ಡಾ| ಎಸ್. ಜಿ. ಮುರಳಿರಾಜ್ ಮನಶಾಸ್ತ್ರಜ್ಞರು | Jul 09, 2012
ಆತ್ಮಹತ್ಯೆ ಮಾಡಿಕೊಳ್ಳುವ ಬಹುತೇಕ ಜನರು ತಮ್ಮೆಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆಯೊಂದೇ ಪರಿಹಾರ ಎಂದು ಭಾವಿಸುತ್ತಾರೆ. ವಿಪರ್ಯಾಸವೆಂದರೆ, ಆ ವ್ಯಕ್ತಿಯ ಸಮಸ್ಯೆಗಳಿಗೆ ಬೇರೆ ಎಷ್ಟೇ ಪರಿಹಾರಗಳಿದ್ದರೂ, ಆ ಕ್ಷಣದಲ್ಲಿ ಅವು ಆತನ ಕಣ್ಣಿಗೆ ಕಾಣಿಸುವುದಿಲ್ಲ.
ನಾವೆಲ್ಲರೂ ನಮ್ಮ ಜೀವನದಲ್ಲಿ ಒಂದಲ್ಲಾ ಒಂದು ಹಂತದಲ್ಲಿ ಏಕಾಂಗಿತನ, ಖನ್ನತೆೆ, ಅಸಹಾಯಕತೆ, ನಿರಾಸೆ, ಘನತೆಗೆ ಧಕ್ಕೆ ಮತ್ತಿತರ ಮಾನಸಿಕ ಆಘಾತಗಳನ್ನು ಅನುಭವಿಸಿರುತ್ತೇವೆ. ಎಷ್ಟೋ ಬಾರಿ ನಾನು ಕೆಲಸಕ್ಕೆ ಬಾರದವನು ಎಂದು ಅನ್ನಿಸಿರುತ್ತದೆ. ಹಲವು ಬಾರಿ ನಾವು ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿಕೊಳ್ಳುತ್ತೇವೆ. ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಮಾನಸಿಕ ಸ್ಥಿತಿ ಬೇರೆಬೇರೆಯಾಗಿರುತ್ತದೆ. ಬೇರೆ ಬೇರೆ ಪರಿಸ್ಥಿತಿಗೆ ಬೇರೆ ಬೇರೆ ವ್ಯಕ್ತಿಗಳು ಬೇರೆ ಬೇರೆ ರೀತಿಗಳಲ್ಲಿ ಪ್ರತಿಕ್ರಿಯಿಸುತ್ತಾರೆ.
ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ಯೋಚಿಸುತ್ತಿದ್ದಾನೆಯೇ ಎಂದು ತಿಳಿಯಬೇಕಾದರೆ, ಆತನ ಸಮಸ್ಯೆಯನ್ನು ಆತನ ದೃಷ್ಟಿಯಿಂದಲೇ ನೋಡುವುದು ಆವಶ್ಯಕ. ಇದೊಂದು ಸಮಸ್ಯೆಯೇ ಅಲ್ಲ ಎಂದು ನಿಮಗನ್ನಿಸಬಹುದು, ಆದರೆ ಅದೇ ಆತನಿಗೆ ಬಹಳ ದೊಡ್ಡ ಸಮಸ್ಯೆ ಆಗಿರಬಹುದು. ನಿಮಗೆ ಏನೂ ಅಲ್ಲದಿರುವ ಒಂದು ಘಟನೆ ಇನ್ನೊಬ್ಬನಿಗೆ ತೀರಾ ದುಃಖ ತರಬಹುದು. ಬಿಕ್ಕಟ್ಟು ಯಾವ ರೀತಿಯದು ಎಂಬುದು ಇಲ್ಲಿ ಮುಖ್ಯವಾಗುವುದಿಲ್ಲ. ಯಾವುದೇ ವ್ಯಕ್ತಿಗೆ ಆ ಬಿಕ್ಕಟ್ಟನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದಾದರೆ ಆತನಿಗೆ ಆತ್ಮಹತ್ಯೆ ಸುಲಭದ ದಾರಿಯಾಗಿ ಕಾಣಬಹುದು!
ಅಪಾಯದ ಸೂಚನೆಗಳು
ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಶೇಕಡಾ 70 ರಷ್ಟು ಮಂದಿ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ನಿರ್ಧಾರವನ್ನು ಬಹಿರಂಗಗೊಳಿಸುತ್ತಾರೆ. ಆ ವ್ಯಕ್ತಿ ನೀಡುವ ಸುಳಿವು ಮತ್ತು ವ್ಯಕ್ತಿಯ ಸಮಸ್ಯೆಯನ್ನು ಅರಿಯಲು ಪ್ರಯತ್ನಿಸುವ ಮೂಲಕ ಆ ವ್ಯಕ್ತಿಯನ್ನು ಆತ್ಮಹತ್ಯೆಯಿಂದ ತಡೆಯಬಹುದು. ನಿಮಗೆ ತಿಳಿದಿರುವ ಯಾವುದಾದರೂ ವ್ಯಕ್ತಿ ತೀರಾ ಮಂಕಾಗಿದ್ದರೆ, ಅಥವಾ ಆತನ ಸಂಬಂ—ಕರ ಜತೆಗೆ ಸಂಬಂಧ ಉಳಿಸಿಕೊಳ್ಳಲು ಆತ ತಡಕಾಡುತ್ತಿದ್ದರೆ, ಅಥವಾ ಯಾವುದೋ ಒಂದು ಗುರಿಯನ್ನು ತಲುಪಲು ಸಾಧ್ಯವಾಗದೆ ವಿಫಲನಾಗಿದ್ದರೆ, ಅಥವಾ ಮುಖ್ಯವಾದ ಪರೀಕ್ಷೆಯೊಂದರಲ್ಲಿ ಫೇಲಾಗಿ ಬೇಸರದಿಂದಿದ್ದರೆ ಆತ ಬೇರೆ ಯೋಚನೆ ಮಾಡುತ್ತಿದ್ದಾನೆಯೇ ಎಂದು ತಿಳಿಯುವುದು ಬಹಳ ಮುಖ್ಯ.
ಬಹಳಷ್ಟು ಮಂದಿ ತಮ್ಮ ನಿರ್ಧಾರವನ್ನು ಬಹಿರಂಗವಾದ ಹೇಳಿಕೆಗಳ ಮೂಲಕ ತಿಳಿಸು ತ್ತಾರೆ. ನನಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದೆನಿಸುತ್ತಿದೆ ಅಥವಾ ಇದನ್ನು ನಾನು ಇನ್ನೆಷ್ಟು ದಿನ ಸಹಿಸಿಕೊಳ್ಳುತ್ತೇನೋ ಗೊತ್ತಿಲ್ಲ ಎನ್ನುತ್ತಾರೆ. ತೀರಾ ಬಿಕ್ಕಟ್ಟಿನಲ್ಲಿರುವ ಇನ್ನು ಕೆಲವರು ತಮ್ಮ ಯೋಜನೆಯ ವಿವರಗಳನ್ನೂ ನೀಡುತ್ತಾರೆ. ಎಲ್ಲಾದರೂ ಪರಿಸ್ಥಿತಿ ಕೈಮೀರಿದರೆ ಇರಲಿ ಎಂದು ನಾನು ನಿದ್ರೆ ಮಾತೆÅಗಳನ್ನು ಒಟ್ಟು ಮಾಡುತ್ತಿದ್ದೇನೆ ಅಥವಾ ಈಚೆಗೆ ನಾನು ಯಾವ ರೀತಿ ಕಾರು ಓಡಿಸುತ್ತಿದ್ದೇನೆ ಎಂದರೆ ಏನಾದರೂ ಪರವಾಗಿಲ್ಲ ಎಂಬಂತಿದ್ದೇನೆ ಎನ್ನುತ್ತಾರೆ. ಒಟ್ಟಾರೆಯಾಗಿ ಈ ರೀತಿಯ ಹೇಳಿಕೆಗಳು ಆ ವ್ಯಕ್ತಿಯ ಹತಾಶ ಮನೋಭಾವನೆಯನ್ನೂ, ಆತ್ಮಹತ್ಯೆಯ ಆಲೋಚನೆಗಳನ್ನೂ ಸೂಕ್ಷ್ಮವಾಗಿ ತಿಳಿಸಬಲ್ಲವು. ಈ ರೀತಿ ಸಹಾಯಕ್ಕಾಗಿ ಮಾಡುವ ಕೂಗುಗಳನ್ನು ಅರಿತುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ, ಈ ಎಲ್ಲ ಹೇಳಿಕೆಗಳು ಇತರರು ತಮ್ಮನ್ನು ಅರಿತುಕೊಳ್ಳಲಿ ಮತ್ತು ಸಹಾಯ ಮಾಡಲಿ ಎಂದು ಮಾಡುವ ಹತಾಶ ಹೇಳಿಕೆಗಳಾಗಿರುತ್ತವೆ.
ಆತ್ಮಹತ್ಯೆಯ ಯೋಚನೆ ಮಾಡುವ ಮಂದಿ ತಮ್ಮ ನಡವಳಿಕೆಯಲ್ಲಿ ಬದಲಾವಣೆೆಗಳನ್ನು ತೋರಿಸುತ್ತಾರೆ. ತಮ್ಮಲ್ಲಿರುವ ಅಮೂಲ್ಯ ವಸ್ತುಗಳನ್ನು ಬೇರೆಯವರಿಗೆ ನೀಡುವ ಮೂಲಕ ಅವರು ಸಾವಿಗೆ ಸಿದ್ಧರಾಗಬಹುದು. ಉಯಿಲು ಬರೆಯುವುದು ಅಥವಾ ಇನ್ನಿತರ ಕೆಲವು ವ್ಯವಸ್ಥೆಗಳನ್ನು ಮಾಡಬಹುದು. ತಮ್ಮ ಸುತ್ತಮುತ್ತಲಿನ ಜನರಿಂದ ಅವರು ದೂರ ಉಳಿಯಬಹುದು, ಊಟ, ನಿದ್ದೆ ಮಾಡದಿರಬಹುದು ಅಥವಾ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳಬಹುದು. ಇನ್ನು ಕೆಲವರು ಎಷ್ಟೇ ಕಷ್ಟ ಕಾರ್ಪಣ್ಯಗಳಿದ್ದರೂ, ಒಮ್ಮಿಂದೊಮ್ಮೆಲೇ ಅತಿಯಾದ ಚಟುವಟಿಕೆಯಿಂದ ಇದ್ದು ತೀರಾ ಸಂತಸದಿಂದ ಇರುವ ಹಾಗೆ ತೋರಿಸಿಕೊಳ್ಳಬಹುದು.ತನ್ನ ಸಮಸ್ಯೆ ಶೀಘ್ರವೇ ಕೊನೆಗೊಳ್ಳಲಿದೆ ಎಂದು ಅವರು ಈ ರೀತಿ ವರ್ತಿಸಬಹುದು.
ಆತ್ಮಹತ್ಯೆಯ ಬಗ್ಗೆ ತಪ್ಪು ಕಲ್ಪನೆಗಳು (ಮಿಥ್ಯೆಗಳು)
ಮಿಥ್ಯೆ: ಆತ್ಮಹತ್ಯೆಯ ಬಗ್ಗೆ ಯೋಚಿಸಬೇಕಾದರೆ ಆತ ಹುಚ್ಚನಾಗಿರಬೇಕು.
ಸತ್ಯ: ಕಾಲ ಕಾಲಕ್ಕೆ ಹಲವಾರು ಮಂದಿ ಆತ್ಮಹತ್ಯೆಯ ಬಗ್ಗೆ ಆಲೋ ಚಿಸುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಅಥವಾ ಅದಕ್ಕೆ ಯತ್ನಿಸುವ ಬಹಳಷ್ಟು ಮಂದಿ ಬುದ್ಧಿವಂತರೇ ಆಗಿರುತ್ತಾರೆ, ಆದರೆ ತಾತ್ಕಾಲಿಕವಾಗಿ ಗೊಂದಲದಲ್ಲಿರುತ್ತಾರೆ. ಕೆಲವು ಬಾರಿ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ತಮ್ಮಿಂದ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಅದು ಸಾಧ್ಯವಾಗದೆ ಇರುವಾಗ ಆತ್ಮಹತ್ಯೆಗೆ ಶರಣಾಗುತ್ತಾರೆ.
ಮಿಥ್ಯೆ: ಒಬ್ಬ ವ್ಯಕ್ತಿ ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದರೆ, ಆತ ಇನ್ನೊಮ್ಮೆ ಅದಕ್ಕೆ ಯತ್ನಿಸಲಾರ.
ಸತ್ಯ: ಆತ್ಮಹತ್ಯೆಗೆ ಒಮ್ಮೆ ಯತ್ನಿಸಿದ ವ್ಯಕ್ತಿ ಮತ್ತೂಮ್ಮೆ ಅದಕ್ಕೆ ಯತ್ನಿಸುವ ಸಾಧ್ಯತೆೆಗಳು ಬಹಳ ಹೆಚ್ಚು. ಕೆಲವರಿಗೆ ಮುಂದಿನ ಯತ್ನಗಳು ಇನ್ನೂ ಸುಲಭವಾಗಿ ಪರಿಣಮಿಸಬಹುದು.
ಮಿಥ್ಯೆ: ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ನಿರ್ಧರಿಸಿದ್ದಲ್ಲಿ, ನಾವು ಏನೂ ಮಾಡುವ ಹಾಗಿಲ್ಲ.
ಸತ್ಯ: ಬಹುತೇಕ ಆತ್ಮಹತ್ಯೆ ಯೋಚನೆಗಳು ಆ ಪರಿಸ್ಥಿತಿಗೆ ಹೊಂದಿಕೊಂಡಿರುತ್ತವೆ ಮತ್ತು ಅಸ್ಪಷ್ಟ ಯೋಚನೆಗಳಿಂದ ಮೂಡಿದವುಗಳಾಗಿರುತ್ತವೆ. ತಾವು ಎದುರಿಸುತ್ತಿರುವ ಸಮಸ್ಯೆಗಳಿಂದ ತಕ್ಷಣ ತಪ್ಪಿಸಿಕೊಳ್ಳಲು ಅವರು ಈ ರೀತಿಯ ಯೋಚನೆ ಮಾಡುತ್ತಾರೆ. ಅವರಿಗೆ ಸ್ಪಷ್ಟವಾಗಿ ಯೋಚಿಸುವಂತೆ ಪ್ರೇರೇಪಿಸಿದರೆ, ಅವರು ಆತ್ಮಹತ್ಯೆಯ ಯೋಚನೆಗಳನ್ನು ಬಿಟ್ಟು, ಸಮಸ್ಯೆಯನ್ನು ಬಗೆಹರಿಸುವತ್ತ ಗಮನ ನೀಡಬಹುದು.
ಮಿಥ್ಯೆ: ಆತ್ಮಹತ್ಯೆಯ ಬಗ್ಗೆ ಮಾತನಾಡಿದರೆ, ಅಂಥ ವ್ಯಕ್ತಿಗಳಿಗೆ ಐಡಿಯಾ ನೀಡಿದಂತಾಗಬಹುದು.
ಸತ್ಯ: ಕ್ಷೀಣ ಮನಸ್ಸಿನ ವ್ಯಕ್ತಿಯಾ ಗಿದ್ದರೆ, ಬಿಕ್ಕಟ್ಟು ಮತ್ತು ಅದರಿಂದ ಆತ ಎದುರಿಸುತ್ತಿರುವ ಮಾನಸಿಕ ಸ್ಥಿತಿಗಳಿಂದಾಗಿ, ಆತ ಈಗಾಗಲೇ ಆತ್ಮಹತ್ಯೆಯ ಯೋಚನೆ ಮಾಡಿರುತ್ತಾನೆ. ನೀವು ಮುಕ್ತವಾಗಿ ಆತನ ಯೋಚನೆಗಳ ಬಗ್ಗೆ ಕೇಳುವುದರಿಂದ, ಮತು¤ ಆತ್ಮಹತ್ಯೆಯ ದುಷ್ಪರಿಣಾಮಗಳ ಬಗ್ಗೆ ವಿವರಿಸುವುದರಿಂದ ಆತನ ಉದ್ವೇಗ ಕಡಿಮೆಯಾಗುತ¤ದೆ. ಆತನ ಏಕಾಂಗಿತನ ಮತು¤ ನಿರಾಶಾವಾದಗಳು ಸ್ವಲ್ಪ ಕಡಿಮೆಯಾಗಿ, ಆತ ನಿರಾಳನಾಗಬಹುದು.
ನೀವು ಹೇಗೆ ಸಹಾಯ
ಮಾಡಬಹುದು?
ಬಿಕ್ಕಟ್ಟಿನಲ್ಲಿರುವ ವ್ಯಕ್ತಿಯ ಸಮಸ್ಯೆಗಳಿಗೆ ಸೂಕ್ಷ್ಮವಾಗಿ ಸ್ಪಂದಿಸುವ ಮೂಲಕ ಬಹುತೇಕ ಆತ್ಮಹತ್ಯೆಗಳನ್ನು ತಡೆಗಟ್ಟಬಹುದು.
ಶಾಂತವಾಗಿರಿ. ಬಹುತೇಕ ಪ್ರಕರಣಗಳಲ್ಲಿ ಯಾವುದೇ ತುರ್ತು ಇರುವುದಿಲ್ಲ. ಕುಳಿತು ನಿಧಾನವಾಗಿ ವ್ಯಕ್ತಿಯ ಸಮಸ್ಯೆಗಳನ್ನು ಕೇಳಿರಿ. ಆತನ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಿ ಮತು¤ ಆತನಿಗೆ ಮಾನಸಿಕವಾದ ಬೆಂಬಲ ನೀಡಿ.
ಹೆಚ್ಚಿನ ಜನರಿಗೆ ಸಾವಿನ ಬಗ್ಗೆ ಭಯ ಇರುತ್ತದೆ. ಆದ್ದರಿಂದ ಆತ್ಮಹತ್ಯೆಯ ಬಗ್ಗೆ ಅವರೊಂದಿಗೆ ಮುಕ್ತವಾಗಿ ಚರ್ಚಿಸಲು ಹೆದರಬೇಡಿ.
ಸಮಸ್ಯೆ ನಿವಾರಣೆ ಮತ್ತು ಸಕ್ರಿಯ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿ. ಮಾನಸಿಕವಾಗಿ ಬಿಕ್ಕಟ್ಟು ಎದುರಿಸುತ್ತಿರುವ ವ್ಯಕ್ತಿ ಸ್ಪಷ್ಟವಾಗಿ ಅಲೋಚಿಸುತ್ತಿಲ್ಲ ಎಂಬುದನ್ನು ನೆನಪಿಡಿ. ಬದಲಿಸಲಾರದಂಥ ನಿರ್ಧಾರಗಳನ್ನು ತೆೆಗೆದುಕೊಳ್ಳದಂತೆೆ ಆತನ ಮನವೊಲಿಸಿ. ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸಿ. ಇದರಿಂದ ಆತನಿಗೆ ಬದುಕಬೇಕೆಂಬ ಆಸೆ ಮೂಡಬಹುದು.
ಆತನಿಗೆ ನೆರವಾಗಬೇಕು ಎಂಬ ಇಚ್ಛೆ ನಿಮಗಿದ್ದರೂ, ಆತನನ್ನು ಸಂತೈಸುವ ಸಂಪೂರ್ಣ ಜವಾಬ್ದಾರಿ ಯನ್ನು ಒಬ್ಬರೇ ಹೊರಬೇಡಿ. ಸೂಕ್ತ ಸಲಹೆ ನೀಡಬಲ್ಲ ಬೇರೆ ವ್ಯಕ್ತಿಗಳನ್ನು ಸಂಪರ್ಕಿಸಿ. ಆತನ ಬಗ್ಗೆ ನಿಮಗೆ ಕಾಳಜಿ ಇದೆ ಎಂದು ಆತನಿಗೆ ತಿಳಿಯುವಂತೆ ಮಾಡಿ. ಕಾಳಜಿ ಎಷ್ಟೆಂದರೆ, ತನಗೆ ಸಾಧ್ಯವಿಲ್ಲದ್ದನ್ನು ಬೇರೆಯವರಿಂದ ಮಾಡಿಸುವಷ್ಟೂ ಕಾಳಜಿ ಇದೆ ಎಂದು ಆತನಿಗೆ ಗೊತ್ತಾಗಲಿ.