ನವದೆಹಲಿ: ಪ್ರಾಮಾಣಿಕ ಎಂದೇ ಬಿಂಬಿತವಾಗಿರುವ ಪ್ರಧಾನಿ ಮನಮೋಹನಸಿಂಗ್ ಅವರ ಮೇಲೂ ಭ್ರಷ್ಟಾಚಾರ ಆರೋಪ ಹೊರಿಸಿದ್ದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತಂಡ ಸೋಮವಾರ ಪ್ರಧಾನಿ ಅವರನ್ನು ಶಿಖಂಡಿ ಎಂದು ಹರಿಹಾಯ್ದಿದೆ.ಖುದ್ದು ಅಣ್ಣಾ ಹಜಾರೆ ಅವರೇ ಮನಮೋಹನಸಿಂಗ್ ಅವರು ಸರಳ ಮನುಷ್ಯ, ಅವರ ವಿರುದ್ಧ ಭ್ರಷ್ಟಾಚಾರ ಆರೋಪಗಳಿಲ್ಲ ಎಂದು ಸ್ಪಷ್ಟನೆ ನೀಡಿದ ನಂತರವೂ ಪ್ರಧಾನಿ ವಿರುದ್ಧ ಅವರ ತಂಡದ ಪ್ರಮುಖ ಸದಸ್ಯರಲ್ಲೊಬ್ಬರಾದ ಪ್ರಶಾಂತ್ ಭೂಷಣ್ ವಾಗ್ಧಾಳಿ ಮುಂದುವರಿಸಿದ್ದಾರೆ.ದೇಶವನ್ನು ಭ್ರಷ್ಟಾಚಾರ ಕಿತ್ತು ತಿನ್ನುತ್ತಿದ್ದರೂ ಪ್ರಧಾನಿ ಕಣ್ಣು ಮುಚ್ಚಿಕೊಂಡಿದ್ದಾರೆ. ಮನಮೋಹನಸಿಂಗ್ ಅವರನ್ನು ಶಿಖಂಡಿಯಂತೆ ಕಾಂಗ್ರೆಸ್ ತನ್ನ ರಕ್ಷಣಾ ಗೋಡೆಯಾಗಿ ಬಳಸಿಕೊಳ್ಳುತ್ತಿದೆ ಎಂದು ಸೋಮವಾರ ಕಿಡಿಕಾರಿದರು.ಮನಮೋಹನಸಿಂಗ್ ಅವರು ಪ್ರಾಮಾಣಿಕ ವ್ಯಕ್ತಿ ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ಹಾಗಾದ ಮೇಲೆ ಪ್ರಧಾನಿ ಅವರ ಸಂಪುಟವೂ ಪ್ರಾಮಾಣಿಕವಾಗಿರಬೇಕು ತಾನೆ? ಪ್ರಧಾನಿ ಅವರು ತಮ್ಮನ್ನು ಶಿಖಂಡಿಯಂತೆ ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿರುವುದೇಕೆ ಎಂದು ಭೂಷಣ್ ಪ್ರಶ್ನಿಸಿದ್ದಾರೆ.ಈ ಹೇಳಿಕೆಗೆ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನಮೋಹನಸಿಂಗ್ ಪ್ರಧಾನಿ ಮಾತ್ರವೇ ಅಲ್ಲ. ಅವರೊಬ್ಬ ನಾಯಕ. ಉತ್ತಮ ಚಾರಿತ್ರ್ಯ ಹೊಂದಿರುವ ಆ ಮಹಾನ್ ನಾಯಕನ ಕುರಿತು ಭೂಷಣ್ ಆಡಿರುವ ಮಾತುಗಳು ಅಗೌರವದಿಂದ ಕೂಡಿವೆ ಎಂದು ಹೇಳಿದ್ದಾರೆ.