ನವದೆಹಲಿ: ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ಬಿಹಾರದ ದರ್ಭಾಂಗ ಜಿಲ್ಲೆಯಿಂದ ಕರ್ನಾಟಕ ಪೊಲೀಸರು ಇಂಡಿಯನ್ ಮುಜಾಹಿದಿನ್ ಸಂಘಟನೆಗೆ ಸೇರಿದ ಶಂಕಿತ ಉಗ್ರನೊಬ್ಬನನ್ನು ಬಂಧಿಸಿದ ಪ್ರಕರಣ ರಾಜ್ಯಸಭೆಯಲ್ಲೂ ಪ್ರತಿಧ್ವನಿಸಿದೆ. ಭಯೋತ್ಪಾದನೆ ಆರೋಪದ ಮೇಲೆ ಬಿಹಾರದ ಮುಸ್ಲಿಂ ಯುವಕರನ್ನು ಬಂಧಿಸಲಾಗುತ್ತಿದೆ ಎಂದು ಬದ್ಧ ಎದುರಾಳಿ ಪಕ್ಷಗಳಾದ ಜೆಡಿಯು ಹಾಗೂ ಆರ್‌ಜೆಡಿ ಜಂಟಿಯಾಗಿ ಟೀಕಾ ಪ್ರಹಾರ ನಡೆಸಿವೆ.ರಾಜ್ಯಸಭೆಯ ಶೂನ್ಯವೇಳೆಯಲ್ಲಿ ಗುರುವಾರ ವಿಷಯ ಪ್ರಸ್ತಾಪಿಸಿದ ಜೆಡಿಯು ಸದಸ್ಯ ಶಿವಾನಂದ ತಿವಾರಿ, ಮುಸ್ಲಿಂ ಯುವಕರನ್ನು ಬಂಧಿಸುತ್ತಿರುವ ಸಂಸ್ಥೆಗಳ ವಿರುದ್ಧ ಗೃಹ ಸಚಿವ ಪಿ. ಚಿದಂಬರಂ ಅವರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದೇ ವೇಳೆ, ಮುಸ್ಲಿಮರನ್ನು ಭಯೋತ್ಪಾದಕರಂತೆ ಬಿಂಬಿಸುತ್ತಿರುವುದು ಖಂಡನೀಯ ಎಂದು ಆರ್‌ಜೆಡಿಯ ರಾಮ್ ಕೃಪಾಲ್ ಯಾದವ್ ಹೇಳಿದರು.ಈ ವೇಳೆ ಮಧ್ಯಪ್ರವೇಶಿಸಿದ ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ ಹರೀಶ್ ರಾವತ್, ಸಂಬಂಧಪಟ್ಟ ಸಚಿವಾಲಯಕ್ಕೆ ಸದಸ್ಯರ ಕಳವಳಗಳನ್ನು ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.ಕರ್ನಾಟಕ ಪೊಲೀಸರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ಮೊಹಮ್ಮದ್ ಕಫೀಲ್ ಎಂಬ ಶಂಕಿತ ಉಗ್ರನನ್ನು ಬಂಧಿಸಿದ್ದರು. ಇದು ಬಿಹಾರ ಸಿಎಂ ನಿತೀಶ್ ಕುಮಾರ್ ಆಕ್ಷೇಪಕ್ಕೆ ಕಾರಣವಾಗಿತ್ತು. ಇದಕ್ಕೂ ಮುನ್ನ ಆಂಧ್ರಪ್ರದೇಶ ಪೊಲೀಸರು ಹಾಗೂ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಬಿಹಾರ ಪೊಲೀಸರ ಗಮನಕ್ಕೆ ತಾರದೆ ಕೆಲವು ಯುವಕರನ್ನು ಬಂಧಿಸಿದ್ದರು.