Thursday, May 23, 2013
Last Updated: 4:52:43 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಆರೋಗ್ಯವಾಣಿ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಬೇಸಗೆಯಲ್ಲಿ ಚರ್ಮದ ಕಾಂತಿಗೆ ಸಲಹೆಗಳು
    • ಬೇಸಗೆಯಲ್ಲಿ ಚರ್ಮದ ಕಾಂತಿಗೆ ಸಲಹೆಗಳು.

      • ಡಾ| ವಿಂದ್ಯಾ ಪೈಚರ್ಮರೋಗ ತಜ್ಞರು ಚರ್ಮರೋಗಗಳ ಚಿಕಿತ್ಸಾ ವಿಭಾಗ | May 06, 2012

        ಬೇಸಿಗೆಯಲ್ಲಿ ಚರ್ಮದ ಕಾಂತಿ ಉಳಿಸಿಕೊಳ್ಳಲು ಇರುವ ಏಕೈಕ ಮಂತ್ರ ಎಂದರೆ ಜಲೀಕರಣ, ಚರ್ಮ ಶೌಚ ಮತ್ತು ಚರ್ಮ ಸಂರಕ್ಷಣೆ (hydrate exfoliate & protect).

        1. ಜಲೀಕರಣ (Hydrate)

        ಪ್ರತಿದಿನ ಕನಿಷ್ಠ 2 ಲೀಟರ್‌ಗಳಷ್ಟಾದರೂ ನೀರನ್ನು ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ದೇಹದಿಂದ ಹೊರಗೆ ವಿಸರ್ಜಿತಗೊಳ್ಳುವುದು ಸುಲಭವಾಗುತ್ತದೆ ಮತ್ತು ಇದರಿಂದಾಗಿ ಚರ್ಮಕ್ಕೆ ನೈಸರ್ಗಿಕವಾದ ಕಾಂತಿ ಲಭ್ಯವಾಗುತ್ತದೆ. ಬೇಸಗೆಯಲ್ಲಂತೂ ಇದು ಇನ್ನಷ್ಟು ಮುಖ್ಯ ವಾಗುತ್ತದೆ. ಏಕೆಂದರೆ, ನಾವು ಬೆವರಿನ ರೂಪದಲ್ಲಿ ದೊಡ್ಡ ಪ್ರಮಾಣದಲ್ಲಿ ನೀರನ್ನು ಕಳೆದುಕೊಳ್ಳುತ್ತಿರುತ್ತೇವೆ. ಹಾಗಾಗಿ, ಆರೋಗ್ಯ ವಂತ ಚರ್ಮಕ್ಕೆ ಜಲೀಕರಣ ಬಹಳ ಮುಖ್ಯ.

        ಇದಲ್ಲದೆ, ದೇಹಕ್ಕೆ ಬೀಟಾ ಕ್ಯಾರೋಟೀನ್‌ ವಿಟಾಮಿನ್‌ ಸಿ, ವಿಟಾಮಿನ್‌ ಇ ಗಳಂತಹ ಪೋಷಕಾಂಶಗಳೂ ಅಗತ್ಯ ಪ್ರಮಾಣದಲ್ಲಿ ದೊರಕುವಂತಾಗುವುದು ಕೂಡ ಮುಖ್ಯ.

        2. ಚರ್ಮ ಶೌಚ(Exfoliation)

        ಚರ್ಮದ ಮೇಲೆ ಬಿರುಸಾಗಿ ವರ್ತಿಸದ ಮತ್ತು ಚರ್ಮದ ಪಿಎಚ್‌ (pH) ಮೌಲ್ಯಕ್ಕೆ ಹತ್ತಿರವಿರುವ ಹಲವು ಸೋಪುಗಳು, ಕ್ಲೆನ್ಸರ್‌ ದ್ರಾವಣಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಚರ್ಮದ ಹೊರಪದರದಲ್ಲಿರುವ ಸತ್ತ ಕೋಶಗಳನ್ನು ತೆಗೆದು ಹಾಕಿ, ಚರ್ಮದ ಕಾಂತಿಗೆ ಅಗತ್ಯವಿರುವ ಕೊಬ್ಬಿನ (ಲಿಪಿಡ್‌) ಅಂಶವನ್ನು ಒದಗಿಸುವ ಈ ಉತ್ಪನ್ನಗಳನ್ನು  ಕ್ರಮಬದ್ಧವಾಗಿ ಬಳಸಬೇಕಾಗುತ್ತದೆ. ಒಣಚರ್ಮ ಸಂಬಂಧಿ ತೊಂದರೆಗಳು, ಮೊಡವೆಗಳ ತೊಂದರೆ, ಚರ್ಮದ ಮೇಲೆ ಬಣ್ಣದ ಕಲೆಗಳು  (pigmentation) ಮತ್ತಿತರ ತೊಂದರೆಗಳಿರುವವರಿಗೂ ಕೂಡ ಸೂಕ್ತವಾಗಬಲ್ಲ, ಅಲರ್ಜಿಕಾರಕ ಅಂಶಗಳು ಕಡಿಮೆ ಇರುವ ವೈವಿಧ್ಯಮಯ ಕ್ಲೆನ್ಸರ್‌ ದ್ರಾವಣಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವುಗಳ ಬಗ್ಗೆ ಸರಿಯಾಗಿ ಅರಿತು, ಅವುಗಳನ್ನು ಎಚ್ಚರದಿಂದ ಉಪಯೋಗಿಸಬೇಕಾಗುತ್ತದೆ.

        3. ಸಂರಕ್ಷಣೆ (Protection)

        ಬೇಸಗೆಯಲ್ಲಿ ಮಕ್ಕಳು - ದೊಡ್ಡವರೆನ್ನದೆ ಎಲ್ಲರೂ ಹೊರಾಂಗಣ ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ. ಮಕ್ಕಳಿಗೆಂದು ನಗರದ ಮೂಲೆ ಮೂಲೆಗಳಲ್ಲೂ ಬೇಸಗೆ ಶಿಬಿರಗಳು ಆಯೋಜಿತವಾಗಿರುತ್ತವೆ; ಅಲ್ಲಿ ಈಜು, ಹೊರಾಂಗಣ ಆಟ, ಚಟುವಟಿಕೆಗಳು ಎಂದು ಹತ್ತು ಹಲವು ಹೊರಾಂಗಣ ಚಟುವಟಿಕೆಗಳು ನಡೆಯುತ್ತಿರುತ್ತವೆ.

        ಸೂರ್ಯನ ಕಿರಣಗಳು ದೇಹದಲ್ಲಿ ಮೂಳೆಗಳು ಬಲಗೊಳ್ಳಲು ಅಗತ್ಯ ಇರುವ ವಿಟಾಮಿನ್‌ ಡಿಯನ್ನು ಒದಗಿಸುತ್ತವೆ. ಇದಕ್ಕೆ ದಿನದಲ್ಲಿ 10-15 ನಿಮಿಷಗಳ ಸೂರ್ಯನ ಎಳೆ ಬಿಸಿಲು ಸಾಕಾಗುತ್ತದೆ. ಆದರೆ ಇದೇ ವೇಳೆ ಸೂರ್ಯನ ಬಿಸಿಲಿನಿಂದ ಚರ್ಮಕ್ಕೆ ದೀರ್ಘಾವಧಿಯಲ್ಲಿ ಹಾನಿ ಕೂಡ ಸಂಭವಿಸಬಹುದು. ಸೂರ್ಯನ ಬಿಸಿಲಿಗೆ ಸುಟ್ಟ ಕಲೆಗಳು (ಮೆಲಾಸ್ಮಾ), ಚರ್ಮ ಬಣ್ಣಗೆಡುವುದು (tanning), ಚರ್ಮದ ವರ್ಣಕಾರಕಗಳಲ್ಲಿ ಅಸಹಜ ವ್ಯತ್ಯಾಸಗಳು ಮತ್ತು ಅಪರೂಪಕ್ಕೆ ಚರ್ಮದ ಕ್ಯಾನ್ಸರ್‌ ಕೂಡ ಕಾಣಿಸಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಸನ್‌ಸ್ಕ್ರೀನ್‌ಗಳ ಬಗ್ಗೆ ತಿಳಿದಿರುವುದು ಬಹಳ ಮುಖ್ಯ.

        ಸಾಮಾನ್ಯವಾಗಿ ಸನ್‌ಸ್ಕ್ರೀನ್‌ಗಳ ಬಗ್ಗೆ ಜನಸಾಮಾನ್ಯ ಈ ಕೆಳಗಿನ ಪ್ರಶ್ನೆಗಳನ್ನು ಹೊಂದಿರುತ್ತಾರೆ.

        a.  ನನ್ನದು ಎಣ್ಣೆಯುಕ್ತ ಚರ್ಮ. ನಾನು ಸನ್‌ಸ್ಕ್ರೀನ್‌ ಹಾಕಿಕೊಂಡರೆ ಇನ್ನಷ್ಟು ಎಣ್ಣೆಮಯ ಆಗುವುದಿಲ್ಲವೆ?

        ಉತ್ತರ: ಇಂದು ಮಾರುಕಟ್ಟೆಯಲ್ಲಿ ಎಣ್ಣೆಯುಕ್ತ ಅಲ್ಲದ (Non comedogenic) ಸೌಮ್ಯ ಸನ್‌ಸ್ಕ್ರೀನ್‌ಗಳು ಲಭ್ಯವಿವೆ. ಇವು ಮೊಡವೆಯುಕ್ತ ಚರ್ಮಕ್ಕೂ ಸೂಕ್ತ. ಇವುಗಳನ್ನು ಮುಖಕ್ಕೆ ಹಚ್ಚಿಕೊಂಡ ಬಳಿಕ, ಅದರ ಮೇಲೆ ಮಿನರಲ್‌ವೇರ್‌ ಮೇಕಪ್‌ ಬಳಸಿದರೆ, ಅದು ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುವುದಲ್ಲದೆ, ಮುಖ ಎಣ್ಣೆಮಯವಾಗಿರದಂತೆ ತಡೆಯುತ್ತದೆ. ಜೊತೆಗೆ ಸನ್‌ಸ್ಕ್ರೀನ್‌ ಕೂಡ ಮುಖದಲ್ಲಿ ಹೆಚ್ಚು ಅವಧಿಗೆ ಪರಿಣಾಮಕಾರಿಯಾಗಿ ಉಳಿಯುತ್ತದೆ.

        b. ಎಷ್ಟು ಪ್ರಮಾಣದಲ್ಲಿ ಸನ್‌ಸ್ಕ್ರೀನ್‌ ಹಚ್ಚಿಕೊಳ್ಳಬೇಕು?

        ಉತ್ತರ: ಸೂರ್ಯನ ಬೆಳಕಿಗೆ ತೆರೆದುಕೊಳ್ಳುವ ಚರ್ಮ ಭಾಗಗಳ (ಅಂದರೆ ಮುಖ, ಕುತ್ತಿಗೆ, ತೋಳುಗಳು) ಪ್ರತೀ ಚದರ ಸೆಂಟಿಮೀಟರ್‌ಗೆ ಸುಮಾರು ಎರಡು ಮಿಲಿಗ್ರಾಂನಷ್ಟು ಸನ್‌ಸ್ಕ್ರೀನ್‌

        ಹಚ್ಚಿಕೊಳ್ಳಬೇಕಾಗುತ್ತದೆ. ಹಚ್ಚುವಾಗಲೂ, ವೃತ್ತಾಕಾರವಾಗಿ ಹಚ್ಚಿಕೊಳ್ಳಬೇಕಾಗುತ್ತದೆ. ಇದ ಕ್ಕಿಂತ ಕಡಿಮೆ ಹಚ್ಚಿಕೊಂಡರೆ ಪ್ರಯೋಜನ ಇಲ್ಲ.

        c. ನನ್ನ ಮಗುವಿಗೂ ಸನ್‌ಸ್ಕ್ರೀನ್‌ ಹಚ್ಚಬೇಕೆ?

        ಉತ್ತರ:
        ಖಂಡಿತಾ. ಮಗುವಿಗೂ ಕೂಡ ಸೂರ್ಯನ ಬೆಳಕಿನಿಂದ ರಕ್ಷಣೆ ಬೇಕು. ಇಲ್ಲದಿದ್ದರೆ ಚರ್ಮದ ಬಣ್ಣ ಹದಗೆಟ್ಟು, ಮುಖದಲ್ಲಿ ವರ್ಣಕಾರಕಗಳ ತೊಂದರೆ ಕಾಣಿಸಿಕೊಳ್ಳಬಹುದು. ಮಕ್ಕಳಿಗೆ ಸುರಕ್ಷಿತ ಎಂದು ಪರಿಗಣಿತವಾಗಿರುವ ಜಿಂಕ್‌ ಆಕ್ಸೆ„ಡ್‌ ಸಹಿತ ಸನ್‌ಸ್ಕ್ರೀನ್‌ಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯ.

        *ಸನ್‌ಸ್ಕ್ರೀನ್‌ಗಳನ್ನು ಹೊರ ಹೊರಡುವ ಅರ್ಧ ಗಂಟೆ ಮೊದಲು ಹಚ್ಚಿಕೊಳ್ಳಬೇಕು.

        *ಬೆಳಗ್ಗೆ 10ರಿಂದ ಸಂಜೆ 4ರ ತನಕದ ಬಿರು ಬಿಸಿಲನ್ನು ತಪ್ಪಿಸಿಕೊಳ್ಳಲು ನೋಡಿ.

        *ಇಂದು ಲಭ್ಯವಿರುವ ಕೆಲವು ಸನ್‌ಸ್ಕ್ರೀನ್‌ಗಳು UVA ಮತ್ತು UVB ಅತಿ ನೇರಳೆ ಕಿರಣಗಳಿಗೆ
        ವಿಸ್ತೃತವಾದ ಶ್ರೇಣಿಯಲ್ಲಿ ರಕ್ಷಣೆ ಒದಗಿಸಬಲ್ಲವು. ಹಾಗಾಗಿ, ನಮ್ಮ ಚರ್ಮಕ್ಕೆ ಸೂಕ್ತವೆನಿಸುವ ಸನ್‌ಸ್ಕ್ರೀನನ್ನು ಆರಿಸಿಕೊಳ್ಳುವುದು ಬಹಳ ಮುಖ್ಯ.

        *ದ್ವಿಚಕ್ರ ವಾಹನಗಳನ್ನು ಚಲಾಯಿಸುವವರು ತಮ್ಮ ತೋಳುಗಳನ್ನು ರಕ್ಷಿಸಿಕೊಳ್ಳಲು ಸೂಕ್ತವಾದ ಉಡುಪು ಧರಿಸಿರುವುದು ಅಗತ್ಯ.

        *ಅಗಲ ಅಂಚಿನ ಹ್ಯಾಟ್‌, ಕೊಡೆ ಮತ್ತು ಅತಿ ನೇರಳೆ ಕಿರಣದಿಂದ 100% ರಕ್ಷಣೆ ನೀಡಬಲ್ಲ  ಕೂಲಿಂಗ್‌ ಗ್ಲಾಸ್‌ಗಳನ್ನು ಧರಿಸುವುದು ಕೂಡ ಬಹಳ ಮುಖ್ಯ.

        ಇವುಗಳನ್ನು ಸಮರ್ಪಕವಾಗಿ ಅನುಸರಿಸಿದರೆ, ನಿಮಗೆ ಬೇಸಗೆಯಲ್ಲೂ ಚರ್ಮಕಾಂತಿ ಪಡೆಯುವುದು ಕಷ್ಟವೇನಲ್ಲ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಕೆಲವು ಔಷಧಿಗಳು, ಕೆಲವು ಕಾಯಿಲೆಗಳು, ಅಧಿಕ ಮದ್ಯಪಾನ ಸೇವನೆ, ಮತ್ತು ಬ್ಯಾಕ್ಟೀರಿಯಾ ಹಾಗೂ ವೈರಸ್‌ ಸೋಂಕುಗಳ ಕಾರಣದಿಂದ ಹೆಪಾಟೈಟಿಸ್‌ ಬರಬಹುದು...
      • ಈ ವಿಭಾಗದಲ್ಲಿಯೂ ಇದೆ
      • Copyright @ 2009 Udayavani.All rights reserved.
      • Designed & Hosted By 4cplus