Wednesday, May 22, 2013
Last Updated: 12:22:18 AM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ನೇತ್ರಾವತಿ ನದಿ ತಿರುವು ಯೋಜನೆ ಅವೈಜ್ಞಾನಿಕ
    • ಮಂಗಳೂರು ಮಹಾನಗರದ ಕುಡಿಯುವ ನೀರು ಪೂರೈಕೆಗೆ ಕೂಡ ನೇತ್ರಾವತಿ ನದಿಯೊಂದೇ ಮೂಲ...

      • ಮನೋಹರ ಪ್ರಸಾದ್‌ ; ಚಿತ್ರ: ಸತೀಶ್‌ ಇರಾ. | Jun 02, 2012

        ಮಂಗಳೂರು : ನೇತ್ರಾವತಿ ನದಿ ತಿರುವ ಯೋಜನೆಯ ಪ್ರಸ್ತಾವನಾ ವರದಿಯ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆ ಸಹಿತ ಕರಾವಳಿಯಲ್ಲಿ ವ್ಯಾಪಕ ಟೀಕೆ, ಪ್ರತಿಭಟನೆ ವ್ಯಕ್ತವಾಗಿದೆ. ಜಿಲ್ಲೆಯ ಕೃಷಿಕಾರ್ಯಕ್ಕೆ ಮಾತ್ರವಲ್ಲದೇ, ಮಂಗಳೂರು ಮಹಾನಗರದ ಕುಡಿಯುವ ನೀರು ಪೂರೈಕೆಗೆ ಕೂಡ ನೇತ್ರಾವತಿ ನದಿಯೊಂದೇ ಮೂಲವಾಗಿದೆ. ಇಂತಹ ಹಿನ್ನೆಲೆಯಲ್ಲಿ ನೇತ್ರಾವತಿಯನ್ನು ಪೂರ್ವಾಭಿಮುಖವಾಗಿ ತಿರುಗಿಸಿ, ಕಾಲುವೆಗಳ ಮೂಲಕ ಇತರೆಡೆಗೆ ಹರಿಸುವ ಪ್ರಸ್ತಾವನೆಯೇ ಅವೈಜ್ಞಾನಿಕ, ಅವಾಸ್ತವ, ಪರಿಸರ ವಿರೋಧಿ, ಜನವಿರೋಧಿ ಎಂಬುದು ಈ ಆಕ್ಷೇಪದ ಸಾರಾಂಶ.

        ಈ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿರುವ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್‌ ಮತ್ತು ಕರ್ನಾಟಕ ಪರಿಸರಾಸಕ್ತ ಕೃಷಿಕರ ವೇದಿಕೆಯು ಈ ಯೋಜನೆಯು ಪರಿಸರ ವಿನಾಶಕಾರಿ, ಕೃಷಿಕ ವಿರೋಧಿ, ನಗರವಾಸಿ ವಿರೋಧಿ, ಅವೈಜ್ಞಾನಿಕ, ಅವ್ಯವಹಾರಿಕ ಎಂದು ಟೀಕಿಸಿದೆ. ಯೋಜನೆ ಹೇಗೆ ಸಮಗ್ರವಾಗಿ ಮಾರಕ ಎಂಬ ನಿಟ್ಟಿನಲ್ಲಿ ಈ ಸಂಘಟನೆಗಳು ಒದಗಿಸಿರುವ ವಿಶ್ಲೇಷಣಾತ್ಮಕ ಮಾಹಿತಿಯ ಆಯ್ದ ಅಂಶಗಳು ಇಲ್ಲಿವೆ.

        ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 10 ಲಕ್ಷ ಕೃಷಿಕರ 3.5 ಲಕ್ಷ ಎಕರೆ ಕೃಷಿಭೂಮಿಯು ನೇತ್ರಾವತಿಯ ನೀರನ್ನೇ ಅವಲಂಬಿಸಿದೆ. ನೇತ್ರಾವತಿಯ ಜಲಾನಯನ ಪ್ರದೇಶ ಪಶ್ಚಿಮಘಟ್ಟದ ಭಾಗವಾಗಿದ್ದು ಜಗತ್ತಿನ 18 ಜೀವ ವೈವಿಧ್ಯ ಸಂರಕ್ಷಣಾ ಪ್ರದೇಶಗಳಲ್ಲಿ ಒಂದಾಗಿದೆ. ಹುಲಿ, ಸಿಂಗಲೀಕ ಮತ್ತು ಕುಲಾವಿ ಹಕ್ಕಿಯಂತಹ ಅಪಾಯದ ಅಂಚಿನಲ್ಲಿರುವ ಅನೇಕ ವನ್ಯಜೀವಿಗಳ ನೆಲೆಬೀಡು.

        ಪರಿಸರ ವಿನಾಶಕ

        ಯೋಜನಾ ಪ್ರದೇಶವಾದ ಗಡಿಕಲ್ಲು ಗುಡ್ಡ, ಬಲ್ಲಾಳರಾಯನ ದುರ್ಗ, ಕುದುರೆಮುಖ, ಎಳನೀರು ಘಾಟಿ, ಬಂಡಾಜೆ, ಚಾರ್ಮಾಡಿ, ಎರಂಕಲ್ಲು, ಮಾಣಿಕಲ್ಲು, ಮಿಂಚುಕಲ್ಲು, ಬಾಂಜಾರುಮಲೆ, ಇಳಿಮಲೆ, ಎಡಕುಮೇರಿ, ಬಿಸಿಲೆಘಾಟಿ, ಕುಮಾರ ಪರ್ವತ ಮುಂತಾದ ದಟ್ಟ ಅರಣ್ಯ ಪ್ರದೇಶಗಳಲ್ಲಿ ರಾಕ್ಷಸ ಗಾತ್ರದ ಯಂತ್ರಗಳಿಂದ ಕಾಮಗಾರಿಯ ವೇಳೆ ಅಪಾರ ಪ್ರಮಾಣದ ಕಾಡು ನಾಶವಾಗಲಿದೆ.

        ಕಾಮಗಾರಿ ಸಂದರ್ಭದಲ್ಲಿ ಉಂಟಾಗುವ ಮಣ್ಣು ನದಿಗೆ ಸೇರುವುದರಿಂದ ನೇತ್ರಾವತಿಯ ನದಿಮೂಲವೇ ಶಾಶ್ವತವಾಗಿ ತಪ್ಪಿ ಹೋಗುವ ಅಪಾಯವಿದೆ. ಯೋಜನಾ ಪ್ರದೇಶದಲ್ಲಿ 5,550 ಹೆಕ್ಟೇರ್‌ ದಟ್ಟಕಾಡು ನೀರಿನಲ್ಲಿ ಮುಳುಗಡೆಯಾಗುತ್ತದೆ. ಅನೇಕ ಗಿರಿಜನ, ಅರಣ್ಯವಾಸಿಗಳ ಕೃಷಿಭೂಮಿ ಮುಳುಗಡೆಯಾಗಿ ಅವರು ಅತಂತ್ರರಾಗಲಿದ್ದಾರೆ.

        ಸಮುದ್ರಕ್ಕೆ ನೈಸರ್ಗಿಕವಾಗಿ ಹರಿಯುವ ಲವಣಾಂಶ, ಪೋಷಕಾಂಶಗಳು ಕಡಿಮೆಯಾಗಿ ಅಸಂಖ್ಯಾತ ಮೀನುಗಳು, ಜಲಚರಗಳು ನಾಶವಾಗುತ್ತವೆ. ಮಳೆಗಾಲದಲ್ಲಿ ಸಮುದ್ರಕ್ಕೆ ಹರಿಯುವ ನೀರು ಹೆಚ್ಚುವರಿ ಎಂದು ಪರಿಗಣಿಸುವುದೇ ಸರಿಯಲ್ಲ. ಹೆಚ್ಚುವರಿ ನೀರಿನ ಹರಿವು ಎಂದಾದರೆ ಬೇಸಗೆಯಲ್ಲಿ ಈ ನದಿ ಪಾತ್ರದಲ್ಲಿ ನೀರಿನ ಸಮಸ್ಯೆ ಏಕೆ ಉಂಟಾಗುತ್ತದೆ ಎಂದು ಟ್ರಸ್ಟ್‌ನ ಸಂಚಾಲಕ ಕೆ. ಸೋಮನಾಥ ನಾಯಕ್‌ ಪ್ರಶ್ನಿಸುತ್ತಾರೆ. ನೀರಿನ ಲಭ್ಯತೆ ಹೆಚ್ಚಿಸಲು ಇಂತಹ ಯೋಜನೆಗಳು ಮೇಲ್ನೋಟಕ್ಕೆ ಉಪಕಾರಿ ಅನಿಸಿದರೂ, ಹೇರಲಾಗದ ಖರ್ಚು ಭರಿಸುವ ತೀರಾ ಪ್ರಕೃತಿ ವಿರೋಧಿ ಕೆಲಸ ಇದಾಗಿದೆ. ಮಳೆ ಕೊಯ್ಲಿನಂತಹ ಕಡಿಮೆ ವೆಚ್ಚದ, ಜನರನ್ನು ನೀರಿನ ಬಗ್ಗೆ ಜವಾಬ್ದಾರರನ್ನಾಗಿಸುವ ಪರ್ಯಾಯ ಕ್ರಮಗಳನ್ನು ಅನುಸರಿಸುವುದು ಸೂಕ್ತ ಅನ್ನುತ್ತಾರೆ ಜಲಕೂಟದ ಸಂಚಾಲಕ ಶ್ರೀಪಡ್ರೆ ಅವರು.

        ಹಳ್ಳಗಳೇ ಮಾಯ?

        ಈ ಯೋಜನೆ ಅನುಷ್ಠಾನಗೊಂಡಲ್ಲಿ ಶಿರ್ಲಾಲು ಹಳ್ಳ, ಶಿವನಾಳ ಹಳ್ಳ, ಅರ್ಬಿಹಳ್ಳ, ಹಳೆಮನೆಹಳ್ಳ, ಬಟ್ಟಿ ಹಳ್ಳ, ಕಲ್ಲೂರುಹಳ್ಳ, ಬಂಗರಬಲಿಕೆ ಹಳ್ಳ, ಎಳ್ನೀರು, ಆನಡ್ಕಹಳ್ಳ, ನಂದಿಕಾಡುಹಳ್ಳ, ಮಲ್ಲಹಳ್ಳ, ಕಜಕ್ಕೆ ಹೊಳೆ, ಬಲ್ಲಾಳರಾಯನ ಫಾಲ್ಸ್‌, ದುರ್ಗದಳ್ಳಿ ಹಳ್ಳ, ಬಿದಿರತಲೆ ಹೊಳೆ, ದೊಡ್ಡಹಳ್ಳ, ಅಣಿಯೂರು ನೆರಿಯ ಹೊಳೆ, ನೆಲ್ಲಿತಾಟು ಹಳ್ಳ, ಬಿರುಮಲೆ ಹಳ್ಳ, ಕುಮಾರಧಾರ ನದಿಯ ಅನೇಕ ಹಳ್ಳಗಳಲ್ಲಿ ನೀರಿನ ಹರಿವು ಕಡಿಮೆಯಾಗಲಿದೆ ಎಂದು ಟ್ರಸ್ಟ್‌ನ ಅಧ್ಯಯನ ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

        ಪಶ್ಚಿಮಘಟ್ಟದಲ್ಲಿ ಹಾರದ ಕಾಲುವೆ ನಿರ್ಮಾಣಕ್ಕೆ ಸಾವಿರಾರು ಹೆಕ್ಟೇರ್‌ ದಟ್ಟ ಅರಣ್ಯ ನಾಶವಾಗುತ್ತದೆ. ಕಾಮಗಾರಿ ಸಂದರ್ಭದಲ್ಲಿ ಉಂಟಾಗುವ ಮಣ್ಣು ಹಾಕಲು ಮತ್ತಷ್ಟು ಕಾಡು ನಾಶವಾಗುತ್ತದೆ. ಅಂತರ್ಜಲ ವ್ಯತ್ಯಸ್ತವಾಗಿ ಹಳ್ಳಕೊಳ್ಳಗಳು ಬತ್ತಿ ನೇತ್ರಾವತಿ ಮತ್ತು ಅದರ ಉಪನದಿಗಳನ್ನು ನಂಬಿರುವ ಕೃಷಿಕರಿಗೆ ನೀರು ಇಲ್ಲವಾಗಬಹುದು. ಮೇಲಿನ ಕಟ್ಟ ತುಂಬಿ ಕೆಳಗಿನ ಕಟ್ಟಕ್ಕೆ ಒರತೆಯಾಗಿ ನೀರು ಬರುವುದು ಸಾಮಾನ್ಯ. ಈ ನೀರಾವರಿ ಪದ್ಧತಿಯೇ ನಾಶವಾಗಬಹುದು.

        ಯೋಜನೆಯ ಪರಿಣಾಮವಾಗಿ, ನೇತ್ರಾವತಿಯಿಂದ ಈಗ ಸಮುದ್ರ ಸೇರುವ ನಿಟ್ಟಿನಲ್ಲಿ ಮುಂದೆ ಸುಮಾರು ಮೂರನೆಯ ಒಂದಂಶ ಕಡಿಮೆಯಾಗಿ ಸೇರುವುದರಿಂದ ಸಮುದ್ರದ ಉಪ್ಪು ನೀರು ಒಳ ಬರಬಹುದು ಮತ್ತು ಸಮುದ್ರ ಕೊರತೆ ಹೆಚ್ಚಾಗಬಹುದು. ನೀರಾವರಿಯ ನೆಪದಲ್ಲಿ ಕೃಷಿವೈವಿಧ್ಯ ಕಡಿಮೆ ಆಗಬಹುದು. ಇದರಿಂದ ಜಿಲ್ಲೆಯ ಸಣ್ಣ ಕೃಷಿಕರಿಗೆ ತೊಂದರೆಯಾಗಬಹುದು.

        ಅಂದಹಾಗೆ..

        ಪರಮಶಿವಯ್ಯ: ನೇತ್ರಾವತಿ ನದಿ ತಿರುವು ಯೋಜನೆಯ ಅನುಷ್ಠಾನಕ್ಕೆ ಎಲ್ಲ ಹಂತಗಳ ಜನಪ್ರತಿನಿಧಿಗಳು, ಸಾರ್ವಜನಿಕರು, ಸಂಘಸಂಸ್ಥೆಗಳು, ರೈತರು, ಅಧಿಕಾರಿಗಳು ಒಗ್ಗಟ್ಟಾಗಿ ರಾಜಕೀಯ ಪಕ್ಷಬೇಧವಿಲ್ಲದೆ ಸರಕಾರಕ್ಕೆ ಒತ್ತಡ ಹೇರಬೇಕು.

        ನಾಗರಿಕ ಸೇವಾಟ್ರಸ್ಟ್‌: ಪಂಚತಾರಾ ಹೊಟೇಲ್‌ಗ‌ಳಲ್ಲಿ ಕುಳಿತು ನಕ್ಷೆ ಹರಡಿಕೊಂಡು ವಸ್ತುಸ್ಥಿತಿಯನ್ನು ಗಮನಿಸದೆ ಸಿದ್ಧಪಡಿಸಿದ ಈ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವಂತೆ ಸರ್ವರೂ ಸರಕಾರಕ್ಕೆ ಒತ್ತಡ ಹೇರಬೇಕು.

        ಪುರಾಣದಲ್ಲಿ..

        ನೇತ್ರಾವತಿಗೆ ಸಂಬಂಧಿಸಿದಂತೆ ಪುರಾಣಗಳಲ್ಲಿ ಬರುವ ಕಥಾನಕ: ಶ್ರೀ ಹರಿಯು ಹಿರಣ್ಯಾಕ್ಷವನ್ನು ವಧಿಸಿ ಸಹ್ಯಾದ್ರಿಯಲ್ಲಿ ಕಲ್ಲಾಗಿ ನಿಂತಿರುವನು. ಅದರ ಮೇಲೆ ದಿಬ್ಬವೊಂದು ಎದ್ದಿದೆ. ಆ ದಿಬ್ಬದಿಂದ ಹನಿಹನಿಯಾಗಿ ಒಂದು ಒಸರು ಬಂದು ನದಿಯಾಗಿ ಹರಿಯುವುದು. ವರಾಹರೂಪಿ ಶ್ರೀ ಹರಿಯ ಕಣ್ಣಿನಿಂದ ಜಿಗಿಯುವ ಈ ಪವಿತ್ರ ನದಿಗೆ ನೇತ್ರಾವತಿ ಎಂದು ಹೆಸರಾಗುವುದು. ಇದು ಸಹಸ್ರಲಿಂಗ ಕ್ಷೇತ್ರದಲ್ಲಿ ಕುಮಾರಧಾರಾ ನದಿ ಸಂಗಮಿಸಿ ಮುಂದುವರಿದು ಫಲ್ಗುಣಿ ನದಿ ಬೆರೆತು ಸಮುದ್ರರಾಜನನ್ನು ಸೇರುವುದು. (ನೇತ್ರ=ಕಣ್ಣು).

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus