಕರಾವಳಿಯ ಯುವ ತಂತ್ರಜ್ಞರಿಬ್ಬರು ನೂತನ ತಂತ್ರಜ್ಞಾನದೊಂದಿಗೆ ಸಂಶೋದಿಸಿದ್ದಾರೆ.

        ನೂತನ ಘನತ್ಯಾಜ್ಯ ಘಟಕದ ತ್ಯಾಜ್ಯ ವಿಲೇವಾರಿಯ ರೇಖಾ ದೃಷ್ಯ.

        ಉಡುಪಿ ಜಿಲ್ಲೆಯ ಯುವ ಇಂಜಿನಿಯರ್‌ಗಳಾದ ಅಲೆವೂರಿನ ನಿದೀಶ್‌ ಶೆಟ್ಟಿ ಮತ್ತು ಕಾಪುವಿನ ಅಭಿಮಾನ್‌ ಶೆಟ್ಟಿ ಇವರುಗಳು ಜಂಟಿಯಾಗಿ ಸಂಶೋಧನೆ ನಡೆಸಿ ಗ್ರಾಮೀಣ ಭಾಗದ ಘನ ತ್ಯಾಜ್ಯ ವಿಲೇವಾರಿಗಾಗಿ ಸ್ವಯಂ ಚಾಲಿತ ಯಂತ್ರವನ್ನು ಸಿದ್ಧಪಡಿಸಿದ್ದು ಇದು ರಾಜ್ಯದಲ್ಲಿಯೇ ವಿನೂತನ ಯೋಜನೆಯಾಗಿ ಗುರುತಿಸಲ್ಪಟ್ಟಿದೆ. ನೂತನ ತಂತ್ರಜ್ಞಾನದೊಂದಿಗೆ ಅವಿಷ್ಕಾರಗೊಂಡಿರುವ ಈ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಬೆಳಪು ಗ್ರಾಮದಲ್ಲಿ ಎ. 2ರಂದು ಲೋಕಾರ್ಪಣೆಗೊಳಿಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ.

        ಈ ಘನ ತ್ಯಾಜ್ಯ ವಿಲೇವಾರಿ ಘಟಕವು ಸಾರ್ವಜನಿಕವಾಗಿ ಕಂಡು ಬರುವ ಘನ ಮತ್ತು ಒಣ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಸೂಕ್ತ ಮಾರ್ಗೋಪಾಯವಾಗಲಿದೆ. ಕಡಿಮೆ ಸ್ಥಳಾವಕಾಶದಲ್ಲಿ, ಅತೀ ಕಡಿಮೆ ಖರ್ಚಿನಲ್ಲಿ ಗ್ರಾಮದ ಸಂಪೂರ್ಣ ಕಸಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ಸಾಮರ್ಥಯವಿರುವ ಈ ಘನತ್ಯಾಜ್ಯ ವಿಲೇವಾರಿ ಘಟಕದ ಸ್ಥಾಪನೆಯು ಸ್ಥಳೀಯಾಡಳಿತ ಪ್ರದೇಶಗಳಲ್ಲಿನ ತ್ಯಾಜ್ಯದ ಸಮಸ್ಯೆಗಳಿಗೆ ಶಾಶ್ವತವಾದ ಮುಕ್ತಿಯನ್ನು ಒದಗಿಸುವಲ್ಲಿ ಸಹಕಾರಿಯಾಗಲಿದೆ.

        ಯಂತ್ರದೊಳಗೆ ಹೋಗಲು ಸಿದ್ಧವಾಗಿರುವ ಪ್ಲಾಸ್ಟಿಕ್‌ ತ್ಯಾಜ್ಯಗಳು.

        ಕಡಿಮೆ ಖರ್ಚು, ಕಡಿಮೆ ಸ್ಥಳಾವಕಾಶ : ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಕಡಿಮೆ ಅವದಿಯಲ್ಲಿ ವಿಲೇವಾರಿ ಮಾಡಬಲ್ಲಂತಹ ಸಾಮರ್ಥ್ಯವಿರುವ 30x60 ಸ್ಥಳದಲ್ಲಿ ಸ್ಥಾಪಿಸ ಬಹುದಾಗಿರುವ ಈ ಘನ ತ್ಯಾಜ್ಯ ವಿಲೇವಾರಿ ಘಟಕದ ಅಂದಾಜು ಮೌಲ್ಯ 5 ರಿಂದ 6 ಲಕ್ಷ ರೂ. ಗಳಾಗಿದೆ. ಕಡಿಮೆ ಆದಾಯವಿರುವ ಗ್ರಾ. ಪಂ. ವ್ಯಾಪ್ತಿಗಳಲ್ಲಿ ದೊರಕುವ ತ್ಯಾಜ್ಯಗಳನ್ನು ಈ ಘಟಕದ ಮೂಲಕವಾಗಿ ವಿಲೇವಾರಿ ಮಾಡಬಹುದಾಗಿದ್ದು, ಹೆಚ್ಚಿನ ತ್ಯಾಜ್ಯವಿರುವಲ್ಲಿ ಇದಕ್ಕಿಂತ ಹೆಚ್ಚಿನ ಸಾಮರ್ಥಯದ ಯಂತ್ರವನ್ನು ಅಳವಡಿಸಿಕೊಳ್ಳಬಹುದಾಗಿದೆ. ಈ ಘಟಕವು ದಿನವೊಂದಕ್ಕೆ 3 ರಿಂದ 5 ಟನ್‌ಗಳಷ್ಟು ತ್ಯಾಜ್ಯವನ್ನು ವಿಲೇವಾರಿ ಮಾಡುವ ಸಾಮರ್ಥಯವನ್ನು ಹೊಂದಿದೆ.

        ಪೌಡರ್‌ ಗೊಬ್ಬರಕ್ಕೆ, ಪ್ಲಾಸ್ಟಿಕ್‌ ಮಾರಾಟಕ್ಕೆ : ಈ ಯಂತ್ರದ ಮೂಲಕ ನಗರ ಸಭೆ, ಪುರಸಭೆ ಮತ್ತು ಗ್ರಾಮ ಪಂಚಾಯತ್‌ಗಳಲ್ಲಿ ಅನುಕೂಲವಾಗುವ ರೀತಿಯಲ್ಲಿ ಕಡಿಮೆ ವೆಚ್ಚದಲ್ಲಿ ಸಂಪೂರ್ಣ ಕಸ ವಿಲೇವಾರಿ ಮಾಡಲಾಗುತ್ತದೆ. ಗ್ರಾಮ ಮಟ್ಟದಲ್ಲಿ ದೊರಕುವ ತ್ಯಾಜ್ಯಗಳಲ್ಲಿ ಘನ ತ್ಯಾಜ್ಯ ಮತ್ತು ಪ್ಲಾಸ್ಟಿಕ್‌ ವಸ್ತುಗಳನ್ನು ಪ್ರತ್ಯೇಕಿಸಿ ಘನ ತ್ಯಾಜ್ಯವನ್ನು ಸಂಪೂರ್ಣವಾಗಿ ಪುಡಿ ಪುಡಿ ಮಾಡಿ ಪೌಡರ್‌ ರೀತಿಯಲ್ಲಿ ಪೌಷ್ಟಿಕ ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತದೆ. ಪ್ರತ್ಯೇಕಿಸಿದ ತ್ಯಾಜ್ಯಗಳಲ್ಲಿ ಬರುವ ಪೌಡರ್‌ನ್ನು ನೈಸರ್ಗಿಕ ಗೊಬ್ಬರವನ್ನಾಗಿಸಿ ಕೃಷಿಗೆ ಉಪಯುಕ್ತವಾಗುವಂತೆ ಮಾಡಲಾಗುತ್ತದೆ. ಪ್ಲಾಸ್ಟಿಕ್‌ ವಸ್ತುಗಳನ್ನು ಬ್ಲಾಕ್‌ ಮಾಡಿ (ಅಚ್ಚು ತಯಾರಿಸಿ) ಮರು ಬಳಕೆಗಾಗಿ ಕಂಪೆನಿಗೆ ಮಾರಾಟ ಮಾಡಬಹುದಾಗಿದೆ. ಮಾತ್ರವಲ್ಲದೇ ಇದರಿಂದ ಸ್ಥಳೀಯ ಸಂಪನ್ಮೂಲವನ್ನು ಅಭಿವೃದ್ಧಿ ಪಡಿಸಲು ಅವಕಾಶ ನೀಡಿದಂತಾಗುತ್ತದೆ.

        ರಾಜ್ಯದಲ್ಲಿ ಪ್ರಥಮ, ಮುಂದೆ ದೇಶಾದ್ಯಂತ ವಿಸ್ತರಣೆಗೆ ಸಿದ್ಧತೆ : ಗಾಮೀಣ ಪ್ರದೇಶಗಳಲ್ಲಿ ಸಂಪೂರ್ಣ ತ್ಯಾಜ್ಯ ವಿಲೇವಾರಿಗೆ ಈ ಘಟಕ ಸಹಕಾರಿಯಾಗಲಿದೆ. ದೈನಂದಿನ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲು ಅವಕಾಶವಿರುವ ಈ ಘಟಕವು ಕರ್ನಾಟಕದ ಉಡುಪಿ ಜಿಲ್ಲೆಯ ಬೆಳಪು ಗ್ರಾಮದಲ್ಲಿ ಪ್ರಥಮವಾಗಿ ಅಳವಡಿಕೆಯಾಗಿದೆ. ನಗರ ಪ್ರದೇಶಗಳಿಗೆ ಮೊಬೈಲ್‌ ಘಟಕಗಳ ಮೂಲಕ ಈ ಯಂತ್ರವನ್ನು ವಿಸ್ತರಿಸುವ ಯೋಜನೆಯಿದ್ದು, ಮುಂದೆ ದೇಶದಾದ್ಯಂತ ಈ ಘಟಕವನ್ನು ವಿಸ್ತರಿಸ ಬೇಕೆಂಬ ಇರಾದೆ ಈ ಘಟಕದ ಸ್ಥಾಪಕರದ್ದಾಗಿದೆ.

        ಬೆಳಪು ಗ್ರಾಮದಲ್ಲಿ ಪ್ರಾಯೋಗಿಕ ಪರೀಕ್ಷೆ : ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಘನತ್ಯಾಜ್ಯ ವಿಲೇವಾರಿಯದ್ದೇ ದೊಡ್ಡ ಸಮಸ್ಯೆಯಾಗಿದ್ದು, ಈ ಸಮಸ್ಯೆಯ ಪರಿಹಾರಕ್ಕಾಗಿ ಯುವ ಇಂಜಿನಿಯರ್‌ಗಳು ಮುಂದೆ ಬಂದಿರುವುದು ಶ್ಲಾಘನೀಯವಾಗಿದೆ. ದೀರ್ಘ‌ವಾದ ಸಮಸ್ಯೆಗೆ ಕಡಿಮೆ ಅವದಿಯಲ್ಲಿ ಮುಕ್ತಿ ನೀಡುವ ಯೋಜನೆ ಇದಾಗಿದ್ದು ಶಾಸಕರ ನಿದಿ, ಜಿಲ್ಲಾ ಪಂಚಾಯತ್‌ ನಿದಿ ಮತ್ತು ಗ್ರಾಮ ಪಂಚಾಯತ್‌ ನಿದಿಯನ್ನು ಬಳಸಿಕೊಂಡು ಈ ಯೋಜನೆಯನ್ನು ಅನುಷ್ಟಾನಿಸ ಬಹುದಾಗಿದೆ ಎಂದು ಬೆಳಪು ಗ್ರಾ. ಪಂ ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ ಹೇಳಿದ್ದಾರೆ.

        ಗ್ರಾಮಾಭಿವೃದ್ಧಿಯೊಂದಿಗೆ ಗ್ರಾಮ ನೈರ್ಮಲ್ಯಕ್ಕೂ ಹೆಚ್ಚಿನ ಒತ್ತು ನೀಡ ಬೇಕಾಗಿದ್ದು, ನೈರ್ಮಲ್ಯದ ಸಮಸ್ಯೆಯಿಂದಾಗಿ ಇಂದು ಹಲವಾರು ಗ್ರಾಮ ಪಂಚಾಯತ್‌ಗಳು ಸಾರ್ವಜನಿಕರ ಕೋಪ-ತಾಪಗಳಿಗೆ ಗುರಿಯಾಗುತ್ತಿವೆ. ಗ್ರಾಮವನ್ನು ತ್ಯಾಜ್ಯ ಮುಕ್ತವನ್ನಾಗಿಸುವುದರೊಂದಿಗೆ ಒಮ್ಮೆ ಬಳಸಿದ ತ್ಯಾಜ್ಯವನ್ನು ಮರು ಬಳಸಲು ಅವಕಾಶ ಮಾಡಿಕೊಡುವ ಈ ಘಟಕವು ಅಂದಂದಿನ ತ್ಯಾಜ್ಯಗಳನ್ನು ಅಂದೇ ವಿಲೇವಾರಿ ಮಾಡುವ ಸಾಮರ್ಥಯವನ್ನೂ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

        ಫಾರಿನ್‌ ಆಸೆ ಬಿಟ್ಟ ಹುಟ್ಟೂರ ಸಾಧಕರು : ಕರ್ನಾಟಕ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಸ್ವಯಂ ಚಾಲಿತ ಘನತ್ಯಾಜ್ಯ ವಿಲೇವಾರಿಗೆ ಸುವರ್ಣಾವಕಾಶವನ್ನು ಕಲ್ಪಿಸಿಕೊಟ್ಟಿರುವ ಯುವ ತಂತ್ರಜ್ಞರಿಬ್ಬರೂ ವಿದ್ಯೆ-ಉದ್ಯೋಗ ಅರಸಿ ವಿದೇಶದಲ್ಲಿದ್ದವರು. ಐಟಿ-ಬಿಟಿಯಂತಹ ಕಂಪೆನಿಗಳಲ್ಲಿ ಉನ್ನತ ಉದ್ಯೋಗಿಗಳೂ ಆಗಿದ್ದರು. ಅಲೆವೂರು ನಿದೀಶ್‌ ಶೆಟ್ಟಿಯವರು (ಬಿ. ಇ) ತಮ್ಮಲ್ಲಿದ್ದ ಪರಿಸರ ಪ್ರೇಮದ ವ್ಯಾಮೋಹದಿಂದಾಗಿ ಈ ಮಹತ್ಕಾರ್ಯಕ್ಕೆ ಕೈ ಹಾಕಿದ್ದು, ಮುಂದೆ ಈ ಯೋಜನೆಗೆ ಕಾಪುವಿನ ಅಭಿಮಾನ್‌ ಶೆಟ್ಟಿ (ಬಿ.ಇ., ಎಂ.ಬಿ.ಎ) ಕೈಜೋಡಿಸಿದರು. ಇವರಿಬ್ಬರ ಈ ಪರಿಸರ ಪ್ರೇಮಿ ಸಂಶೋಧನಾ ಸಾಧನೆಗೆ ದೇಶ-ವಿದೇಶಗಳಿಂದ ಹಲವು ಪ್ರಶಸ್ತಿಗಳು ಲಭ್ಯವಾಗಿದ್ದು,ಈ ಯಂತ್ರದ ಕುರಿತಾಗಿ ಯು.ಎನ್‌.ಎ. ನಲ್ಲೂ ಪ್ರಾಯೋಗಿಕ ಪ್ರಾತ್ಯಕ್ಷತೆಯನ್ನು ನೀಡಿದ್ದಾರೆ. ಮುಂದೆ ಈ ಸಾಧನವನ್ನು ಹೆಚ್ಚಿನ ಆಧುನಿಕತೆ ಮತ್ತು ತಂತ್ರಜ್ಞಾನದೊಂದಿಗೆ ಎಲ್ಲೆಡೆಗೆ ವಿಸ್ತರಿಸಬೇಕೆಂಬ ಹಂಬಲವಿದ್ದು, ಇದಕ್ಕೆ ನಾಗರಿಕರು, ಅದಿಕಾರಿಗಳು, ಜನಪ್ರತಿನಿದಿಗಳು ಮತ್ತು ಸಮಾಜದ ಬೆಂಬಲದ ಅಗತ್ಯತೆಯಿದೆ ಎಂದು ನಿದೀಶ್‌ ಶೆಟ್ಟಿ ಮತ್ತು ಅಭಿಮಾನ್‌ ಶೆಟ್ಟಿ ಉದಯವಾಣಿಗೆ ತಿಳಿಸಿದ್ದಾರೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus