Monday, May 20, 2013
Last Updated: 11:37:55 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ದ.ಕ., ಉಡುಪಿಗೆ ಮಹತ್ವಪೂರ್ಣ ಪಶ್ಚಿಮವಾಹಿನಿ
    • ನದಿಗಳ ನೀರಿನ ಪರಿಣಾಮಕಾರಿ ಬಳಕೆಯ ಕುರಿತಾದ ಮಹಾ ಯೋಜನೆಯೊಂದು ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ.

      • ಮನೋಹರ ಪ್ರಸಾದ್‌ | May 10, 2012

        ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನದಿಗಳ ನೀರಿನ ಪರಿಣಾಮಕಾರಿ ಬಳಕೆಯ ಕುರಿತಾದ ಮಹಾ ಯೋಜನೆಯೊಂದು (ಮಾಸ್ಟರ್‌ ಪ್ಲಾನ್‌) ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ.

        ಕರಾವಳಿಯ ಈ ಉಭಯ ಜಿಲ್ಲೆಗಳಲ್ಲಿ ಭೌಗೋಳಿಕವಾಗಿ 8.44 ಲಕ್ಷ ಹೆಕ್ಟೇರ್‌ ಭೂಪ್ರದೇಶವಿದ್ದು ಪ್ರಸ್ತುತ ಕೃಷಿಕಾರ್ಯದ ಸಾಗುವಳಿ ನಡೆಯುತ್ತಿರುವ ಪ್ರದೇಶದ ಪ್ರಮಾಣ 2.68 ಲಕ್ಷ ಹೆಕ್ಟೇರ್‌. ಈ ಮಹಾ ಯೋಜನೆಯನ್ನು 'ಪಶ್ಚಿಮದ ಕಡೆಗೆ ಹರಿಯುತ್ತಿರುವ ನದಿಗಳು ಮತ್ತು ತೊರೆಗಳ ಉಪ್ಪು ನೀರು ಪ್ರತ್ಯೇಕಿಸಲು ಅಣೆಕಟ್ಟು/ ವೆಂಟೆಡ್‌ ಡ್ಯಾಂಗಳ ನಿರ್ಮಾಣ ಮತ್ತು ನದೀ ದಂಡೆ (ದಡ) ರಕ್ಷಣಾ ಕಾಮಗಾರಿ' ಎಂದು ಸರಕಾರಿ ದಾಖಲೆಗಳಲ್ಲಿ ಉಲ್ಲೇಖೀಸಲಾಗಿದೆ.

        ಈ ಬಾರಿಯ ಮುಂಗಡಪತ್ರದಲ್ಲಿಯೂ ಈ ಯೋಜನೆಗೆ ಅನುದಾನವನ್ನು ಮುಖ್ಯಮಂತ್ರಿ ಪ್ರಸ್ತಾವಿಸಿದ್ದಾರೆ. ಹೀಗೆ ಯೋಜನೆ ಯಾವುದೇ ಆರ್ಥಿಕ ಸಮಸ್ಯೆಗಳಿಲ್ಲದೆ ಪೂರ್ಣಗೊಳ್ಳುವುದೆಂದು ನಿರೀಕ್ಷಿಸಬಹುದಾಗಿದೆ.

        ದಕ್ಷಿಣ ಕನ್ನಡದ ಗಡಿಗಳು: ಪೂರ್ವದಲ್ಲಿ ಪಶ್ಚಿಮಘಟ್ಟ, ಪಶ್ಚಿಮದಲ್ಲಿ ಅರಬೀ ಸಮುದ್ರ, ದಕ್ಷಿಣದಲ್ಲಿ ಕೇರಳ ರಾಜ್ಯ ಮತ್ತು ಉತ್ತರದಲ್ಲಿ ಉಡುಪಿ ಜಿಲ್ಲೆ.

        ಉಪನದಿಗಳ ಸಹಿತ ಜಿಲ್ಲೆಯ ಪ್ರಮುಖ ನದಿಗಳು: ನೇತ್ರಾವತಿ, ಕುಮಾರಧಾರಾ, ಶಾಂಭವಿ, ನಂದಿನಿ, ಗೌರಿಹೊಳೆ, ಫಲ್ಗುಣಿ (ಗುರುಪುರ). ಈ ನದಿಗಳೆಲ್ಲ ಅರಬೀ ಸಮುದ್ರವನ್ನು ಸೇರುತ್ತವೆ.

        ಕೃಷಿಗೆ ಬಳಕೆ

        ದಕ್ಷಿಣ ಕನ್ನಡದಲ್ಲಿ ಜೂನ್‌ನಿಂದ ಸೆಪ್ಟಂಬರ್‌ ವರೆಗಿನ ಮುಂಗಾರು ಮಳೆ ನಿರ್ಣಾಯಕವಾದ ಸಂದರ್ಭ. ಆದರೆ, ಇಲ್ಲಿನ ಭೌಗೋಳಿಕ ಸ್ವರೂಪದಿಂದಾಗಿ ಈ ನೀರು ಸಂಪೂರ್ಣವಾಗಿ ಬಳಕೆಯಾಗಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ನೀರನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಲು ಮಹಾಯೋಜನೆ ಸಿದ್ಧವಾಗಿದೆ, ಕಾರ್ಯಾರಂಭಗೊಂಡಿದೆ. ರಾಜ್ಯ ಸರಕಾರ, ವಿಶೇಷವಾಗಿ ಮುಖ್ಯಮಂತ್ರಿ ಈ ಯೋಜನೆ ಬಗ್ಗೆ ಹೆಚ್ಚು ಉತ್ಸುಕರಾಗಿದ್ದಾರೆ. ಜಿಲ್ಲೆಗೆ ಅವರ ಕಳೆದ ಬಾರಿಯ ಭೇಟಿಯ ಸಂದರ್ಭದಲ್ಲೂ ಅವರು ತಮ್ಮ ಕಳಕಳಿಯನ್ನು ತೋರ್ಪಡಿಸಿದ್ದಾರೆ.

        ದ.ಕ.ದಲ್ಲಿ ನದಿಗಳಲ್ಲಿನ ಗರಿಷ್ಠ ನೀರಿನ ಪ್ರಮಾಣ ಹೀಗಿದೆ- ನೇತ್ರಾವತಿ: 457.46 ಟಿಎಂಸಿ, ಗುರುಪುರ: 121.89, ಶಾಂಭವಿ: 43.84, ಪಾವಂಜೆ: 29.07, ನೇತ್ರಾವತಿಯ ಪೂರಕ ಪ್ರದೇಶ: 4.95. ಒಟ್ಟು: 1239.69 ಟಿಎಂಸಿ. ಆದರೆ, ಬಹುಪಾಲು ನೀರು ಕೃಷಿಗೆ ಬಳಕೆಯಾಗಲು ಸಾಧ್ಯವಾಗುತ್ತಿಲ್ಲ; ಅರಬೀ ಸಮುದ್ರದ ಪಾಲಾಗುತ್ತಿದೆ.

        ಈ ನೀರನ್ನು ಕೃಷಿಗೆ-ಅಂದರೆ ನೀರಾವರಿಗೆ ಬೃಹತ್‌ ಅಣೆಕಟ್ಟುಗಳ ನಿರ್ಮಾಣ ಮತ್ತು ಬೃಹತ್‌ ಸಂಗ್ರಹಾಗಾರಗಳ ಮೂಲಕ ಹಿಡಿದಿಡುವ ಬಗ್ಗೆ ಅಧ್ಯಯನ ನಡೆದಿತ್ತು. ಆದರೆ, ಇಲ್ಲಿನ ಇಂಗುವಿಕೆಯ ಪ್ರಮಾಣ ಅಥವಾ ಮಣ್ಣಿನ ಗುಣಲಕ್ಷಣಗಳು ಈ ಚಿಂತನೆಗೆ ಪೂರಕವಾಗಿಲ್ಲ. ಆದ್ದರಿಂದ, ಈ ಯೋಜನೆಯಲ್ಲಿ ಮಧ್ಯಮ ಮತ್ತು ಸಣ್ಣ ಗಾತ್ರದ ಕಿಂಡಿ ಅಣೆಕಟ್ಟುಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಭಾರೀ ನೆರೆಯ ಸಂದರ್ಭದಲ್ಲಿ ಈ ಕಿರು ಅಣೆಕಟ್ಟುಗಳು ಮುಳುಗುತ್ತವೆ. ಆದರೆ, ಕಿಂಡಿಗಳ ಮೂಲಕ ಮಳೆಗಾಲದಲ್ಲಿ ನೆರೆನೀರು ಹೊರ ಹೋಗುತ್ತದೆ.

        ನೀರಿನ ಸಂಗ್ರಹ

        ಕಿಂಡಿ ಅಣೆಕಟ್ಟುಗಳಲ್ಲಿ ಮರದ ಶಟರ್‌ಗಳನ್ನು ಅಳವಡಿಸಿ ನೀರಿನ ಸಂಗ್ರಹ ಮಾಡಲಾಗುತ್ತದೆ. ಈ ಮೂಲಕ ಸಂಗ್ರಹವಾದ, ಹೆಚ್ಚುವರಿ ಮಳೆ ನೀರು ಮುಂದೆ ಕೃಷಿಕಾರ್ಯಕ್ಕೆ ಬಳಕೆಯಾಗುತ್ತದೆ.

        ಉಭಯ ಜಿಲ್ಲೆಗಳಲ್ಲೂ ಇದೇ ಪರಿಕಲ್ಪನೆ. ಈ ಮೂಲಕ ಅಂತರ್ಜಲದ ಮಟ್ಟ ಏರಿಕೆಯಾಗುತ್ತದೆ. ಕುಡಿಯುವ ನೀರಿನ ನಿರಂತರ ಪೂರೈಕೆ ಸಾಧ್ಯವಾಗುತ್ತದೆ. ಉಪ್ಪು ನೀರನ್ನು ಪ್ರತ್ಯೇಕಿಸುವ ಅಣೆಕಟ್ಟುಗಳು ಸಮುದ್ರದ ಉಪ್ಪು ಹಿನ್ನೀರು ನದಿಗಳಿಗೆ ನುಗ್ಗುವುದನ್ನು ತಡೆಯುತ್ತದೆ ಮತ್ತು ಕೃಷಿಭೂಮಿಯನ್ನು ಉಪ್ಪು ನೀರಿನಿಂದ ರಕ್ಷಿಸುತ್ತದೆ ಎಂಬ ಆಶಯವೂ ಈ ಯೋಜನೆಯಲ್ಲಿದೆ.

        ಸಮಗ್ರ ಮಹಾಯೋಜನೆಯ ಅಂದಾಜು ವೆಚ್ಚ 374.56 ಕೋಟಿ ರೂ. ನದೀ ದಂಡೆ ರಕ್ಷಣೆಯ ವ್ಯಾಪ್ತಿಯಲ್ಲಿ 134.26 ಕಿ.ಮೀ. ಪ್ರದೇಶವಿದೆ. ಮೊದಲ ಹಂತದಲ್ಲಿ ಉಭಯ ಜಿಲ್ಲೆಗಳಲ್ಲಿ 118 ಕಾಮಗಾರಿ ನಡೆಯುತ್ತಿದೆ. ಈ ಪೈಕಿ 110 ಕಿಂಡಿ ಅಣೆಕಟ್ಟು, 8 ಉಪ್ಪುನೀರು ತಡೆಯೋಜನೆ. 50.82 ಕೋಟಿ ರೂ. ಮಂಜೂರಾಗಿದೆ. ದ.ಕನ್ನಡದಲ್ಲಿ 32, ಉಡುಪಿಯಲ್ಲಿ 48 ಯೋಜನೆ ಪ್ರಗತಿಯಲ್ಲಿದೆ.

        ಒಟ್ಟು 1239.69 ಟಿಎಂಸಿ ನೀರಿನ ಪೈಕಿ ಬಹುಪಾಲು ಉಭಯ ಜಿಲ್ಲೆಗಳಲ್ಲಿ ಬಳಕೆಯಾಗಬೇಕೆಂಬ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಪ್ರಾಸ್ತಾವಿತ ಕಾಮಗಾರಿಗಳಲ್ಲಿ 202 ವೆಂಟೆಡ್‌ ಡ್ಯಾಂ/ ಉಪ್ಪು ನೀರು ತಡೆ ಯೋಜನೆ ಈ ನದಿಗಳಲ್ಲಿ ನಡೆದಿದೆ. 28 ಯೋಜನೆ ಪ್ರಗತಿಯಲ್ಲಿದೆ. ಹೊಸ 19 ಯೋಜನೆ ಪ್ರಸ್ತಾವನೆಯಲ್ಲಿದೆ. ಹೆಚ್ಚುವರಿಯಾಗಿ 463 ವೆಂಟೆಡ್‌ ಡ್ಯಾಂ ಮತ್ತು 15 ಉಪ್ಪು ನೀರು ತಡೆ ಯೋಜನೆಗಳ ಮೂಲಕ 12.4 ಸಾವಿರ ಹೆಕ್ಟೇರ್‌ಗೆ ನೀರುಣಿಸಲು ಸಾಧ್ಯವಾಗುತ್ತದೆ.

        ಅಂದಹಾಗೆ..

        ಪಶ್ಚಿಮಕ್ಕೆ ಹರಿಯುವ ನದಿಗಳ ಕುರಿತಾದ ಈ ಯೋಜನೆಗೆ ಯಾವುದೇ ಅಧಿಕೃತ ಹೆಸರು ದಾಖಲೆಗಳಲ್ಲಿಲ್ಲ. ಆದರೆ, ಪ್ರಗತಿ ಪರಿಶೀಲನಾ ಸಭೆ- ಪತ್ರಿಕಾ ವರದಿಗಳಲ್ಲಿದು ಪಶ್ಚಿಮವಾಹಿನಿ ಎಂದೇ ಉಲ್ಲೇಖವಾಗುತ್ತಾ ಈಗ 'ಪಶ್ಚಿಮವಾಹಿನಿ' ಎಂದಾಗಿದೆ !

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus