Wednesday, May 22, 2013
Last Updated: 12:08:32 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಹಣ ಕಹಳೆ
    • ಯಾರಿಗೆ ಏನೇನ್‌ ಬೇಕು ಕೈಯೆತ್ತಿ!
    • ಮುಖರ್ಜಿ ಹೋಗಿ ಸಿಂಗ್‌ ಬಂದ್ರು, ಜನ ವೆಲ್‌ಕಮ್‌ ಅಂದ್ರು
    • ಯಾರಿಗೆ ಏನೇನ್‌ ಬೇಕು ಕೈಯೆತ್ತಿ!

      • ಎಸ್‌.ಎಸ್‌. ತಾರಾಪೂರ್‌ | Jul 02, 2012

        ಬೃಹತ್‌ ವಿಮಾನ ನಿಲ್ದಾಣ, ಎ.ಸಿ ಬಸ್‌, ಸ್ಟಾರ್‌ ಹೋಟೆಲ್‌ ಮತ್ತು ಹಾಲಿಡೇ ರೆಸಾರ್ಟ್‌ಗಳಲ್ಲಿ ನಿಜವಾದ ಭಾರತ ಕಾಣಿಸುವುದಿಲ್ಲ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಮೌನವಾಗಿ ಕಷ್ಟಪಡುತ್ತಿರುವ ದೊಡ್ಡ ವರ್ಗದ ಜನಸಮುದಾಯವಿದೆಯಲ್ಲ, ಅದೇ ನಿಜವಾದ ಭಾರತ. ಅವರ ನೋವು ನಿವಾರಿಸಲು ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳದಿದ್ದರೆ ಹಿಂದೆಂದೂ ಕೇಳರಿಯದ ಸಾಮಾಜಿಕ ಕಂದರವೊಂದು ನಿರ್ಮಾಣವಾಗಲಿದೆ.

        ಹಣಕಾಸು ಸಚಿವಾಲಯದ ನಾಯಕತ್ವ ಬದಲಾಗುತ್ತಿದ್ದಂತೆ ಎಲ್ಲಾ ಒತ್ತಡ ಸಮೂಹಗಳೂ ತಮ್ಮದೇ ಆದ ಒಂದೊಂದು ಇಷ್ಟದ ಪಟ್ಟಿ ಸಿದ್ಧಪಡಿಸಿಟ್ಟುಕೊಂಡಿವೆ. ಇದರ ಭರಾಟೆಯಲ್ಲಿ ಜನಸಾಮಾನ್ಯರ ದನಿ ಸಂಪೂರ್ಣ ಉಡುಗಿಹೋಗುತ್ತದೆ. ಆದರೆ, ಆ ದನಿ ಅಗತ್ಯವಾಗಿ ಕೇಳಲೇಬೇಕಾದ್ದು. ಅವರ ಆದ್ಯತಾ ಪಟ್ಟಿಯೇನು?

        ಮೊದಲನೆಯದಾಗಿ, ಜನಸಾಮಾನ್ಯರಿಗೆ ಹಣದುಬ್ಬರದಿಂದ ಯಾವುದೇ ರಕ್ಷಣೆಯಿಲ್ಲ. ಸಗಟು ದರದ ಸೂಚ್ಯಂಕದ ಹಣದುಬ್ಬರ ಇತ್ತೀಚಿನ ವರ್ಷಗಳಲ್ಲಿ ಸರಾಸರಿ ಶೇ.7.8 ಇದೆ. ಗ್ರಾಹಕ ವಸ್ತುಗಳ ದರದ ಸೂಚ್ಯಂಕದ ಹಣದುಬ್ಬರ ಶೇ.10.4 ಇದೆ. ಇವೆರಡೂ ಸ್ಪಷ್ಟವಾಗಿ ಭಾರತೀಯ ರಿಸರ್ವ್‌ ಬ್ಯಾಂಕಿನ ಶೇ.5ರ ಸಮಾಧಾನಕಾರಿ ವಲಯದಿಂದ ಹಾಗೂ ದೀರ್ಘ‌ಕಾಲೀನ ಗುರಿಯಾದ ಶೇ.3ರ ಹಣದುಬ್ಬರದಿಂದ ಬಹಳ ಮೇಲಿವೆ. ಇದನ್ನು ಸರಿಪಡಿಸಲು ಸರ್ಕಾರದ ಎಲ್ಲಾ ಶಾಖೆಗಳೂ ಅವಿರತವಾಗಿ ಪ್ರಯತ್ನಿಸಬೇಕು. ಪರೋಕ್ಷ ತೆರಿಗೆಗಳು ಪ್ರತಿಗಾಮಿಯಾಗಿರುವುದರಿಂದ ಮತ್ತು ನೇರ ತೆರಿಗೆಗಳು ಅಭಿವೃದ್ಧಿಯ ಸೂಚಕವಾಗಿರುವುದರಿಂದ ಯಾವುದೇ ರೀತಿಯ ತೆರಿಗೆ ಸುಧಾರಣಾ ಹೆಜ್ಜೆಯಲ್ಲಿ ಪರೋಕ್ಷ ತೆರಿಗೆಗಳ ಹೊರೆ ಇಳಿಸಲು ಮತ್ತು ನೇರ ತೆರಿಗೆಗಳ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ.

        ಎರಡನೆಯದಾಗಿ, ಪ್ರತಿ ವರ್ಷ ನೌಕರರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಸ್ಥೂಲ ಅರ್ಥಶಾಸ್ತ್ರೀಯ ನೀತಿಯನ್ನು ಉತ್ಪಾದನೆಯ ಬಂಡವಾಳ ಕೇಂದ್ರಿತ ವ್ಯವಸ್ಥೆಯಿಂದ ಕಾರ್ಮಿಕ ಕೇಂದ್ರಿತ ವ್ಯವಸ್ಥೆಯಾಗಿ ಬದಲಾಯಿಸುವ ಅವಶ್ಯಕತೆಯಿದೆ. ಇದಕ್ಕೆ ಅದ್ಧೂರಿ ಯೋಜನೆಗಳನ್ನು ಕೈಬಿಟ್ಟು ಕಡಿಮೆ ಆಕರ್ಷಕವಾದ, ಆದರೆ ಉದ್ಯೋಗಾವಕಾಶ ಹೆಚ್ಚಿಸುವ ಯೋಜನೆಗಳನ್ನು ಪ್ರೋತ್ಸಾಹಿಸಬೇಕಾಗುತ್ತದೆ.

        ಮೂರನೆಯದಾಗಿ, ಭಾರತದಲ್ಲಿ ಉಳಿತಾಯದ ಪ್ರಮಾಣ ಇಳಿಕೆಯಾಗುತ್ತಿರುವ ಸ್ಪಷ್ಟ ಸೂಚನೆಗಳು ಕಾಣಿಸುತ್ತಿವೆ. ಎಲ್ಲರೂ ಒಪ್ಪಿಕೊಳ್ಳುತ್ತಿರುವ ಒಂದು ಸಂಗತಿಯೆಂದರೆ, ಉಳಿತಾಯದಾರರಿಗೆ ಬೇರೆಲ್ಲೂ ಅವಕಾಶಗಳಿಲ್ಲ. ಹಾಗಾಗಿ ಬಡ್ಡಿ ಆದಾಯ ಕಡಿಮೆಯಾದರೂ ಅವರು ಆ ಉಳಿತಾಯದೊಂದಿಗೇ ಇರುತ್ತಾರೆ. ಹೂಡಿಕೆಯ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಹೂಡಿಕೆದಾರರಿಗೆ ಕಡಿಮೆ ಬಡ್ಡಿ ದರದಲ್ಲಿ ಹಣಕಾಸು ಒದಗಿಸಬೇಕು ಎಂಬ ವಾದವನ್ನು ಮೊದಲು ಕೈಬಿಡಬೇಕು. ಹಣದುಬ್ಬರ ಶೇ. 10ರಷ್ಟಿರುವ ಈ ದಿನಗಳಲ್ಲಿ ಜನಸಾಮಾನ್ಯರಿಗೆ ಅವರ ಉಳಿತಾಯದ ಮೇಲೆ ನೀಡುತ್ತಿರುವ ನಿಜವಾದ ಬಡ್ಡಿ ಋಣಾತ್ಮಕವಾಗಿದೆ. ಮನೆಮಾರು ವಲಯದ ಹಣಕಾಸು ಉಳಿತಾಯ ಕುಸಿಯುತ್ತಿದೆ. ಆದರೆ, ಸ್ಥಿರಾಸ್ತಿಯಲ್ಲಿನ ಉಳಿತಾಯ ಹೆಚ್ಚುತ್ತಿದೆ. ಹಣಕಾಸಿನ ಉಳಿತಾಯಕ್ಕಿಂತ ಜನಸಾಮಾನ್ಯರು ಚಿನ್ನದಲ್ಲಿ ಉಳಿತಾಯ ಮಾಡಲು ಒಲವು ತೋರುತ್ತಿದ್ದಾರೆ. ಕಡಿಮೆ ಬಡ್ಡಿ ದರಗಳು ಆರ್ಥಿಕತೆಗೆ ಒಳ್ಳೆಯದು ಎಂಬ ಹುಸಿ ವಾದವನ್ನು ಕೈಬಿಡಲು ಇದು ಸಕಾಲ. ಕಡಿಮೆ ಬಡ್ಡಿದರದ ಭ್ರಮೆಯಿಂದ ಅಧಿಕಾರಿಗಳು ಕೂಡಲೇ ಹೊರಬರಬೇಕು.

        ನಾಲ್ಕನೆಯದಾಗಿ, ಹಣದುಬ್ಬರಕ್ಕೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿರುವ ಸರಕಾರ ಹಣದುಬ್ಬರದ ಇಂಡೆಕ್ಸ್‌ ಬಾಂಡ್‌ಗಳನ್ನು ವಿತರಿಸಬೇಕು. ಇದು ಐದು ವರ್ಷದ್ದಾಗಿರಬಹುದು. ಇದಕ್ಕೆ ನೀಡುವ ಬಡ್ಡಿ ಹಣದುಬ್ಬರಕ್ಕಿಂತ ಶೇ. 3ರಷ್ಟು ಹೆಚ್ಚಿರಬೇಕು. ಹಣದುಬ್ಬರದ ಸರಾಸರಿ ದರ ಶೇ.7 ಇದ್ದರೆ ಈ ಇಂಡೆಕ್ಸ್‌ ಬಾಂಡ್‌ನಿಂದ ಜನರಿಗೆ ವಾರ್ಷಿಕ ಶೇ.10ರಷ್ಟು ಬಡ್ಡಿ ಸಿಗಬೇಕು. ಈ ಬಾಂಡ್‌ಗಳಿಗೆ ಒಬ್ಬರಿಗೆ ಗರಿಷ್ಠ 5 ಲಕ್ಷ ರೂ. ಎಂದು ಮಿತಿ ಹೇರಬಹುದು. ಇಂಡೆಕ್ಸ್‌ ಬಾಂಡ್‌ ವಿತರಿಸಲು ಸರ್ಕಾರ ಹಿಂದೇಟು ಹಾಕುತ್ತಿರುವುದನ್ನು ನೋಡಿದರೆ ಹಣದುಬ್ಬರಕ್ಕೆ ಕಡಿವಾಣ ಹಾಕಲು ಅದಕ್ಕಿರುವ ಬದ್ಧತೆಯನ್ನೇ ಅನುಮಾನಿಸಬೇಕಾಗುತ್ತದೆ.

        ಐದನೆಯದಾಗಿ, ಸ್ವಂತ ಮನೆ ಕಟ್ಟಿಕೊಳ್ಳುವುದು ಜನಸಾಮಾನ್ಯರಿಗೆ ಕನಸಿನ ಮಾತೇ ಆಗಿರುವ ನಗರ ಹಾಗೂ ಮೆಟ್ರೋಪಾಲಿಟನ್‌ ಪ್ರದೇಶಗಳಲ್ಲಿ ಸರ್ಕಾರದಿಂದಲೇ ಕಡಿಮೆ ಬಾಡಿಗೆಗೆ ವಸತಿ ಸೌಕರ್ಯ ನೀಡುವ ವ್ಯವಸ್ಥೆ ಜಾರಿಗೆ ಬರಬೇಕು. ಗೃಹಸಾಲದ ಮರುಪಾವತಿ, ಬಡ್ಡಿ ಪಾವತಿ ಅಥವಾ ಬಾಡಿಗೆ ಹಣಕ್ಕೆ ದೊಡ್ಡ ಪ್ರಮಾಣದಲ್ಲಿ ತೆರಿಗೆ ರಿಯಾಯ್ತಿ ನೀಡುವುದು ಸ್ಪಷ್ಟವಾಗಿ ಶ್ರೀಮಂತರ ಪರ ಇರುವ ನೀತಿ. ಇದನ್ನು ನಾಜೂಕಾಗಿ ಕಡಿಮೆ ಮಾಡಬೇಕು. ನಾಜೂಕಾಗಿ ಮಾಡದಿದ್ದರೆ ನಗರ ಪ್ರದೇಶಗಳ ಪ್ರಬಲ ಮೇಲ್ಮಧ್ಯಮ ವರ್ಗದವರು ದೊಡ್ಡ ಕೂಗೆಬ್ಬಿಸಿಬಿಡುತ್ತಾರೆ.

        ಆರನೆಯದಾಗಿ, ಆರೋಗ್ಯ, ಪ್ರಾಥಮಿಕ ಶಿಕ್ಷಣ, ನೈರ್ಮಲ್ಯ ಮತ್ತು ಇತರ ಸಾಮಾಜಿಕ ಸೇವೆಗಳಿಗೆ ಆದ್ಯತೆ ನೀಡಬೇಕು. ಡಾ| ಎನ್‌.ಎ. ಮಜುಂದಾರ್‌ ಇತ್ತೀಚೆಗೆ ಅವರ ಫ್ರೀ ಪ್ರಸ್‌ ಜರ್ನಲ್‌ನಲ್ಲಿನ ಅಂಕಣದಲ್ಲಿ ಹೇಳಿದಂತೆ, ಜನರು ಬೃಹತ್‌ ಪ್ರಮಾಣದಲ್ಲಿ ಬಯಲು ಮಲವಿಸರ್ಜನೆಗೇ ಅಂಟಿಕೊಂಡಿರುವುದನ್ನು ಈಗಲೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅದನ್ನು ನಿವಾರಿಸಲು ಮಹಾತ್ಮಾ ಗಾಂಧಿಯವರ ಪ್ರಯತ್ನವನ್ನು ಯುದೊœàಪಾದಿಯಲ್ಲಿ ಆರಂಭಿಸಬೇಕಿದೆ.

        ಏಳನೆಯದಾಗಿ, ಪೆಟ್ರೋಲಿಯಂ ಉತ್ಪನ್ನಗಳಿಗೆ ನೀಡುತ್ತಿರುವ ಸಬ್ಸಿಡಿಯನ್ನು ನಿಧಾನವಾಗಿ ಪೂರ್ತಿ ನಿಲ್ಲಿಸಬೇಕು. ಬಹಳ ವರ್ಷ ಗಳಿಂದ ನಿಷ್ಕ್ರಿಯವಾಗಿ ಕುಳಿತಿದ್ದರ ಪರಿಣಾಮವಾಗಿ ಈಗ ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಸಿದರೆ ಅದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತದೆ. ಆಗ ಬೆಲೆಯೇರಿಕೆಯನ್ನು ಹಿಂಪಡೆಯಬೇಕಾಗುತ್ತದೆ. ಅಡುಗೆ ಅನಿಲಕ್ಕೆ ನೀಡುವ ಸಬ್ಸಿಡಿ ಯನ್ನು ಕಡಿತಗೊಳಿಸಬೇಕು ಎಂಬ ಪ್ರಸ್ತಾವನೆಯೊಂದಿದೆ. ಈ ಪ್ರಸ್ತಾವನೆಯಡಿ ಪ್ರತಿ ಗ್ರಾಹಕನಿಗೆ ವರ್ಷಕ್ಕೆ ಸಬ್ಸಿಡಿ ದರದಲ್ಲಿ ಮೂರು ಸಿಲಿಂಡರ್‌ ಮಾತ್ರ ನೀಡುವುದು ಹಾಗೂ ಅದಕ್ಕಿಂತ ಹೆಚ್ಚು  ಸಿಲಿಂಡರ್‌ ಪಡೆದರೆ ಅದಕ್ಕೆ ಮಾರುಕಟ್ಟೆ ದರ ವಿಧಿಸುವುದು ಸೇರಿದೆ. ಎಲ್ಲಾ ಗ್ರಾಹಕರಿಗೆ ಒಂದೇ ದರ ನಿಗದಿಪಡಿಸಿ, ಬಡವರಿಗೆ ನಗದು ರೂಪದಲ್ಲಿ ಸಬ್ಸಿಡಿ ನೀಡುವುದು ಒಳ್ಳೆಯದು. ಯಾರಿಗೆ ಸಬ್ಸಿಡಿ ನೀಡಬೇಕು, ಅದನ್ನು ಪಡೆಯಲು ಯಾರು ಅರ್ಹರು ಎಂಬುದನ್ನು ಸ್ಪಷ್ಟವಾಗಿ ಗುರುತಿಸುವ ಮಾನದಂಡ ಬೇಕು. ಎಲ್ಲರಿಗೂ ಸಮಾನವಾಗಿ ಸಬ್ಸಿಡಿ ನೀಡುವುದು ಬಡವರಿಗೆ ವಂಚನೆ ಮಾಡಿದಂತೆ. ಮೇಲ್ವರ್ಗದ ಜನರಿಗೂ ಸಬ್ಸಿಡಿ ನೀಡುತ್ತಿರುವುದಕ್ಕೆ ಈ ಸೌಕರ್ಯ ದುರ್ಬಳಕೆಯಾಗುತ್ತದೆ ಎಂಬ ಹೆದರಿಕೆ ಕಾರಣವಾಗಬಾರದು.

        ಎಂಟನೆಯದಾಗಿ, ದೇಶದಲ್ಲಿ ಕೋಟ್ಯಂತರ ಮಕ್ಕಳು ಹಸಿವಿನಿಂದ ಬಳಲುತ್ತಿರುವಾಗ ಸರ್ಕಾರಿ ದಾಸ್ತಾನಿನ ದವಸ ಧಾನ್ಯಗಳನ್ನು ಮುಕ್ತ ಉಗ್ರಾಣದಲ್ಲಿ ಕೊಳೆಯಲು ಅಥವಾ ಹೆಗ್ಗಣಗಳಿಗೆ ಆಹಾರವಾಗಲು ಬಿಡುತ್ತಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಿಸುವುದು ಒಂದು ಚಟವಾಗಿಬಿಡುತ್ತದೆ ಎಂಬ ಪೂರ್ವಗ್ರಹ ಕೈಬಿಟ್ಟು ಬಡವರಿಗೆ ಅದನ್ನು ಕೂಡಲೇ ಹಂಚುವ ಕೆಲಸವಾಗಬೇಕು. ಜೊತೆಗೆ, ದೇಸೀ ಬೆಲೆಗಿಂತ ಕಡಿಮೆ ಬೆಲೆಗೆ ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡುವುದನ್ನು ಆಹಾರ ಧಾನ್ಯಗಳ ದಾಸ್ತಾನು, ಬಡ್ಡಿ ವೆಚ್ಚ ಹಾಗೂ ಹಾಳಾಗುವಿಕೆಯನ್ನು ಗಮನದಲ್ಲಿರಿಸಿಕೊಂಡು ನಿಯಂತ್ರಿಸಬೇಕು.

        ಒಂಭತ್ತನೆಯದಾಗಿ, ಆಹಾರ ಧಾನ್ಯಗಳಿಗೆ ಈಗ ನೀಡುತ್ತಿರುವ ಸಬ್ಸಿಡಿಯಲ್ಲಿ ಸಣ್ಣ ಪಾಲೊಂದನ್ನು ದ್ವಿದಳ ಧಾನ್ಯಗಳ ದೇಸೀ ಖರೀದಿ ಅಥವಾ ಆಮದಿಗಾಗಿ ಬಳಸಿ, ಆ ಧಾನ್ಯಗಳನ್ನು ಬಹಳ ಕಡಿಮೆ ಬೆಲೆಗೆ ಜನರಿಗೆ ಹಂಚಬೇಕು. ಕಳೆದ 60 ವರ್ಷಗಳಲ್ಲಿ ತಲಾವಾರು ದ್ವಿದಳ ಧಾನ್ಯಗಳ ಬಳಕೆ ಗಣನೀಯವಾಗಿ ಇಳಿದಿರುವುದು ರಾಷ್ಟ್ರೀಯ ಅವಮಾನ. ಇದರಿಂದಾಗಿ ಜನಸಂಖ್ಯೆಯ ದೊಡ್ಡ ಭಾಗವೊಂದು ತಮ್ಮ ಆಹಾರದಲ್ಲಿ ಪೋಷಕಾಂಶಗಳಿಂದ ವಂಚಿತವಾಗು ತ್ತಿದೆ. ಇತ್ತೀಚೆಗೆ ತರಕಾರಿ ಬೆಲೆಗಳು ಕೈಗೆಟುಕದಷ್ಟು ಮೇಲೆ ಹೋಗಿವೆ.

        ಕನಿಷ್ಠ ಪಕ್ಷ ಜನಸಾಮಾನ್ಯರು ಹೆಚ್ಚಾಗಿ ಬಳಸುವ ತರಕಾರಿ ಬೆಲೆಯನ್ನಾದರೂ ಯಂತ್ರಣದಲ್ಲಿರಿಸಿಕೊಳ್ಳುವ ಅಗತ್ಯವಿದೆ.

        ಕೊನೆಯದಾಗಿ, ಬೃಹತ್‌ ವಿಮಾನ ನಿಲ್ದಾಣಗಳು, ಹವಾನಿಯಂತ್ರಿತ ಬಸ್ಸುಗಳು, ಪಂಚತಾರಾ ಹೋಟೆಲ್‌ಗ‌ಳು ಮತ್ತು ಹಾಲಿಡೇ ರೆಸಾರ್ಟ್‌ಗಳಲ್ಲಿ ನಿಜವಾದ ಭಾರತ ಕಾಣಿಸುವುದಿಲ್ಲ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಮೌನವಾಗಿ ಕಷ್ಟಪಡುತ್ತಿರುವ ದೊಡ್ಡ ವರ್ಗದ ಜನಸಮುದಾಯವಿದೆಯಲ್ಲ, ಅದೇ ನಿಜವಾದ ಭಾರತ. ಅವರ ನೋವು ನಿವಾರಿಸಲು ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳದಿದ್ದರೆ ಹಿಂದೆಂದೂ ಕೇಳರಿಯದ ಸಾಮಾಜಿಕ ಕಂದರವೊಂದು ನಿರ್ಮಾಣವಾಗಲಿದೆ. ಇಲ್ಲಿ ಆಯ್ಕೆಗಳು ಬಹಳ ಸ್ಪಷ್ಟ.

        (ಸಿಂಡಿಕೇಟೆಡ್‌)

         ಲೇಖಕರು ಭಾರತೀಯ ರಿಸರ್ವ್‌ ಬ್ಯಾಂಕಿನಲ್ಲಿ ಡೆಪ್ಯುಟಿ ಗಮರ್ನರ್‌ ಆಗಿ ಸೇವೆ ಸಲ್ಲಿಸಿದ ಖ್ಯಾತ ಅರ್ಥಶಾಸ್ತ್ರಜ್ಞರು

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus