ರಾಘವೇಂದ್ರ ಬೆಟ್ಟಕೊಪ್ಪ | May 22, 2012
ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಘಟನೆ. ಧಾರವಾಡ ಹಾಲು ಒಕ್ಕೂಟದ ಶಿರಸಿ ಬಳಿಯ ಹನ್ಮಂತಿಯಲ್ಲಿ ನೂತನವಾಗಿ ಹಾಲು ಶೀಥಲೀಕರಣ ಘಟಕ ನಿರ್ಮಿಸಿತು. ಇಲ್ಲಿಗೆ ಬರುವ ಹಾಲಿನ ಕ್ಯಾನ್, ಶೀಥಲೀಕರಣಕ್ಕೆ ಬಳಸಿದ ನೀರು ನಿತ್ಯ ಬರೋಬ್ಬರಿ ಇಪ್ಪತ್ತು ಸಾವಿರ ಲೀಟರ್‌ಗಳಷ್ಟು ವೃಥಾ ವೇಸ್ಟ್ ಆಗುತ್ತಿತ್ತು. ನೀರಿನ ಅಶುದ್ಧತೆ ಹೋಗಲಾಡಿಸಿ ಭೂಮಿಗೆ ಬಿಟ್ಟರೂ ಯಾವುದೇ ಪ್ರಯೋಜನ ಇರಲಿಲ್ಲ.ಹೀಗೆ ಹರಿದು ಹೋಗುವ ನೀರನ್ನು ಏನಾದರೂ ಮಾಡಿ ಬಳಸಿಕೊಳ್ಳಬೇಕು ಎಂದು ಅಂದಿನ ಅಧಿಕಾರಿ ಡಿ.ಎನ್.ಹೆಗಡೆ ಚಿಂತಿಸಿದರು. ಒಕ್ಕೂಟದ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಹುಲ್ಲಿನ ಬೇಸಾಯ ನಡೆಸಲು ಚಿಂತಿಸಿದರು. ರೈತ ರೊಬ್ಬರಿಗೆ ಇದರ ಜವಾಬ್ದಾರಿ ಕೂಡ ವಹಿಸಿದರು. ಹದಿನೆಂಟು ವರ್ಷಗಳಿಂದ ಹುಲ್ಲಿನ ಬೇಸಾಯ ಮಜಭೂತಾಗಿದೆ. ಆಳೆತ್ತರ ಬೆಳೆದಿವೆ.
ದೂರದ ಧಾರವಾಡ, ಬೆಂಗಳೂರಿಗೆ ಹೋಗಿ ಹೈಬ್ರಿàಡ್ ಹುಲ್ಲಿನ ಬೀಜ ತರಬೇಕಾಗಿದ್ದ ರೈತರಿಗೆ ಊರಲ್ಲೇ ಹುಲ್ಲು ಸಿಗುತ್ತಿದೆ. ಆ ಮೂಲಕ ಹಾಲು ಹರಿಸುವ ಕೆಎಂಎಫ್ ವೇಸ್ಟ್ ನೀರಿನಿಂದ ಹಸಿರು ವೃದ್ಧಿಸಿದೆ.
ಈಗ ಶೀಥಲೀಕರಣ ಘಟಕಕ್ಕೆ ನಿತ್ಯ 20ರಿಂದ 24 ಸಾವಿರ ಲೀ. ಹಾಲು ಬರುತ್ತದೆ. ಘಟಕ ಚೊಕ್ಕಟ ಮಾಡಿದ, ಹಾಲಿನ ಕ್ಯಾನ್ ತೊಳೆದ, ಶೀಥಲೀಕರಣಕ್ಕೆ ಬಳಸಿದ್ದು ಎಲ್ಲ ಸೇರಿ ಏನಿಲ್ಲ ಎಂದರೂ 20 ಸಾವಿರ ಲೀಟರ್ ನೀರು ಬೇಕು. ಈ ವೇಸ್ಟ್ ನೀರಿನಲ್ಲಿ ಸೋಪಿನ ಪೌಡರ್ ಸೇರಿದಂತೆ ಇತರ ಕಲ್ಮಷಗಳಿದ್ದರೆ ಅದನ್ನು ಜಲ ಸಂಸ್ಕರಣಾ ಘಟಕದಲ್ಲಿ ಶುದ್ಧೀಕರಿಸಲಾಗುತ್ತೆ. ಇದರ ಬಳಿಕ ಇಲ್ಲಿ ಬೆಳೆಸಲಾದ ಸುಮಾರು 10 ಥರದ ಹುಲ್ಲಿನ ಬುಡಗಳಿಗೆ ಜೆಟ್ ಮೂಲಕ ದಿನ 2 ತಾಸುಗಳ ಕಾಲ ನೀರು ಉಣಿಸಲಾಗುತ್ತಿದೆ. ಪರಿಣಾಮ ಏನು ಗೊತ್ತೇ? ಘಟಕದ ಎದುರಿನ ಬೋಳಾಗಿದ್ದ ಸುಮಾರು 1 ಎಕರೆ ಪ್ರದೇಶದಲ್ಲಿ ಬಿರು ಬೇಸಿಗೆಯಲ್ಲೂ ಹಸಿರಿನ ಹುಲ್ಲುಗಾವಲು, ಒಂದು ಪ್ರಾತ್ಯಕ್ಷಿಕೆ ನಿರ್ಮಾಣವಾಯಿತು. ರೈತರಿಗೆ ಸಮೀಪದಲ್ಲೇ ಬಗೆ ಬಗೆಯ ಸ್ಥಳೀಯ ಹವಾಗುಣಕ್ಕೆ ಹೊಂದಬಲ್ಲ ಬೀಜದ ತಳಿಗಳೂ ದಕ್ಕಿತು.
ಇಲ್ಲಿ ಒಣ ಭೂಮಿ ಹುಲ್ಲಿನಿಂದ ತಗ್ಗಿನ ಭೂಮಿ ಹುಲ್ಲಿನ ತನಕವಿದೆ. ಕೋವನ್, ಐಜಿಎಫ್ಆರ್‌ಐ 3, ಐಜಿಎಫ್ಆರ್‌ಐ 7, ಡಿಎಚ್‌ಎನ್6, ಗ್ರೇಸಿಂಗ್ ಗಿಣಿ, ಗಿನಿ 1, ಗಿನಿ 2, ಪ್ಯಾರಾ ಸೇರಿದಂತೆ ಹತ್ತು ಜಾತಿಗಳ ಹುಲ್ಲಿವೆ. ಸ್ಥಳೀಯ ರೈತ ರವಿಹೆಗಡೆ ಹುಲ್ಲಿನ ತೋಟ ನಿರ್ವಹಣೆ ಮಾಡುತ್ತಿದ್ದಾರೆ.
ಹುಲ್ಲಿನ ಬೇಸಾಯ ನಿರ್ವಹಿಸಿದ್ದರಿಂದ ರೈತರಿಗೆ ಹುಲ್ಲಿನ ಬಳಕೆ ಅವಕಾಶ. ಬೀಜ ಒಕ್ಕೂಟಕ್ಕೆ. ಒಕ್ಕೂಟ ಸಾವಿರ ಬೀಜಗಳಿಗೆ 110ರೂ.ನಂತೆ ಮಾರಾಟ ಮಾಡುತ್ತಿದೆ. ಇದರಿಂದ ಒಕ್ಕೂಟಕ್ಕೆ ವಾರ್ಷಿಕ 30ರಿಂದ 50 ಸಾವಿರ ರೂ. ಆದಾಯ. ಸ್ಥಳೀಯ ರೈತರ ಜೊತೆಗೆ ಹಾವೇರಿ, ಬಾಗಲಕೋಟೆ, ಬೆಳಗಾವಿ, ಉಡುಪಿಗಳಿಂದಲೂ ಆಗಮಿಸಿ ಹುಲ್ಲಿನ ಬೀಜ ಒಯ್ದವರು ಇದ್ದಾರೆ. ಆರಂಭದಲ್ಲಿ ರೈತರಿಗೆ ಉಚಿತ ಬೀಜ ಒದಗಿಸಲಾಗಿತ್ತು. ಎರಡು ವರ್ಷಗಳ ಹಿಂದಿನ ತನಕವೂ ಸಾವಿರಕ್ಕೆ 30 ರೂ. ಈಗ ಏರಿಕೆಯಾಗಿದೆ.
ಹುಲ್ಲಿನ ಬೀಜಗಳನ್ನು ಮೂರರಿಂದ ಆರಿಂಚು ಆಳದ ತನಕ ನಾಟಿ ಮಾಡಿದ್ದೇವೆ. ಹಾಲಿನಾಂಶ ಇರುವ ನೀರಿನಲ್ಲಿ ಪೋಷಕಾಂಶಗಳೂ ಇರುವುದರಿಂದ ಗೊಬ್ಬರ ಹಾಕಿಲ್ಲ. ಹುಲ್ಲಿನ ನಾಟಿ, ಹೊಸ ತಳಿ ಸೇರ್ಪಡೆ ಎಲ್ಲವೂ ಜವಬ್ದಾರಿ ನನ್ನದೇ ಎನ್ನುತ್ತಾರೆ ಉಸ್ತುವಾರಿ ನೋಡಿಕೊಳ್ಳುವ ರವಿ ಹೆಗಡೆ.
ಇಲ್ಲಿನ ಪ್ರಯೋಗ ನೋಡಿ ಉಳಿದಡೆ ಅನುಷ್ಠಾನಕ್ಕೆ ಕೆಎಂಎಫ್ ಮುಂದಾಗಿದೆ. ರೈತನೊಂದಿಗಿನ ನಿರ್ವಹಣೆಗೆ ಒಪ್ಪಂದ ಮಾಡಿಕೊಂಡ ಕಾರಣಕ್ಕೆ ಹುಲ್ಲಿನ ಬೇಸಾಯಕ್ಕೆ ವಿಶೇಷ ಖರ್ಚೂ ಒಕ್ಕೂಟಕ್ಕೆ ಇಲ್ಲ. ವೇಸ್ಟ್ ನೀರಿನಿಂದ ಬೆಸ್ಟ್ ಹುಲ್ಲಿನ ಕೃಷಿ ಹಸಿರಾಗಿಸಿದೆ.